ಕೃಷಿ ರಂಗ | ಕರ್ನಾಟಕದ ಪ್ರಸಿದ್ಧ ಕೃಷಿ ವಿಜ್ಞಾನಿಗಳು

Date:

Advertisements

‘ಇಂಡಾಫ್ ತಳಿಗಳು ಬರಲಿಲ್ಲ ಎಂದರೆ ಹೊಟ್ಟೆಗೆ ಹಿಟ್ಟು ಸಿಕ್ತಿರಲಿಲ್ಲ’ ಎನ್ನುತ್ತಾರೆ ಬಹುತೇಕ ರೈತರು. ರಾಗಿ ಇಳುವರಿ ಜಾಸ್ತಿಯಾಗುತ್ತಿದ್ದಂತೆ ದಾನ ಮಾಡುವ ಕೈಗಳೂ ದೊಡ್ಡದಾದವು. ಕಣದಲ್ಲಿನ ರಾಗಿಯ ರಾಶಿಗಳಿಂದ ಪಡಿ, ಅಚ್ಚೇರು, ಸೇರು ರಾಗಿ ದಾನ ಮಾಡುವ ಬದಲು ದೊಡ್ಡರೈತರು ಬಳ್ಳ ಬಳ್ಳ ಮೊಗೆದು ಕೃಷಿಕಾರ್ಮಿಕರಿಗೆ, ಕೂಲಿಯಾಳುಗಳಿಗೆ ಕೊಟ್ಟರು. “ಹೊಟ್ಟೆ ತುಂಬ ಮುದ್ದೆ ತಿಂದು, ಬಾಯಿ ತುಂಬ ಅನ್ನ ಉಣ್ಣಬೇಕು” ಎನ್ನುವುದು ರಾಗಿ ಲಕ್ಷ್ಮಣಯ್ಯ ಹೇಳುತ್ತಿದ್ದ ಮಾತು.


ಹಸಿರು ಕ್ರಾಂತಿ ನಡೆದ 1960, 70 ಮತ್ತು 80ರ ದಶಕಗಳಲ್ಲಿ ನಮ್ಮ ರಾಜ್ಯದ ಕೃಷಿ ವಿಜ್ಞಾನಿಗಳು ಆಹಾರೋತ್ಪಾದನೆಗೆ ಅಗಾಧವಾದ ಕೊಡುಗೆಗಳನ್ನು ಕೊಟ್ಟರು. ಅಂದಿನ ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಾದ ಹಲವು ಬದಲಾವಣೆಗಳನ್ನು ನಾಡಿನ ಜನತೆ ಮೆಲುಕು ಹಾಕಬೇಕಿದೆ. ರಾಗಿ ಲಕ್ಷ್ಮಣಯ್ಯ, ಭತ್ತದ ಮಹಾದೇವಪ್ಪ, ಕೋಳಿ ರಾಮಪ್ಪ ಮತ್ತು ಲೋಕನಾಥ್, ಜೋಳದ ಕಜ್ಜರಿ, ಕಾಟನ್ ಕಾತರ್ಕಿ, ಡಾ. ಪುಟ್ಟರುದ್ರಯ್ಯ, ಡಾ. ಚನ್ನಬಸವಣ್ಣ, ಡಾ. ಸಿದ್ದಪ್ಪಾಜಿ, ಡಾ. ಅರಕೇರಿ, ಡಾ. ದ್ವಾರಕೀನಾಥ್, ಡಾ. ಎಂ. ಎಚ್. ಮರಿಗೌಡ, ಡಾ. ರಂಗಸ್ವಾಮಿ, ಡಾ. ರಾಧಾ ಕಾಳೆ, ಶ್ರೀಹರಿ, ಕುಬ್ರ ಬಾನು ಮತ್ತಿತರರ ನೆನಪು ಸದಾ ಹಚ್ಚ ಹಸಿರಾಗಿರಬೇಕಿದೆ. ಅವರೆಲ್ಲಾ ಪ್ರಸಕ್ತ ತಲೆಮಾರಿನ ಕೃಷಿ ವಿಜ್ಞಾನಿಗಳಿಗೆ ದಾರಿದೀಪಗಳಾಗಬೇಕಿದೆ.

ರಾಗಿ ಲಕ್ಷ್ಮಣಯ್ಯ
ಮೈಸೂರು ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಮೇ 15, 1921ರಲ್ಲಿ ಜನಿಸಿದ ಲಕ್ಷ್ಮಣಯ್ಯನವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ 1941ರಲ್ಲಿ ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯಗಳೊಂದಿಗೆ ಬಿಎಸ್‍ಸಿ ಪದವಿ ಪಡೆದರು. ಕೃಷಿ ಇಲಾಖೆಯ ಮಂಡ್ಯದ ವಿಸಿ ಫಾರಂನಲ್ಲಿ ‘ಕಿರಿಯ ಸಹಾಯಕ ಸಸ್ಯಶಾಸ್ತ್ರಜ್ಞ’ರಾಗಿ 1949ರಲ್ಲಿ ಸೇರಿಕೊಂಡರು.

ರಾಗಿ ಒಂದು ಸ್ವಕೀಯ ಪರಾಗಸ್ಪರ್ಶ ಬೆಳೆ. ರಾಗಿಯಲ್ಲಿ ತಳಿಸಂಕರಣಕ್ಕೆ ಪ್ರಯತ್ನಪಟ್ಟ ಜಗತ್ತಿನ ಎಲ್ಲ ವಿಜ್ಞಾನಿಗಳು ಫಲ ಕಾಣದೆ ಕೈ ಚೆಲ್ಲಿ ಬಿಟ್ಟಿದ್ದರು. ಆದರೆ, ಲಕ್ಷ್ಮಣಯ್ಯನವರು ರಾಗಿಯಲ್ಲಿ ಸಂಕರಣ ತಳಿಗಳನ್ನು ರೂಪಿಸಲು ‘ವಿಶೇಷ ಸಂಪರ್ಕ ಪದ್ದತಿ’ಯನ್ನು ತಮಗೆ ತಾವೇ ಕಂಡುಕೊಂಡರು. ಜಗತ್ತಿನ ಮೊಟ್ಟ ಮೊದಲ ‘ರಾಗಿ ಬ್ರೀಡರ್’ ಎನಿಸಿಕೊಂಡರು. ರೈತರು ಪ್ರೀತಿಯಿಂದ ‘ರಾಗಿಬ್ರಹ್ಮ’ ಎಂದು ಕರೆದರು.

