ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ ವಿಡಿಯೋ ಮಾಡಿದ್ದಲ್ಲದೇ, ಸೋಷಿಯಲ್ ಮೀಡಿಯಾಗಳಲ್ಲಿ ತೇಜೋವಧೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಟೀಲು ಸಮೀಪದ ಕೊಂಡೆಮೂಲ ಎಂಬಲ್ಲಿ ನಡೆದಿದೆ.
ಘಟನೆ ನಿನ್ನೆ (ಆ.21)ರಂದು ನಡೆದಿದ್ದು, ಗೋಣಿಚೀಲ ನೀಡದಂತೆ ಸರ್ಕಾರದಿಂದ ಅಧಿಕೃತ ನಿಯಮವಿದ್ದರೂ ಕೂಡ, ಗ್ರಾಹಕ ಗೋಣಿಚೀಲ ನೀಡುವಂತೆ ಒತ್ತಾಯಿಸಿದ್ದಾನೆ. ಗೋಣಿಚೀಲ ನೀಡದ ಹಿನ್ನೆಲೆಯಲ್ಲಿ ಅಂಗಡಿಯವರ ವಿಡಿಯೋ ಮಾಡಿದ್ದು, ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಾಕುವ ಮೂಲಕ ತೇಜೋವಧೆಗೆ ಯತ್ನಿಸಿದ್ದಾನೆ.
ಕಟೀಲು ಸಮೀಪದ ಕೊಂಡೆಮೂಲ ಎಂಬಲ್ಲಿ ನ್ಯಾಯಬೆಲೆ ಅಂಗಡಿ ನಡೆಸುತ್ತಿರುವ ಮಂಜುನಾಥ ನಾಯಕ್ ಎಂಬುವವರ ಅಂಗಡಿಗೆ ಬಂದಿದ್ದ ಗ್ರಾಹಕ ಸತೀಶ್ ಎಂಬಾತ, “ನನ್ನ ಕುಟುಂಬದ ರೇಷನ್ ಕಾರ್ಡ್‌ಗೆ 100 ಕೆ ಜಿ ಅಕ್ಕಿ ಇದೆ. ಹಾಗಾಗಿ, ನನಗೆ ಗೋಣಿಚೀಲ ಕೊಡಿ” ಎಂದು ಪಟ್ಟು ಹಿಡಿದಿದ್ದಾನೆ.

ಈ ವೇಳೆ ಅಂಗಡಿಯಲ್ಲಿದ್ದ ಮಂಜುನಾಥ ನಾಯಕ್ ಅವರ ಸೊಸೆ ದೀಪಾ ನಾಯಕ್ ಅವರು, “ಗೋಣಿ ಚೀಲ ಗ್ರಾಹಕರಿಗೆ ನೀಡುವ ನಿಯಮವಿಲ್ಲ. ಅದು ಸರ್ಕಾರದಿಂದ ಬರುವುದಾದರೂ ನ್ಯಾಯಬೆಲೆ ಅಂಗಡಿಯವರಿಗೆ ಸೇರಿದ್ದು. ಈ ಬಗ್ಗೆ ಸರ್ಕಾರದ ಆಹಾರ ಇಲಾಖೆಯಿಂದಲೇ ಸ್ಪಷ್ಟವಾದ ನಿಯಮವಿದೆ” ಎಂದು ತಿಳಿಸಿದ್ದಾರೆ.
ಈ ಬಗ್ಗೆ ದೀಪಾ ನಾಯಕ್ ಅವರು ಮತ್ತಷ್ಟು ಸ್ಪಷ್ಟೀಕರಣ ನೀಡಿದರೂ ಮೆತ್ತಗಾಗದ ಗ್ರಾಹಕ ಸತೀಶ್, ತನ್ನ ಬಳಿಯಲ್ಲಿದ್ದ ಮೊಬೈಲ್ ತೆಗೆದು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಅಲ್ಲದೇ, “ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಾಕುತ್ತೇನೆ. ಸಂಬಂಧಪಟ್ಟ ಅಧಿಕಾರಿಗಳು ಬಂದು ಕ್ರಮ ಕೈಗೊಳ್ಳಬೇಕು” ಎಂದು ತುಳು ಭಾಷೆಯಲ್ಲಿ ಹೇಳಿದ್ದಾನೆ.
