ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್ ಒಂದು 2.3 ಕೋಟಿ ರೂ. ದೋಚಿರುವ ಘಟನೆ ದೆಹಲಿಯ ವಿವೇಕ್ ವಿಹಾರ್‌ನಲ್ಲಿ ನಡೆದಿದೆ.
ಗಾಜಿಯಾಬಾದ್‌ನ ಇಂದಿರಾಪುರಂ ನಿವಾಸಿ, ಹಣಕಾಸು, ಆಸ್ತಿ ವ್ಯವಹಾರ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಮನ್‌ಪ್ರೀತ್ ಎಂಬ ಉದ್ಯಮಿ ಈ ಸಂಬಂಧ ದೂರು ನೀಡಿದ್ದಾರೆ. ಮನ್‌ಪ್ರೀತ್ ವಿವೇಕ್ ವಿಹಾರ್‌ನಲ್ಲಿರುವ ತಮ್ಮ ಕಟ್ಟಡದಲ್ಲಿದ್ದ 2.5 ಕೋಟಿ ರೂ. ಮೌಲ್ಯದ ಗಳಿಕೆಯನ್ನು ಇಟ್ಟುಕೊಂಡಿದ್ದರು ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಸಿಬಿಐ, ಇಡಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದ ಕೇಜ್ರಿವಾಲ್ ಸರ್ಕಾರ
“ಆಗಸ್ಟ್ 19ರಂದು ಅವರು ತಮ್ಮ ಸ್ನೇಹಿತ ರವಿಶಂಕರ್ ಬಳಿ ತಮ್ಮ ಮನೆಯಿಂದ 1.10 ಕೋಟಿ ರೂ. ತೆಗೆದುಕೊಂಡು ಬರುವಂತೆ ತಿಳಿಸಿದ್ದಾರೆ. ಶಂಕರ್ ನಗದು ಚೀಲದೊಂದಿಗೆ ಕಟ್ಟಡದಿಂದ ಹೊರಬಂದ ತಕ್ಷಣ ಒಬ್ಬ ಮಹಿಳೆ ಸೇರಿದಂತೆ ನಾಲ್ವರು ಎರಡು ಕಾರುಗಳಲ್ಲಿ ಬಂದು ಅಡ್ಡಗಟ್ಟಿ ತಾವು ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡಿದ್ದಾರೆ. ಹಾಗೆಯೇ ಶಂಕರ್ ಅವರನ್ನು ಥಳಿಸಿ ಚೀಲವನ್ನು ಕಸಿದುಕೊಂಡಿದ್ದಾರೆ” ಎಂದು ದೂರಿನಲ್ಲಿ ತಿಳಿಸಿರುವುದಾಗಿ ಉಪ ಪೊಲೀಸ್ ಆಯುಕ್ತ (ಶಹದಾರ) ಪ್ರಶಾಂತ್ ಗೌತಮ್ ಹೇಳಿದರು.
ಹಾಗೆಯೇ ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡ ಆರೋಪಿಗಳು ಕಟ್ಟಡದ ಒಳಗೆ ಹೋಗಿ ಮನ್‌ಪ್ರೀತ್ ಅವರ ಉದ್ಯೋಗಿ ದೀಪಕ್ ಮಹೇಶ್ವರಿ ಅವರನ್ನು ಥಳಿಸಿ, ಅಲ್ಲಿ ಇರಿಸಲಾಗಿದ್ದ ಉಳಿದ ಹಣವನ್ನು ಕದ್ದೊಯ್ದಿದ್ದಾರೆ ಎಂದು ವರದಿಯಾಗಿದೆ.
ಹಾಗೆಯೇ ಶಂಕರ್ ಮತ್ತು ಮಹೇಶ್ವರಿ ಅವರನ್ನು ಸಿಬಿಐ ವಶಕ್ಕೆ ಪಡೆಯುತ್ತೇವೆ ಎಂದು ಹೇಳಿಕೊಂಡ ನಕಲಿ ಸಿಬಿಐ ಅಧಿಕಾರಿಗಳು, ಇಬ್ಬರನ್ನೂ ಕಾರಿನಲ್ಲಿ ಕೂರಿಸಿ, ಶಂಕರ್ ಅವರನ್ನು ಚಿಂತಾಮಣಿ ಅಂಡರ್‌ಪಾಸ್ ಬಳಿ ಮತ್ತು ಮಹೇಶ್ವರಿಯನ್ನು ನಿಗಮ್‌ಬೋಧ್ ಘಾಟ್‌ನಲ್ಲಿ ಬಿಟ್ಟಿದ್ದಾರೆ. ಹಾಗೆಯೇ ಈ ಘಟನೆಯನ್ನು ಯಾರಿಗೂ ತಿಳಿಸದ್ದಂತೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇನ್ನು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗಿದ್ದು, ತನಿಖೆಯ ಸಮಯದಲ್ಲಿ ವಾಹನಗಳನ್ನು ಸಾಕೇತ್ ಮೆಟ್ರೋ ನಿಲ್ದಾಣದ ಬಳಿ ಇರುವ ಎನ್‌ಜಿಒವೊಂದು ಬಾಡಿಗೆಗೆ ಪಡೆದಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಎನ್‌ಜಿಒ ಕಾರ್ಯದರ್ಶಿ ಮತ್ತು ಅಸ್ಸಾಂ ಮೂಲದ ಪಪೋರಿ ಬರುವಾ (31) ಮತ್ತು ತುಘಲಕಾಬಾದ್ ನಿವಾಸಿ ದೀಪಕ್ (32) ಎಂದು ಗುರುತಿಸಲಾದ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ.
“ಇಬ್ಬರ ಬಳಿಯಿಂದ 1.08 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಉಳಿದ ಶಂಕಿತರನ್ನು ಮತ್ತು ಹಣವನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಯುತ್ತಿದೆ. ರೋಡೆ ಮತ್ತು ಕ್ರಿಮಿನಲ್ ಪಿತೂರಿಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