ದೇಸಿ ರಾಗಿ ತಳಿಗಳು ಎಕರೆಗೆ ಸರಾಸರಿ 5ರಿಂದ 10 ಕ್ವಿಂಟಾಲ್‍ವರೆಗೆ ಮಾತ್ರ ರಾಗಿ ಇಳುವರಿ ಕೊಡುತ್ತವೆಯೆಂದು 1920ರ ಹೊತ್ತಿಗೆ ಮೈಸೂರು ಸಂಸ್ಥಾನದ ಕೃಷಿ ಇಲಾಖೆಯ ನಿರ್ದೇಶಕರಾದ ಡಾ. ಲೆಸ್ಲೀ ಕೋಲ್ಮನ್‍ರವರು ಅಭಿಪ್ರಾಯಪಟ್ಟರು. ಲಕ್ಷ್ಮಣಯ್ಯನವರು 1951ರಿಂದ 1964ರವರೆಗೆ ಸ್ಥಳೀಯ ರಾಗಿ ತಳಿಗಳೊಂದಿಗೆ ಕೊಯಮತ್ತೂರಿನ ರಾಗಿ ತಳಿಗಳನ್ನು ಸಂಕರಣಗೊಳಿಸಿ ಶೇ. 50ರಷ್ಟು ಅಧಿಕ ಫಸಲು ನೀಡುವ ಅನ್ನಪೂರ್ಣ, ಉದಯ, ಪೂರ್ಣ, ಅರುಣ, ಶಕ್ತಿ, ಸಂಪೂರ್ಣ, ಕಾವೇರಿ ರಾಗಿ ತಳಿಗಳನ್ನು ಬಿಡುಗಡೆ ಮಾಡಿದರು. ಅಲ್ಲಿಯವರೆಗಿನ ಸಂಶೋಧನೆ ರಾಜ್ಯದ ಕೃಷಿ ಇಲಾಖೆಯ ಮಂಡ್ಯದ ಕೃಷಿ ಕ್ಷೇತ್ರದಲ್ಲಿ ನಡೆಯಿತು.

Advertisements
Fig. 2. Ragi Lakshmanaiah1
ರಾಗಿ ಲಕ್ಷ್ಮಣಯ್ಯ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು 1965ರಲ್ಲಿ ಸ್ಥಾಪನೆಯಾಗುತ್ತಿದ್ದಂತೆ ಮಂಡ್ಯದ ಕೃಷಿ ಕ್ಷೇತ್ರವು ವಿಶ್ವವಿದ್ಯಾಲಯದ ಭಾಗವಾಯಿತು. ಲಕ್ಷ್ಮಣಯ್ಯನವರು ವಿಶ್ವವಿದ್ಯಾಲಯದ ಸುಪರ್ದಿಗೆ ಬಂದು ತಮ್ಮ ಕೈಂಕರ್ಯವನ್ನು ಮುಂದುವರೆಸಿದರು.
ಅಮೆರಿಕದ ರಾಕ್‍ಫೆಲ್ಲರ್ ಫೌಂಡೇಷನ್ ಒದಗಿಸಿದ ಆಫ್ರಿಕಾದ ರಾಗಿತಳಿಗಳೊಂದಿಗೆ ದೇಸಿ ರಾಗಿತಳಿಗಳನ್ನು ಸಂಕರಣ ಮಾಡಿ 1964ರಿಂದ 1984ರವರೆಗೆ ಇಂಡಾಫ್ 1ರಿಂದ ಇಂಡಾಫ್ 15 (ಇಂಡಿಯಾ + ಆಫ್ರಿಕಾ = ಇಂಡಾಫ್) ರವರೆಗಿನ ತಳಿಗಳನ್ನು ಬಿಡುಗಡೆ ಮಾಡಿದರು. ಇದರಿಂದ ಎಕರೆಗೆ ಐದಾರು ಕ್ವಿಂಟಾಲ್ ಬದಲಿಗೆ 15ರಿಂದ 20 ಕ್ವಿಂಟಾಲ್ ರಾಗಿಯ ಇಳುವರಿ ಬಂತು. ಇದು ಕನಿಷ್ಠ ಶೇ. 250ರಷ್ಟು ಅಧಿಕ ಇಳುವರಿ. ಇದರಿಂದ ಕೋಟ್ಯಾಂತರ ಜನರ ಹಸಿವು ನೀಗಿತು. ಕರ್ನಾಟಕದಲ್ಲಿ ‘ತೆನೆಮರೆಯ ಕ್ರಾಂತಿ’ಯಾಗಿ ರಾಗಿ ಉತ್ಪಾದನೆ ಹೆಚ್ಚಾಯಿತು.

ಅವರಿಗೆ ಕರ್ನಾಟಕ ಸರ್ಕಾರದಿಂದ 1968 ಮತ್ತು 1982ರಲ್ಲಿ ಎರಡು ಬಾರಿ ರಾಜ್ಯ ಪ್ರಶಸ್ತಿ ದಕ್ಕಿತು. ಕರ್ನಾಟಕ ಕೃಷಿಕ ಸಮಾಜದ ವತಿಯಿಂದ 1975ರಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಿಂದ ಸನ್ಮಾನವಾಯಿತು.

