ಮಾನಹಾನಿಯಾಗುವುದು ಬಿಜೆಪಿಯವರಿಗೆ ಮಾತ್ರವೇ? ಕಾಂಗ್ರೆಸ್ ನಾಯಕರ ಬಗ್ಗೆ ಅಥವಾ ಪ್ರಗತಿಪರರು, ಬುದ್ದಿಜೀವಿಗಳ ಬಗ್ಗೆ ಬಿಜೆಪಿ- ಸಂಘಪರಿವಾರ ಅಶ್ಲೀಲವಾಗಿ ನಿಂದಿಸುವಾಗಲೂ ಸರ್ಕಾರದವರಿಗೆ ಹೀಗೇ ಅನ್ನಿಸಬೇಕು. ದಶಕದಿಂದ ಕಾಂಗ್ರೆಸ್‌ನ ವರಿಷ್ಠ ನಾಯಕರಾದ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಅವರನ್ನು ಬಿಜೆಪಿ ಐಟಿ ಸೆಲ್ ಅತ್ಯಂತ ಹೀನಾಯವಾಗಿ ಟ್ರೋಲ್ ಮಾಡುತ್ತಿದೆ. ಮಲ್ಲಿಕಾರ್ಜುನ ಖರ್ಗೆ, ಸಿ ಎಂ ಸಿದ್ದರಾಮಯ್ಯ, ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮಾನಹಾನಿ ಮಾಡಿದಾಗಲೂ ಒದ್ದು ಒಳಗೆ ಹಾಕಲು ಹೇಳಿದ್ದೀರಾ ಡಿಕೆಶಿಯವರೇ?
ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಕೊಲೆ ಪ್ರಕರಣವನ್ನು ಹೋರಾಟದ ಮೂಲಕ ಹದಿಮೂರು ವರ್ಷಗಳಿಂದ ಜೀವಂತವಾಗಿರಿಸಿದವರು ಮಾಜಿ ಆರೆಸ್ಸೆಸ್ ಕಾರ್ಯಕರ್ತ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಿಜೆಪಿ ಮುಖಂಡ ಬಿ ಎಲ್ ಸಂತೋಷ್ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿರುವ ಆರೋಪದಲ್ಲಿ ಗುರುವಾರ ಬ್ರಹ್ಮಾವರ ಪೊಲೀಸರು ಬಂಧಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಬಗ್ಗೆ ಇಂದು (ಶುಕ್ರವಾರ) ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಡಿಸಿಎಂ ಶಿವಕುಮಾರ್ ಬಿಜೆಪಿ ಮುಖಂಡ ಸಂತೋಷ್ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿರುವವರನ್ನು ಒದ್ದು ಒಳಗೆ ಹಾಕಬೇಕು ಎಂದು ನಾವು ನಿರ್ಧಾರ ಮಾಡಿದ್ದೆವು, ಯಾರ ಬಗ್ಗೆಯೂ ಹಾಗೆ ಮಾತನಾಡಬಾರದು ಎಂದು ಹೇಳಿದ್ದಾರೆ. ಡಿಕೆಶಿ ಅವರ ಅಭಿಪ್ರಾಯ ಸರಿಯಿದೆ. ಮತ್ತೊಬ್ಬರ ಬಗ್ಗೆ ಮಾನಹಾನಿಕರ ಹೇಳಿಕೆ ನೀಡುವ, ಘನತೆಗೆ ಧಕ್ಕೆ ತರುವ ಮಾತುಗಳನ್ನು ಆಡುವ ಹಕ್ಕು ಯಾರಿಗೂ ಇಲ್ಲ.
