ದಕ್ಷಿಣ ಗಾಝಾದ ಮುಖ್ಯ ಆಸ್ಪತ್ರೆಯ ನಾಲ್ಕನೇ ಮಹಡಿಯ ಮೇಲೆ ಇಸ್ರೇಲ್ ಸೋಮವಾರ ವಾಯುದಾಳಿ ನಡೆಸಿದ್ದು, ನಾಲ್ವರು ಪತ್ರಕರ್ತರು ಸೇರಿ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ನಾಸರ್ ಆಸ್ಪತ್ರೆಯ ನಾಲ್ಕನೇ ಮಹಡಿಯ ಮೇಲೆ ಮೊದಲು ಒಂದು ಕ್ಷಿಪಣಿ ದಾಳಿ ನಡೆದಿದೆ. ರಕ್ಷಣಾ ಸಿಬ್ಬಂದಿ ಆಗಮಿಸುತ್ತಿದ್ದಂತೆ ಮತ್ತೊಂದು ಕ್ಷಿಪಣಿ ದಾಳಿ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಈ ಬಗ್ಗೆ ಇಸ್ರೇಲ್ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಇಸ್ರೇಲ್ ಪ್ರಧಾನಿ ಕಚೇರಿ ಮತ್ತು ಇಸ್ರೇಲಿ ಮಿಲಿಟರಿ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.
ಇದನ್ನು ಓದಿದ್ದೀರಾ? ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ
ಅಸೋಸಿಯೇಟೆಡ್ ಪ್ರೆಸ್‌ಗಾಗಿ ಕೆಲಸ ಮಾಡಿದ ಫ್ರೀಲ್ಯಾನ್ಸರ್ ಸೇರಿದಂತೆ ನಾಲ್ವರು ಪತ್ರಕರ್ತರೂ ಸಾವನ್ನಪ್ಪಿದ್ದಾರೆ. ಎಪಿಗಾಗಿ ಕೆಲಸ ಮಾಡುತ್ತಿದ್ದ ಫ್ರೀಲ್ಯಾನ್ಸರ್ 33 ವರ್ಷದ ಮರಿಯಮ್ ದಕ್ಕಾ ಎಂದು ಹೇಳಲಾಗಿದ್ದು, ಆಸ್ಪತ್ರೆಯ ವೈದ್ಯರು ಹಸಿವಿನಿಂದ ಮಕ್ಕಳನ್ನು ರಕ್ಷಿಸಲು ಹೆಣಗಾಡುತ್ತಿರುವ ಬಗ್ಗೆ ವರದಿ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಇನ್ನು ನಾಸರ್ ಆಸ್ಪತ್ರೆ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ತನ್ನ ಪತ್ರಕರ್ತ ಮೊಹಮ್ಮದ್ ಸಲಾಮ್ ಕೂಡ ಸೇರಿದ್ದಾರೆ ಎಂದು ಅಲ್ ಜಜೀರಾ ದೃಢಪಡಿಸಿದೆ. ಹಾಗೆಯೇ ತಮ್ಮ ಕ್ಯಾಮೆರಾಮನ್ ಹುಸಾಮ್ ಅಲ್-ಮಸ್ರಿ ಕೂಡ ಸಾವನ್ನಪ್ಪಿದ್ದಾರೆ. ಛಾಯಾಗ್ರಾಹಕ ಹತೀಮ್ ಖಲೀದ್ ಗಾಯಗೊಂಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಇಸ್ರೇಲ್-ಹಮಾಸ್ ಯುದ್ಧ ಆರಂಭವಾದ ಬಳಿಕ 22 ತಿಂಗಳ ಸಂಘರ್ಷದಲ್ಲಿ ಗಾಝಾದಲ್ಲಿ ಒಟ್ಟು 192 ಪತ್ರಕರ್ತರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅದೇ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಈವರೆಗೆ 18 ಪತ್ರಕರ್ತರು ಸಾವನ್ನಪ್ಪಿದ್ದಾರೆ ಎಂದು ಸಿಪಿಜೆ ತಿಳಿಸಿದೆ.
ಜೂನ್‌ನಲ್ಲಿ ನಾಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಯಲ್ಲಿ ಮೂವರು ಸಾವನ್ನಪ್ಪಿದರು ಮತ್ತು 10 ಮಂದಿ ಗಾಯಗೊಂಡಿದ್ದರು. ಆ ಸಂದರ್ಭದಲ್ಲಿ “ನಾವು ಜನರನ್ನು ಗುರಿಯಾಗಿಸಿ ದಾಳಿ ನಡೆಸಿದಲ್ಲ, ಹಮಾಸ್ ಉಗ್ರರ ಮೇಲೆ ದಾಳಿ ನಡೆಸಿದ್ದು” ಎಂದು ಇಸ್ರೇಲ್ ಹೇಳಿಕೊಂಡಿತ್ತು.