‘ಇಂಡಾಫ್ ತಳಿಗಳು ಬರಲಿಲ್ಲ ಎಂದರೆ ಹೊಟ್ಟೆಗೆ ಹಿಟ್ಟು ಸಿಕ್ತಿರಲಿಲ್ಲ’ ಎನ್ನುತ್ತಾರೆ ಬಹುತೇಕ ರೈತರು. ರಾಗಿ ಇಳುವರಿ ಜಾಸ್ತಿಯಾಗುತ್ತಿದ್ದಂತೆ ದಾನ ಮಾಡುವ ಕೈಗಳೂ ದೊಡ್ಡದಾದವು. ಕಣದಲ್ಲಿನ ರಾಗಿಯ ರಾಶಿಗಳಿಂದ ಪಡಿ, ಅಚ್ಚೇರು, ಸೇರು ರಾಗಿ ದಾನ ಮಾಡುವ ಬದಲು ದೊಡ್ಡರೈತರು ಬಳ್ಳ ಬಳ್ಳ ಮೊಗೆದು ಕೃಷಿಕಾರ್ಮಿಕರಿಗೆ, ಕೂಲಿಯಾಳುಗಳಿಗೆ ಕೊಟ್ಟರು. ಎಲ್ಲ ಋತುಮಾನಗಳಲ್ಲೂ ಬೆಳೆಯಬಹುದಾದ, ಜತೆಗೆ ಮಳೆಯಾಶ್ರಯ ಹಾಗೂ ನೀರಾವರಿಗೂ ಒಗ್ಗುವ ಇಂಡಾಫ್ ತಳಿಗಳಿವೆ. ಹೊಟ್ಟೆ ತುಂಬ ಮುದ್ದೆ ತಿಂದು, ಬಾಯಿ ತುಂಬ ಅನ್ನ ಉಣ್ಣಬೇಕು ಎನ್ನುವುದು ಲಕ್ಷ್ಮಣಯ್ಯನವರು ಹೇಳುತ್ತಿದ್ದ ಮಾತು. ದನಗಳಿಗೆ ಬೇಕಿರುವುದು ಹೊಟ್ಟೆ ತುಂಬಾ ಮೇವು, ಹಿಂಡಿ, ಬೂಸಾ’ ಎಂದಿರುವ ಲಕ್ಷಣಯ್ಯನವರು ತಾವು ಕಂಡುಹಿಡಿದ ರಾಗಿ ತಳಿಗಳಿಂದ ದನಗಳಿಗೆ ಹೆಚ್ಚಿನ ಪ್ರಮಾಣದ ಮೇವೂ ಸಿಗುವಂತೆ ಮಾಡಿದ್ದಾರೆ. ಪಶುಸಂಗೋಪನೆಗೆ ನೆರವಾಗಿದ್ದಾರೆ.

ಬೆಂಗಳೂರು ಕೃಷಿ ವಿವಿಯಿಂದ ಅವರಿಗೆ 1989ರಲ್ಲಿ ಗೌರವ ಡಾಕ್ಟರೇಟ್ ಪ್ರಾಪ್ತಿಯಾಯಿತು. 1990ರಿಂದ 1992ರವರೆಗೆ ಎರಡು ವರ್ಷಗಳ ಕಾಲ ಬೆಂಗಳೂರು ಕೃಷಿ ವಿವಿಯ ನಾಗೇನಹಳ್ಳಿ ಫಾರ್ಮಿನಲ್ಲಿ ವಿಸಿಟಿಂಗ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿ ಮತ್ತೊಂದು ಅಧಿಕ ಇಳುವರಿಯ ಎಲ್-5 ರಾಗಿ ತಳಿಯನ್ನು ಕೊಟ್ಟರು. ‘ನನ್ನ ಮದುವೆ ರಾಗಿಯೊಂದಿಗೆ ನಡೆದುಹೋಗಿದೆ’, ‘ನನಗೆ ಎಂತಹ ದೊಡ್ಡ ಹುದ್ದೆ ಕೊಟ್ಟರೂ, ರಾಗಿ ಸಂಶೋಧನೆಯಲ್ಲಿಯೇ ನನಗೆ ಅತ್ಯಂತ ಖುಷಿ’, ‘ಅಂತ್ಯ ಸಂಸ್ಕಾರದ ವೇಳೆ ತನ್ನ ದೇಹದ ಮೇಲೆ ಕೇವಲ ಹಿಡಿ ರಾಗಿ ಹಾಕಿ, ಅಷ್ಟೇ ಸಾಕು’ ಎಂದು ಮರಣಕ್ಕೂ ಮೊದಲು ನಿವೇದಿಸಿಕೊಂಡವರು ಲಕ್ಷ್ಮಣಯ್ಯ. ಸುಮಾರು 23 ಬಗೆಯ ರಾಗಿ ತಳಿಗಳನ್ನು ಕೊಟ್ಟ ಲಕ್ಷ್ಮಣಯ್ಯನವರು ಮೇ 14, 1993ರಲ್ಲಿ ಮರಣಹೊಂದಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ 2010ರಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಅವರಿಗೆ ಮರಣೋತ್ತರವಾಗಿ ನೀಡಲಾಗಿದೆ.

ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಅವರ ಹೆಸರನ್ನು ಒಮ್ಮೆ 1985ರಲ್ಲಿ ಸಚಿವರಾದ ಎಂ. ಪಿ. ಪ್ರಕಾಶ್‍ರವರು ಮತ್ತು 2005-06ರಲ್ಲಿ ಕೃಷಿ ಸಚಿವರಾದ ಕೆ. ಶ್ರೀನಿವಾಸಗೌಡರ ಆಸ್ಥೆಯಿಂದಾಗಿ ಎರಡು ಸಾರಿ ಶಿಫಾರಸ್ಸು ಮಾಡಿದರೂ ಅವರಿಗದು ಸಿಗದಿರುವುದು ನಾಡಿನ ದೌರ್ಭಾಗ್ಯ. ಅವರ ನೆನಪು ರಾಗಿ ಹೊಲಗಳ ಹಚ್ಚ ಹಸಿರಿನ ಪಚ್ಚೆ ಪೈರಿನಂತೆ ಸದಾ ನಮ್ಮ ಮನ-ಮನೆಗಳಲ್ಲಿರಲಿ.

