ʼನಾವು ಹುಟ್ಟಿನಿಂದ ಅಲ್ಲ, ಈ ತಾಂಡಾ ಹುಟ್ಟಿನಿಂದಲೂ ರಸ್ತೆಯೇ ಕಂಡಿಲ್ಲ. ಸ್ವಲ್ಪ ಮಳೆಯಾದರೆ ದಾರಿ ಕೆಸರುಗದ್ದೆಯಂತಾಗುತ್ತದೆ. ಹಳ್ಳ ತುಂಬಿ ಹರಿದರೆ ದಾಟಿ ಬೇರೆಡೆ ಹೋಗಲಾರದಂತಹ ಪರಿಸ್ಥಿತಿ. ಈ ಹಾಣಾದಿಯಲ್ಲಿ ಬೈಕ್ ಓಡಲ್ಲ, ಕೈಯಲ್ಲಿ ಚಪ್ಪಲಿ ಹಿಡಿದು ಬರಿಗಾಲಲ್ಲಿ ನಡೆಯಬೇಕು. ಇನ್ನು ವೃದ್ಧರು, ಹೆರಿಗೆ ಇತರೆ ವೇಳೆ ತುರ್ತಾಗಿ ಆಸ್ಪತ್ರೆಗೆ ತೆರಳಬೇಕಾದರೆ ಮಂಚ, ಭುಜದ ಮೇಲೆ ಹೊತ್ತಿಕೊಂಡು ಹೋಗಬೇಕು. ನಿಮ್ಮ ತಾಂಡಾಕ್ಕೆ ʼರಸ್ತೆ ಮಂಜೂರುʼ ಆಗಿದೆ ಹಲವು ವರ್ಷಗಳಿಂದ ಕೇಳಿ ಸೋತು ಹೋಗಿದ್ದೇವೆ. ಈ ತಾಂಡಾಕ್ಕೆ ದಾರಿ ಯಾವುದಯ್ಯಾ ಎಂಬಂತಾಗಿದೆʼ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ(ದೇ) ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವಾಡೆನ್‌ಬಾಗ್ ಎಂಬ ಪುಟ್ಟ ತಾಂಡಾದ ನಿವಾಸಿಯೊಬ್ಬರು ಈ ಮೇಲಿನಂತೆ ಹೇಳುವಾಗ ಒಡಲಲ್ಲಿ ಸಂಕಟ, ಆಕ್ರೋಶ ಎದ್ದು ಕಾಣುತ್ತಿತ್ತು.
ವಡಗಾಂವ(ದೇ)-ಬೀದರ್ ಮುಖ್ಯ ರಸ್ತೆಯಿಂದ 1 ಕಿ.ಮೀ. ದೂರದಲ್ಲಿದೆ ಈ ತಾಂಡಾ. ವಡಗಾಂವದಿಂದ ಮೂರ್ನಾಲ್ಕು ಕಿ.ಮೀ ದೂರದಲ್ಲಿರುವ ಈ ತಾಂಡಾದಲ್ಲಿ 35-40 ಮನೆಗಳು, ಸುಮಾರು 200ಕ್ಕೂ ಹೆಚ್ಚು ಜನರು ವಾಸಿಸುತ್ತಾರೆ. ಇಲ್ಲಿ ಅಂಗನವಾಡಿ ಹಾಗೂ 1ರಿಂದ 5ನೇ ತರಗತಿವರೆಗೆ ಪ್ರಾಥಮಿಕ ಶಾಲೆ ಇದೆ. ಮುಂದಿನ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ವಡಗಾಂವ, ಔರಾದ್ ಹಾಗೂ ಬೀದರ್ ನಗರಕ್ಕೆ ತೆರಳುತ್ತಾರೆ. ಈ ದಾರಿಯಲ್ಲಿ ಬೇಸಿಗೆ, ಚಳಿಗಾಲದಲ್ಲಿ ಹೇಗಾದರೂ ನಡೆದು ಹೋಗಬಹುದು, ಆದರೆ ಮಳೆಗಾಲದಲ್ಲಿ ಇಲ್ಲಿನ ಜನರ ಸಂಕಟ ಹೇಳತೀರದು.

