ಗುಜರಾತ್‌ನ ಜುನಾಗಡ್ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಪ್ರಕರಣ ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ಇದೀಗ ಅದೇ ಗುಜರಾತ್‌ನ ಗ್ರಾಮವೊಂದರಲ್ಲಿ ಸಕಾರಾತ್ಮಕ ಬೆಳವಣಿಗೆಯೊಂದು ಕಂಡು ಬಂದಿದೆ. 78ನೇ ಸ್ವಾತಂತ್ರ ಸಂಭ್ರಮಕ್ಕೆ ಗುಜರಾತ್‌ನ ಅಲ್ವಾಡದಲ್ಲಿ ದಲಿತರಿಗೂ ಒಂದು ರೀತಿಯಲ್ಲಿ ಸ್ವಾತಂತ್ರ್ಯ ದೊರಕಿದಂತಾಗಿದೆ. ಶತ ಶತಮಾನಗಳಿಂದ ಜಾತಿ ತಾರತಮ್ಯಕ್ಕೆ ಅಂಟಿಕೊಂಡಿದ್ದ ಗ್ರಾಮವು ಈಗ ಒಂದು ಪ್ರಮಾಣದಲ್ಲಿ ಮುಕ್ತವಾಗಿ ತೆರೆದುಕೊಂಡು ಪ್ರಶಂಸೆಗೆ ಪಾತ್ರವಾಗಿದೆ.
ಈ ಹಿಂದೆ ಅಲ್ವಾಡ ಗ್ರಾಮದಲ್ಲಿ ದಲಿತರಿಗೆ ಕ್ಷೌರದ ಅಂಗಡಿಗೆ ಪ್ರವೇಶ ನಿಷಿದ್ಧವಾಗಿತ್ತು. ಸುಮಾರು 6,500 ಜನರು ವಾಸವಿರುವ ಈ ಗ್ರಾಮದಲ್ಲಿ 250 ಮಂದಿ ದಲಿತರು ತಲೆಮಾರುಗಳಿಂದ ವಾಸವಿದ್ದರು. ಆದರೆ ಕ್ಷೌರ ಮಾಡಬೇಕೆಂದಾಗ ಪಕ್ಕದ ಗ್ರಾಮಗಳಿಗೆ ತೆರಳಿ ತಮ್ಮ ಜಾತಿ ಗುರುತನ್ನು ಮರೆಮಾಚಿ ಕೂದಲು ತೆಗೆಸಿಕೊಳ್ಳಬೇಕಾದ ಪರಿಸ್ಥಿತಿ ದಲಿತ ಯುವಕರದ್ದಾಗಿತ್ತು. ಇದು ಇತ್ತೀಚೆಗೆ ನಿರ್ಮಾಣವಾದ ವಾತಾವರಣವಲ್ಲ, ಬದಲಾಗಿ ಎಷ್ಟೋ ದಶಕಗಳಿಂದ, ಶತಮಾನಗಳಿಂದ ರೂಢಿಗತವಾಗಿ ನಡೆದು ಬಂದಿರುವ ಅನಿಷ್ಟ!
ಇದನ್ನು ಓದಿದ್ದೀರಾ? ರಾಯಚೂರು | ಕ್ಷೌರಿಕನಿಂದ ಕೊಲೆಯಾದ ದಲಿತ ಯುವಕ; ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಲು ಆಗ್ರಹ
ಈಗ ಗ್ರಾಮದ ಜನರು ಬದಲಾವಣೆಗೆ ಪ್ರಯತ್ನ ನಡೆಸಿದ್ದು, ಕೆಲವು ತಿಂಗಳುಗಳ ಚರ್ಚೆಯ ಬಳಿಕ ಇಂತಹದೊಂದು ವಾತಾವರಣ ಸೃಷ್ಟಿಯಾಗಿದೆ. ಸ್ವಾತಂತ್ರ್ಯೋತ್ಸವಕ್ಕೆ ಒಂದು ವಾರದ ಮೊದಲು ಕೃಷಿ ಕೂಲಿ ಕಾರ್ಮಿಕ ಕೀರ್ತಿ ಚೌಹಾಣ್ ತನ್ನ ಗ್ರಾಮದಲ್ಲೇ ಕ್ಷೌರ ಮಾಡಿಸಿಕೊಂಡಿದ್ದು, ಕ್ಷೌರದ ಅಂಗಡಿಯಲ್ಲಿ ಕೂದಲು ಕತ್ತರಿಸಿಕೊಂಡ ಮೊದಲ ದಲಿತ ಯುವಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಗ್ರಾಮದ ಐದೂ ಕ್ಷೌರದ ಅಂಗಡಿಗಳು ದಲಿತರಿಗೆ ಮುಕ್ತ ಪ್ರವೇಶವನ್ನು ನೀಡಲು ಒಪ್ಪಿಕೊಂಡಿವೆ.
