ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ ಎಂದು ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಇತ್ತೀಚೆಗೆ ಪರಿಶಿಷ್ಟ ಜಾತಿ ಒಳಮೀಸಲಾತಿ ವಿವಾದಕ್ಕೆ ಪರಿಹಾರ ಘೋಷಿಸಿದೆ. ಪರಿಶಿಷ್ಟ ಜಾತಿ ಸಮುದಾಯವನ್ನು ಎಡಗೈ, ಬಲ ಮತ್ತು ಇತರೆ ಎಂಬ ಮೂರು ಗುಂಪುಗಳಾಗಿ ಮರುವರ್ಗೀಕರಣ ಮಾಡಲಾಗಿದ್ದು, ಕ್ರಮವಾಗಿ 6%, 6% ಮತ್ತು 5% ಒಳಮೀಸಲಾತಿ ನೀಡಲು ವಿಶೇಷ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದರೆ ತೀರಾ ಹಿಂದುಳಿದಿರುವ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕವಾಗಿ ಶೇಕಡ 1ರಷ್ಟು ಒಳಮೀಸಲಾತಿ ನೀಡಬೇಕು ಎಂದು ಆಗ್ರಹ ಕೇಳಿಬಂದಿದೆ.
ಇದನ್ನು ಓದಿದ್ದೀರಾ? ಒಳಮೀಸಲಾತಿ | ಕೊನೆಗೂ ಕೂಡಿಬಂತು ಭಾಗ್ಯ, ಅಲೆಮಾರಿಗಳಿಗೆ ಕಂಟಕ!
ಅಲೆಮಾರಿ ಸಮುದಾಯದ ಬೆಂಬಲ ವ್ಯಕ್ತಪಡಿಸಿರುವ ನಿರ್ದೆಶಕಿ ಸುಮನ್, “ನಮ್ಮ ದೇಶದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳು, ಮಾನವೀಯ ಜೀವನ, ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ಸಾಮಾಜಿಕ ಭದ್ರತೆಯನ್ನು ಒದಗಿಸುವ ಭರವಸೆ ನೀಡುತ್ತದೆ. ಆದರೆ ಅಲೆಮಾರಿ ಹಾಗೂ ಅರ್ಧ ಅಲೆಮಾರಿ ಸಮುದಾಯಗಳು ಇನ್ನೂ ಸಮಾಜದ ಅಂಚಿನಲ್ಲಿ ನಿಂತು ಮೂಲಭೂತ ಹಕ್ಕುಗಳನ್ನು ಅನುಭವಿಸಲು ಹೋರಾಡುತ್ತಿರುವುದು ಕಳವಳಕಾರಿ ಸತ್ಯ” ಎಂದು ಹೇಳಿದ್ದಾರೆ.
ಹಾಗೆಯೇ, “ಪರಂಪರೆಯಿಂದಲೇ ಅಲೆಮಾರಿ ಜೀವನ ನಡೆಸಿ ಬಂದಿರುವ ಈ ಸಮುದಾಯಗಳು ಇತಿಹಾಸದಲ್ಲಿ ಅನೇಕ ಅನ್ಯಾಯಗಳಿಗೆ ಬಲಿಯಾಗಿವೆ. ಇಂದಿಗೂ ಇವರಲ್ಲಿ ಬಹುತೇಕರು ಗುರುತಿನ ದಾಖಲೆಗಳಿಲ್ಲದೆ, ಭೂಮಿ ಹಕ್ಕಿಲ್ಲದೆ, ಶಿಕ್ಷಣ ಹಾಗೂ ಆರೋಗ್ಯದ ಸೌಲಭ್ಯವಿಲ್ಲದೆ ಬದುಕುತ್ತಿದ್ದಾರೆ. ಮಕ್ಕಳು ಬಾಲ್ಯದಿಂದಲೇ ಬದುಕಿಗಾಗಿ ಕೆಲಸಕ್ಕೆ ತಳ್ಳಲ್ಪಡುತ್ತಿದ್ದಾರೆ. ಮಹಿಳೆಯರು ಸುರಕ್ಷಿತ ಬದುಕಿಗಾಗಿ ಹೋರಾಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
“ಈ ಅನ್ಯಾಯಗಳಿಗೆ ತೆರೆ ಬೀಳಬೇಕಾದರೆ ಸಮ ಸಮಾಜವೂ ಸಹ ಸಹಜ ಬಾಂಧವ್ಯದಿಂದ ಇವರಿಗೆ ಇಂದು ಬೆಂಬಲ ನೀಡಬೇಕಾಗಿದೆ. ಅಲೆಮಾರಿ ಸಮುದಾಯಗಳ ಕಷ್ಟಗಳನ್ನು ಅರ್ಥಮಾಡಿಕೊಂಡು ನ್ಯಾಯ ಒದಗಿಸುವುದು ನಿಜವಾದ ಸಂವಿಧಾನಿಕ ಪ್ರಜಾಸತ್ತಾತ್ಮಕ ಮನೋಭಾವನೆಯ ಪ್ರತಿಫಲ. ನಾಡಿನ ಮುಖ್ಯಮಂತ್ರಿಗಳು ನ್ಯಾಯ ಒದಗಿಸಲಿ” ಎಂದು ಆಗ್ರಹಿಸಿದ್ದಾರೆ.
