ಮೈಸೂರು | ಅರಸು ಮರೆತ ಸರ್ಕಾರ; ಬೆಟ್ಟದತುಂಗ, ಕಲ್ಲಹಳ್ಳಿ ಗ್ರಾಮಗಳ ದತ್ತು ಪಡೆದಿದ್ದ ಸಿಎಂ ಸಿದ್ದರಾಮಯ್ಯ

Date:

Advertisements

ಸಾಮಾಜಿಕ ಕ್ರಾಂತಿಯ ಹರಿಕಾರ ಡಿ. ದೇವರಾಜ ಅರಸು ಅವರ 110 ನೇ ಜನ್ಮ ದಿನದ ಸಂದರ್ಭ. ‘ಇದೇ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಇಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅಂದಿನ ಮುಖ್ಯಮಂತ್ರಿಗಳಾಗಿ ದಿನಾಂಕ-20-08-2015 ರಂದು ಹುಣಸೂರಿನಲ್ಲಿ ಅರಸು ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ₹7.5 ಕೋಟಿ ರೂಪಾಯಿ ವೆಚ್ಚದಲ್ಲಿ ಹುಣಸೂರಿನ ಅರಸು ಕಲ್ಲಹಳ್ಳಿ ಹಾಗೂ ಪಿರಿಯಾಪಟ್ಟಣಬೆಟ್ಟದತುಂಗಾ ಗ್ರಾಮಗಳನ್ನು ದತ್ತು ಪಡೆಯುವುದರ ಮೂಲಕ ಅಗತ್ಯ ಕ್ರಮವಹಿಸಿದೆ’ ಎಂದಿದ್ದರು.

ದತ್ತು ಸ್ವೀಕರಿಸಿ 10 ವರ್ಷ ಕಳೆಯಿತು. ಮತ್ತದೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಗಳಾಗಿದ್ದಾರೆ. ಆದರೇ, ದತ್ತು ಪಡೆದ ಗ್ರಾಮಗಳು ಅನಾಥವಾಗಿವೆ. ಅರಸು ಭವನ ಉದ್ಘಾಟನೆ ಕಾಣದೆ ಪಾಳು ಬಿದ್ದಿದೆ. ಅರಸು ಬಾಳಿ ಬದುಕಿದ ಮನೆ ಶಿಥಿಲವಾಗಿದ್ದು, ಕುಸಿಯುವ ಹಂತಕ್ಕೆ ಬಂದು ನಿಂತಿದೆ. ಅರಸು ಕರ್ಮಭೂಮಿ ಹುಣಸೂರು ಅಕ್ಷರಶಃ ಅಭಿವೃದ್ಧಿ ಕಾಣದೆ ಕೀಳುಮಟ್ಟದ ರಾಜಕೀಯದಿಂದ ಅಧಃಪತನಕ್ಕೆ ತಲುಪಿದೆ. ಅರಸು ಅವರ ಹೆಸರಿಗೆ ಕಳಂಕ ತರುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ನಿರತರಾಗಿದ್ದಾರೆ.

ಅಧಿಕಾರ, ಅಂತಸ್ತು ಶಾಶ್ವತವಲ್ಲ. ಸಾಮಾಜಿಕ ನ್ಯಾಯದ ಹಿನ್ನೆಲೆಯಿಂದ ಬಂದು ಅಸ್ಪೃಶ್ಯತೆ, ಜಾತೀಯತೆ, ಅಸಮಾನತೆ, ಶೋಷಣೆಗಳನ್ನು ಕಣ್ಣಾರೆ ಕಂಡು ‘ಉಳುವವನೆ ಭೂಮಿ ಒಡೆಯ’ ಕಾನೂನನ್ನು ಜಾರಿಗೆ ತರುವುದರ ಮೂಲಕ ತಾವು ಮಾಡಿದ ಉನ್ನತ ಕೆಲಸಗಳಿಂದಲೇ ಇಂದಿಗೂ ಚಿರಸ್ಥಾಯಿಯಾಗಿ ಉಳಿದವರು ‘ನಮ್ಮೂರ ಅರಸು’. ಇಡೀ ರಾಜ್ಯವೇ ಸ್ಮರಿಸುವಾಗ, ಸರ್ಕಾರಗಳು ಕಾರ್ಯಕ್ರಮವನ್ನಾಗಿಸುವಾಗ ಸರ್ಕಾರವೇ ಕೊಟ್ಟ ಮಾತು. ಸಿದ್ದರಾಮಯ್ಯನವರೇ ಹೇಳಿದ ಮಾತು. ಶಂಕುಸ್ಥಾಪನೆ ಮಾಡಿ ಘೋಷಿಸಿದ ಭರವಸೆಗಳನ್ನು ಮರೆತಿದ್ದು ದುರದೃಷ್ಟಕರ. ಗ್ಯಾರಂಟಿ ಸರ್ಕಾರ ಎನ್ನುವ ಕಾಂಗ್ರೆಸ್ ಸರ್ಕಾರ, ಸಮಾಜವಾದಿ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯನವರು ಅರಸು ಹುಟ್ಟಿದ, ಮೆಟ್ಟಿದ ನೆಲವನ್ನು ಮರೆತಿದ್ದು ವಿಷಾದದ ಸಂಗತಿ.