ಆದರೆ, ಮಾನಹಾನಿಯಾಗುವುದು ಬಿಜೆಪಿಯವರಿಗೆ ಮಾತ್ರವೇ? ಕಾಂಗ್ರೆಸ್ ನಾಯಕರ ಬಗ್ಗೆ ಅಥವಾ ಪ್ರಗತಿಪರರು, ಬುದ್ದಿಜೀವಿಗಳ ಬಗ್ಗೆ ಬಿಜೆಪಿ ಸಂಘಪರಿವಾರ ಅಶ್ಲೀಲವಾಗಿ ನಿಂದಿಸುವಾಗಲೂ ಸರ್ಕಾರದವರಿಗೆ ಹೀಗೇ ಅನ್ನಿಸಬೇಕು. ಅಷ್ಟೇ ಏಕೆ ದಶಕಗಳಿಂದ ಕಾಂಗ್ರೆಸ್‌ನ ವರಿಷ್ಠ ನಾಯಕರಾದ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಅವರನ್ನು ಬಿಜೆಪಿ ಐಟಿ ಸೆಲ್ ಅತ್ಯಂತ ಹೀನಾಯವಾಗಿ ಅಶ್ಲೀಲ- ಅವಾಚ್ಯವಾಗಿ ಟ್ರೋಲ್ ಮಾಡುತ್ತಿದೆ. ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಕುಟುಂಬ, ಸಿ ಎಂ ಸಿದ್ದರಾಮಯ್ಯ, ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಬಿಜೆಪಿ ಸೋಷಿಯಲ್ ಮೀಡಿಯಾ ಅದೆಷ್ಟು ಬಾರಿ ಮಾನಹಾನಿ ಮಾಡಿದೆ? ಆ ಎಲ್ಲ ಸಂದರ್ಭಗಳಲ್ಲಿ ಅಂತಹವರನ್ನು ಒದ್ದು ಒಳಗೆ ಹಾಕಿ ಎಂದು ಡಿಸಿಎಂ ನಿರ್ದೇಶನ ನೀಡಿದ್ದಾರಾ? ತಮ್ಮವರ ಮಾನಹಾನಿಯಾದಾಗ ಯಾಕೆ ಸುಮ್ಮನಿರುತ್ತಾರೆ ಮತ್ತು ಬಿ.ಎಲ್. ಸಂತೋಷ್ ಮಾನದ ಬಗ್ಗೆ ಮಾತ್ರ ಯಾಕೆ ಇಷ್ಟು ಕಾಳಜಿ ತೋರುತ್ತಾರೆ ಎಂಬ ಪ್ರಶ್ನೆಗೆ ಶಿವಕುಮಾರ್ ಉತ್ತರಿಸಬೇಕು.
ಸಿ ಎಂ ಸಿದ್ದರಾಮಯ್ಯ ಅವರು 24 ಕೊಲೆ ಮಾಡಿದ್ದಾರೆ ಎಂದಿದ್ದ ಶಾಸಕ ಹರೀಶ್ ಪೂಂಜಾನನ್ನು ಪೊಲೀಸರು ಈವರೆಗೆ ಬಂಧಿಸುವುದಿರಲಿ, ಕೂದಲನ್ನೂ ಕೊಂಕಿಸಿಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹಸಚಿವ ಯಾರೂ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪ್ರಕರಣ ಕೋರ್ಟ್‌ನಲ್ಲಿದೆ. ಆರೋಪಿಗೆ ಶಿಕ್ಷೆ ನೀಡಬೇಕು ಎಂಬ ಉದ್ದೇಶ ಸರ್ಕಾರಕ್ಕೆ ಇದ್ದಂತಿಲ್ಲ. ಸದನದಲ್ಲಿ ಪೂಂಜಾ ಹೇಳಿಕೆಯನ್ನು ತಿಮರೋಡಿ ಅವರ ಹೇಳಿಕೆ ಎಂದು ತಿರುಚಿ ನಂಬಿಸಿದಾಗ “ತಕ್ಷಣ ಬಂಧಿಸಿ” ಎಂದು ಹೇಳುವ ಗೃಹಸಚಿವರು, ಆ ಹೇಳಿಕೆ ಶಾಸಕ ಹರೀಶ್ ಪೂಂಜಾ ಅವರದ್ದು ಎಂದು ಗೊತ್ತಾದ ಮೇಲೆ ತೆಪ್ಪಗಾಗಿದ್ದಾರೆ. ಇದು ಅಡ್ಜೆಸ್ಟ್‌ಮೆಂಟ್ ರಾಜಕಾರಣವೇ ಎಂಬ ಗುಮಾನಿ ಮೂಡಿಸುತ್ತಿದೆ.
ಸ್ವತಃ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್ತಿನಲ್ಲಿ ಮಾನಹಾನಿಕರ ಪದ ಬಳಿಸಿದ ಎಂಎಲ್‌ಸಿ ಸಿ ಟಿ ರವಿ ವಿರುದ್ಧ ಯಾವುದೇ ಕಾನೂನು ಕ್ರಮಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿಲ್ಲ. ಪ್ರಕರಣದ ತನಿಖೆಗೆ ಕೋರ್ಟು ಸ್ಟೇ ನೀಡಿದೆ. ಆದರೆ ಇದುವರೆಗೂ ಸ್ಟೇ ತೆರವಿಗೆ ಪ್ರಯತ್ನಿಸಿಲ್ಲ. ಕಲಬುರ್ಗಿಯ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಪಾಕಿಸ್ತಾನದವರು ಎಂದು ಹೇಳಿ ಅವಮಾನಿಸಿದ್ದ ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್ ಬಂಧನವಾಗಲಿಲ್ಲ. ಆ ಪ್ರಕರಣದಲ್ಲಿ ಜಾಮೀನು ಪಡೆದ ರವಿ ಕುಮಾರ್ ಒಂದೇ ತಿಂಗಳಲ್ಲಿ ಮತ್ತೊಬ್ಬ ಮಹಿಳಾ ಅಧಿಕಾರಿಯನ್ನು ಅವಮಾನಿಸಿದ್ದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರು ಹಗಲು ಸಿ ಎಂ ಗೆ, ರಾತ್ರಿ ಸರ್ಕಾರಕ್ಕೆ ಕೆಲಸ ಮಾಡುತ್ತಾರೆ ಎಂಬ ಮಹಿಳೆಯ ಘನತೆಗೆ ಧಕ್ಕೆ ತರುವ ಹೇಳಿಕೆ ನೀಡಿದ್ದರು. ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಪ್ರಕರಣದಲ್ಲೂ ಸರ್ಕಾರ ಉದಾಸೀನ ತೋರಿರುವುದು ಸ್ಪಷ್ಟವಾಗಿದೆ.
