ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು ಗದಗ ಶಿರಹಟ್ಟಿ ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮದ ಎಪಿಎಂಸಿ ಸಭಾ ಭವನದಲ್ಲಿ ಬೆಳಿಗ್ಗೆ 10:30 ಗಂಟೆಗೆ ಲೋಕಾಯುಕ್ತ ಜನ ಸಂಪರ್ಕ ಸಭೆ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಭೆಯಲ್ಲಿ ಸರ್ಕಾರದ ಎಲ್ಲ ಕಚೇರಿಗಳ ತಾಲೂಕು ಮಟ್ಟದ ಸರಕಾರಿ ಅಧಿಕಾರಿಗಳು ಹಾಜರಿರುತ್ತಾರೆ. ಯಾವುದೇ ಸರಕಾರಿ ಕಛೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತ್ತಿರುವ ಬಗ್ಗೆ ಲಿಖಿತ ದೂರನ್ನು ನೀಡಬಹುದಾಗಿದೆ.
ಸರಕಾರದ ಯೋಜನೆಗಳ ಲಾಭವನ್ನು ಅರ್ಹರಿಗೆ ತಲುಪಿಸುವಲ್ಲಿ ತಾರತಮ್ಯ ಮಾಡುತ್ತಿರುವ ಬಗ್ಗೆ, ಅನಗತ್ಯ ವಿಳಂಬ, ಕಳಪೆ ಕಾಮಗಾರಿ ನಡೆಸಿ ಹಣ ದುರುಪಯೋಗ ಪಡಿಸಿದ ದೂರುಗಳು ಸೇರಿದಂತೆ ಇನ್ನಿತರೆ ಅಕ್ರಮಗಳ ಬಗ್ಗೆ ದೂರು ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಗದಗ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ವಿಜಯ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.