ಶಾಲೆಗೆ ಹೋಗುವ ರಸ್ತೆ ಸರಿಪಡಿಸಿ ಅಭಿವೃದ್ಧಿಪಡಿಸಲು ಒತ್ತಾಯಿಸಿ ಆರನೇ ತರಗತಿ ವಿದ್ಯಾರ್ಥಿನಿಯೊಬ್ಬಳು ದಾವಣಗೆರೆ ತಾಲೂಕು ಆಲೂರು ಗ್ರಾಮ ಪಂಚಾಯಿತಿ ಮುಂಬಾಗ ಧರಣಿ ನಡೆಸಿದ್ದಾರೆ. ಏಕಾಂಗಿಯಾಗಿ ಗ್ರಾಮ ಪಂಚಾಯಿತಿ ಮುಂದೆ ಧರಣಿ ನಡೆಸಿದ ವಿದ್ಯಾರ್ಥಿನಿ ‘ಮೂಲ ಸೌಕರ್ಯಕ್ಕಾಗಿ ಹೋರಾಟ’ ಎಂಬ ಭಿತ್ತಿಚಿತ್ರವನ್ನು ಕುರ್ಚಿಯೊಂದಕ್ಕೆ ಕಟ್ಟಿ ನೆಲದ ಮೇಲೆ ಕುಳಿತು ಧರಣಿ ನಡೆಸಿದ್ದಾಳೆ.
ಖಾಸಗಿ ಅನುದಾನಿತ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಸುಶ್ಮಿತಾ ‘ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಇದರಿಂದ ಶಾಲೆಗೆ ಹೋಗುವುದು ಕಷ್ಟವಾಗಿದೆ. ಮಕ್ಕಳು ಮತ್ತು ಶಿಕ್ಷಕರು ಆಯ ತಪ್ಪಿ ಬಿದ್ದಿದ್ದಾರೆ’ ಎಂದು ಆರೋಪಿಸಿ ದಾವಣಗೆರೆ ತಾಲೂಕಿನ ಆಲೂರು ಗ್ರಾಪಂ ಎದುರು ಪ್ರತಿಭಟನೆ ನಡೆಸಿದ್ದಾರೆ.
ಮೂಲಭೂತ ಸೌಲಭ್ಯಕ್ಕಾಗಿ ಹೋರಾಟ ಎಂಬ ಘೋಷವಾಕ್ಯದ ಭಿತ್ತಿ ಚಿತ್ರ ಅಂಟಿಸಿ ನೆಲದ ಮೇಲೆ ಕುಳಿತು ಹೋರಾಟ ನಡೆಸಿದ್ದಾಳೆ. ಈ ಬಗ್ಗೆ ಆಲೂರು ಗ್ರಾಮ ಪಂಚಾಯಿತಿ ಗಮನಕ್ಕೂ ತರಲಾಗಿತ್ತು. ಆದರೂ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ. ರಸ್ತೆಗಳು ಹಾಳಾಗಿವೆ. ಚರಂಡಿಗಳಲ್ಲಿ ಹೂಳು ತುಂಬಿಕೊಂಡು ಅನೈರ್ಮಲ್ಯ ತಾಂಡವವಾಡುತ್ತಿದೆ ಎಂದು ವಿದ್ಯಾರ್ಥಿನಿ ಸುಶ್ಮಿತಾ ಆರೋಪಿಸಿದ್ದಳು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಸ್ಥಳದಲ್ಲಿ ವಿದ್ಯಾರ್ಥಿನಿ ಮನವೊಲಿಸಿದ್ದು, ಸೌಲಭ್ಯ ಕಲ್ಪಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿಯನ್ನು ವಿದ್ಯಾರ್ಥಿನಿ ಹಿಂದಕ್ಕೆ ಪಡೆದಿದ್ದಾಳೆ.
