ರಾಜ್ಯ ಸರ್ಕಾರ ಪಶುಪಾಲಕರ ಹಾಗೂ ಕುರಿಗಾರರ ದೌರ್ಜನ್ಯ ಕಾಯ್ದೆ ಜಾರಿಗೆ ತಂದಿರುವ ಸಂತೋಷದಲ್ಲಿ ಹುಬ್ಬಳ್ಳಿಯ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಪ್ರದೇಶ ಕುರುಬ ಸಮಾಜದ ಒಕ್ಕೂಟದ ವತಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಇದೇ ವೇಳೆ ಕುರುಬ ಸಮಾಜದ ಕುಲಶಾಸ್ತ್ರ ಅಧ್ಯಯನವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸಮಿತಿಯ ಅಧ್ಯಕ್ಷ ಸಿದ್ದಣ್ಣ ತೇಜಿ ಮಾತನಾಡಿ, ಹಲವಾರು ವರ್ಷಗಳಿಂದ ಕುರಿಗಾರರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿತ್ತು. ಕುರಿ ಮೇಯಿಸುವ ಸಂದರ್ಭದಲ್ಲಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ನಿರಂತರವಾಗಿ ಕುರಿ ಕಳುವಾದರೂ ಪೊಲೀಸ್ ಇಲಾಖೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಕುರಿಗಳು ಸತ್ತರೂ ಸರಕಾರ ಸೂಕ್ತವಾದ ಪರಿಹಾರ ಧನ ಕೊಡುತ್ತಿರಲಿಲ್ಲ. ಕುರಿಗಾರರ ಕೊಲೆಯಾದರೂ ಸ್ಪಂದಿಸುತ್ತಿರಲಿಲ್ಲ. ಕುರಿಗಾರರು ಚಳಿ, ಮಳೆ ಬಿಸಿಲು ಎನ್ನದೇ ವರ್ಷವುದಕ್ಕು ಅಡಿವಿಗಳಲ್ಲಿ ಕುರಿ ಕಾಯುತ್ತಿದ್ದಾರೆ. ಅವರಿಗೆ ರಕ್ಷಣೆ, ವಿಮೆ ಬೇಕಾಗಿತ್ತು. ಕುರಿಗಾರರಿಗೆ, ಕುರಿಗಳಿಗೆ ಔಷಧ ಬೇಕಾಗಿತ್ತು, ಅವರ ಮಕ್ಕಳಿಗೆ ಶಿಕ್ಷಣ ಬೇಕಾಗಿತ್ತು. ವಿಮಾ ಕಂಪನಿಗಳು ಸರಿಯಾಗಿ ವಿಮೆ ತುಂಬಿದರೂ ಸರಿಯಾಗಿ ವಿಮೆ ಕೊಡುತ್ತಿರಲಿಲ್ಲ.
2024ರಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಬಜೆಟ್ ಅಧಿವೇಶನದಲ್ಲಿ ಪಶುಪಾಲಕರ ದೌರ್ಜನ್ಯ ಕಾಯ್ದೆ ಜಾರಿಗೆ ತರುವುದಾಗಿ ಅಧಿವೇಶನದಲ್ಲಿ ಹೇಳಿ ಸರಕಾರ ಮರೆತು ಹೋಗಿತ್ತು. ಪ್ರದೇಶ ಕುರುಬ ಸಮಾಜ ಒಕ್ಕೂಟ ಹತ್ತಾರು ಜಿಲ್ಲೆಗಳಲ್ಲಿ ಮತ್ತೆ ನಿರಂತರ ಹೋರಾಟ ಮಾಡಿದ ಮೇಲೆ ಇದೀಗ ಮುಖ್ಯಮಂತ್ರಿಗಳು ಹೋರಾಟಗಾರರಿಗೆ ಕರೆಯಿಸಿ ಕಾನೂನು ಜಾರಿಗೆ ತರುತ್ತೇನೆಂದು ಹೇಳಿದ್ದಾರೆ. ಹಾಗೆಯೇ ಕುರುಬ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ನಾಲೈದು ದಶಕಗಳಿಂದ ಹೋರಾಟ ಮಾಡುತ್ತಿದ್ದು, ರಾಜ್ಯ ಸರಕಾರ ಇನ್ನಾದರೂ ಕುಲಶಾಸ್ತ್ರ ಅಧ್ಯಯನವನ್ನು ಕೇಂದ್ರ ಸರಕಾರಕ್ಕೆ ಕಳುಹಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರವಿರಾಜ ಕಂಬಳಿ, ಡಾ. ಬಸವರಾಜ ಹೊರಕೇರಿ, ಸಿಂಧೂರ ಕರಿಗಾರ, ಸಂತೋಷ ಡೊಳ್ಳಿನ, ಎಚ್.ಎಫ್. ಇಬ್ರಾಹಿಂಪೂರ, ನವೀನ ಜಂಗಣ್ಣವರ, ಹೇಮಂತ ಜಾಂಗನವರ, ಮಂಜುನಾಥ ಇದ್ದರು.