Advertisements

ಅಂದು ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವರಾಗಿದ್ದ ವಿ. ಶ್ರೀನಿವಾಸ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಹೆಚ್. ಆಂಜನೇಯ, ಕಾನೂನು ಸಂಸದೀಯ ವ್ಯವಹಾರಗಳು ಹಾಗೂ ಪಶು ಸಂಗೋಪನಾ ಸಚಿವ ಟಿ. ಬಿ. ಜಯಚಂದ್ರ, ಶಾಸಕ ಹೆಚ್. ಪಿ. ಮಂಜುನಾಥ್ ಇವರುಗಳ ಸಮ್ಮುಖದಲ್ಲಿ ನೆರವೇರಿಸಿದ್ದ ಶಿಲಾನ್ಯಾಸ ಇವತ್ತು ಯಾರಿಗೂ ಕಾಣದ ಹಾಗೆ ಅರಸು ಅವರು ಬಾಳಿ ಬದುಕಿದ ಮನೆಯ ಅಡಿಗೆ ಕೋಣೆಯಲ್ಲಿ ಇದೆ. ಇದೇನಾ ಅಭಿವೃದ್ಧಿ? ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಅರಸು ಹೆಸರು ಹೇಳದ ಒಬ್ಬ ರಾಜಕಾರಣಿ ರಾಜ್ಯದಲ್ಲಿ ಇದ್ದರೆ ಅದುವೇ ಐತಿಹ್ಯವೇ ಸರಿ. ಅರಸು ಬರೀ ಹೆಸರಲ್ಲ. ರಾಜ್ಯದಲ್ಲಿ ಹಲವಾರು ಮುಖ್ಯಮಂತ್ರಿಗಳು ಬಂದಿದ್ದಾರೆ. ಹಾಗೆಯೇ, ಹೋಗಿದ್ದಾರೆ. ಆದರೇ, ಇಂದಿಗೂ ಜನ ಮಾನಸದಲ್ಲಿ ಉಳಿದುಕೊಂಡಿರುವ ಏಕೈಕ ವ್ಯಕ್ತಿ ಅಂದರೇ ಅದುವೇ ಕರ್ನಾಟಕ ಏಕೀಕರಣ ಕರ್ತೃ ಡಿ. ದೇವರಾಜ ಅರಸು. ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿ, ಅತಿ ಹೆಚ್ಚುಕಾಲ ಸೇವೆ ಸಲ್ಲಿಸಿದರು. ಹಿಂದುಳಿದ ವರ್ಗಗಳಿಂದ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಮೊದಲ ವ್ಯಕ್ತಿ. ಐದು ವರ್ಷ ಪೂರ್ಣಗೊಳಿಸಿದ ಮೊದಲಿಗರೂ ಹೌದು.

ಅರಸು ಆಸ್ತಿ ಮಾಡಲಿಲ್ಲ. ಜನರನ್ನೇ ಆಸ್ತಿ ಮಾಡಿಕೊಂಡರು. ಮೈಸೂರು ರಾಜ್ಯದ ಸಂದರ್ಭದಲ್ಲಿ ಗ್ರಾಮ(ಮಂಡಲ) ಪಂಚಾಯತಿಯಿಂದ ಹಿಡಿದು ಮುಖ್ಯಮಂತ್ರಿ ಗಾದಿಗೆ ಏರಿ, ನಿರ್ವಂಚನೆಯಿಂದ ತಮ್ಮ ವಿವೇಕಯುತ ತೀರ್ಮಾನಗಳಿಂದ ಜನ ಸಾಮಾನ್ಯರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದವರು. ಶೋಷಣೆ ಹಾಗೂ ಬಡತನ ನಿವಾರಣೆಗೆ ಪಣತೊಟ್ಟಿ ಹೋರಾಡಿದ ಧೀಮಂತ ನಾಯಕ. 1970 ರ ದಶಕವನ್ನು ‘ದೇವರಾಜ ಅರಸರ ಯುಗ’ ಎಂದೇ ಈಗಲೂ ಪರಿಗಣಿಸಲಾಗುತ್ತದೆ.