ಡಾ. ಎಂ. ಮಹಾದೇವಪ್ಪ
ಡಾ. ಎಂ. ಮಹಾದೇವಪ್ಪನವರು ‘ಭತ್ತದ ಮಹಾದೇವಪ್ಪ’ ಎಂದೇ ಖ್ಯಾತನಾಮರು. ಆಗಸ್ಟ್ 4, 1937ರಂದು ಚಾಮರಾಜನಗರ ಜಿಲ್ಲೆಯ ಮಾದಾಪುರದಲ್ಲಿ ಜನಿಸಿದ ಅವರು ಬೆಂಗಳೂರು ಕೃಷಿ ಕಾಲೇಜಿನಿಂದ ಬಿಎಸ್ಸಿ (ಕೃಷಿ) ಮತ್ತು ತಮಿಳುನಾಡಿನ ಕೊಯಮತ್ತೂರು ಕೃಷಿ ಕಾಲೇಜಿನಿಂದ ಎಂಎಸ್ಸಿ (ಕೃಷಿ) ಮತ್ತು ಡಾಕ್ಟರೇಟ್ ಪದವಿಗಳನ್ನು ಪಡೆದರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ, ಶಿಕ್ಷಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಮಂಡ್ಯದ ಕೃಷಿ ಫಾರ್ಮಿನಲ್ಲಿ ತಳಿ ವಿಜ್ಞಾನಿಯಾಗಿ ಅಧಿಕ ಇಳುವರಿಯ ಮಧು, ಮಂಗಳ, ಪುಷ್ಪಾ, ಪ್ರಾಗ್ಮಾಟಿಕ್ಸ್, ಇಂತನ್, ವಿಕ್ರಂ, ಜಿಎಂಕೆ 17, ಮುಕ್ತಿ ಮತ್ತು ಬಿಳಿಮುಕ್ತಿ ಭತ್ತದ ತಳಿಗಳನ್ನು ನೀಡಿದರು.

Fig. 3. Dr.M.Mahadevappa
ಡಾ ಮಹಾದೇವಪ್ಪ

ಡಾ. ಮಹಾದೇವಪ್ಪನವರು ಧಾರವಾಡ ಕೃಷಿವಿಶ್ವವಿದ್ಯಾಲಯದ ಕುಲಪತಿಗಳಾಗಿ 1994ರಿಂದ 2000ರವರೆಗೆ ಎರಡು ಬಾರಿ ಸೇವೆ ಸಲ್ಲಿಸಿದರು. ರಾಷ್ಟ್ರಮಟ್ಟದ ‘ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ’ಯ ಚೇರ್ಮನ್‌ರಾಗಿಯೂ 2001ರಿಂದ 2002ರವರೆಗೆ ಕಾರ್ಯ ನಿರ್ವಹಿಸಿದರು. ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ (2005) ಮತ್ತು ಪದ್ಮಭೂಷಣ (2013) ಪ್ರಶಸ್ತಿಗಳು ಲಭಿಸಿದವು.

ಡಾ. ಬಿ. ಎಸ್. ರಾಮಪ್ಪ ಮತ್ತು ಡಾ. ಜಿ. ಆರ್. ಲೋಕನಾಥ್

ಡಾ. ಬಿ. ಎಸ್. ರಾಮಪ್ಪನವರು ‘ಕೋಳಿ ರಾಮಪ್ಪ’ ಎಂದೇ ಪ್ರಖ್ಯಾತರು. ಬೆಂಗಳೂರು ಕೃಷಿವಿಶ್ವವಿದ್ಯಾಲಯದಲ್ಲಿ ಬಿ. ಎಸ್ಸಿ. ಕೃಷಿ ಪದವಿ ಪಡೆದು ಅಮೆರಿಕಾದ ಕೆಂಟಕಿ ವಿಶ್ವವಿದ್ಯಾಲಯದಿಂದ ಕೋಳಿ ವಿಜ್ಞಾನದಲ್ಲಿ ಮಾಸ್ಟರ್ಸ್ ಪದವಿ ಪಡೆದರು. ಉತ್ತರ ಪ್ರದೇಶದ ಇಜ್ಜತ್‍ನಗರದಲ್ಲಿರುವ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾದರು. ಅವರ ಕನಸಿನಂತೆ, 1968-69ರ ಸುಮಾರಿಗೆ ಮಾಂಸಕ್ಕಾಗಿ ಕೋಳಿ ಸಾಕಣೆಯ ‘ಅಖಿಲ ಭಾರತ ಸಂಯೋಜಿತ ಸಂಶೋಧನಾ ಯೋಜನೆ’ಯನ್ನು ಬೆಂಗಳೂರು, ಭುವನೇಶ್ವರ, ಇಜ್ಜತ್‍ನಗರ ಮತ್ತು ಹೈದರಾಬಾದಿನಲ್ಲಿ ಪ್ರಾರಂಭಿಸಲಾಯಿತು. ಆ ಯೋಜನೆಯ ಬೆಂಗಳೂರಿನ ಹೆಬ್ಬಾಳ ಕೇಂದ್ರಕ್ಕೆ ಡಾ. ಬಿ. ಎಸ್. ರಾಮಪ್ಪನವರ ನಾಯಕತ್ವ ಪ್ರಾಪ್ತಿಯಾಯಿತು.

Fig. 4. Dr. B. S. Ramappa
ಡಾ. ರಾಮಪ್ಪ

ರಾಮಪ್ಪನವರು ವಿವಿಧ ಕೋಳಿ ತಳಿಗಳ ಪ್ರಬೇಧಗಳನ್ನು ಸಂಗ್ರಹಿಸಿದರು. ಸ್ಥಳೀಯ ನಾಟಿ ಕೋಳಿಗಳನ್ನು ಕಲೆಹಾಕಿದರು. ವೈಟ್ ಕಾರ್ನಿಶ್ ತರಿಸಿಕೊಂಡರು. ಹೊಸದೊಂದು ಕೋಳಿ ತಳಿಯನ್ನು ಮಾಂಸಕ್ಕಾಗಿ ಸಂಶ್ಲೇಷಿಸುವುದು ಅವರ ಉದ್ದೇಶವಾಗಿತ್ತು. ಕೋಳಿ ಪುಕ್ಕಗಳು ನಾಟಿ ಕೋಳಿಯಂತೆ ಬಣ್ಣ ಬಣ್ಣದ್ದಾಗಿರಬೇಕು ಮತ್ತು ಎಂಟು ವಾರಗಳಲ್ಲಿ ಕನಿಷ್ಠ ಒಂದು ಕಿಲೋಗ್ರಾಂ ದೇಹತೂಕವಿರಬೇಕು ಎಂಬ ಗುರಿಯಿತ್ತು.

