ಈ ದಿನ ಸಂಪಾದಕೀಯ | ಇದು ಹುಸಿ ದೇಶಭಕ್ತರ ಮೋದಿ ಕಾಲ; ಗಾಂಧಿ ಅವಮಾನಿಸುವ ಕಾಲ

Date:

Advertisements
ಮಣಿಪುರ ಹೊತ್ತಿ ಉರಿಯುತ್ತಿದೆ, ಹರಿಯಾಣದಲ್ಲಿ ಅಲ್ಪಸಂಖ್ಯಾತರ ಮನೆಗಳು ನೆಲಸಮವಾಗುತ್ತಿವೆ. ದಲಿತರ ಮೇಲಿನ ದೌರ್ಜನ್ಯಗಳು ಮಿತಿ ಮೀರುತ್ತಿವೆ. ಬಡವ-ಶ್ರೀಮಂತರ ಅಂತರ ಹೆಚ್ಚಾಗುತ್ತಿದೆ- ಇದಾವುದಕ್ಕೂ ಉತ್ತರಿಸದ ಪ್ರಧಾನಿ ಮೋದಿಯವರು, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ತಿರಂಗ ಹಾರಿಸಿ ಎನ್ನುತ್ತಿದ್ದಾರೆ- ಇದು ಮೋದಿ ಕಾಲ

77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷ ರೀತಿಯಲ್ಲಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಅಡಿಯಲ್ಲಿ ದೇಶದಾದ್ಯಂತ ಪ್ರತಿ ಮನೆಯಲ್ಲಿ ಏಳು ದಿನಗಳವರೆಗೆ ರಾಷ್ಟ್ರಧ್ವಜವನ್ನು ಹಾರಿಸುವ ‘ಹರ್ ಘರ್ ತಿರಂಗ’ ಅಭಿಯಾನವನ್ನು ಸಹ ಪ್ರಾರಂಭಿಸಲಾಗಿದೆ. ಮನೆಮನೆಗೆ ತೆರಳಿ ತ್ರಿವರ್ಣ ಧ್ವಜವನ್ನು ಹಾರಿಸುವಂತೆ ಅಭಿಯಾನ ನಡೆಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆಪ್, ಫೇಸ್ ಬುಕ್, ಟ್ವಿಟರ್ ಮತ್ತು ಇನ್ಸ್ಟಾ ಗ್ರಾಂಗಳಲ್ಲಿ ತ್ರಿವರ್ಣ ಧ್ವಜದ ಡಿಪಿ ಹಾಕುವ ಮೂಲಕ ಈ ಅಭಿಯಾನವನ್ನು ಇನ್ನಷ್ಟು ಶಕ್ತಿಯುತಗೊಳಿಸುವಂತೆ ಪ್ರಧಾನಿ ಮೋದಿ ದೇಶದ ಜನರಿಗೆ ಮನವಿ ಮಾಡಿದ್ದಾರೆ.

ದೇಶಭಕ್ತಿ, ರಾಷ್ಟ್ರೀಯತೆ, ಹಿಂದೂರಾಷ್ಟ್ರ ಕಲ್ಪನೆಯ ಅಮಲಿನಲ್ಲಿ ತೇಲುತ್ತಿರುವ; ಭಾರತವನ್ನು ವಿಶ್ವಗುರುವನ್ನಾಗಿ ಮಾಡುವುದು ಮೋದಿಯಿಂದ ಮಾತ್ರ ಸಾಧ್ಯ ಎಂದು ಬಲವಾಗಿ ನಂಬಿರುವ ದೇಶಭಕ್ತ ಭಾರತೀಯರ ಪಾಲಿಗೆ ಮೋದಿಯವರ ಮನವಿ ವೇದವಾಕ್ಯ. ವ್ಯಾಪಾರಿ ಅಂಬಾನಿ ಕೃಪೆಯಿಂದ ದೇಶದ ಪ್ರಜೆಗಳ ಕೈಯಲ್ಲಿ ಮೊಬೈಲ್ ಇದೆ, ಮೋದಿಯವರ ಮನವಿಯಂತೆ ಅದರಲ್ಲಿ ತ್ರಿವರ್ಣಧ್ವಜ ಹಾರಾಡಲಿದೆ. ತಮ್ಮ ಮನೆಗಳ ಮೇಲೆ ಮತ್ತು ಮೊಬೈಲ್ ನ ಡಿಪಿಯಲ್ಲಿ ಯಾರೆಲ್ಲ ತ್ರಿವರ್ಣಧ್ವಜ ಹಾರಾಡಿಸುತ್ತಾರೋ ಅವರೆಲ್ಲ ದೇಶಭಕ್ತರು, ಹಾರಾಡಿಸದವರು ದೇಶದ್ರೋಹಿಗಳು. ಇದು ಮೋದಿ ಭಾರತ.