ಪ್ರಮುಖವಾಗಿ “ಭೂ ಸುಧಾರಣೆ ಕಾಯಿದೆ, ‘ಉಳುವವನೇ ಭೂಮಿಯ ಒಡೆಯ’, ವೃದ್ಧಾಪ್ಯ ವೇತನ, ನಿರುದ್ಯೋಗಿ ಪದವೀಧರರಿಗೆ ಸಹಾಯಧನ, ಬಡವರಿಗೆ ಭಾಗ್ಯಜ್ಯೋತಿ, ಹಾವನೂರು ವರದಿ, ವಿಧವಾ ವೇತನ, ಜೀತ ಪದ್ಧತಿ ವಿಮುಕ್ತಿ, ಕೃಷಿ ಬ್ಯಾಂಕುಗಳ ಸ್ಥಾಪನೆ. ಮಲ ಹೊರುವ ಪದ್ಧತಿ, ಕರ್ನಾಟಕ ಮರು ನಾಮಕರಣ, ವಿಶ್ವವಿದ್ಯಾನಿಲಯಗಳ ಸ್ವಾಯುತ್ತತೆಗಾಗಿ 1976 ರ ಕಾಯಿದೆ, ಕೃಷಿ ಕಾರ್ಮಿಕರ ಕನಿಷ್ಠ ವೇತನ ನಿಗದಿ. ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ವಿದ್ಯಾರ್ಥಿ ವೇತನ” ಹೀಗೆ, ಅರಸುರವರ ಆಳ್ವಿಕೆಯ ಪ್ರಮುಖ ಸಾಧನೆಗಳ ಪಟ್ಟಿ ಮಾಡುತ್ತಲೇ ಹೋಗಬಹುದು.

ಇಂತಹ ಅರಸು ತನ್ನ ಊರಿನಲ್ಲಿ ಇರುವುದು ಗುಡಿಸಲಿನಂತ ಮಣ್ಣಿನ ಗೋಡೆಯ, ಕೈಹಂಚಿನ ಮನೆಯಲ್ಲಿ. ಮನಸ್ಸು ಮಾಡಿದ್ದರೆ ಕಲ್ಲಹಳ್ಳಿ ಹಾಗೂ ಬೆಟ್ಟದ ತುಂಗದಲ್ಲಿ ಬಂಗಲೆ ಕಟ್ಟಿ ಮೆರೆಯಬಹುದಿತ್ತು. ತಾವೇ ಮುಖ್ಯಮಂತ್ರಿಗಳಾಗಿದ್ದರು ಸರಳವಾಗಿ ಅದೇ ಮನೆಯಲ್ಲಿ ನೆಲದ ಮೇಲೆ ಕುಳಿತು ಊಟ ಮಾಡಿ, ಅದೇ ಮನೆಯ ಸರಳ ಕೋಣೆಯಲ್ಲಿ ಮಲಗುತ್ತಿದ್ದ ಮಾದರಿ ಮುಖ್ಯಮಂತ್ರಿ. ವಿದ್ಯಾರ್ಥಿ ದೆಸೆಯಲ್ಲಿ ಗ್ರಾಮದಲ್ಲಿ ಕೃಷಿ ಮಾಡಿಕೊಂಡಿದ್ದ ರೈತ. ಜನರ ಕಷ್ಟ, ನೋವನ್ನ ಅರಿತಿದ್ದ ಹಿಂದುಳಿದ ವರ್ಗಗಳ ನಾಯಕ.

ಚಿಕ್ಕಮಗಳೂರು ಉಪ ಚುನಾವಣೆ ಸಂದರ್ಭದಲ್ಲಿ ತನ್ನೂರಿಗೆ ಇಂದಿರಾಗಾಂಧಿಯವರನ್ನು ಇದೇ ರಸ್ತೆ ಮಾರ್ಗವಾಗಿ ಕಲ್ಲಹಳ್ಳಿ ಮನೆಗೆ ಕರೆ ತಂದಿದ್ದರು. ಅದೇ ಮನೆಯ ಪಕ್ಕದಲ್ಲಿ ಘಟಾನುಘಾಟಿಗಳ ಜೊತೆ ಸಭೆ ನಡೆಸಿದ್ದರು. ಯಾರಾದರೂ ಊರಿಗೆ ಬಂದರೆ ತಂಗಲು ಮಣ್ಣಿನ ಗೋಡೆಯ ಹಂಚಿನ ಮನೆ. ಪಕ್ಕದಲ್ಲಿ ತಾರಸಿ ಮನೆ (ಮೆಟ್ಟಿಲುಗಳು ಇರದ ಮನೆ ) ಅಂದಿಗೆ ನಿರ್ಮಾಣ ಮಾಡಿಸಿದ್ದರು. ಅರಸು ಅವರು ಮುಖ್ಯಮಂತ್ರಿಗಳಾಗಿ 50 ವರ್ಷ ಸಂದಿವೆ. ಅದೇನೇ ಇದ್ದರೂ ಮೇರು ವ್ಯಕ್ತಿತ್ವದ ವ್ಯಕ್ತಿಯ ವಿಚಾರವಾಗಿ ಆಳ್ವಿಕೆಗೆ ಬಂದಂತಹ ಸರ್ಕಾರಗಳು ಯಾವ ರೀತಿಯಲ್ಲಿ ನಡೆದುಕೊಂಡವು ಎನ್ನುವುದು ಕೂಡ ಮುಖ್ಯ ವಿಚಾರ.