ʼಸುಮಾರು ಆರು ದಶಕದಿಂದ ಈ ತಾಂಡಾದಲ್ಲಿ ವಾಸಿಸುತ್ತೇನೆ, ನಮ್ಮ ತಾಂಡಾ ಡಾಂಬಾರು ರಸ್ತೆಯೇ ಕಂಡಿಲ್ಲ. ಶಾಲಾ-ಕಾಲೇಜು, ಆಸ್ಪತ್ರೆ ಸೇರಿದಂತೆ ಇತರೆ ಕೆಲಸ ಕಾರ್ಯಗಳಿಗೆ ತೆರಳುವುದು ದುಸ್ತರವಾಗಿದೆ. ದಾರಿ ಮಧ್ಯೆ ಇರುವ ಹಳ್ಳ ದಾಟಿಯೇ ತಾಂಡಾಕ್ಕೆ ಹೋಗುವುದು ಅನಿವಾರ್ಯ. ಹೀಗಾಗಿ ಹೆಚ್ಚಿನ ಮಳೆಯಾದರೆ ಹಳ್ಳ ದಾಟಿ ಹೋಗಲಾರದೆ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಮನೆಯಲ್ಲೇ ಇರಬೇಕಾಗುತ್ತದೆʼ ಎಂದು ದೂರುತ್ತಾರೆ.
ʼಇಂಥಾ ತಕ್ಲೀಪ್ ಬೇರೆ ಯಾರಿಗೂ ಇಲ್ಲ ನೋಡ್ರೀ, ಹೆಚ್ಚಿಗಿ ಮಳಿಯಾಯ್ತು ಅಂದ್ರೆ ತಾಂಡಾದಾಗ ಇದ್ದೋರ್ ಆಕಡೆ, ಬೇರೆ ಊರಿಗೆ ಹೋದವದ್ರು ಈ ಕಡೆ ಎಲ್ಲಾದ್ರೂ ಇರ್ಬೇಕ್, ಶಾಸಕ, ಸಂಸದ, ಮಂತ್ರಿಗಳಿಗೆ ಹೇಳಿದ್ರೂ ನಮ್ ತಾಂಡಾಕ್ಕ ಎಲ್ರೂ ಬೇಗರ್ಜಿ ಮಾಡ್ಲಾತಾರ್, ನಮ್ಗ್ ರೋಡ್ ಮಾಡಿ ಕೂಡ್ರೀʼ ಅಂತ ಅಳಲು ತೋಡಿಕೊಳ್ಳುತ್ತಾರೆ ತಾಂಡಾದ ರೈತ ಮಹಿಳೆ.
ʼರಸ್ತೆ ಬೇಕ್ರೀʼ ಅಂತಾರೆ ವಿದ್ದಾರ್ಥಿಗಳು :
ʼನಮ್ಮ ತಾಂಡಾದಿಂದ ಶಾಲಾ-ಕಾಲೇಜಿಗೆ ಸುಮಾರು 15 ವಿದ್ಯಾರ್ಥಿಗಳು ಬೇರೆಡೆ ಹೋಗುತ್ತೇವೆ. ರಸ್ತೆ ಇಲ್ಲದ ಕಾರಣ ಬಸ್ ವ್ಯವಸ್ಥೆಯೂ ಇಲ್ಲ, ಮಳೆಗಾಲದಲ್ಲಿ ದಿನಾಲೂ ಕೆಸರುಗದ್ದೆಯಲ್ಲಿ ನಡೆದು ತೆರಳಬೇಕಾಗುತ್ತದೆ. ಅಧಿಕ ಮಳೆಯಾದರೆ ಹಳ್ಳ ಉಕ್ಕಿ ಹರಿಯುವ ಕಾರಣ ಅಂದು ಯಾರೊಬ್ಬರೂ ಶಾಲಾ-ಕಾಲೇಜಿಗೆ ಹೋಗುವುದಿಲ್ಲ. ನಮ್ಮ ತಾಂಡಾಕ್ಕೆ ಉತ್ತಮ ರಸ್ತೆ ಹಾಗೂ ಬಸ್ ಸೌಲಭ್ಯ ಮಾಡಿಸಿದರೆ ಎಲ್ಲರಿಗೂ ಅನುಕೂಲ ಆಗುತ್ತದೆʼ ಎಂದು ತಾಂಡಾದ ವಿದ್ಯಾರ್ಥಿ ಶ್ರೀನಿವಾಸ ಅವಲತ್ತುಕೊಂಡಿದ್ದಾರೆ.

