“ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂತಿದ್ದೇನೆ ಎಂದಿದ್ದ ವ್ಯಕ್ತಿಯನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಎಸ್‌ಐಟಿಯ ತನಿಖೆ ಸಂಪೂರ್ಣ ಆಗುವವರೆಗೂ ಯಾವ ಮಾಹಿತಿಯೂ ನೀಡುವುದಕ್ಕೆ ಬರುವುದಿಲ್ಲ. ಬಂಧನ ಆಗಿರುವುದಂತೂ ಖಚಿತ. ನಮ್ಮ ಸರ್ಕಾರವು ಸತ್ಯವನ್ನು ಹೊರತರುವುದಕ್ಕಾಗಿಯೇ ಎಸ್‌ಐಟಿಯನ್ನು ರಚಿಸಿದ್ದೇವೆ” ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸಾಕ್ಷಿ ದೂರುದಾರನ ದೂರು ಆಧರಿಸಿಯೇ ನಾವು ಎಸ್‌ಐಟಿಯನ್ನು ರಚಿಸಿದ್ದೇವೆ. ಸದ್ಯ ಎಸ್‌ಐಟಿ ತನಿಖೆ ಮುಂದುವರಿದಿದೆ. ತನಿಖೆ ಸಂಪೂರ್ಣವಾಗಿ ಮುಗಿಯುವವರೆಗೆ ಯಾವ ಮಾಹಿತಿಯನ್ನೂ ಹಂಚಿಕೊಳ್ಳಲು ಸಾಧ್ಯವಿಲ್ಲ. ಜೊತೆಗೆ ಅದರ ಬಗ್ಗೆ ಯಾವ ನಿರ್ಣಯವೂ ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.
“ಇದರ ಹಿಂದೆ ದೊಡ್ಡ ಜಾಲ ಇದೆ ಎಂಬ ಬಗ್ಗೆಯೂ ಆರೋಪ ಕೇಳಿಬಂದಿದೆ. ಇದನ್ನೂ ಕೂಡ ಪತ್ತೆಯಾಗಬೇಕಲ್ಲವೇ? ಜಾಲವಿದೆಯೇ? ಇಲ್ಲವೇ ಎಂಬ ಬಗ್ಗೆಯೂ ವರದಿ ಬಂದ ಬಳಿಕವಷ್ಟೇ ನನಗೆ ಉತ್ತರಿಸಲು ಸಾಧ್ಯ. ಅಲ್ಲಿಯವರೆಗೂ ಊಹಾಪೋಹಾಗಳು ಮಾತ್ರ ಇರುತ್ತದೆ” ಎಂದು ಗೃಹ ಸಚಿವರು ತಿಳಿಸಿದರು.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರದೇಶದಲ್ಲಿ ಮೃತದೇಹ ಹೂತು ಹಾಕಿದ ಪ್ರಕರಣ: ಸಾಕ್ಷಿ ದೂರುದಾರನ ಬಂಧನ
ದೂರುದಾರನ ಬಂಧನದಿಂದ ಎಸ್‌ಐಟಿ ತನಿಖೆ ನಿಲ್ಲುತ್ತದೆ ಎಂಬುದರ ಬಗ್ಗೆ ಈಗ ಹೇಳುವುದಕ್ಕೆ ಸಾಧ್ಯವಿಲ್ಲ. ಸುಜಾತ ಭಟ್ ಅವರ ಪ್ರಕರಣದ ಬಗ್ಗೆಯೂ ಎಸ್‌ಐಟಿ ತನಿಖೆ ನಡೆಸುತ್ತಿದೆ. ಹಾಗಾಗಿ, ಯಾವುದೇ ವಿಚಾರವನ್ನು ಈಗ ಹೇಳುವುದಕ್ಕೆ ಸಾಧ್ಯವಿಲ್ಲ. ಎಲ್ಲ ಮಾಹಿತಿಯನ್ನು ಹಂಚಿಕೊಂಡಲ್ಲಿ ತನಿಖೆಗೆ ತೊಡಕಾಗುತ್ತದೆ. ಬಿಜೆಪಿಯವರು ಆರೋಪ ಮಾಡುತ್ತಲೇ ಇರುತ್ತಾರೆ. ಬೇರೆ ಬೇರೆಯವರ ಹೇಳಿಕೆಗಳನ್ನೂ ಗಮನಿಸಿದ್ದೇನೆ. ಎಲ್ಲ ಹೇಳಿಕೆಗಳ ಆಧಾರದ ಮೇಲೆ ನಾವು ಯಾವ ನಿರ್ಣಯವೂ ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದು ಪರಮೇಶ್ವರ್ ತಿಳಿಸಿದ್ದಾರೆ.
“ಸಾಕ್ಷಿ ದೂರುದಾರನನ್ನು ಸಂಶಯದಿಂದ ಬಂಧಿಸಲಾಗಿದೆಯೇ ಅಥವಾ ಯಾವ ಸೆಕ್ಷನ್‌ಗಳ ಅಡಿಯಲ್ಲಿ ವಶಕ್ಕೆ ಪಡೆದಿದ್ದಾರೆ ಎಂಬುದು ಎಲ್ಲವೂ ಎಸ್‌ಐಟಿ ತನಿಖೆಗೆ ಬಿಟ್ಟದ್ದು. ಬಂಧಿಸಿರುವುದಂತೂ ಖಚಿತ. ಸತ್ಯವನ್ನು ಹೊರತರುವುದಷ್ಟೇ ಎಸ್‌ಐಟಿ ಕೆಲಸ. ದೂರುದಾರನ ಮಂಪರು ಪರೀಕ್ಷೆ ಮಾಡಬೇಕೋ ಬೇಡವೋ ಎಂಬುದು ಎಸ್‌ಐಟಿ ಮುಖ್ಯಸ್ಥರ ಜವಾಬ್ದಾರಿ” ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