” ಅರಸು ಅವರಿಗೆ ಕಲ್ಲಹಳ್ಳಿ ಎಂದರೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ, ಕರ್ಮಭೂಮಿಯ ಜೊತೆ ತಮ್ಮ ಹೆಸರು ಸೇರಿ ಅರಸುಕಲ್ಲಹಳ್ಳಿ ಎಂದರೇ ಅವರಿಗೆ ವಿಶೇಷ ರೋಮಾಂಚನವೇ ಸರಿ. ಊರಿಗೆ ಬಂತು ಅಂದರೇ ಮೊದಲಿಗೆ ಕಾಲಿನ ಚಪ್ಪಲಿ ಕಳಚಿ ಮನೆ ಪಕ್ಕದ ದನದ ಕೊಟ್ಟಿಗೆಗೆ ತೆರಳಿ ಎತ್ತು, ಕರು, ಹಸುಗಳ ಮೈತಡವಿ, ಮುದ್ದಿಸುವುದು. ಮನಸ್ಸಿಗೆ ಸಮಾಧಾನ ಆಗುವ ತನಕ ಕೊಟ್ಟಿಗೆಯಲ್ಲಿ ಕಾಲ ಕಳೆದು. ಆಗತಾನೆ ಕರೆದ ಹಸುವಿನ ಹಸಿ ಹಾಲನ್ನು ಕುಡಿದು ತಲೆ ಬಾಗಿಸಿ ತೊಟ್ಟಿ ಹಟ್ಟಿಯ ಹಳೆಯದಾದ ಮನೆಯೊಳಗೆ ಕಾಲಿಡುತ್ತಿದ್ದರಂತೆ..” ಇವೆಲ್ಲವೂ ಅರಸು ಅವರ ಗ್ರಾಮದಲ್ಲಿ ಸುತ್ತಾಡುವಾಗ ಗ್ರಾಮಸ್ಥರಿಂದ ತಿಳಿದ ವಿಚಾರಗಳು.

ಮುಖ್ಯಮಂತ್ರಿಯಾಗಿ ಅಲ್ಲ, ಊರಿನ ಮಗನಾಗಿ. ಸರಳ ವ್ಯಕ್ತಿತ್ವದ ಅರಸು ಅಂದಿಗೆ ಕೊಟ್ಟ ಕಟ್ಟಡಗಳೇ ಇಂದಿಗೂ ಗ್ರಾಮ ಪಂಚಾಯತಿ, ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿಯಾಗಿದೆ. ಬದಲಾವಣೆ ಕಂಡೇ ಇಲ್ಲ. ಅರಸು ಅವರಿಂದಾಗಿ ಖ್ಯಾತಿ ಹೊಂದಿದೆಯೇ ಹೊರತು, ಸ್ಥಳೀಯವಾಗಿ ಏನೆಲ್ಲಾ ಆಗಬೇಕಿತ್ತೋ ಅದಯ ಇದುವರೆಗೂ ಆಗಿಯೇ ಇಲ್ಲ. ಊರೊಳಗೆ ಬರುವಾಗ ಉತ್ತಮ ರಸ್ತೆ ಕಾಣಬಹುದು ಹೊರತು ಊರಿಂದಾಚೆ ಬರುವಾಗ ಗುಂಡಿ ಬಿದ್ದ ರಸ್ತೆಗಳೇ ಕಣ್ಣಿಗೆ ರಾಚುತ್ತವೆ.

ಎಷ್ಟರ ಮಟ್ಟಿಗೆ ಸರ್ಕಾರ, ತಾಲೂಕು ಆಡಳಿತ, ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ಎಂದರೆ ಇದುವರೆಗೆ ಹೊಸ ಕಟ್ಟಡ ಭಾಗ್ಯ ಕಲ್ಪಿಸಿಯೇ ಇಲ್ಲ. ಶಿಥಿಲಾವಸ್ಥೆಯಲ್ಲಿರುವ ಕಟ್ಟದಲ್ಲಿಯೇ ಮುಂದುವರಿಕೆಯಾಗಿದೆ. ಶಾಲೆಯೊಳಗೆ ಕೂರಲು ಆಗಲ್ಲ. ಮಳೆ ಬಂದರೆ ಸೋರುವ ಕಟ್ಟಡಗಳು, ಹಳಿತಾಗಿವೆ. ಆದರೂ, ಅಲ್ಲಿಯೇ ದೈನಂದಿನ ಚಟುವಟಿಕೆ. ಮಕ್ಕಳಿಗೂ ಸರಿಯಾದ ಸವಲತ್ತುಗಳೂ ಇಲ್ಲ. ಅರಸು ಕುಟುಂಬದ ಹಳೇ ಕಟ್ಟಡದಲ್ಲಿಯೇ ಈಗಲೂ ಗ್ರಾಮ ಪಂಚಾಯತಿ ಇರುವುದು ಸೋಜಿಗದ ಸಂಗತಿ.

