ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಲ್ಲಿ ಆಗಸ್ಟ್ 22ರ ಶುಕ್ರವಾರದಂದು ಅಮ್ಮ ಎಜುಕೇಷನಲ್ ಅಂಡ್ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ತನ್ನ ಮೊದಲನೇ ವರ್ಷದ ವಾರ್ಷಿಕೋತ್ಸವ ಆಚರಿಸಿತು. ವಾರ್ಷಿಕೋತ್ಸವದ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿತು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಗೊಳ್ಳು ಶ್ರೀನಿವಾಸ್ ಮಾತನಾಡಿ, “ಸಾಮಾಜಿಕ ಕಳಕಳಿಯೊಂದಿಗೆ ಟ್ರಸ್ಟ್ ಆರಂಭವಾಗಿ ಇಂದಿಗೆ ಒಂದು ವರ್ಷ ತುಂಬುತ್ತಿದೆ. ಸದಸ್ಯರ ಸಹಕಾರದಿಂದ ಈವರೆಗೂ ವಿವಿಧ ಸಾಮಾಜಿಕ ಸೇವೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಶೈಕ್ಷಣಿಕ ನೆರವಿನ ಜತೆಗೆ ಪರಿಸರ ಸಂರಕ್ಷಣೆ ಮತ್ತು ಆರೋಗ್ಯ ಸೇವೆಗಳಿಗೂ ಒತ್ತು ನೀಡಲಾಗಿದೆ” ಎಂದರು.
“ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿ ಹಾಗೂ ಕ್ರೀಡಾ ಸಾಮಗ್ರಿ ವಿತರಿಸಲಾಗಿದೆ. ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 100 ಸಾಧಕರಿಗೆ ಸನ್ಮಾನ ಸಮಾರಂಭವನ್ನೂ ಕೂಡ ಏರ್ಪಡಿಸಲಾಗಿದೆ. ಈಗ ವಾರ್ಷಿಕೋತ್ಸವದ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಜೀವ ಉಳಿಸುವ ಪುಣ್ಯಕಾರ್ಯದಲ್ಲಿ ಕೈಜೋಡಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ ನಗರದಲ್ಲಿ ಹೆಚ್ಚಿದ ಬೀದಿನಾಯಿಗಳ ಹಾವಳಿ: ಸೂಕ್ತ ಕ್ರಮಕ್ಕೆ ಎಸ್‌ಡಿಪಿಐ ಆಗ್ರಹ
ಟ್ರಸ್ಟ್ ಕಾರ್ಯದರ್ಶಿ ಗಂಗರಾಜು ಮಾತನಾಡಿ, “ಶಿಕ್ಷಣ, ಆರೋಗ್ಯ ಹಾಗೂ ಪರಿಸರ ಜಾಗೃತಿ ಕ್ಷೇತ್ರಗಳಲ್ಲಿಯೂ ಟ್ರಸ್ಟ್ ತನ್ನ ಸೇವೆಯನ್ನು ವಿಸ್ತರಿಸುತ್ತಿದೆ. ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ಶೀಘ್ರದಲ್ಲೇ ಆರೋಗ್ಯ ಶಿಬಿರವನ್ನು ಕೂಡ ಆಯೋಜಿಸಲಾಗುವುದು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಸದಸ್ಯ ಚೇತನ್ ಕುಮಾರ್ ಮತ್ತು ನವೀನ್ ಕುಮಾರ್ ಇದ್ದರು.