ಈ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಮಾತನಾಡಿ, ಅನುದಾನಿತ ಶಾಲೆಯಾಗಿದ್ದು ಇಲ್ಲಿ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ಖಾಸಗಿಯವರಿಗೆ ಸೇರಿದ್ದು, ಅವರು ರಸ್ತೆ ಅಭಿವೃದ್ಧಿಗೆ ಅವಕಾಶ ನೀಡುತ್ತಿಲ್ಲ. ಪರ್ಯಾಯ ಮಾರ್ಗಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಚಳ್ಳಕೆರೆ ನಗರದಲ್ಲಿ ರಸ್ತೆ ಗುಂಡಿಗಳ ಪೂಜೆ; ಕರ್ನಾಟಕ ರಾಷ್ಟ್ರ ಸಮಿತಿಯಿಂದ ವಿನೂತನ ಪ್ರತಿಭಟನೆ
ಜಿಲ್ಲಾ ಪಂಚಾಯತ್ ಸಿಇಒ ಗಿತ್ತೆ ವಿಠ್ಠಲ ಮಾಧವರಾವ್ ಪ್ರತಿಕ್ರಿಯಿಸಿ, “ವಿದ್ಯಾರ್ಥಿನಿ ಧರಣಿ ವಿಚಾರ ಗಮನಕ್ಕೆ ಬಂದಿದೆ. ಶಾಲೆಗೆ ರಸ್ತೆ ಸಂಪರ್ಕ ವಿಚಾರವಾಗಿ ಲೋಕೋಪಯೋಗಿ ಇಲಾಖೆಯೊಂದಿಗೆ ಚರ್ಚಿಸಲಾಗಿದೆ. ಕುಡಿಯುವ ನೀರಿನ ಘಟಕಕ್ಕೆ ಸಂಬಂಧಿಸಿದಂತೆ ಈಗಾಗಲೇ ಎರಡು ಘಟಕಗಳು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಾಲಕಿ ಇರುವ ಭಾಗದಲ್ಲಿ ಕುಡಿಯುವ ನೀರು ಘಟಕಕ್ಕೆ ಒತ್ತಾಯಿಸಿದ್ದಾರೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಆ ಭಾಗದಲ್ಲಿ ಜನಸಂಖ್ಯೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ವರದಿ ನೀಡಲು ಸೂಚಿಸಿದ್ದೇವೆ. ಅಲ್ಲದೆ ಗ್ರಾಮದ ಚರಂಡಿ ವ್ಯವಸ್ಥೆ, ನೈರ್ಮಲ್ಯಕ್ಕೆ ಸಂಬಂಧಪಟ್ಟಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ” ಎಂದು ತಿಳಿಸಿದರು.
ಈ ಕುರಿತು ಈದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿದ ತಾಪಂ ಇಒ ರಾಮಭೋವಿ, “ಅನುದಾನಿತ ಖಾಸಗಿ ಶಾಲೆಯಾಗಿದ್ದು, ರಸ್ತೆಯು ಕೂಡ ಖಾಸಗಿಯವರ ಜಮೀನಿನಲ್ಲಿದೆ. ರಸ್ತೆಯನ್ನು ನೇರವಾಗಿ ಸರಕಾರದ ಕಡೆಯಿಂದ ಅಭಿವೃದ್ದಿ ಪಡಿಸಲು ಅಡೆತಡೆಗಳಿವೆ. ಶಾಲೆಗೆ ಅನುಮತಿ ಪಡೆಯುವಾಗ ಶಿಕ್ಷಣ ಇಲಾಖೆಗೆ ಶಾಲೆಯವರು ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳ ಬಗ್ಗೆ ಯಾವ ರೀತಿ ದೃಢಿಕರಣ ಸಲ್ಲಿಸಿದ್ದಾರೆ ಎನ್ನುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿ ಮಾಹಿತಿ ಕೇಳಿದ್ದೇವೆ. ಅಲ್ಲದೇ ಪಿಡಿಓ ಅವರಿಗೆ ತಾತ್ಕಾಲಿಕವಾಗಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ” ಎಂದು ಮಾಹಿತಿ ನೀಡಿದರು.