ʼಮೊದಲು ಬರೀ ಕಾಲುದಾರಿ ಇತ್ತು. ಈ ಹಿಂದೆ ಕಂದಾಯ ಸಚಿವ ಆರ್.ಅಶೋಕ ಅವರು ವಡಗಾಂವ ಗ್ರಾಮದಲ್ಲಿ ವಾಸ್ತವ್ಯ ಕಾರ್ಯಕ್ರಮದ ನಂತರ ಫಾರ್ಮೇಶನ್ ರಸ್ತೆ ಕಂಡಿತ್ತು. ಈಗ ಅದೂ ಸಹ ಮಳೆಗೆ ಸಂಪೂರ್ಣ ಹಾಳಾಗಿ ಮೊದಲಿನಂತಾಗಿದೆ. ಈಗ ತಾಂಡಾ ಹೋಗಲಾಕ್ ರೋಡ್ ಇಲ್ಲ, ಭಾಳ್ ಪರೇಶಾನ್ ಆಗಿದೇವು, ಅಧಿಕಾರಿಗಳು, ಜನಪ್ರತಿನಿಧಿಗಳು ಎಲ್ಲರೂ ಥೋಡೆ ದಯಾ ತೋರಿ ನಮ್ಗ್ ರೋಡ್ ಮಾಡಿ ಕೊಟ್ರೆ ಭಾಳ್ ಪುಣ್ಯ ಬರ್ತುದ್ʼ ಅಂತ ತಾಂಡಾದ 81 ವರ್ಷದ ಅಜ್ಜ ಆಗ್ರಹಿಸುತ್ತಾರೆ.
ದೇಶಕ್ಕೆ ಸ್ವಾತಂತ್ರ್ಯ ದೊರೆತು 78 ವರ್ಷಗಳೇ ಉರುಳಿದರೂ ಈ ತಾಂಡಾ ನಿವಾಸಿಗಳಿಗೆ ಕನಿಷ್ಠ ಮೂಲ ಸೌಕರ್ಯ ದಕ್ಕದೇ ಇರುವುದು ದುರಂತವೇ ಸರಿ. ಗ್ರಾಮೀಣ ಭಾಗದ ಸರ್ವಾಂಗೀಣ ವಿಕಾಸಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳು ಹಲವು ಯೋಜನೆಗಳು ಜಾರಿಗೊಳಿಸಿವೆ. ಅಲ್ಲದೆ, ಮೂಲ ಸೌಕರ್ಯಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ವಿಶೇಷ ಅನುದಾನ ಹರಿದು ಬರುತ್ತಿದೆ. ಆದರೂ ಜನರಿಗೆ ಅಗತ್ಯ ಸೌಲಭ್ಯ ದಕ್ಕುತ್ತಿಲ್ಲಂದ್ರೆ ಇಚ್ಚಾಶಕ್ತಿ ಕೊರತೆ, ನಿರ್ಲಕ್ಷ್ಯವೇ ಎಂಬುದರಲ್ಲಿ ಎರಡು ಮಾತಿಲ್ಲ. ಈ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿ, ಮಂತ್ರಿಯಾಗಿದ್ದ ಹಾಲಿ ಶಾಸಕ ಪ್ರಭು ಚವ್ಹಾಣ ಅವರ ಅವಧಿಯಲ್ಲಿ ಈ ತಾಂಡಾ ರಸ್ತೆ ಕಾಣದೇ ಇರುವುದು ವಿಪರ್ಯಾಸ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ.