“24 ವರ್ಷದ ನನ್ನ ಜೀವನದಲ್ಲಿ ಕೊನೆಗೂ ನಾನು ನನ್ನ ಗ್ರಾಮದಲ್ಲಿ ಸ್ವೀಕಾರಗೊಂಡಿದ್ದೇನೆ. ಈವರೆಗೂ ನಾನು ಕೂದಲು ಕತ್ತರಿಸಿಕೊಳ್ಳಬೇಕಾದರೆ ಬೇರೆ ಗ್ರಾಮಗಳಿಗೆ ಹೋಗಬೇಕಾಗಿತ್ತು. ಅಂತಿಮವಾಗಿ ನಮ್ಮ ಗ್ರಾಮದಲ್ಲಿಯೇ ಕ್ಷೌರ ಮಾಡಿಸಿಕೊಂಡ ಮೊದಲ ದಲಿತ ನಾನು” ಎಂದು ಕೀರ್ತಿ ಚೌಹಾಣ್ ಸಂತಸ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಅಧ್ಯಕ್ಷ ಸುರೇಶ್ ಚೌಧರಿ ಮಾತನಾಡಿ, “ಗ್ರಾಮದ ಸರಪಂಚನಾಗಿರುವ ನನಗೆ ಈ ಹಿಂದೆ ಜಾರಿಯಲ್ಲಿದ್ದ ನಿಯಮದ ಬಗ್ಗೆ ತಪ್ಪಿತಸ್ಥ ಎಂಬ ಭಾವನೆ ಇತ್ತು. ಕೊನೆಗೂ ಈ ಪದ್ದತಿ ನನ್ನ ಅವಧಿಯಲ್ಲೇ ಕೊನೆಗೊಂಡಿರುವುದರ ಬಗ್ಗೆ ನನಗೆ ಹೆಮ್ಮೆ ಇದೆ” ಬದಲಾವಣೆಯನ್ನು ಸ್ವಾಗತಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ದಲಿತರಿಗೆ ಕ್ಷೌರ ಮಾಡಲು ನಕಾರ; ಕ್ಷೌರಿಕನ ವಿರುದ್ಧ ಜಾತಿ ದೌರ್ಜನ್ಯ ಪ್ರಕರಣ ದಾಖಲು
ಈ ಮಹತ್ತರ ಬದಲಾವಣೆಯ ಹಿಂದೆ ದಲಿತ ಸಮುದಾಯದ ನಿರಂತರ ಪ್ರಯತ್ನವಿದೆ. ಜೊತೆಗೆ ಸ್ಥಳೀಯ ಚಳುವಳಿಗಾರ ಚೇತನ್ ದಭಿಯವರ ಬೆಂಬಲದೊಂದಿಗೆ ಗ್ರಾಮದ ಮೇಲ್ವರ್ಗಗಳ ಮತ್ತು ಕ್ಷೌರಿಕರ ಮನೋಧರ್ಮವನ್ನು ಬದಲಿಸುವ ಸಲುವಾಗಿ ಅವಿರತ ಪ್ರಯತ್ನಗಳು ನಡೆದಿವೆ. ಆದರೆ ಈ ಮನವೊಲಿಕೆ ವಿಧಾನ ವಿಫಲವಾದಾಗ ಜಿಲ್ಲಾಡಳಿತ ಮತ್ತು ಪೊಲೀಸರು ಮಧ್ಯೆ ಪ್ರವೇಶಿಸಬೇಕಾಯಿತು. ಮಮ್ತತ್ ದಾರ್ ಜನಕ್ ಮೆಹ್ತಾ ನೇತೃತ್ವದ ಜಿಲ್ಲಾಡಳಿತ ತಂಡವು ಬದಲಾವಣೆಗಾಗಿ ನಡೆದ ಪ್ರಯತ್ನದಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಅಲ್ವಾಡ ಗ್ರಾಮದಲ್ಲಿ ನಡೆದ ಈ ಬದಲಾವಣೆಗಳು ದೇಶದ ಬೇರೆ ಬೇರೆ ಭಾಗಗಳಲ್ಲಿ ಬೇರೂರಿರುವ ತಾರತಮ್ಯ, ಜಾತಿ ಪದ್ದತಿ, ಮೂಢನಂಬಿಕೆಗಳಿಂದ ಹೊರ ಬರುವಂತೆ ಪ್ರೇರಣೆ ನೀಡಿ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಅಡಿಪಾಯಕ್ಕೆ ಸ್ಪೂರ್ತಿಯಾಗಿದೆ.