ಡಾ. ರಾಮಪ್ಪನವರ ಪರಿಶ್ರಮ ಫಲ ಕೊಟ್ಟಿತು. ‘ಯೂನಿವರ್ಸಿಟಿ ಬ್ರಾಯ್ಲರ್ಸ್’ ಅಥವಾ ‘ಯೂಬ್ರೋ’ ಎಂಬ ಸಂಕೇತಾಕ್ಷರಗಳೊಂದಿಗೆ ನಾಮಕರಣ ಹೊಂದಿದ ತಳಿಯು 1973ರ ಸುಮಾರಿಗೆ ರೂಪುಗೊಂಡಿತು. ಇದು ದೇಶದಲ್ಲಿಯೇ ಉತ್ಪತ್ತಿಯಾದ ಪ್ರಥಮ ಮಾಂಸದ ಕೋಳಿ. ಏಳು ವಾರಗಳಲ್ಲಿ 1200ರಿಂದ 1330 ಗ್ರಾಂ ಬೆಳವಣಿಗೆ. ಮುಖ್ಯಮಂತ್ರಿಗಳಾಗಿದ್ದ ಡಿ. ದೇವರಾಜ ಅರಸುರವರು ತಳಿಯನ್ನು ಬಿಡುಗಡೆ ಮಾಡಿದರು. ಯೂಬ್ರೋಗೆ ‘ಅರಸ್ ಬ್ರಾಯ್ಲರ್ಸ್’ ಎಂಬ ಹೆಸರೂ ಬಂತು. ಇನ್ನೊಂದು ಬ್ರಾಯ್ಲರ್ ಕೋಳಿ ತಳಿ ‘ಇಂಡಿಯನ್ ಬ್ರಾಯ್ಲರ್ ಬೆಂಗಳೂರು 83’ (ಐಬಿಬಿ 83)ಯು 1983ರಲ್ಲಿ ಬಿಡುಗಡೆಯಾಯಿತು. ಆರು ವಾರಗಳಲ್ಲಿ 1300 ಗ್ರಾಂ ದೇಹತೂಕದ ಬೆಳವಣಿಗೆ. ಡಾ. ರಾಮಪ್ಪನವರು ‘ಕೋಳಿ ರಾಮಪ್ಪನವರು’ ಎಂದು ನಾಡಿನಲ್ಲಿ ಮನೆಮಾತಾದರು. ರಾಮಪ್ಪನವರ ಸಾಧನೆಯ ತೆರೆಯ ಹಿಂದೆ ತಳಿ ತಜ್ಞರಾಗಿ ದುಡಿದವರು ಡಾ. ಜಿ. ಆರ್. ಲೋಕನಾಥ್.

giriraja
ಗಿರಿರಾಜ ಕೋಳಿ

ಗಿರಿಜನರ ಹಟ್ಟಿಗಳಲ್ಲಿ ಕೋಳಿ ಸಾಕಣೆಯನ್ನು ಲಾಭದಾಯಕವಾಗಿ ಮಾಡಬೇಕಿತ್ತು. ಕೋಳಿ ತಳಿಗಳ ಸಂಕರಣದಲ್ಲಿ ಪ್ರಯೋಗಗಳು ನಡೆದವು. ಸಂಕರಣಕ್ಕೆ ತಮಿಳುನಾಡಿನ ಕೃಷ್ಣಗಿರಿಯಿಂದ ನೇಕೆಡ್ ನೆಕ್ (ನಗ್ನ ಕತ್ತಿನ) ಕೋಳಿಯನ್ನು ತರಲಾಯಿತು. ಗಿರಿರಾಜ ಎಂಬ ಇನ್ನೊಂದು ತಳಿಯು 1989ರಲ್ಲಿ ತಯಾರಾಯಿತು. ಎಂಟು ವಾರಗಳಲ್ಲಿ 1500 ಗ್ರಾಂ ದೇಹತೂಕ. ಮತ್ತೂ ಬೆಳಸಿದರೆ ಗಂಡು 4.5ರಿಂದ 5 ಕಿಲೋಗ್ರಾಂ, ಹೆಣ್ಣು 3.5ರಿಂದ 4 ಕಿಲೋಗ್ರಾಂ ತೂಕ. ಇದು ದೇಶಾದ್ಯಂತ ಪಸರಿಸಿತು. ಕೋಳಿ ರಾಮಪ್ಪನವರು ಇನ್ನಷ್ಟು ಪ್ರಸಿದ್ಧಿಗೆ ಬಂದರು. ಬೆಂಗಳೂರು ಕೃಷಿವಿಶ್ವವಿದ್ಯಾಲಯದ ಹೆಸರು ರಾಷ್ಟ್ರಮಟ್ಟದಲ್ಲಿ ರಾರಾಜಿಸಿತು. ಕುಕ್ಕುಟ ವಿಭಾಗಕ್ಕೆ ದೇಶ ವಿದೇಶಗಳ ವಿಜ್ಞಾನಿಗಳು ಭೇಟಿ ಕೊಟ್ಟರು. ಡಾ. ರಾಮಪ್ಪ ಮತ್ತು ಡಾ. ಲೋಕನಾಥ್ ಅವರು ವಿಶ್ವಮಟ್ಟದ ವಿಜ್ಞಾನಿಗಳಾಗಿದ್ದರು ಎನ್ನುವುದು ನಮ್ಮ ನಾಡಿನ ಹೆಮ್ಮೆ.