ಈ ಎಲ್ಲ ಬೆಳವಣಿಗೆಯ ವೇಳೆ ಗ್ರಾಹಕನಾಗಿ ಬಂದಿದ್ದ ಸತೀಶ್ ಅವರ ತಾಯಿ ಕೂಡ ಅಂಗಡಿಯಲ್ಲಿದ್ದು, ಮಗ ವಿಡಿಯೋ ಮಾಡದಂತೆ ಅವರೂ ಕೂಡ ತಡೆದಿದ್ದಾರೆ. ಅಲ್ಲದೇ, ತಾವು ಮನೆಯಿಂದ ತಂದಿದ್ದ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ಅಕ್ಕಿ ತುಂಬಿಸಲು ಒಪ್ಪಿಕೊಂಡರೂ, ಅದನ್ನು ಮಗ ವಿಜಯ್ ತಡೆದಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಗ್ರಾಹಕ ಸತೀಶ್ ರಂಪಾಟ ಮಾಡಿದ್ದರಿಂದ ತಮ್ಮ ‘ಸೇಫ್ಟಿ’ಗಾಗಿ ಮಂಜುನಾಥ ನಾಯಕ್ ಅವರ ಸೊಸೆ ದೀಪಾ ನಾಯಕ್ ಅವರು ಕೂಡ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಗ್ರಾಹಕನ ನಡವಳಿಕೆ ಕೂಡ ಸೆರೆಯಾಗಿದೆ.
ಈ ಘಟನೆಯ ಬಗ್ಗೆ ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡಿರುವ ದೀಪಾ ನಾಯಕ್, “ಕೆಲವರಿಗೆ ಸರ್ಕಾರದ ನಿಯಮಗಳೇ ಗೊತ್ತಿಲ್ಲ. ಅಂಗಡಿ ನಡೆಸುವವರೇ ಗೋಣಿ ಚೀಲವನ್ನು ಇಟ್ಟುಕೊಳ್ಳಬಹುದು ಎಂಬ ಸ್ಪಷ್ಟವಾದ ನಿಯಮವೇ ಇದೆ. ಏನೂ ಮಾಹಿತಿ ಇಲ್ಲದವರು ಗೋಣಿಚೀಲ ನೀಡುವಂತೆ ಹೀಗೇ ಕಿರುಕುಳ ನೀಡುತ್ತಲೇ ಇದ್ದಾರೆ. ಎಷ್ಟೇ ಸಮಜಾಯಿಷಿ ನೀಡಿದರೂ ಒಪ್ಪುವುದಕ್ಕೆ ಅವರು ತಯಾರಿಲ್ಲ. ನಿನ್ನೆ ಅಂಗಡಿಗೆ ಬಂದು ನಮ್ಮನ್ನು ಬೆದರಿಸಿದ್ದಲ್ಲದೇ, ವಿಡಿಯೋ ಚಿತ್ರೀಕರಿಸಿಕೊಂಡು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡಿದ್ದಾನೆ. ಹೀಗಾಗಿ, ನಾವು ಬಜಪೆ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ನೀಡಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ವಿಧಾನಸಭೆಯ ಮುಂಗಾರು ಅಧಿವೇಶನ ಮುಕ್ತಾಯ: ಒಟ್ಟು 39 ವಿಧೇಯಕ ಅಂಗೀಕಾರ
“ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ವೈರಲ್ ಆದ ಬಳಿಕ ಆಹಾರ ಇಲಾಖೆಯ ಅಧಿಕಾರಿಗಳು ನಮ್ಮ ಅಂಗಡಿಗೆ ಬಂದು ಪರಿಶೀಲನೆ ನಡೆಸಿ, ಧೈರ್ಯ ತುಂಬಿದ್ದಾರೆ. ವಿಡಿಯೋ ಮಾಡಿ, ತೇಜೋವಧೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದೇನೆ. ಅಂಗಡಿಯಲ್ಲಿ ಮಹಿಳೆಯರು ಇರುವಾಗ ದಬ್ಬಾಳಿಕೆ ಮಾಡಿ ಪ್ರತಿ ತಿಂಗಳು ಬಂದು ಗೋಣಿ ವಿಷಯದಲ್ಲಿ ಜಗಳ ಮಾಡುತ್ತಾನೆ.. ಈ ವಿಷಯದ ಬಗ್ಗೆ ಪಂಚಾಯತ್ ಅಧಿಕಾರಿಗಳಿಗೂ ತಿಳಿಸಲಾಗಿದೆ. ಆತನ ಕುಟುಂಬದಲ್ಲಿರುವವರು ಸ್ವಂತ ಕಾರು ಹೊಂದಿರುವುದಾಗಿ ಮಾಹಿತಿ ಇದೆ. ಹಾಗಾಗಿ, ಬಿಪಿಎಲ್ ರೇಷನ್ ಕಾರ್ಡ್‌ಗೆ ಅರ್ಹತೆ ಇರುವನೋ ಇಲ್ಲವೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳೂ ತಿಳಿಸಿದ್ದಾರೆ. ಈ ಹಿಂದೆಯೂ ಎರಡು ಮೂರಿ ಬಾರಿ ಬಂದು ಜಗಳ ಮಾಡಿದ್ದಾನೆ. ಹೀಗಾಗಿ, ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇವೆ” ಎಂದು ದೀಪಾ ನಾಯಕ್ ಈದಿನ ಡಾಟ್ ಕಾಮ್‌ಗೆ ಮಾಹಿತಿ ನೀಡಿದ್ದಾರೆ.
