ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ ಸ್ಥಿತಿ, ಪಂಚಾಯಿತಿಗಳ ಕಾರ್ಯಗಳ ಮೇಲೂ ಕೇಂದ್ರ ಸರಕಾರ ತನ್ನ ಅಧೀನದಲ್ಲಿರಿಸಿಕೊಳ್ಳುತ್ತಿದೆ. ಮತಗಳ್ಳತನ ನಡೆದಿದೆ. ಹೀಗಾಗಿ ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ವಾದಿ) ರಾಜ್ಯ ಕಾರ್ಯದರ್ಶಿ ಡಾ.ಕೆ.ಪ್ರಕಾಶ ಹೇಳಿದರು.
ಕಲಬುರ್ಗಿಯ ಮಹಮ್ಮದ್ ಹಸನ್ ಖಾನ್ ಭವನದಲ್ಲಿ ಶುಕ್ರವಾರ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಿದ ʼತುರ್ತು ಪರಿಸ್ಥಿತಿ ಅಂದು ಇಂದು ಮುಂದಿನ ಸವಾಲುಗಳʼ ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ʼಅಂದು ಕಾಂಗ್ರೆಸ್ನ ಪಕ್ಷದ ಇಂದಿರಾ ಗಾಂಧಿಯವರು ಸಂವಿಧಾನಿಕ ಘೋಷಿತ ತುರ್ತು ಪರಿಸ್ಥಿತಿ ಹೇರಿದ್ದರು. ಅದರ ಹಿಂದೆ ರಾಜಕೀಯ ಕುತಂತ್ರವಿತ್ತು. ತುರ್ತು ಪರಿಸ್ಥಿತಿಯಿಂದ ಸಾಂವಿಧಾನಿಕವಾಗಿ ಅಸ್ತಿತ್ವದಲ್ಲಿರುವ ಪ್ರಜಾಪ್ರಭುತ್ವದ ಹಕ್ಕು ಅಮಾನತುಗೊಳಿಸಲಾಯಿತು. ಕಾಂಗ್ರೆಸ್ ತನ್ನ ಆಂತರಿಕ ಬಿಕ್ಕಟ್ಟುಗಳ ಕಾರಣದಿಂದ ಮತ್ತು ತುರ್ತು ಪರಿಸ್ಥಿತಿಯ ಅಪಾಯಗಳ ಕಾರಣದಿಂದ ಜನತೆಯ ತೀವ್ರ ಪ್ರತಿರೋಧವನ್ನು ತಣ್ಣಗಾಗಿಸಲು ಬ್ಯಾಂಕ್ ರಾಷ್ಟ್ರೀಕರಣದಂತಹ ನಿರ್ಣಯ ಮಾಡಿತುʼ ಎಂದು ತಿಳಿಸಿದರು.
ʼತುರ್ತು ಪರಿಸ್ಥಿತಿಯ ವೇಳೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ತುರ್ತು ಪರಿಸ್ಥಿತಿ ಒಂದು ರಾಷ್ಟ್ರ ಕಟ್ಟುವ ನಿರ್ಣಯ ಎಂದು ಬೆಂಬಲಿಸಿ ಬರೆದಿರುವ ಪತ್ರದ ದಾಖಲೆಗಳು ಸಿಗುತ್ತವೆ. ಈಗ ಅಂದು ತುರ್ತು ಪರಿಸ್ಥಿತಿ ಹೇರಿದ್ದು ಕಾಂಗ್ರೆಸ್ ಎಂದು ಹೇಳುತ್ತಾ ತಾನು ಬೆಂಬಲಿಸಿದ್ದನ್ನು ಮರೆಮಾಚಿ, ಸುಳ್ಳನ್ನು ಸತ್ಯವೆಂಬಂತೆ ಪ್ರಚುರ ಪಡಿಸುತ್ತದೆʼ ಎಂದು ದೂರಿದರು.
ʼಕಮ್ಯುನಿಸ್ಟ್ ಪಕ್ಷದವರು ಎಮರ್ಜೆನ್ಸಿ ಬೆಂಬಲಿಸಿದ್ದರು ಎಂಬ ಸುಳ್ಳನ್ನು ಹರಿಯಬಿಡಲಾಗಿದೆ. ಸಿಪಿಐ(ಎಂ) ಯಾವತ್ತೂ ತುರ್ತು ಪರಿಸ್ಥಿತಿ ಬೆಂಬಲಿಸಿಲ್ಲ, ಸಿಪಿಐ(ಎಂ) ಪಕ್ಷದವರನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು. ಸಿಪಿಐ ಆರಂಭದಲ್ಲಿ ಬೆಂಲಿಸಿತ್ತು, ಆದರೆ ಸಿಪಿಐಎಂ ಅಲ್ಲ. 50 ವರ್ಷಗಳ ಹಿಂದೆ ಘೋಷಿತವಾದ ತುರ್ತು ಪರಿಸ್ಥಿತಿ ಇತ್ತು, ಇಂದು ನಾವು ಅಘೋಷಿತವಾದ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಬಿಜೆಪಿಯ ಫ್ಯಾಸಿಸ್ಟ್ ಧೋರಣೆಯ ಕಾರಣದಿಂದ ಕಾರ್ಪೋರೆಟ್ ಪರವಾದ ನಿಲುವಿನಿಂದಾಗಿ ಶಾಶ್ವತವಾದ ತುರ್ತುಪರಿಸ್ಥಿತಿ ಅನುಭವಿಸಲಾಗುತ್ತಿದೆ. ಅಂದಿನಿಂದ ಇಂದಿನವರೆಗೆ ಹೇಗೆ ರಾಜಕೀಯ ಬದಲಾವಣೆಗೊಂಡಿದೆ ಮತ್ತು ಜನರ ನೀರಿಕ್ಷೆ ಪೂರ್ಣ ಪ್ರಮಾಣದಲ್ಲಿ ಏಕೆ ಪೂರೈಸಲಾಗಲಿಲ್ಲ ಎಂಬುದನ್ನು ಆಲೋಚಿಸಬೇಕುʼ ಎಂದರು.
