ಜಮ್ಮು ಕಾಶ್ಮೀರ ಮೇಘಸ್ಫೋಟ ದುರಂತದಲ್ಲಿ ಕನಿಷ್ಠ 68 ಮಂದಿ ಸಾವನ್ನಪ್ಪಿ 36 ಮಂದಿ ಕಾಣೆಯಾಗಿದ್ದಾರೆ. ಆಗಸ್ಟ್ 14ರಂದು ಕಿಶ್ತ್ವಾರ್ ಜಿಲ್ಲೆಯ ಮೇಘಸ್ಫೋಟದಿಂದಾಗಿ ಪ್ರವಾಹ ಸಂಭವಿಸಿ ಹತ್ತು ದಿನ ಕಳೆದಿದ್ದು, ಇನ್ನೂ 36 ಮಂದಿ ನಾಪತ್ತೆಯಾಗಿದ್ದಾರೆ. ಮೂರು ದಿನಗಳಿಂದ ಯಾವುದೇ ಮೃತದೇಹ ಅಥವಾ ಸಂತ್ರಸ್ತರು ಪತ್ತೆಯಾಗಿಲ್ಲ ಎನ್ನಲಾಗಿದೆ.
ಚೆಸೋಟಿ ಗ್ರಾಮದಲ್ಲಿ ಇಂದು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ 10 ನೇ ದಿನಕ್ಕೆ ತಲುಪಿದೆ ಎಂದು ಎನ್ಡಿಆರ್ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ NDRF, SDRF, ಸೇನೆ, BRO, ಪೊಲೀಸ್ ಮತ್ತು ಸರ್ಕಾರಿ ಸಂಸ್ಥೆಗಳ ತಂಡಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ. ಶ್ವಾನ ದಳಗಳು, ಇತರೆ ತಂತ್ರಜ್ಞಾನಗಳನ್ನು ಬಳಸಿಯೂ ಶೋಧ ನಡೆಯಸಲಾಗುತ್ತಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ | ಮತ್ತೆ ಮೇಘಸ್ಫೋಟ: ನಾಲ್ವರ ಸಾವು, ಆರು ಮಂದಿಗೆ ಗಾಯ
“ಚೆಸೋಟಿ ಗ್ರಾಮದಿಂದ ಹೊಳೆಯಲ್ಲಿ ಹುಡುಕಾಟವನ್ನು ನಡೆಸುತ್ತಿದ್ದೇವೆ. ದಿಢೀರ್ ಪ್ರವಾಹದಲ್ಲಿ ಶವಗಳು ಕೊಚ್ಚಿ ಹೋಗಿರಬಹುದು. ಆದರೂ ಶವಗಳು ಸಿಗಬಹುದು ಎಂಬ ಭರವಸೆಯಲ್ಲಿ ನಾವು ಹೊಳೆಯಲ್ಲಿ ಹುಡುಕಾಟವನ್ನು 40 ಕಿ.ಮೀ.ಗಳಿಗೆ ವಿಸ್ತರಿಸಿದ್ದೇವೆ. ಕಳೆದ ಮೂರು ದಿನಗಳಿಂದ ಯಾವುದೇ ಶವ ಪತ್ತೆಯಾಗಿಲ್ಲ” ಎಂದು NDRF ಅಧಿಕಾರಿ ಹೇಳಿದರು.
ಆಗಸ್ಟ್ 14ರಂದು ಚೆಸೋಟಿ ಗ್ರಾಮದಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ದಿಢೀರ್ ಪ್ರವಾಹ ಮತ್ತು ಮಣ್ಣು ಕುಸಿತ ಉಂಟಾಗಿ 68 ಮಂದಿ ಸಾವನ್ನಪ್ಪಿದ್ದಾರೆ. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗ್ರಾಮದಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ಒಂದು ಡಜನ್ಗೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಎನ್ಡಿಆರ್ಎಫ್ ಅಧಿಕಾರಿಗಳ ಪ್ರಕಾರ, ಸುಮಾರು 36 ಮಂದಿ ಇನ್ನೂ ಕಾಣೆಯಾಗಿದ್ದಾರೆ. ಈವರೆಗೆ ಕನಿಷ್ಠ 6 ಶವಗಳನ್ನು ಹೊಳೆಯಿಂದ ಹೊರತೆಗೆಯಲಾಗಿದೆ.