ರಾಷ್ಟ್ರಧ್ವಜವೆಂದರೆ ಅದು ಕೇವಲ ಮೂರು ಬಣ್ಣಗಳ ಧ್ವಜವಲ್ಲ; ನಮ್ಮ ಹಿರಿಯರ ತ್ಯಾಗ-ಬಲಿದಾನಗಳ, ಶಾಂತಿ-ಸಮೃದ್ಧಿಗಳ, ಬಹುತ್ವ-ಭ್ರಾತೃತ್ವಗಳ ಸಂಕೇತ. ಅದು ಗಾಂಧಿ ಕನಸಿನ ರಾಷ್ಟ್ರಧ್ವಜ. ಅದು ಖಾದಿಯಿಂದ, ಕೈ ಮಗ್ಗದಿಂದ ತಯಾರಾಗಬೇಕು, ಶ್ರಮಿಕರ ಬದುಕಿಗೆ ದಾರಿಯಾಗಬೇಕು ಎಂಬುದು ಗಾಂಧಿ ಆಶಯವಾಗಿತ್ತು. ದೇಶದ ವಿಭಿನ್ನ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ಧ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವೇ ನಮ್ಮ ರಾಷ್ಟ್ರದ್ವಜವೆಂಬುದು ಗಾಂಧಿ ಕನಸಾಗಿತ್ತು. ಆದರೆ ಇಂದು ಗಾಂಧಿಯ ಆಶಯವನ್ನು, ಖಾದಿಯಿಂದ ತಯಾರಾದ ಧ್ವಜವನ್ನು ಕಡೆಗಣಿಸಿ, ಅದರ ಬದಲಿಗೆ ಚೀನಾದ ಪ್ಲಾಸ್ಟಿಕ್ ಧ್ವಜ ಹಾರಾಡುತ್ತಿವೆ. ಸ್ವಾತಂತ್ರ್ಯೋತ್ಸವದ ಮರುದಿನವೇ ಅವು ಮಣ್ಣು ಪಾಲಾಗಲಿವೆ. ಈ ಮೂಲಕ ರಾಷ್ಟ್ರಧ್ವಜದ ಹಿಂದಿನ ಆಶಯಗಳನ್ನೂ ಮಣ್ಣು ಪಾಲು ಮಾಡಲಾಗುತ್ತಿದೆ.

