ಸಾಲದ ಕಂತು ಕಟ್ಟದೆ ಬಾಕಿ ಉಳಿಸಿಕೊಂಡಿದ್ದ ಕಾರಣಕ್ಕೆ ಸಾಲು ವಸೂಲಾತಿಗಾಗಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳ ಎದುರಿಸುತ್ತಿದ್ದ ಗೃಹಿಣಿ ಒಬ್ಬರು ಮಾನಸಿಕ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾಗಿದ್ದು ದಾವಣಗೆರೆ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೊಂದು ಜೀವ ಬಲಿಯಾಗಿದೆ.
ದಾವಣಗೆರೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಹಳೆ ಕುಂದುವಾಡ ಗ್ರಾಮದ ಮಂಜುನಾಥ್ ಅವರ ಪತ್ನಿ ಮಹಾದೇವಿ (32) ಶರಣಾದ ದುರ್ದೈವಿಯಾಗಿದ್ದು, ಕಳೆದ ಎರಡು ವಾರಗಳಿಂದ ಜನಾ ಫೈನಾನ್ಸ್ ಸೇರಿದಂತೆ ಫೈನಾನ್ಸ್ ಗಳಿಗೆ ಕಂತು ಕಟ್ಟದ ಕಾರಣಕ್ಕೆ ಫೈನಾನ್ಸಿನ ಮಸೂಲಾತಿ ಸಿಬ್ಬಂದಿ ಮರುಪಾವತಿಗೆ ಕಿರುಕುಳ ಕೊಟ್ಟಿದ್ದರು. ಇದರಿಂದಾಗಿ ಗೃಹಿಣಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂಬಂಧಿಗಳು ಆರೋಪಿಸಿದ್ದಾರೆ.
“ಮಹಿಳೆಯ ಗಂಡ ಮಂಜುನಾಥ ಡೈರಿಯಲ್ಲಿ ಕೂಲಿ ಉದ್ಯೋಗಿಯಾಗಿದ್ದು, ಮೈಕ್ರೋ ಫೈನಾನ್ಸ್ ಗಳಾದ ಐಡಿಎಫ್ಸಿ ಧರ್ಮಸ್ಥಳ ಫೈನಾನ್ಸ್ ಸಗ್ರಹ ಫೈನಾನ್ಸ್, ಜನ ಫೈನಾನ್ಸ್ ಗಳಿಂದ ಪಡೆದಿದ್ದ ಸುಮಾರು 4.5 ಲಕ್ಷದಷ್ಟು ಸಾಲಕ್ಕೆ ಮಳೆಯ ಕಾರಣದಿಂದ ಹಣಕಾಸಿನ ಸಮಸ್ಯೆಯಿಂದಾಗಿ ವಾರದ ಕಂತನ್ನು ಮರುಪಾವತಿ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ. ಇದರಿಂದ ಮೈಕ್ರೋಫೈನಾನ್ಸ್ ಸಿಬ್ಬಂದಿ ವಸೂಲಾತಿಗಾಗಿ ಪ್ರತಿನಿತ್ಯ ಮನೆ ಬಾಗಿಲಿಗೆ ಬಂದು ಮರುಪಾವತಿಗಾಗಿ ಗಲಾಟೆ, ದೌರ್ಜನ್ಯ ಮಾಡುತ್ತಿದ್ದರು” ಎಂದು ಕುಟುಂಬದ ಸಂಬಂಧಿ ಮಹಾಂತೇಶ ಕುಂದುವಾಡ ಆರೋಪಿಸಿದ್ದಾರೆ.

