ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ ಮಕ್ಕಳಿಗೆ ತೊಂದರೆಯಾಗುತ್ತಿದ್ದು, ಅವುಗಳ ಹತೋಟಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, “ಬೀದಿ ನಾಯಿಗಳು ಚಿಕ್ಕ ಮಕ್ಕಳಿಗೆ ಕಚ್ಚಿದ ಪ್ರಕರಣ ಕಂಡುಬಂದಿವೆ. ರಸ್ತೆಗಳಲ್ಲಿ ವಾಹನಕ್ಕೆ ಅಡ್ಡ ಬರುತ್ತಿರುವುದರಿಂದ ಅಪಘಾತ ಸಂಭವಿಸುತ್ತವೆ. ಬೀದಿ ನಾಯಿಗಳ ಹಾವಳಿಯ ಹತೋಟಿಗೆ ಸಂತಾನ ಶಕ್ತಿಯ ಹರಣ ಶಸ್ತ್ರ ಚಿಕಿತ್ಸೆಗೆ ಮುಂದಾಗಬೇಕೆಂದರು. ರೇಬಿಸ್ ಸೋಂಕು ತಗುಲಿ ಕೇರೂರ ಮತ್ತು ಬಾದಾಮಿಯಲ್ಲಿ ತಲಾ ಒಬ್ಬರು ಮತಪಟ್ಟಿದ್ದಾರೆ. ರೇಬಿಸ್ ಸೋಂಕಿತ ನಾಯಿ ಹಾಗೂ ಅದರಿಂದ ಉಳಿದ ನಾಯಿಗಳಿಗೂ ಸೋಂಕು ತಗುಲುತ್ತಿದೆ. ಬೀದಿ ನಾಯಿಗಳು ಕಚ್ಚಿದ ವ್ಯಕ್ತಿಗೊ ರೇಬಿಸ್ ಹರಡುತ್ತದೆ. ಇದನ್ನು ತಡೆಯುವ ಕೆಲಸವಾಗಬೇಕು. ಆದ್ದರಿಂದ ಜಿಲ್ಲೆಯಲ್ಲಿರುವ ಬೀದಿ ನಾಯಿಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅವುಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲು ಕ್ರಮ ಕೈಗೊಳ್ಳಬೇಕಿದೆ” ಎಂದರು.
“ವಿದ್ಯಾಗಿರಿಯ ಕೆಲ ಎನ್‌ಜಿಓಗಳು ಸ್ವಯಂ ಪ್ರೇರಿತವಾಗಿ ಈ ಕಾರ್ಯಕ್ರಮಕ್ಕೆ ಕೈಜೋಡಿಸುತ್ತಿದ್ದು, ನಗರದಲ್ಲಿ ಶಸ್ತ್ರ ಚಿಕಿತ್ಸೆಗೆ ಸೂಚಿಸಿದ ಸ್ಥಳಕ್ಕೆ ಬೀದಿನಾಯಿಗಳನ್ನು ಕರೆದುಕೊಂಡು ಬರುವ ಕಾರ್ಯ ಮಾಡಲಿದ್ದಾರೆ. ಈಗಾಗಲೇ ಮುಧೋಳ ಮತ್ತು ಜಮಖಂಡಿಯಲ್ಲಿ ಈ ಕಾರ್ಯ ನಡೆಯುತ್ತಿದ್ದು, ಬಾಗಲಕೋಟೆ ನಗರದಲ್ಲಿ ವ್ಯವಸ್ಥಿತವಾಗಿ ಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ಬಾಗಲಕೋಟೆ | ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಘಟಕದ ಸಭೆ