ಯುವತಿಯೊಬ್ಬಳು ರಸ್ತೆಯಲ್ಲಿ ನಿಂತು ಬೈಕ್ ನಲ್ಲಿ ಬರುವವರನ್ನು ಟಾರ್ಗೆಟ್ ಮಾಡಿ ಸ್ಪ್ರೇ ಮಾಡಿ ಅರೆಪ್ರಜ್ಞೆ ಆದ ತಕ್ಷಣ ಚಿನ್ನದಸರ ಕದ್ದೊಯ್ದ ಘಟನೆ ತಾಲ್ಲೂಕಿನ ಪತ್ರೆ ಮತ್ತಿಘಟ್ಟ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ತ್ಯಾಗಟೂರು ನಿವಾಸಿ ಶಿವಾನಂದ್ ಅವರು ಇದೇ ತಿಂಗಳ 12 ರಂದು ರಾತ್ರಿ 9.38 ಗಂಟೆ ಸಮಯದಲ್ಲಿ ಗುಬ್ಬಿಯಿಂದ ಮದುವೆ ಮುಗಿಸಿ ತಮ್ಮೂರಿಗೆ ವಾಪಸ್ ತೆರಳುವಾಗ ನಡೆದು ಹೋಗುತ್ತಿದ್ದ ಯುವತಿ ಸ್ಪ್ರೇ ಮಾಡಿದ ತಕ್ಷಣದಲ್ಲೇ ಅರೆ ಪ್ರಜ್ಞೆಗೆ ಜಾರಿದ್ದರು. ಕೊರಳಲಿದ್ದ ಸುಮಾರು 24 ಗ್ರಾಂ ಚಿನ್ನದ ಸರ ಎಗರಿಸಿ ಸ್ಕೂಟಿನಲ್ಲಿ ಯುವತಿ ಯುವಕನೊಬ್ಬನ ಜೊತೆ ಎಸ್ಕೇಪ್ ಆಗಿದ್ದಾರೆ.
ಹೆದ್ದಾರಿಯ ಪಕ್ಕದ ಸರ್ವಿಸ್ ರಸ್ತೆಯ ಉಬ್ಬುಗಳು ಖದೀಮರಿಗೆ ವರದಾನವಾಗಿದೆ. ಬೈಕ್ ಸವಾರರು ಬ್ರೇಕ್ ಹಿಡಿದ ತಕ್ಷಣ ಸ್ಪ್ರೇ ಮಾಡುತ್ತಾರೆ. ನಡೆದು ಹೊರಟಿದ್ದ ಯುವತಿ ಕೊಂಚ ದೂರದಲ್ಲಿ ಬೈಕ್ ಜೊತೆ ನಿಂತಿದ್ದ ಯುವಕ ಇಬ್ಬರ ಕೈಚಳಕ ಹೆದ್ದಾರಿ ಸಿಸಿ ಕ್ಯಾಮೆರಾದಲ್ಲಿ ಸಿಕ್ಕಿದೆ ಎನ್ನುತ್ತಾರೆ ಸರ ಕಳೆದುಕೊಂಡ ಶಿವಾನಂದ್.
ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಕಾದಿದ್ದು ಬೈಕ್ ಸವಾರರನ್ನು ದೋಚುವ ತಂಡ ತಾಲ್ಲೂಕಿನ ಕೆಲ ಗ್ರಾಮಗಳ ಗೇಟ್ ಆಯ್ಕೆ ಮಾಡಿಕೊಂಡಿದ್ದಾರೆ. ತ್ಯಾಗಟೂರು ಗೇಟ್ ಬಳಿ ಇತ್ತೀಚಿಗೆ ಕಾರು ಅಡ್ಡ ಹಾಕುವ ಪ್ರಯತ್ನ ನಡೆಸಿದ್ದರು ಎಂದು ಸ್ಥಳೀಯರು ಚರ್ಚೆ ಮಾಡುತ್ತಿದ್ದಾರೆ. ಈ ದರೋಡೆಕೋರರ ತಂಡಗಳಿಂದ ಸಾರ್ವಜನಿಕರ ಕಾಪಾಡುವ ಕೆಲಸ ಪೊಲೀಸರು ಮಾಡಬೇಕಿದೆ. ಚುರುಕಿನ ಕಾರ್ಯಾಚರಣೆ ನಡೆಸುವರೇ ಕಾದು ನೋಡಬೇಕಿದೆ.