ಸದ್ಯ ಈ ಬಗ್ಗೆ ಗ್ರಾಹಕನ ವಿರುದ್ಧ ದೂರು ದಾಖಲಿಸಿಕೊಂಡಿರುವ ಬಜಪೆ ಠಾಣಾ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸರ್ಕಾರದ ನಿಯಮ ಏನು?
ಕರ್ನಾಟಕ ಸರಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಉಪ ಕಾರ್ಯದರ್ಶಿಯವರು ದಿನಾಂಕ 13/04/2016 ರಂದು ಕರ್ನಾಟಕ ರಾಜ್ಯಪಾಲರ ಅದೇಶಾನುಸಾರ ನೀಡಿದ ಸರ್ಕಾರದ ಆದೇಶ ಸಂಖ್ಯೆಯಲ್ಲಿ
ಆನಾಸ 13 ಡಿಆರ್ 2016ರ ಪ್ರಕಾರ ನ್ಯಾಯ ಬೆಲೆ ಅಂಗಡಿ ಮಾಲೀಕರುಗಳಿಗೆ ನೀಡಲಾಗುತ್ತಿರುವ ಲಾಭಾಂಶಕ್ಕೆ ಸಂಬಂಧಿಸಿದಂತೆ, ನಗದು ಹಾಗೂ ವಸ್ತು ರೂಪದಲ್ಲಿ ಲಾಭಾಂಶದ ಪ್ರಸ್ತಾವನೆ ನೀಡಲಾಗಿದೆ. ಅಲ್ಲದೆ ಈ ಬಗ್ಗೆ ವಿವರವಾಗಿ ನ್ಯಾಯ ಬೆಲೆ ಅಂಗಡಿದಾರರಿಗೆ ಪ್ರತಿ ಕ್ವಿಂಟಾಲ್ ಗೆ ಲಾಭಾಂಶವನ್ನು ರೂ. 56/ಎಂದು ನಿಗದಿಪಡಿಸಿದ್ದು, ಈ ಪೈಕಿ ರೂ. 36 ನಗದು ರೂಪದಲ್ಲಿ ಹಾಗೂ ರೂ. 20 ಪ್ರತಿ ಕ್ವಿಂಟಾಲ್ ನ ಎರಡು ಗೋಣಿ ಚೀಲಗಳ ರೂಪದಲ್ಲಿ ಸೂಚಿಸಲಾಗಿದೆ. ಈ ಆದೇಶವು 06/11/2013ರಿಂದ ಜಾರಿಗೆ ಬಂದಿದೆ.

“ಸರ್ಕಾರದ ಹಾಗೂ ಆಹಾರ ಇಲಾಖೆಯ ನಿಯಮಗಳ ಬಗ್ಗೆ ತಿಳುವಳಿಕೆ ಇಲ್ಲದ ಗ್ರಾಹಕರು ನ್ಯಾಯ ಬೆಲೆ ಅಂಗಡಿದಾರರ ಮೇಲೆ ವೃಥಾ ಆರೋಪ ಮಾಡಿ ಬೆದರಿಸುವುದು ಅಕ್ರಮವಾಗಿದೆ. ಸದ್ರಿ ಗ್ರಾಹಕರು ಈ ಕೂಡಲೇ ಅಂಗಡಿದಾರರ ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ಸೂಕ್ತ ಕಾನೂನು ಕ್ರಮ ಎದುರಿಸಬೇಕು. ಕಾನೂನು ಕ್ರಮ ಕೈಗೊಳ್ಳುವ ವಿಚಾರ ನ್ಯಾಯಬೆಲೆ ಅಂಗಡಿದಾರರಿಗೆ ಬಿಟ್ಟಿದ್ದು. ಗ್ರಾಹಕರು ಸರ್ಕಾರದ ನಿಯಮಗಳ ಬಗ್ಗೆ ಮಾಹಿತಿ ಇಲ್ಲದೇ ಇದ್ದಾಗ ಸಂಬಂಧಪಟ್ಟವರಿಂದ ಮೊದಲು ಪಡೆದುಕೊಳ್ಳಬೇಕು. ಅದು ಬಿಟ್ಟು ಸೋಷಿಯಲ್ ಮೀಡಿಯಾ ಇದೆ ಎಂದ ಮಾತ್ರಕ್ಕೆ ವಿಡಿಯೋ ಮಾಡಿ ಹರಿಯಬಿಡುವುದು ಸರಿಯಲ್ಲ” ಎಂದು ಹೆಸರು ಹೇಳಲಿಚ್ಛಿಸದ ದಕ್ಷಿಣ ಕನ್ನಡ ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿಯೋರ್ವರು ಈದಿನ ಡಾಟ್ ಕಾಮ್‌ಗೆ ಮಾಹಿತಿ ನೀಡಿದ್ದಾರೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.