ಡಾ. ಎನ್. ಬಿ. ಕಜ್ಜರಿ
ಕೃಷಿ ವಿಶ್ವವಿದ್ಯಾಲಯದ ಧಾರವಾಡ ಮತ್ತು ಅರಭಾವಿಯ ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಮುಖ್ಯ ವೈಜ್ಞಾನಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಡಾ. ಎನ್. ಬಿ. ಕಜ್ಜರಿಯವರು ಜೋಳದಲ್ಲಿ ಹೈಬ್ರಿಡ್ ತಳಿಗಳನ್ನು ಬಿಡುಗಡೆ ಮಾಡಿದರು. ಹೈಬ್ರಿಡ್ -1 ಮತ್ತು ಮಲ್ದಂಡಿ 35-1 ಎಂಬ ಹೈಬ್ರಿಡ್ ತಳಿಗಳು ಹೆಚ್ಚು ಜನಪ್ರಿಯವಾದವು. ಜೋಳದ ಉತ್ಪಾದನೆ ಹೆಚ್ಚಾಯಿತು. ರಾಜ್ಯಕ್ಕೆ ಅಗತ್ಯವಿರುವಷ್ಟು ಜೋಳದ ಉತ್ಪಾದನೆಯ ಜತೆಗೆ ಮಹಾರಾಷ್ಟ್ರಕ್ಕೂ ಪೂರೈಸಬಹುದಾದಷ್ಟು ಇಳುವರಿ ಬಂತು. ಉತ್ತರ ಕರ್ನಾಟಕದ ಮುಖ್ಯ ಆಹಾರವು ಜೋಳದ ರೊಟ್ಟಿ. ಅವರ ಹೊಟ್ಟೆ ತುಂಬುತ್ತಿರುವುದು ಕಜ್ಜರಿಯವರು ಕಂಡುಹಿಡಿದ ಜೋಳದ ತಳಿಗಳ ತೆನೆಗಳ ಕಾಳುಗಳು.

ಡಾ. ಬಿ. ಎಚ್. ಕಾತರ್ಕಿ
ಸಸ್ಯ ತಳಿ ವಿಜ್ಞಾನಿಯಾದ ಕಾತರ್ಕಿಯವರು ಹತ್ತಿಸಿಕೊಂಡ ಗೀಳು ಹತ್ತಿ ತಳಿತಜ್ಞರಾಗಬೇಕೆಂದು. ಅಧಿಕ ಇಳುವರಿಯ ವರಲಕ್ಷ್ಮಿ ಹತ್ತಿ ಎಂದರೆ ಹತ್ತಿ ಬೆಳೆಯುವ ಜಿಲ್ಲೆಗಳ ರೈತರಿಗೆಲ್ಲಾ ಚಿರಪರಿಚಿತ. ವರಲಕ್ಷ್ಮಿ ಹತ್ತಿ ತಳಿಯನ್ನು ಕೊಟ್ಟ ವಿಜ್ಞಾನಿಯ ಹೆಸರು ಕಾತರ್ಕಿ. ಅವರು ‘ಕಾಟನ್ ಕಾತರ್ಕಿ’ ಎಂಬ ಹೆಸರಿನಿಂದ ಉತ್ತರ ಕರ್ನಾಟಕದ ಮನೆಮಾತಾದರು. ಅವರ ಪೂರ್ತಿ ಹೆಸರು ಭೀಮಾರೆಡ್ಡಿ ಹನುಮರೆಡ್ಡಿ ಕಾತರ್ಕಿಯವರು. ಅವರು ಧಾರವಾಡ ಕೃಷಿ ಕಾಲೇಜಿನ ವಿಜ್ಞಾನಿ. ತಮ್ಮ ತಳಿ ಸಂಕರಣ ಜ್ಞಾನದಿಂದ ಹಲವು ಹತ್ತಿ ತಳಿಗಳನ್ನು ಆವಿಷ್ಕರಿಸಿದರು. ವರಲಕ್ಷ್ಮಿ ಹತ್ತಿಯು 1972ರಲ್ಲಿ, ಡಿಸಿಎಚ್ 32 ಹತ್ತಿ 1981ರಲ್ಲಿ ಮತ್ತು ಮಳೆಯಾಶ್ರಿತ ಪ್ರದೇಶಗಳಿಗಾಗಿ ಡಿಎಸ್-56, ಡಿಎಸ್-59, ಡಿಬಿ-3-12 ಎಂಬ ಹತ್ತಿ ತಳಿಗಳು 1982ರಲ್ಲಿ ಬಿಡುಗಡೆಯಾದವು. ಇವು ರೈತರಿಗೆ ಹೆಚ್ಚಿನ ಆದಾಯವನ್ನು ತಂದುಕೊಟ್ಟವು.