“ಅರಸು ಅವರ ಕನಸಿನ ಕೂಸಾಗಿದ್ದ ದೊಡ್ಡಕೆರೆ (22 ಎಕರೆ ) ಹಾಗೂ ಇನ್ನಿತರೇ ನಾಲ್ಕು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ನನಸಾಗಿಲ್ಲ. ಕೃಷಿ ಪ್ರಧಾನವಾದ ಗ್ರಾಮಕ್ಕೆ ನೀರಿನ ಆಸರೆಯಾಗಬೇಕು ಎನ್ನುವುದು ಅರಸು ಅವರ ಬಯಕೆ ಆಗಿತ್ತು. ಆದರೆ, ಈ ಮಳೆಗಾಲದಲ್ಲೂ ಕೆರೆ ತುಂಬಿಲ್ಲ. ಅಕ್ಕ ಪಕ್ಕದ ಊರಿನ ಕೆರೆಗಳು ತುಂಬಿವೆ. ನೀರು ತುಂಬಿಸುವ ಯೋಜನೆಗಳು ಆಗಿವೆ. ಆದರೆ, ಸದರಿ ಗ್ರಾಮಕ್ಕೆ ಇವತ್ತಿನವರೆಗೂ ಕಾಯಕಲ್ಪ ಆಗಲಿಲ್ಲ” ಎನ್ನುತ್ತಾರೆ ಗ್ರಾಮಸ್ಥರು.

ತಮ್ಮ ದಾಯಾದಿ, ಒಡನಾಡಿಯಾಗಿದ್ದ ಚದುರಂಗ ಅವರ ಹೆಸರಿನಲ್ಲಿ ಸರಿ ಸುಮಾರು 65 ಲಕ್ಷ ವೆಚ್ಚ ಮಾಡಿ ಸಮುದಾಯ ಭವನ ನಿರ್ಮಿಸಲಾಗಿದೆ. ಅವರದ್ದೇ ಜಾಗದಲ್ಲಿ. ಆದರೇ, ಇದುವರೆಗೂ ಗ್ರಾಮಸ್ಥರ ಬಳಕೆಗೆ ಸಿಗಲಿಲ್ಲ. ಸುತ್ತೆಲ್ಲ ನೀರು ತುಂಬಿದೆ. ಬಾಗಿಲಿಗೆ ಬೀಗ ಹಾಕಿ, ಧೂಳು, ದುಂಬಿನಿಂದ ಕೂಡಿದೆ. ಖರ್ಚು ಮಾಡಿಯೂ ಜನರ ಉಪಯೋಗಕ್ಕೆ ಇಲ್ಲ. ಇದು ಅಭಿವೃದ್ಧಿಯ ಸಂಕೇತ. ಅರಸು ಜಪ ಮಾಡುವ ಮಂದಿಗೆ ಇದೆಲ್ಲಾ ಗೊತ್ತಿಲ್ಲ. ಊರಿಗೆ ಬನ್ನಿ ತೋರಿಸುತ್ತೇವೆ ಎನ್ನುತ್ತಾರೆ ಇಲ್ಲಿನ ನೊಂದ ಜನ.

IMG 20250821 143735

ರಾಜ್ಯ ಮಟ್ಟದಲ್ಲಿ ಅರಸು ಅವರ ಹೆಸರನ್ನು ಮೆರೆಸುವ ರಾಜಕಾರಣಿಗಳು, ಅಧಿಕಾರಿಗಳು ನಿನ್ನೆ ಅರಸು ಜನ್ಮ ದಿನವಾದರೂ ಒಬ್ಬರೂ ಮನೆಯ ಕಡೆಗೆ ತಿರುಗಿಯೂ ಸಹ ನೋಡಲಿಲ್ಲ. ಸ್ಥಳೀಯ ಶಾಸಕರಾದ ಜಿ. ಡಿ. ಹರೀಶ್ ಗೌಡ ಹುಣಸೂರಿನಲಿ ಅರಸು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮದಲ್ಲಿ ನಿರತರಾಗಿದ್ದರೇ ವಿನಃ ಅರಸು ಗ್ರಾಮಕ್ಕೆ ಕಾಲಿಡಲಿಲ್ಲ. ಒಬ್ಬ ಸಾಮಾನ್ಯ ರಾಜಕೀಯ ಪುಡಾರಿ ಜನ್ಮ ದಿನವಾದರೆ ಊರಿನ ತುಂಬೆಲ್ಲಾ ಶುಭಾಶಯಗಳ ಬ್ಯಾನರ್, ಫ್ಲೆಕ್ಸ್ ರಾರಾಜಿಸುತ್ತವೆ. ಅದುವೇ, ಅರಸು ಅವರ ಜನುಮ ದಿನಕ್ಕೆ ಜನಪ್ರತಿನಿಧಿಗಳೇ ಇರಲಿಲ್ಲ.