ಈಚೆಗೆ ತಾಲೂಕಿನಲ್ಲಿ ಮಳೆಯಾದ ವೇಳೆ ರಸ್ತೆ ಸಂಪೂರ್ಣ ಹದಗೆಟ್ಟು ಓಡಾಡಲು ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಸಮಸ್ಯೆ ಹಿನ್ನೆಲೆ ಆವಾಗ ಮೂರ್ನಾಲ್ಕು ದಿನ ಶಾಲೆಗೆ ಶಿಕ್ಷಕರೂ ಸಹ ಬರಲಿಲ್ಲ. ಇನ್ನು ದ್ವಿಚಕ್ರ ಇರುವವರು ಹಳ್ಳ ದಾಟಿ ಹೋಗಲಾಗದೆ ನಡು ರಸ್ತೆಯಲ್ಲೇ ಬೈಕ್ ನಿಲ್ಲಿಸಿ ರಾತ್ರಿ ಮನೆಗೆ ಹೋಗುತ್ತಾರೆ. ಇಂತಹ ದುರ್ಗತಿಯಲ್ಲೇ ಜೀವನ ಸಾಗಿಸುತ್ತಿದ್ದೇವೆ. ಯಾರೋಬ್ಬರೂ ನಮ್ಮ ಗೋಳು ಕೇಳುತ್ತಿಲ್ಲ. ಸ್ಥಳೀಯ ಶಾಸಕ ಪ್ರಭು ಚವ್ಹಾಣ ಅವರು ರಸ್ತೆ ಮಂಜೂರಾಗಿದೆ ಅಂತ ಭರವಸೆ ನೀಡಿದ್ದಾರೆ. ಅದು ಯಾವಾಗ ಆಗುತ್ತೋ ದೇವರೇ ಬಲ್ಲ ಎಂಬುದು ತಾಂಡಾ ಜನರ ಒಡಲ ಸಂಕಟವಾಗಿದೆ.

ಈ ಕುರಿತು ಔರಾದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್ ʼಈದಿನ.ಕಾಮ್ʼ ಜೊತೆಗೆ ಮಾತನಾಡಿ, ʼನಾನು ಹೊಸದಾಗಿ ಬಂದಿರುವೆ. ದೇಶ 79ನೇ ಸ್ವಾತಂತ್ರ್ಯ ಉತ್ಸವ ಕಂಡರೂ ರಸ್ತೆ ಕಾಣದ ತಾಂಡಾ ಇರುವ ಬಗ್ಗೆ ನನ್ನ ಗಮನಕ್ಕೆ ಇಲ್ಲ. ಕೆಕೆಆರ್‌ಡಿಬಿ ಯೋಜನೆಯಡಿ ರಸ್ತೆ ಮಾಡಲು ಅವಕಾಶ ಇದೆ. ರಸ್ತೆ ಮಂಜೂರಾತಿ ಬಗ್ಗೆ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುವೆʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಮಳೆ ಅಬ್ಬರ : ಮೂರು ದಿನಗಳಲ್ಲಿ 138 ಮನೆಗಳಿಗೆ ಹಾನಿ, 7,775 ಹೆಕ್ಟೇರ್ ಬೆಳೆ ನಾಶ!
2025ರ ಮೇ ತಿಂಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆ(ಕೆಕೆಆರ್‌ಡಿಬಿ) ಎಸ್‌ಸಿಪಿ ಉಪಯೋಜನೆಯಡಿ ಮಹಾರಾಜವಾಡಿ ತಾಂಡಾದಿಂದ ವಾಡೆನ್‌ಬಾಗ್ ತಾಂಡಾವರೆಗೆ ರಸ್ತೆ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ಪಿಆರ್‌ಇ ಇಲಾಖೆ ಇಂಜಿನಿಯರ್‌ರೊಬ್ಬರು ʼಈದಿನʼಕ್ಕೆ ಮಾಹಿತಿ ನೀಡಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.