cotton field3

ಜನವರಿ 3, 1924ರಂದು ಜನಿಸಿದ ಕಾತರ್ಕಿಯವರು 1945ರಲ್ಲಿ ಮುಂಬೈ ಪ್ರಾತ್ಯದಿಂದ ಕೃಷಿಯಲ್ಲಿ ಬಿ.ಎಸ್ಸಿ. ಪದವಿ, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ನವದೆಹಲಿಯಿಂದ 1963ರಲ್ಲಿ ಮಾಸ್ಟರ್ಸ್ ಪದವಿ. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಡಾಕ್ಟರ್ ಆಫ್ ಸೈನ್ಸ್ ಪದವಿ ಪಡೆದರು. ರಾಜ್ಯ ಕೃಷಿ ಇಲಾಖೆಯಲ್ಲಿ 1954ರಿಂದ 1965ರವರೆಗೆ ಸೇವೆ. 1965ರಿಂದ 1983ರವರೆಗೆ ಕೃಷಿವಿಶ್ವವಿದ್ಯಾನಿಲಯ, ಬೆಂಗಳೂರು ವ್ಯಾಪ್ತಿಗೊಳಪಟ್ಟಿದ್ದ ಧಾರವಾಡದ ಕೃಷಿ ಕಾಲೇಜಿನಲ್ಲಿ ಅಧ್ಯಾಪನೆ ಮತ್ತು ಸಂಶೋಧನೆ.
ಶುದ್ಧ ಹತ್ತಿ ಬಟ್ಟೆಗಳು ಕೊಂಚ ದುಬಾರಿಯೇ. ಆದರೆ, ಕಾತರ್ಕಿಯವರು ಕೊಟ್ಟ ಅಧಿಕ ಹತ್ತಿ ಉತ್ಪಾದನೆಯ ತಳಿಗಳಿಂದಾಗಿ ಹತ್ತಿ ಬಟ್ಟೆಗಳು ಜನಸಾಮಾನ್ಯರ ಬೆಲೆಗೆ ತಕ್ಕ ಮಟ್ಟಿಗೆ ಎಟುಕಿದಂತಾಗಿವೆ. ಅವರ ಹತ್ತಿ ತಳಿಗಳಿಂದಾಗಿ ಹತ್ತಿ ಗಿರಣಿಗಳಿಗೆ ಸದಾ ಕೆಲಸ. ಮಗ್ಗಗಳಿಗೆ ವಿರಾಮವೆಂಬುದಿಲ್ಲ. ಮೆತ್ತನೆಯ ಹಾಸಿಗೆಗಳಲ್ಲಿ ಕಾತರ್ಕಿಯವರ ತಳಿಗಳ ಹತ್ತಿಯಿದೆ. ನೈಲಾನ್, ಟೆರಿಲಿನ್, ಟೆರಿಕಾಟ್ ಬಟ್ಟೆಗಳಿಗೆ ಅಲರ್ಜಿ ಹೊಂದಿರುವವರಿಗೆ ಕಾಟನ್ ಕಾತರ್ಕಿಯವರ ಸಂಶೋಧನೆಯಿಂದ ಉಪಯೋಗವಾಗಿದೆ. ದೇಶದ ಪವಿತ್ರವಾದ ಬಾವುಟದ ತಯಾರಿಕೆಗೂ ಈ ತಳಿಗಳ ಹತ್ತಿಯನ್ನು ಬಳಸುತ್ತಿರಬಹುದಷ್ಟೇ. ಮದುವೆ, ಮುಂಜಿ ಮತ್ತಿತರ ಶುಭ ಸಮಾರಂಭಗಳ ವಸ್ತ್ರದಾನಗಳ ಹಿಂದೆ ಕಾತರ್ಕಿಯವರ ಶ್ರಮವಿದೆ. ಶಾಲಾಮಕ್ಕಳ, ಕಂಪನಿ ಕಾರ್ಮಿಕರ ಏಕರೂಪದ ಉಡುಪು ಧರಿಸುವಿಕೆಯ ಹಿಂದೆ ಕಾತರ್ಕಿಯವರ ಕೊಡುಗೆಯಿದೆ ಎಂಬುದನ್ನು ಮರೆಯದಿರೋಣ.

ಇತರೆ ಪ್ರಮುಖ ಕೃಷಿ ವಿಜ್ಞಾನಿಗಳು
ಪ್ರೊ. ಎಚ್. ಆರ್. ಅರಕೇರಿಯವರು 1973ರಿಂದ 1979ರವರೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. ರಾಜ್ಯದ ‘ಕೃಷಿ ಇತಿಹಾಸ’ವನ್ನು ದಾಖಲಿಸಿದ ವ್ಯಕ್ತಿಯಿವರು. ದೇಶದ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯ ಚೇರಮನ್‍ರಾಗಿದ್ದರು. ಡಾ. ಆರ್. ದ್ವಾರಕೀನಾಥ್ ಅವರು ತಮ್ಮದೇ ಆದ ‘ತರಬೇತಿ ಮತ್ತು ಭೇಟಿ’ ಎಂಬ ಪರಿಕಲ್ಪನೆಯನ್ನು ಸೃಷ್ಟಿಸಿದರು. ಕೃಷಿಯಲ್ಲಿ ರೈತರಿಗೆ ತರಬೇತಿ ನೀಡಿದ ನಂತರ ಅವರ ತಾಕುಗಳಿಗೆ ಭೇಟಿ ನೀಡಿ ಮತ್ತ್ತಷ್ಟು ಸಲಹೆ ನೀಡಬೇಕು ಎಂಬುದು ಅವರ ಪರಿಕಲ್ಪನೆಯ ಉದ್ದೇಶ. ರಾಜ್ಯದ ಕೃಷಿ ಇಲಾಖೆಯ ನಿರ್ದೇಶಕರಾಗಿ, 1979ರಿಂದ 1981ರವರೆಗೆ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ, ಕೃಷಿ ವಿಸ್ತರಣೆಯಲ್ಲಿ ಅಗಾಧವಾದ ಸಾಧನೆ ಮಾಡಿದರು. ಡಾ. ಎಂ. ಎಚ್. ಮರಿಗೌಡರು ತೋಟಗಾರಿಕೆ ಬೆಳೆಗಳ ಫಸಲುಗಳಿಗೆ ಸಂಘಟಿತ ಮಾರುಕಟ್ಟೆಯಾಗಿ 1959ರಲ್ಲಿ ‘ಹಾಪ್‍ಕಾಮ್ಸ್’ ಜಾಲವನ್ನು ಸೃಷ್ಟಿಸಿದರು.