ಆದರೆ, ಈಗ ಖಾಸಗಿ ವ್ಯಕ್ತಿಯೊಬ್ಬರು ಆರೆಸ್ಸೆಸ್ ಮುಖಂಡನ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ ಪ್ರಕರಣದಲ್ಲಿ ಮೂರೇ ದಿನದೊಳಗೆ ಬಂಧಿಸಿರುವುದು ಕಾಂಗ್ರೆಸ್ ಯಾರ ಪರ ಎಂಬ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ಮುಖಂಡರ ಮೇಲೆ ಅಷ್ಟೊಂದು ಪ್ರೀತಿ ಏಕೆ ಎಂಬ ಪ್ರಶ್ನೆ ಮೂಡಿದೆ. ಧರ್ಮಸ್ಥಳದ ವಿರುದ್ಧ ಹಲವು ದೂರುಗಳು ಎಸ್‌ಐಟಿಯಲ್ಲಿ ದಾಖಲಾಗುತ್ತಿರುವುದು, ತನಿಖೆ ಸರಿಯಾದ ಹಾದಿಯಲ್ಲಿ ಸಾಗುತ್ತಿರುವುದು ಹಲವರ ನಿದ್ದೆಗೆಡಿಸಿದೆ. ಬಿಜೆಪಿ ಸಂಘ ಪರಿವಾರ ಧರ್ಮಸ್ಥಳ ಪರವಾಗಿ ನಿಂತು ತನಿಖೆಯನ್ನು ಸ್ಥಗಿತಗೊಳಿಸುವ ಹುನ್ನಾರ ನಡೆಸಿದೆ. ಅವರ ಬಲೆಗೆ ಕಾಂಗ್ರೆಸ್‌ನ ಕೆಲವರು ಬಿದ್ದಿದ್ದಾರೆ. ಡಿ ಕೆ ಶಿವಕುಮಾರ್, ಬೇಳೂರು ಗೋಪಾಲಕೃಷ್ಣ ಮುಂತಾದವರು ಸರ್ಕಾರದ ಭಾಗವಾಗಿದ್ದೂ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ಹೇಳುತ್ತಿರುವುದು ನೋಡಿದರೆ ಇವರಿಗೆ ಎಸ್‌ಐಟಿ ತನಿಖೆ ನಡೆಯುವುದು, ಸತ್ಯ ಹೊರ ಬರುವುದು ಬೇಕಿಲ್ಲ ಎಂದೇ ಹೇಳಬೇಕಾಗುತ್ತದೆ.
ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರೆಸ್ಸೆಸ್ ವಿರುದ್ಧ ಸಾರ್ವಜನಿಕ ಸಭೆಗಳಲ್ಲಿ ಹೇಳಿಕೆ ನೀಡುತ್ತಾರೆ. ರಾಹುಲ್ ಗಾಂಧಿ ಆರೆಸ್ಸೆಸ್ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. ಬಿ ಕೆ ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ ಅವರಂಥವರು ಆರೆಸ್ಸೆಸ್, ಸಂಘಪರಿವಾರವನ್ನು ಅವಕಾಶ ಸಿಕ್ಕಾಗೆಲ್ಲ ಟೀಕಿಸುತ್ತಾರೆ. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಗೃಹಸಚಿವ ಪರಮೇಶ್ವರ್ ಸಂಘಿಗಳಂತೆ ಹೇಳಿಕೆ ನೀಡುವುದು, ವೀರೇಂದ್ರ ಹೆಗ್ಗಡೆ, ಪೇಜಾವರ ಸ್ವಾಮಿಗಳ ಕಾಲಿಗೆ ಬೀಳುವುದು, ಮಠದ ಸ್ವಾಮಿಗಳು ಇವರ ಮನೆಗಳಿಗೆ ಭೇಟಿ ನೀಡುವುದು ಮುಂತಾದ ನಡವಳಿಕೆಗಳು ಪಕ್ಷದ ಸಿದ್ಧಾಂತಕ್ಕೆ ವ್ಯತಿರಿಕ್ತವಾಗಿದೆ. ಇದು ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ ಜೊತೆಗೆ ನಿಂತ ಅಲ್ಪಸಂಖ್ಯಾತರು, ಪ್ರಗತಿಪರ ಸಂಘಟನೆಗಳಿಗೆ ಭ್ರಮನಿರಸನ ಮೂಡಿಸಿದೆ.
