ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಿ ನಿರ್ದೇಶಕ ಹುದ್ದೆಗೆ ಸಂಬಂಧಿಸಿದ ಪ್ರಕರಣ ರದ್ದಾದರೆ ಮುಂಬರುವ ಡಿಸಿಸಿ ಬ್ಯಾಂಕ್ ಚುನಾವಣೆಗೆ ನಾನು ಖಚಿತವಾಗಿ ಸ್ಪರ್ಧಿಸುತ್ತೇನೆ ಎಂದು ಮಾಜಿ ಶಾಸಕ ಮಹೇಶ್ ಕುಮಠಳ್ಳಿ ತಿಳಿಸಿದ್ದಾರೆ.
ಅಥಣಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, “ರಾಜಕೀಯವನ್ನು ಹೊರಗಿಟ್ಟು ಡಿಸಿಸಿ ಬ್ಯಾಂಕಿನ ಆಡಳಿತ ನಡೆಸುತ್ತೇವೆ ಎಂದು ಹೇಳುವವರು, ನಾವು ಆರಂಭಿಸಿದ ಸೊಸೈಟಿಗಳಿಗೆ ಹಣ ನೀಡದೆ ರಾಜಕಾರಣ ಮಾಡುತ್ತಿದ್ದಾರೆ,” ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿರುದ್ಧ ಆಕ್ರೋಶ ಹೊರಹಾಕಿದರು.
ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು, “ನನ್ನ ಅಧಿಕಾರಾವಧಿಯಲ್ಲಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಜಾರಿಗೆ ಬಂದಿತ್ತು. ಆದರೆ ಆ ಯೋಜನೆಯನ್ನು ಸ್ವತಃ ತಾನು ತಂದಿರುವಂತೆ ಲಕ್ಷ್ಮಣ ಸವದಿ ಹೇಳಿಕೊಳ್ಳುತ್ತಿದ್ದಾರೆ,” ಎಂದು ಆರೋಪಿಸಿದರು.
ಕುಮಠಳ್ಳಿ ಮುಂದುವರಿಸಿ, “ಡಿಸಿಸಿ ಬ್ಯಾಂಕ್ ಚುನಾವಣೆಗೆ ನಾನು ಸ್ಪರ್ಧಿಸುವುದು ನಿಶ್ಚಿತ. ಯಾವುದಾದರೂ ಕಾರಣದಿಂದ ನಾನು ಸ್ಪರ್ಧೆ ಮಾಡದಿದ್ದರೆ, ಒಳ್ಳೆಯ ವ್ಯಕ್ತಿಯನ್ನು ಕಣಕ್ಕಿಳಿಸುತ್ತೇವೆ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ,” ಎಂದು ಘೋಷಣೆ ಮಾಡಿದರು.