ಇನ್ನ ಊರಿನ ಗ್ರಾಮಸ್ಥರು ಎಂಎಲ್ಎ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಬರುತ್ತಾರೆ. ಅರಸು ಜನ್ಮ ದಿನದ ಸುಸಂದರ್ಭದಲ್ಲಿ ಹೊಸ ಪಂಚಾಯತಿ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿಸಲು ಕಾಯುತ್ತಾ, ಬೆಳಗಿನ ಉಪಹಾರ ಮಾಡಿಸಿ ಯಾರಿಗೂ ಕೊಡದೆ ಕಾಯುತ್ತ ಕುಳಿತಿದ್ದರು. ಆದರೇ, ಇತ್ತ ಕಡೆಗೆ ಒಬ್ಬರೂ ಸುಳಿಯಲೇ ಇಲ್ಲ. ಊರಿನ ಕೆಲಸಕ್ಕೂ ಬರಲು ಸಾಧ್ಯವಿರದಷ್ಟು ಪರಿಸ್ಥಿತಿ ನಮ್ಮ ತಾಲ್ಲೂಕು ಆಡಳಿತದ್ದು.

ಉಪ ವಿಭಾಗಾಧಿಕಾರಿ ವಿಜಯ್ ಕುಮಾರ್ ಬಂದರು ಸಮಾಧಿ ಸ್ಥಳಕ್ಕೆ ಹೋದರು. ತಹಶೀಲ್ದಾರ್ ಮಂಜುನಾಥ ಬಂದರು ಅವರು ಸಹ ಅಲ್ಲಿಗೆ ಹೋದರು. ಹುಣಸೂರು ವೃತ್ತ ನಿರೀಕ್ಷಿಕರು ಬಂದರು ಜೀಪ್ ನಿಂದ ಕೆಳಕ್ಕೆ ಇಳಿಯಲಿಲ್ಲ. ಊರಿನವರು ಬಂದವರನ್ನು ನೋಡುತ್ತಾ, ಈಗ ಬರುತ್ತಾರೆ, ಆಗ ಬರುತ್ತಾರೆ ಅನ್ನುವಷ್ಟರಲ್ಲಿ ತಮ್ಮ ಪಾಡಿಗೆ ಹೇಗೆ ಬಂದರೋ, ಹಾಗೆಯೇ ಹೊರಟು ಹೋದರು. ವಾಹನಗಳನ್ನು ಸಹ ನಿಲ್ಲಿಸಲಿಲ್ಲ. ತಾಲೂಕು ಆಡಳಿತದ ಅಧಿಕಾರಿಗಳ ನಡೆ ಗ್ರಾಮಸ್ಥರಿಗೆ ಬೇಸರ ತರಿಸಿತು.

ಅರಸು ಅವರ ದೌರ್ಭಾಗ್ಯವೋ, ಇಲ್ಲ ಹುಣಸೂರಿನ ದುರ್ದೈವವೋ? ತಾಲೂಕು ಆಡಳಿತ ಅರಸು ಅವರು ಬಾಳಿ ಬದುಕಿದ ಮನೆಗೆ ಸುಣ್ಣ ಬಣ್ಣ ಮಾಡಿಸಿಲ್ಲ. ಇತ್ತ ಹಕ್ಕಿಗಳು ತೂರಿದರೆ ಅತ್ತ ಹಾದುಹೋಗಬಹುದು. ಮನೆಯೊಳಗೇ ಆಕಾಶ ನೋಡಬಹುದು. ಮನೆಯೆಲ್ಲಾ ದುಂಬು. ಜೇಡ ಕಟ್ಟಿದೆ. ಹಂಚೆಲ್ಲಾ ಬಕ್ಕಲಾಗಿದೆ. ಕೈಯಾಡಿಸಿ ಅದೆಷ್ಟು ದಿನ ಕಳೆಯಿತೋ. ಗೋಡೆಯೆಲ್ಲಾ ಬಿರುಕು, ಜಾರಲು ಹರಿದಿದೆ. ಮಳೆ ಬಂದರೆ ನೀರೆಲ್ಲ ಮನೆಯೊಳಕ್ಕೆ. ಇವತ್ತೋ ನಾಳೆ ಕುಸಿಯುವ ಹಂತಕ್ಕೆ ಬಂದಿರುವ ಮನೆಯ ರಕ್ಷಣೆಗೆ ಧಾವಿಸಿಲ್ಲ. ಅರಸು ಅವರು ಮಲಗುತ್ತಿದ್ದ ಕೋಣೆ, ಹಾಸಿಗೆ ಮಸುಕಾಗಿವೆ. ಮನೆಯ ನಿಗಾ ವಹಿಸಿಲ್ಲ. ಅರ್ಚಕರೊಬ್ಬರು ತಮ್ಮಿಂದಾಗುವಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳುವ ಪ್ರಯತ್ನ ಮಾಡಿಕೊಂಡಿದ್ದಾರೆ.