Advertisements

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ದೇಶದ್ರೋಹಿಗಳಿಗೆ ಬಲಿಯಾದ ಮಹಾತ್ಮಾ ಗಾಂಧಿಯನ್ನು ಅಡಿಗಡಿಗೂ ಅವಮಾನಿಸುವುದು ಇಂದು ಅತಿಯಾಗುತ್ತಿದೆ. ಅಂತಹವರಿಗೆ ಮಣೆ, ಮನ್ನಣೆ ಸಿಗುತ್ತಿದೆ. ಅದಕ್ಕೊಂದು ಉತ್ತಮ ಉದಾಹರಣೆಯಾಗಿ, ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ವಿಕ್ರಂ ಸಂಪತ್ ಎಂಬ ವಕ್ರ ಇತಿಹಾಸಕಾರನನ್ನು ನೋಡಬಹುದು. ಈತ 2008ರಲ್ಲಿ ಮೈಸೂರು ಡೈನಾಸ್ಟಿ ಮತ್ತು 2013ರಲ್ಲಿ ಗೋಹರ್ ಜಾನ್ ಬಗ್ಗೆ ಕೃತಿ ರಚಿಸಿ, ಪ್ರಶಂಸೆಗೊಳಗಾದ. ಆದರೆ 2013ರಲ್ಲಿ ಕೇಂದ್ರದಲ್ಲಿ ಮೋದಿಯವರು ಅಧಿಕಾರಕ್ಕೇರುತ್ತಿದ್ದಂತೆ, ಈತನ ನಡೆ ಮತ್ತು ನುಡಿ ಬದಲಾದವು. ಕ್ಷಮಾ ಗಿರಾಕಿ ಸಾವರ್ಕರ್‌ರನ್ನು ‘ವೀರʼನ ಪಟ್ಟಕ್ಕೇರಿಸಿ ಕೃತಿ ರಚಿಸಿದ. ಸಾವರ್ಕರ್ ಉಗ್ರ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿ ಹತ್ಯೆಯಲ್ಲಿ ಆತನ ಪಾತ್ರವಿಲ್ಲ ಎಂದ. ಇದು ಬಲಪಂಥೀಯರಿಗೆ ಬಲ ತುಂಬಿತು, ಗೋಧಿ ಮೀಡಿಯಾ ಈತನಿಗೆ ಅಗತ್ಯಕ್ಕಿಂತ ಹೆಚ್ಚು ಪ್ರಚಾರ ನೀಡಿ ಮೆರೆಸಿತು. ಮೋದಿ ಕರೆದು ಅಪ್ಪಿಕೊಂಡಿದ್ದೂ ನಡೆದುಹೋಯಿತು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | 2 ಗಂಟೆ 10 ನಿಮಿಷಗಳ ಕ್ರೌರ್ಯ, 3 ನಿಮಿಷಗಳ ತೋರಿಕೆಯ ಕಾರ್ಯ

ಈತ ಇತ್ತೀಚೆಗೆ ಮಹಾತ್ಮಾ ಗಾಂಧಿ ಯರವಾಡ ಜೈಲಿನಲ್ಲಿದ್ದಾಗ ಬ್ರಿಟಿಷರಿಂದ ತಿಂಗಳಿಗೆ ನೂರು ರೂಪಾಯಿಗಳನ್ನು ಪಡೆಯುತ್ತಿದ್ದರು ಎಂದು ಲೆಕ್ಕದ ದಾಖಲೆಯೊಂದನ್ನು ಹರಿಬಿಟ್ಟ. ಗಾಂಧಿ ಕುರಿತು ಯಾರೂ ಎಲ್ಲಿಯೂ ಹೇಳದ ಈ ಹಸೀಸುಳ್ಳನ್ನು ದೇಶಭಕ್ತರೆಂಬ ದುರುಳರು ದೇಶದಾದ್ಯಂತ ಹಂಚುತ್ತಿದ್ದಾರೆ. ಗಾಂಧಿಯ ತ್ಯಾಗ, ಬಲಿದಾನವನ್ನೇ ಅಪಹಾಸ್ಯ ಮಾಡುತ್ತಿದ್ದಾರೆ.

ಮೊನ್ನೆ ಮಹಾರಾಷ್ಟ್ರದ ಶಿವ ಪ್ರತಿಷ್ಠಾನ ಹಿಂದೂಸ್ತಾನ್ ಸಂಘಟನೆಯ ಸಂಸ್ಥಾಪಕ ಸಂಭಾಜಿ ಭಿಡೆ ಎಂಬ ವಯೋವೃದ್ಧನೊಬ್ಬ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪಿತ ಗಾಂಧಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ. ಸಾಲದು ಎಂದು ಗಾಂಧಿ ವಂಶಸ್ಥರನ್ನೂ ನಿಂದಿಸಿದ. ಈ ಬಗ್ಗೆ ಗಾಂಧೀಜಿಯ ಮರಿಮೊಮ್ಮಗ ತುಷಾರ್ ಗಾಂಧಿ ಪುಣೆ ಪೊಲೀಸರಿಗೆ ದೂರು ಸಲ್ಲಿಸಿದರು. ಗೃಹ ಮಂತ್ರಿಗಳಿಗೂ ವಿಷಯ ಮುಟ್ಟಿಸಿದರು.

