ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು ದುಡಿಮೆಗೆ ಹಚ್ಚದೆ ಅವರನ್ನು ಹಣತೆಯಂತೆ ಬಾಳಿ ಬೆಳಗಿಸಬೇಕಾಗಿದೆ. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕಿದೆ. ಆ ನಿಟ್ಟಿನಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಅವರ ಜೀವನ ಸುಂದರಮಯವಾಗಿಸಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ ಶಿಲ್ಪಾ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಬಾಪೂಜಿ ನಗರದಲ್ಲಿ ಕಾನೂನು ಅರಿವು-ನೆರವು ಹಾಗೂ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಎರೆದು ಮಾತನಾಡಿ, “18 ವರ್ಷ ಒಳಗಿನ ಮಕ್ಕಳನ್ನ ದುಡಿಮೆಗೆ ದೂಡುವುದು ಅಪರಾಇಂತಹ ಮಕ್ಕಳು ಎಲ್ಲಿಯಾದರೂ ಕೆಲಸ ಮಾಡುತ್ತಿದ್ದರೆ ಅದರ ಮಾಹಿತಿಯನ್ನು ಇಲಾಖೆಯ ಗಮನಕ್ಕೆ ತರಬೇಕು” ಎಂದರು.
ಬಾಲ ಕಾರ್ಮಿಕ ಪದ್ಧತಿ ಸಂಪೂರ್ಣ ನಿರ್ಮೂಲನೆ ಪಾಲಕರ ಮತ್ತು ಪೋಷಕರ ಕೈಲಿದೆ. ಪಾಲಕರು ಮೊದಲು ಬಾಲಕಾರ್ಮಿಕ ವಿರೋಧಿ ಪದ್ಧತಿ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಪ್ಯಾನಲ್ ವಕೀಲ ಎಂ. ಎಸ್. ಸಂದೀಪ್ ಚಕ್ರವರ್ತಿ ಮಾತಾಡಿ, “ಭಾರತದಲ್ಲಿ ಬಡತನ ಅನಕ್ಷರತೆಯಿಂದ ತಮ್ಮ ಜೀವನ ಸಾಗಿಸಲು ಅನಿವಾರ್ಯವಾಗಿ ಪಾಲಕರು ತಮ್ಮ ಜೊತೆಗೆ ತಮ್ಮ ಮಕ್ಕಳನ್ನೂ ದುಡಿಮೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಪಾಲಕರೇ ಚಿಂತನೆ ಮಾಡಿ ಮಕ್ಕಳ ದುಡಿಮೆ ನಿಲ್ಲಿಸಬೇಕು ಎಂದು ಹೇಳಿದ ಅವರು, 1986ರಲ್ಲಿ ಬಾಲಕಾರ್ಮಿಕ ವಿರೋಧಿ ಅಧಿನಿಯಮ ಜಾರಿಗೆ ಬಂದಿದ್ದು, ಇದರ ಪ್ರಕಾರ 14 ವರ್ಷದೊಳಗಿನ ಮಕ್ಕಳನ್ನು ಬಾಲ ಕಾರ್ಮಿಕರಾಗಿ ನೇಮಿಸಿಕೊಂಡ ಮಾಲೀಕರಿಗೆ ದಂಡ ಮತ್ತು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ” ಎಂದರು.
ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ಕಡಿಮೆಯಾಗಿದ್ದು ಇದೊಂದು ಸಮಾಧಾನ ತಂದಿದೆ ಆದರೂ ಇನ್ನೂ ಅಲ್ಲಲ್ಲಿ ಬಾಲಕರನ್ನು ದುಡಿಸಿಕೊಳ್ಳುತ್ತಿರುವುದು ನಡೆಯುತ್ತಿದೆ. ಇದು ಅಪರಾಧ ಎಂಬುದನ್ನ ಪ್ರತಿಯೊಬ್ಬರು ಅರಿಯಬೇಕು ಎಂದರು.
ಸಹಾಯಕ ಕಾನೂನು ಅಭಿರಕ್ಷಕ ಕೆ.ಎನ್.ಶಿವಪ್ಪ ಮಾತನಾಡಿ, “ಬಾಲಕಾರ್ಮಿಕ ಪದ್ಧತಿ ಸಂಪೂರ್ಣ ನಿರ್ಮೂಲನೆಗೆ ಕೈಜೋಡಿಸಬೇಕು. ಕೊಳಗೇರಿ ಪ್ರದೇಶಗಳಲ್ಲಿ, ಕಾಲೋನಿಗಳಲ್ಲಿ ಹೆಚ್ಚು ಹೆಚ್ಚು ಜಾಗೃತಿ ಪಡೆಯುವ ಸಲುವಾಗಿ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು” ಎಂದರು.
ನಗರ ಸಭೆ ನಾಮನಿರ್ದೇಶಿತ ಸದಸ್ಯ ಅಣ್ಣಮ್ಮ ಶಿವಾನಂದ ಮಾತನಾಡಿ, “ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿಯಿಂದ ಆಗಬಹುದಾದ ಅನಾಹುತಗಳ ಬಗ್ಗೆ ನಾವು ಮೊದಲು ಅರಿಯಬೇಕು. ಮಕ್ಕಳ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಈ ಕೇರಿಗಳಲ್ಲಿ ಇಂತಹ ಅನಿಷ್ಟ ಪದ್ದತಿಯನ್ನು ದೂರ ಮಾಡುವ ಸಲುವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಜಕ್ಕೂ ಸಂತಸ ತಂದಿದೆ” ಎಂದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ಹಿರಿಯ ವಕೀಲ ದಿ.ಹರಿಕುಮಾರ್ ಸ್ಮರಣಾರ್ಥ 8 ದಿನಗಳ ಕ್ರಿಕೆಟ್ ಕ್ರೀಡಾಕೂಟ
ಕಾರ್ಮಿಕ ನಿರೀಕ್ಷಕಿ ಎಂ. ಮಂಜುಳಾ ಮಾತನಾಡಿ, “ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2016 ರಂತೆ 14 ವರ್ಷದೊಳಗಿನ ಮಕ್ಕಳ ದುಡಿಮೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 15 ರಿಂದ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಒಂದು ವೇಳೆ ದುಡಿಸಿಕೊಂಡಲ್ಲಿ ₹50 ಸಾವಿರ ದಂಡ ಹಾಗೂ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ವಾಹನಗಳಲ್ಲಿ ಮಕ್ಕಳನ್ನು ಕೃಷಿ ಚಟುವಟಿಕೆಗಳಿಗಾಗಿ ಅಕ್ರಮ ಮತ್ತು ಕಾನೂನು ಬಾಹಿರವಾಗಿ ಸಾಗಾಣಿಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಇದರ ಬಗ್ಗೆ ಪ್ರತಿಯೊಬ್ಬರು ಜಾಗೃತಿ ಮೂಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವಕೀಲರುಗಳಾದ ವಂದನ, ಸರಳ, ನಜೀಮ ತಬಸ್ಸುಮ್, ನರಸಿಂಹಮೂರ್ತಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕರಾದ ರಮೇಶ್, ಸೇರಿದಂತೆ ಬಾಪೂಜಿನಗರದ ಪೋಷಕರು ಹಾಗೂ ಇನ್ನಿತರ ಪ್ರಮುಖರು ಇದ್ದರು.
https://shorturl.fm/eg9kZ