ಅಧಿಕಾರಿಗಳು ಬಂದರು ಸಮಾಧಿ ಹತ್ತಿರ ಹೋದರು ಒಂದೆರೆಡು ಫೋಟೋ ವಿತ್ ಸೆಲ್ಫಿ ತಕೊಂಡು ನಾವು ಸಹ ಗ್ರಾಮಕ್ಕೆ ತೆರಳಿ ತಾಲೂಕು ಆಡಳಿತ ವತಿಯಿಂದ ಗೌರವ ಸಲ್ಲಿಸಿದ್ದೇವೆ ಎನ್ನುವ ವರದಿ ಹಾಕಲು ಅಗತ್ಯ ಇರುವ ಕೆಲಸ ಮಾಡಿಕೊಂಡು ಜಾಗ ಖಾಲಿ ಮಾಡಿದರು. ಕುಟುಂಬಸ್ಥರು ಒಬ್ಬರೇ ಒಬ್ಬರು ಇತ್ತ ತಿರುಗಿನೋಡಿಲ್ಲ. ದೂಪ ಹಾಕುವವರು ಇಲ್ಲ. ಮಕ್ಕಳು, ಮೊಮ್ಮಕ್ಕಳು ಯಾರು ಸಹ ಬಾರದೆ ಇದ್ದಿದ್ದು ಮಹಾನ್ ವ್ಯಕ್ತಿಗೆ ತೋರಿದ ಅಪಮಾನವೇ.

ಅರಸು, ಅರಸು ಅಂತೆಲ್ಲ ಅಬ್ಬರಿಸಿ, ಬೊಬ್ಬರೆಯೊ ಸರ್ಕಾರ ಇತ್ತ ಕಡೆ ತಿರುಗಿಯೂ ನೋಡಿಲ್ಲ. ನೋಡುವ ನೋಟಕ್ಕೆ ಅರಸು ಉತ್ತುಂಗದಲ್ಲಿ ಕಾಣುತ್ತಾರೆ. ಅದೇ ಅವರ ಊರಿಗೆ ಕಾಲಿಟ್ಟರೆ ವಾಸ್ತವ ಕಣ್ಣೆದುರಿಗೆ ತೆರೆದಿಟ್ಟ ಪುಟವಾಗುತ್ತದೆ. ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಕೆತ್ತಿಡಬೇಕಾದ ವ್ಯಕ್ತಿ, ವ್ಯಕ್ತಿತ್ವ ತನ್ನೂರಿನಲ್ಲೇ ಕಣ್ಮರೆಯಾಗುವ ಹಂತಕ್ಕೆ ತಲುಪಿದೆ.
ಇನ್ನಷ್ಟು ದಿನ ಹೀಗೆ ಕಳೆದರೆ ಅರಸು ಅವರ ಕುರುಹುಗಳು ಸಿಗಲಾರವೇನೋ.

ಹೆಸರು ಹೇಳಲಿಚ್ಛಿಸದ ಗ್ರಾಮದ ಹಿರಿಯರೊಬ್ಬರು, “ಅರಸು ಅವರ ಮನೆ ಮುಂದೆ ನಮ್ಮನೆ. ಅವರ ಮನೆಗಿಂತ ನಮ್ಮ ಮನೆ ಚೆನ್ನಾಗಿದೆ. ದೊಡ್ಡ ಮನೆ. ಅರಸು ಅವರು ಇದ್ದಿದ್ದು. ಇದೇ ಚಿಕ್ಕ ಮನೆಯಲ್ಲಿ. ಬೆಳಗೆದ್ದು ನೋಡಿದಾಗ ನೋವಾಗುತ್ತೆ. ಉಳಿಸಿಕೊಳ್ಳಲು ಆಗುತ್ತಾ ಇಲ್ಲ. ಊರಿನ ಮಗನ ಮನೆಯನ್ನ ಅನ್ನುವ ಪಾಪ ಪ್ರಜ್ಞೆ ಕಾಡುತ್ತೆ. ಅಸಹಾಯಕತೆ ಕಾಡುತ್ತಿದೆ.
ಅವರ ಕುಟುಂಬದವರಿಗೂ ಬದ್ಧತೆಯಿಲ್ಲ, ಸರ್ಕಾರಕ್ಕೂ ಇಚ್ಛಾಶಕ್ತಿಯಿಲ್ಲ. ಸಿದ್ದರಾಮಯ್ಯ ಅವರಿಂದ ಒಳ್ಳೆಯದಾಗುತ್ತೆದೆ ಅನ್ನುವ ವಿಶ್ವಾಸ ಇತ್ತು. ಆದರೆ, ನಾಡು ಕಂಡ ಮುಖ್ಯಮಂತ್ರಿ ಮನೆ, ಸಮಾಧಿ ಕಡೆಗೂ ಸ್ಮಾರಕ ಆಗಲೇ ಇಲ್ಲ. ಹೀಗೆ ನೋಡು ನೋಡುತ್ತಾ ನಾನು ಒಂದು ದಿನ ಸಾಯುತ್ತೀನಿ. ಆದರೇ, ಅರಸು ಅವರು ನಮ್ಮೂರಲ್ಲಿ ಶಾಶ್ವತವಾಗಿ ಇರಬೇಕು” ಎಂದು ನೋವು ತೋಡಿಕೊಂಡರು.