ʼಸ್ವತಂತ್ರ ಹೋರಾಟದ ನಂತರ ಜನರಿಗಾಗಿ ರೂಪಿಸಿದ ನೀತಿಗಳು ಅವರ ಹಿತಾಸಕ್ತಿಯನ್ನು ಪೂರೈಸದೆ ಇದ್ದಾಗ ಆಗಿನ ಸರ್ಕಾರ ತನ್ನ ಅಧಿಪತ್ಯವನ್ನು ಕಳೆದುಕೊಂಡಿತು. ಇಂದು ಅಲ್ಪ ಮತಗಳ ಮೂಲಕ ಬಹುಸಂಖ್ಯಾತರನ್ನು ಪ್ರತಿನಿಧಿಸುವ ಚುನಾವಣಾ ನೀತಿಯು ತಪ್ಪಾಗಿದೆ. ಇದರಿಂದ ಇಡೀ ದೇಶವೇ ಸಾಲದ ಬಲೆಯಲ್ಲಿ ಸಿಲುಕಿದೆ. ಬಡತನ, ನಿರುದ್ಯೋಗ, ಎಲ್ಲ ರೀತಿಯ ತಾರತಮ್ಯಕ್ಕೆ ದೇಶವು ಬಲಿಯಾಗುತ್ತಿದೆ. ವ್ಯಕ್ತಿ ಕೇಂದ್ರಿತ ವೈಭವವು ವಿಜೃಂಭಿಸುತ್ತಿರುವುದರ ಹಿಂದೆ ಕಾರ್ಪೋರೆಟ್ ಲೂಟಿಕೋರರ ಸಂಚಿದೆʼ ಎಂದು ಆರೋಪಿಸಿದರು.
ʼಜನತೆಯ ರಾಜಕೀಯ ಪ್ರಜ್ಞೆ ಎತ್ತರಿಸಲಿಕ್ಕಾಗಿ ಕೆಲಸ ಮಾಡಿ ಜನಾಂದೋಲನ ಸಂಘಟಿಸುವುದು ನಮ್ಮ ಮುಂದಿರುವ ಸವಾಲು. ದೊಡ್ಡ ಬಂಡವಾಳಶಾಹಿಗಳ ಸಾವಿರಾರು ಕೋಟಿ ಸಾಲ ಮನ್ನಾ ಮಾಡಿ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದೆ, ಯುವಜನರು ಜೀವನ ಭದ್ರತೆ ಇಲ್ಲದೆ ಭವಿಷ್ಯದ ಬಗ್ಗೆ ಆಧಾರವಿಲ್ಲದಂತಾಗುತ್ತಿದೆʼ ಎಂದು ಹೇಳಿದರು.
ಇದೆ ವೇಳೆ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಒಂದು ವರ್ಷ ಹತ್ತು ದಿನಗಳ ಜೈಲುವಾಸ ಅನುಭವಿಸಿದ ಡಾ.ಪ್ರಭು ಖಾನಾಪುರೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದನ್ನೂ ಓದಿ : ಬೀದರ್ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್ ಸಭಾ ಒತ್ತಾಯ
ಪ್ರಗತಿಪರ ಚಿಂತಕ ಆರ್.ಕೆ.ಹುಡುಗಿ ಅವರು ತುರ್ತು ಪರಿಸ್ಥಿತಿಯ ಹಿನ್ನೆಲೆಯ ಹಾಗೂ ಪ್ರಜಾಪ್ರಭುತ್ವದ ಕಗ್ಗೊಲೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ತಿಳಿಸಿದರು. ಸಿಪಿಐ(ಎಂ) ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸದಸ್ಯರಾದ ಶ್ರೀಮಂತ್ ಬಿರಾದರ್ ನಿರೂಪಿಸಿದರು, ಜಿಲ್ಲಾ ಸಮಿತಿಯ ಸದಸ್ಯ ಸಲ್ಮಾನ್ ಖಾನ್ ವಂದಿಸಿದರು.