ಈ ಬಗ್ಗೆ ಈದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿದ ಮೃತ ಗೃಹಣಿಯ ಗಂಡ ಮಂಜುನಾಥ “ಫೈನಾನ್ಸ್ ಗಳಿಂದ ಸಾಲ ಪಡೆದಿದ್ದು ಕೆಲಸ ಕಡಿಮೆ ಇದ್ದುದರಿಂದ ಕಟ್ಟಲು ಸಾಧ್ಯವಾಗಿಲ್ಲ. ಕೂಲಿಹಣ ಬರಲಿದ್ದು ಒಂದೆರಡು ದಿನಗಳಲ್ಲಿ ಕಟ್ಟುತ್ತೇವೆ ಎಂದು ಹೇಳಿದರೂ ಹಿಂಸೆ ನೀಡುತ್ತಿದ್ದರು. ಮಂಗಳವಾರ ಮಧ್ಯಾಹ್ನ ನನ್ನ ಹೆಂಡತಿ ಮನೆಯಲ್ಲಿ ಒಬ್ಬಳೇ ಇರುವಾಗ ಜನ ಫೈನಾನ್ಸಿನ ಸಿಬ್ಬಂದಿ ಒಬ್ಬ ಬಂದು ಸಾಲ ಕಟ್ಟುವಂತೆ ಗಲಾಟೆ ಮಾಡಿದ್ದಾನೆ. ನನ್ನ ಹೆಂಡತಿ ನೀವು ಈ ರೀತಿ ಹಿಂಸೆ ನೀಡಿದರೆ ನಾವು ಉರುಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಆದರೂ ಫೈನಾನ್ಸ್ ಸಿಬ್ಬಂದಿ ನೀವು ಆತ್ಮಹತ್ಯೆಯಾದರೂ ಮಾಡಿಕೊಳ್ಳಿ ಏನಾದರೂ ಮಾಡಿಕೊಳ್ಳಿ, ನಮ್ಮ ಸಾಲ ಮರುಪಾವತಿ ಮಾಡಿ ಎಂದು ಮಾನಸಿಕವಾಗಿ ಹಿಂಸೆ ನೀಡಿ ಮನೆ ಮುಂದೆ ಗಲಾಟೆ ಮಾಡಿದ್ದಾನೆ. ಇದರಿಂದ ಮಾನಸಿಕವಾಗಿ ನೊಂದ ನನ್ನ ಹೆಂಡತಿ ನೇಣಿಗೆ ಶರಣಾಗಿದ್ದಾಳೆ” ಎಂದು ಅಳಲನ್ನು ತೋಡಿಕೊಂಡರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕೆ.ಎನ್. ರಾಜಣ್ಣ, ನಾಗೇಂದ್ರ ಅವರನ್ನು ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ
ಸರ್ಕಾರ ಸಾಲ ವಸೂಲಾತಿಗೆ ನಿಯಮ ರೂಪಿಸಿ ಕ್ರಮ ಕೈಗೊಂಡರೂ, ಮೈಕ್ರೋ ಫೈನಾನ್ಸ್ ಗಳು ಅದನ್ನು ಲೆಕ್ಕಿಸದೆ ದೌರ್ಜನ್ಯ ಮುಂದುವರೆಸಿವೆ. ನಿಯಮಗಳು ಕಾಗದಕ್ಕೆ ಮಾತ್ರ ಮೀಸಲಾಗಿವೆ. ಎರಡು ತಿಂಗಳ ಹಿಂದೆ ಚನ್ನಗಿರಿಯಲ್ಲಿ ಸಾಲಮಾಡಿದ ಕಾರಣಕ್ಕೆ, ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಗಂಡನೊಬ್ಬ ಹೆಂಡತಿಯ ಮೂಗು ಕೊಯ್ದು ಘಟನೆ ನಡೆದಿದ್ದು, ಗೃಹಿಣಿಯ ಮೂಗು ಬಲಿಯಾಗಿತ್ತು. ಐದಾರು ತಿಂಗಳ ಹಿಂದೆ ಖಾಸಗಿ ಫೈನಾನ್ಸ್ ಗಳ ಹಾವಳಿಗೆ ಮನನೊಂದು ಹೊನ್ನಾಳಿಯಲ್ಲಿ ತುಂಗಭದ್ರಾ ನದಿಗೆ ಹಾರಿ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ದಾವಣಗೆರೆಯಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬಲಿಯಾಗುವ ಹೆಣ್ಣು ಮಕ್ಕಳ ಸಂಖ್ಯೆ ಮುಂದುವರೆಯುತ್ತಲೇ ಇದೆ. ಕಡಿವಾಣ ಹಾಕುವವರು ಮಾತ್ರ ತಮಗೆ ಸಂಬಂಧವೇ ಇಲ್ಲದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