ಸ್ಥಳೀಯರು ಮಾತನಾಡಿ, “ಸರ್ಕಾರ ಮ್ಯೂಸಿಯಂ ಮಾಡ್ತೀವಿ, ಪ್ರವಾಸಿಗರು ಬರುವಂತೆ ಮಾಡುತ್ತೀವಿ ಅಂತೆಲ್ಲ ಹೇಳಿತು. ನಮಗೆ ಅದೇನು ಬೇಡ ಇರುವುದನ್ನ ಉಳಿಸಿಕೊಟ್ಟರೆ ಸಾಕು. ಸರ್ಕಾರ ಇದರಲ್ಲೂ ರಾಜಕೀಯ ಮಾಡಿಬಿಡ್ತು. ಘೋಷಣೆ ಮಾಡಿ ಇದುವರೆಗೆ ನಯಾಪೈಸೆ ಕೆಲಸ ಮಾಡಲಿಲ್ಲ. ಮನೆ ಬಿದ್ದೋದ ಮೇಲೆ ಯಾವ ಕೆಲಸ ಮಾಡಿ ಏನು ಪ್ರಯೋಜನ. ಎಲ್ಲರೂ ಅರಸು ಹೆಸರು ಹೇಳಿ ರಾಜಕೀಯ ಮಾಡ್ತಾರೆ ಹೊರತು. ಅರಸು ಹೆಸರಿಗೆ ನ್ಯಾಯ ಕೊಡಲು ಆಗಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಸಾಮಾಜಿಕ ಹರಿಕಾರ ಅರಸು ಅವರಿಗೆ ನ್ಯಾಯ ಸಿಗಲಿಲ್ಲ ಅಂದಮೇಲೆ ಸರ್ಕಾರಗಳು, ರಾಜಕಾರಣ, ರಾಜಕೀಯ ಪಕ್ಷಗಳ ಓಲೈಕೆ, ಇವರುಗಳ ಹೇಳಿಕೆ ಮೇಲೆ ಜನತೆಯಲ್ಲಿ ಅಪನಂಬಿಕೆ ಉಂಟಾಗಿದೆ. ಹೇಳೋದು ಒಂದು, ಮಾಡೋದೆ ಇನ್ನೊಂದು. ಹೇಳಿಯೂ ಮಾಡದೆ ನಾಚಿಕೆಗೇಡಿನ ತನಕ್ಕೆ ಉತ್ತರ ಕೊಡದಿರುವುದು ಇವರ ಇಬ್ಬಂದಿ ತನಗಳ ತೋರುವಿಕೆಗೆ ಕೈಗನ್ನಡಿಯಾಗಿದೆ. ಪ್ರಜಾಪ್ರಭುತ್ವದ ಸರ್ಕಾರಗಳು, ರಾಜಕಾರಣಿಗಳು ಜನರಿಗಾಗಿ ಎನ್ನುವುದು ಸುಳ್ಳಿನ ಮಾತು. ಡಿ. ದೇವರಾಜ ಅರಸು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತಾರೆ. ಕೆಲವೇ ಕೆಲವರು ಸ್ಮಾರಕದಿಂದ ಹೊರತಾಗಿ ಮನಸಿನಲ್ಲಿ ನೆಲೆಸುವವರು ಆ ಸಾಲಿನಲ್ಲಿ
ಡಿ. ದೇವರಾಜ ಅರಸು ಅಗ್ರಗಣ್ಯರು ಎನ್ನುತ್ತಾರೆ ಅರಸು ಕಲ್ಲಹಳ್ಳಿ ಜನರು.

ಈ ಸುದ್ದಿ ಓದಿದ್ದೀರಾ? ಮೈಸೂರು | ತಂತ್ರಜ್ಞಾನವನ್ನು ಸರಿಯಾಗಿ ಬಳಸಿದರೆ, ಅದು ಆವಿಷ್ಕಾರಕ್ಕಾಗಿ ಕಾಯುತ್ತಿರುವ ಚಿನ್ನದ ಗಣಿಯಾಗಿದೆ : ಶಿಲ್ಪಾ ನಾಗ್

ಈಗಲಾದರೂ ಕೊಟ್ಟ ಮಾತಿನಂತೆ, ಸರ್ಕಾರದ ಘೋಷಣೆಯಂತೆ, ದತ್ತು ಪಡೆದ ಸಿಎಂ ಸಿದ್ದರಾಮಯ್ಯನವರು ಹುಣಸೂರಿನ ಅರಸುಕಲ್ಲಹಳ್ಳಿ ಹಾಗೂ ಪಿರಿಯಾಪಟ್ಟಣದ ಬೆಟ್ಟದ ತುಂಗಾ ಗ್ರಾಮಗಳ ಅಭಿವೃದ್ಧಿಗೆ ಮುಂದಾಗುವರೆ ಕಾದುನೋಡಬೇಕಿದೆ.

WhatsApp Image 2025 02 05 at 18.09.20
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X