ಇದನ್ನೂ ಓದಿ ಪ್ರಧಾನಿ, ಮುಖ್ಯಮಂತ್ರಿ, ಸಚಿವರನ್ನು ವಜಾ ಮಾಡುವ ಮಸೂದೆ: ಪ್ರಜಾಪ್ರಭುತ್ವದ ಮೇಲಿನ ದಾಳಿಯೇ?
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆ ವಿರುದ್ಧ ಮುಂಗಾರು ಅಧಿವೇಶನದಲ್ಲಿ ಬಿಜೆಪಿ ಸದಸ್ಯರು ಭಾರೀ ಗದ್ದಲ ಎಬ್ಬಿಸಿದ್ದರು. “ಧರ್ಮಸ್ಥಳಕ್ಕೆ ಮಸಿ ಬಳಿಯುವ ಷಡ್ಯಂತ್ರ ನಡೆಯುತ್ತಿದೆ, ಇದರಲ್ಲಿ ಎಡಪಂಥೀಯರು, ಮುಸ್ಲಿಮರು ಇದ್ದಾರೆ” ಎಂಬಿತ್ಯಾದಿ ಆರೋಪ ಮಾಡಿದ್ದರು. ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಹೇಗಾದರೂ ಮಾಡಿ ಬಂಧಿಸಬೇಕು ಎಂದು ಹವಣಿಸಿದ್ದ ಬಿಜೆಪಿ, 2023ರಲ್ಲಿ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ “ಸಿಎಂ ಸಿದ್ದರಾಮಯ್ಯನವರು 24 ಹಿಂದೂಗಳ ಕೊಲೆ ಮಾಡಿದ್ದಾರೆ” ಎಂದು ಆರೋಪಿಸಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಮಹೇಶ್ ಶೆಟ್ಟಿ ತಿಮರೋಡಿ ನೀಡಿದ್ದ ಹೇಳಿಕೆಯ ವಿಡಿಯೋ ವೈರಲ್ ಮಾಡಿತ್ತು. ಅದನ್ನೇ ಇಟ್ಟುಕೊಂಡು ಆರ್ ಅಶೋಕ್, ಸುರೇಶ್‌ಕುಮಾರ್, ಎಸ್ ಆರ್ ವಿಶ್ವನಾಥ್, ಸುನಿಲ್ ಕುಮಾರ್ ಸೇರಿದಂತೆ ಹಲವರು ತಿಮರೋಡಿ ಬಂಧನಕ್ಕೆ ಒತ್ತಾಯಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಸತ್ಯಾಸತ್ಯತೆ ಅರಿಯದೇ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಗೃಹಸಚಿವ ಡಾ ಪರಮೇಶ್ವರ್ ಅವರೂ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.
ಅದಾಗಿ ಎರಡು ದಿನದಲ್ಲಿ ಮಾನಹಾನಿ ಪ್ರಕರಣದಲ್ಲಿ ತಿಮರೋಡಿಯವರನ್ನು ಬಂಧಿಸಲಾಗಿದೆ. ಮುಂದೆಯೂ ಮಾನಹಾನಿಕರ ಹೇಳಿಕೆ ನೀಡುವವರ ವಿರುದ್ಧ ಇದೇ ರೀತಿಯ ಕ್ರಮ ಜರುಗಿಸುತ್ತಾ ಸರ್ಕಾರ ಎಂದು ಕಾದು ನೋಡಬೇಕಿದೆ. ಸದ್ಯಕ್ಕೆ ಸಿ ಟಿ ರವಿ, ಎನ್ ರವಿಕುಮಾರ್, ಹರೀಶ್ ಪೂಂಜಾ ವಿರುದ್ಧದ ಮಾನಹಾನಿ ಪ್ರಕರಣವನ್ನು ಇದೇ ರೀತಿ ಗಂಭೀರವಾಗಿ ಪರಿಗಣಿಸಿ ಕಾನೂನಿನಡಿ ಶಿಕ್ಷೆಗೆ ಒಳಪಡಿಸಲಿ.