ಆಶ್ಚರ್ಯವೆಂದರೆ, ಗಾಂಧಿಯನ್ನು ಅವಮಾನಿಸಿದ ಭಿಡೆ ವಿರುದ್ಧ ಸರ್ಕಾರ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಆತನನ್ನು ಬಂಧಿಸಲೂ ಇಲ್ಲ. ಬದಲಿಗೆ ಮಹಾರಾಷ್ಟ್ರದ ಬಿಜೆಪಿ ಸರ್ಕಾರ, ಕ್ವಿಟ್ ಇಂಡಿಯಾ ದಿನದ ಸ್ಮರಣಾರ್ಥ ಕ್ರಾಂತಿ ಮೈದಾನದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ತುಷಾರ್ ಗಾಂಧಿಯನ್ನು ಬಂಧಿಸಿತು. ಇದು ಮೋದಿ ಭಾರತ.

ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಮತ್ತು ಆಡಳಿತಾರೂಢ ಬಿಜೆಪಿಯನ್ನು ವಿಮರ್ಶೆಗೆ ಅಥವಾ ಟೀಕೆಗೆ ಒಳಪಡಿಸುವವರ ವಿರುದ್ಧ ಕೇಂದ್ರದ ಕಾನೂನು ಜಾರಿ ಸಂಸ್ಥೆಗಳನ್ನು ಛೂ ಬಿಡಲಾಗುತ್ತದೆ. ಹದ್ದುಬಸ್ತಿನಲ್ಲಿ ಇರಿಸಲು ಯತ್ನಿಸಲಾಗುತ್ತದೆ. ಮುಂದುವರೆದು ಅಕ್ರಮ ಕಾಯ್ದೆಗಳಡಿಯಲ್ಲಿ ಬಂಧಿಸಿ ಸೆರೆಯಲ್ಲಿಡಲಾಗುತ್ತದೆ. ಇದು ಇತ್ತೀಚಿನ ವರ್ಷಗಳಲ್ಲಿ ದೇಶದ ಜನತೆಗೆ ಸಿಕ್ಕ ಸ್ವಾತಂತ್ರ್ಯ! ಹಾಗೆಯೇ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮಾ ಗಾಂಧಿಯ ಬಗ್ಗೆ ಯಾರು ಎಷ್ಟು ಬೇಕಾದರೂ ಲೇವಡಿ, ಗೇಲಿ, ತಮಾಷೆ, ಅವಮಾನ ಏನು ಬೇಕಾದರೂ ಮಾಡಬಹುದು. ಅವರ ಮನೆ ಮೇಲೆ ಪ್ಲಾಸ್ಟಿಕ್ ಧ್ವಜ ಹಾರಿಸಿದರೆ, ಮೊಬೈಲ್ ಡಿಪಿಯಲ್ಲಿ ತಿರಂಗದ ಚಿತ್ರ ಹಾಕಿಕೊಂಡರೆ- ಅವರು ದೇಶಭಕ್ತರು!

ಮಣಿಪುರ ಹೊತ್ತಿ ಉರಿಯುತ್ತಿದೆ, ಹರಿಯಾಣದಲ್ಲಿ ಅಲ್ಪಸಂಖ್ಯಾತರ ಮನೆಗಳು ನೆಲಸಮವಾಗುತ್ತಿವೆ. ದಲಿತರ ಮೇಲಿನ ದೌರ್ಜನ್ಯಗಳು ಮಿತಿ ಮೀರುತ್ತಿವೆ. ಬಡವ-ಶ್ರೀಮಂತರ ಅಂತರ ಹೆಚ್ಚಾಗುತ್ತಿದೆ- ಇದಾವುದಕ್ಕೂ ಉತ್ತರಿಸದ ಪ್ರಧಾನಿ ಮೋದಿಯವರು, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ತಿರಂಗ ಹಾರಿಸಿ ಎನ್ನುತ್ತಿದ್ದಾರೆ. ಇದು ಇವತ್ತಿನ ದೇಶಭಕ್ತಿ!?

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X