ಡಾ. ಎಂ. ಪುಟ್ಟರುದ್ರಯ್ಯ, ಡಾ. ಜಿ. ಪಿ. ಚನ್ನಬಸವಣ್ಣ ಮತ್ತು ಡಾ. ಸಿ. ಸಿದ್ದಪ್ಪಾಜಿ ಅವರನ್ನು 1970 ಮತ್ತು 1980ರ ದಶಕದಲ್ಲಿ ಕೃಷಿ ಕೀಟ ವಿಜ್ಞಾನಕ್ಕೆ ಕೊಟ್ಟ ಕೊಡುಗೆಗಾಗಿ ಸ್ಮರಿಸಬೇಕಿದೆ. ಪುಟ್ಟರುದ್ರಯ್ಯನವರನ್ನು ‘ಕೀಟ ವಿಜ್ಞಾನದ ನಡೆದಾಡುವ ಶಬ್ದಕೋಶ’ ಎಂದು ಗುರುತಿಸಲಾಯಿತು. ‘ಕೀಟಗಳ ಜೀವನ ಚಕ್ರ’ವನ್ನವರು ಅಭ್ಯಸಿಸಿದರು. ಬಹುತೇಕ ಕೀಟಗಳಿಗೆ ಕನ್ನಡದ ಹೆಸರುಗಳನ್ನು ಕೊಟ್ಟು ಕೃತಿ ರಚಿಸಿದರು. ಡಾ. ಚನ್ನಬಸವಣ್ಣನವರು ದನಗಳಲ್ಲಿ ಒಂದು ಹೇನು ಪ್ರಬೇಧವನ್ನು ಹೊಸದಾಗಿ ಪತ್ತೆಹಚ್ಚಿ ಅದಕ್ಕೆ ‘ಹೆಮಾಟೊಪೈನಸ್ ಚನ್ನಬಸವಣ್ಣೈ’ ಎಂದು ಹೆಸರಿಟ್ಟರು. ಡಾ. ಸಿದ್ದಪ್ಪಾಜಿಯವರು ‘ಪ್ರಾಯೋಗಿಕ ಕೀಟಶಾಸ್ತ್ರಜ್ಞ’ರೆನಿಸಿಕೊಂಡರು. ಕನ್ನಡದ ಪ್ರಖ್ಯಾತ ಲೇಖಕರಾದ ಪೂರ್ಣಚಂದ್ರ ತೇಜಸ್ವಿಯವರೊಂದಿಗೆ ಸಿದ್ದಪ್ಪಾಜಿಯವರ ಒಡನಾಟವಿದ್ದುದರಿಂದ ‘ಕರ್ವಾಲೋ’ ಕಾದಂಬರಿ ರಚನೆಗೆ ಡಾ. ಸಿದ್ದಪ್ಪಾಜಿಯವರೇ ಪ್ರೇರಣೆ ಎಂಬ ಮಾತಿದೆ. ಕರ್ವಾಲೋ ಪಾತ್ರವೆಂದರೆ ಸಿದ್ದಪ್ಪಾಜಿ. ಸಿದ್ದಪ್ಪಾಜಿ ಎಂದರೆ ಕರ್ವಾಲೋ ಪಾತ್ರ.

ಡಾ. ಜಿ. ರಂಗಸ್ವಾಮಿಯವರು ಕೃಷಿ ಸೂಕ್ಷ್ಮಜೀವಿಶಾಸ್ತ್ರವನ್ನು ಒಂದು ಪ್ರತ್ಯೇಕ ಅಧ್ಯಯನ ವಿಷಯವನ್ನಾಗಿ ಮಾಡಿದವರು. ಆ ಮೂಲಕ ಕೃಷಿ ವಿಜ್ಞಾನಿಗಳಲ್ಲಿ ತಜ್ಞತೆ ಬೆಳೆಯಿತು. ಬೆಳೆಗಳಿಗೆ ತಗಲುವ ಸೂಕ್ಷ್ಮಜೀವಿ ರೋಗಗಳನ್ನು ತಡೆಗಟ್ಟಲು ಸಾಧ್ಯವಾಯಿತು. ಸಾವಯವ ಕೃಷಿಗೆ ಒತ್ತುಕೊಡಲು ರಾಧಾ ಡಿ. ಕಾಳೆ, ಶ್ರೀಹರಿ ಮತ್ತು ಕುಬ್ರ ಬಾನು ಅವರ ತಂಡವು ಎರೆಹುಳು ಗೊಬ್ಬರವನ್ನು ತಯಾರು ಮಾಡಿ ರೈತರಿಗೆ ಪೂರೈಸಿದರು.

ಹಸಿರು ಕ್ರಾಂತಿಯೆಂದರೆ ಡಾ. ನಾರ್ಮನ್ ಬೋರ್ಲಾಗ್ ಅವರು ಕೊಟ್ಟ ಅಧಿಕ ಇಳುವರಿಯ ಗೋಧಿ ತಳಿಗಳಷ್ಟೇ ಅಲ್ಲ. ಅಧಿಕ ಇಳುವರಿಯ ರಾಗಿ, ಭತ್ತ, ಜೋಳ ಮತ್ತು ಹಲವು ಸುಧಾರಿತ ಕೃಷಿ ಪದ್ದತಿಗಳ ಮೂಲಕ ಕರ್ನಾಟಕದ ಕೃಷಿ ವಿಜ್ಞಾನಿಗಳು ಹಸಿದವರ ಹೊಟ್ಟೆ ತುಂಬಿಸಿದ್ದೂ ಕೂಡ ಹಸಿರು ಕ್ರಾಂತಿಯ ಭಾಗವಾಗಿದೆ.

ನಾಡಿನ ರೈತರ ಏಳಿಗೆಗಾಗಿ, ಬೆಳೆಗಳ ಅಧಿಕ ಉತ್ಪಾದನೆಗಾಗಿ ಶ್ರಮಿಸಿದ ಕರ್ನಾಟಕದ ಕೃಷಿ ವಿಜ್ಞಾನಿಗಳ ನೆನಪುಗಳು ಅಮರವಾಗಿರಲಿ. ಚನ್ನವೀರ ಕಣವಿಯವರು ತಮ್ಮ ‘ಅನ್ನದ ಋಣ’ ಕವನದಲ್ಲಿ ಭಾವಪೂರ್ಣವಾಗಿ ಬರೆದಿರುವ ‘ತುತ್ತು ತುತ್ತಿಗೆ ಶಿವ ಶಿವಾ ಎಂದು ತುಂಬುತ್ತೇನೆ ಹಸಿದ ಹೊಟ್ಟೆ’ ಎಂಬಂತೆ ತುತ್ತು ಸೇವಿಸುವಾಗ ಅನ್ನದಾತರಾದ ಕೃಷಿ ವಿಜ್ಞಾನಿಗಳನ್ನು ಮನದುಂಬಿ ನೆನೆಯೋಣ.
(ಒಂದು ಪರಿಷ್ಕೃತ ಲೇಖನ : ಪೂರಕ ಮಾಹಿತಿ – ಡಾ. ಜೆ. ಬಾಲಕೃಷ್ಣ)

WhatsApp Image 2025 07 22 at 12.22.50 PM
ಪ್ರೊ. ಎಂ. ನಾರಾಯಣ ಸ್ವಾಮಿ
+ posts

ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ಎಂ. ನಾರಾಯಣ ಸ್ವಾಮಿ
ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X