ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿರುವ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಶಾಸಕರ ಸಹೋದರರ ನಿವಾಸದ ಮೇಲೆಯೂ ಇಡಿ ದಾಳಿ ನಡೆದಿದೆ ಎನ್ನಲಾಗಿದೆ.
ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರ ಸಹೋದರರಾದ ಕೆ.ಸಿ.ನಾಗರಾಜ, ಕೆ.ಸಿ.ತಿಪ್ಪೇಸ್ವಾಮಿ ಅವರ ನಿವಾಸದ ಮೇಲೆಯೂ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ಬೆಂಗಳೂರು, ಚಿತ್ರದುರ್ಗ, ಚಳ್ಳಕೆರೆ, ಗೋವಾ, ಸೇರಿ ಒಟ್ಟು 16 ಕಡೆ ದಾಳಿ ನಡೆದಿದೆ.
ಇದನ್ನು ಓದಿದ್ದೀರಾ? ಉತ್ತರ ಕನ್ನಡ | ಶಾಸಕ ಸತೀಶ್ ಸೈಲ್‌ಗೆ ಇಡಿ ಶಾಕ್; ಕಾರವಾರದ ನಿವಾಸದ ಮೇಲೆ ದಾಳಿ
ಗೇಮಿಂಗ್ ಆ್ಯಪ್ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ, ಅಕ್ರಮ ಆಸ್ತಿ, ತೆರಿಗೆ ವಂಚನೆ ಆರೋಪದಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಶಾಸಕರಿಗೆ ಸೇರಿದ ಪಪ್ಪಿ ಟೆಕ್ನಾಲಜಿ, ರತ್ನ ಗೇಮಿಂಗ್ ಸೊಲ್ಯೂಷನ್ಸ್, ರತ್ನ ಗೋಲ್ಡ್, ರತ್ನ ಮಲ್ಟಿ ಸೋರ್ಸ್ ಸೇರಿ ಇತರೆ ಕಂಪನಿಗಳು ಅಕ್ರಮ ನಡೆಸಿದೆ ಎಂದು ಆರೋಪಿಸಲಾಗಿದೆ.
ಚಳ್ಳಕೆರೆ ಪಟ್ಟಣದಲ್ಲಿರುವ 4 ನಿವಾಸಗಳ ಮೇಲೆ ಇಡಿ ದಾಳಿ ಮಾಡಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನು 40ಕ್ಕೂ ಅಧಿಕ ಇಡಿ ಅಧಿಕಾರಿಗಳು ಖಾಸಗಿ ವಾಹನಗಳಲ್ಲಿ ಬಂದಿದ್ದಾರೆ ಎನ್ನಲಾಗಿದೆ. ದಾಳಿ ವೇಳೆ ಶಾಸಕರು ನಿವಾಸದಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ.
ಚಿತ್ರದುರ್ಗ ನಗರದ ಹಳೇ ಟೌನ್ ವೀರಭದ್ರ ಸ್ವಾಮಿ ದೇವಸ್ಥಾನ ಬಳಿ ಇರುವ ನಿವಾಸದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಚಳ್ಳಕೆರೆಯಲ್ಲಿರುವ ಪಪ್ಪಿ ನಿವಾಸ ಹಾಗೂ ಬೆಂಗಳೂರಿನ ವಸಂತನಗರದಲ್ಲಿರುವ ನಿವಾಸದ ಮೇಲೆಯೂ ದಾಳಿ ನಡೆಸಲಾಗಿದೆ.
2016ರ ಡಿಸೆಂಬರ್ 11ರಂದು ವೀರೇಂದ್ರ ಅವರ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. ಈ ದಾಳಿ ವೇಳೆ ಮನೆಯ ಬಾತ್ ರೂಂನಲ್ಲಿ 5 ಕೋಟಿ ರೂಪಾಯಿಗೂ ಹೆಚ್ಚು ನಗದು, 30 ಕೆಜಿಗೂ ಹೆಚ್ಚು ಚಿನ್ನ ಪತ್ತೆಯಾಗಿತ್ತು.
