ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆಗಿರುವ ಬೆಳೆ ನಷ್ಟಕ್ಕೆ ಕೂಡಲೇ ಪರಿಹಾರವನ್ನು ಬಿಡುಗಡೆ ಮಾಡಿ ಹಾಗೂ ಸಮರ್ಪಕವಾಗಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಎಐಕೆಕೆಎಂಎಸ್ ಮುಖಂಡರು ಪ್ರತಿಭಟನೆ ನಡೆಸಿದರು.
ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಅಖಿಲ ಭಾರತ ಕಿಸಾನ್ ಖೇತ್ ಮಜ್ದೂರ್ ಸಂಘ ಜಿಲ್ಲಾ ಸಮಿತಿ ಕಲಬುರಗಿ ವತಿಯಿಂದ ಪ್ರತಿಭಟನೆ ನಡೆಸಿ ಕಲಬುರಗಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಜಿಲ್ಲಾ ಅಧ್ಯಕ್ಷ ಗಣಪತರಾವ್ ಕೆ ಮಾನೆ ಮಾತನಾಡಿ, ‘ಈ ವರ್ಷ ಸತತವಾಗಿ ಸುರಿಯುತ್ತಿರುವ ಅತಿಯಾದ ಮಳೆಯಿಂದ ಉಂಟಾದ ಬೆಳೆನಷ್ಟವು ಕಳೆದ 15 ವರ್ಷಗಳಲ್ಲಿಯೇ ತೀವ್ರವಾದದ್ದಾಗಿದೆ. ಇದರ ಪರಿಣಾಮದಿಂದಾಗಿಯೇ ಮುಂಗಾರಿನಲ್ಲಿಯೇ ಕೆಲವೆಡೆ ಎರಡು ಬಾರಿ ಮತ್ತು ಇನ್ನು ಕೆಲೆವೆಡೆ ಮೂರು ಬಾರಿ ಬೀಜ ನಾಟಿ ನಷ್ಟಕ್ಕೊಳಗಾದ ರೈತರು ಆಘಾತದಲ್ಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಅತಿವೃಷ್ಟಿಯಿಂದ ಆಗಿರುವ ಹಾನಿಯ ಕುರಿತು ಗಂಭೀರವಾಗಿ ಕೃಷಿ ಭೂಮಿ ಮತ್ತು ಕಂದಾಯ ಭೂಮಿಯ ನಷ್ಟದ ಕುರಿತು ಜಂಟಿ ಸರ್ವೆಯನ್ನು ಮಾಡಲು ಸೂಚಿಸಿರುವುದನ್ನು ನಾವು ಸ್ವಾಗತಿಸುತ್ತೇವೆ’ ಎಂದು ತಿಳಿಸಿದರು.
ಜೊತೆಗೆ ಆರ್ಥಿಕವಾಗಿಯೂ ಅಪಾರ ಪ್ರಮಾಣದ ಸಾಲಗಳನ್ನು ಮಾಡಿ ಕಂಗಾಲಾಗಿರುವ ರೈತರ ಬದುಕಿಗೆ ಸರ್ಕಾರವು ಕೂಡಲೇ ಪರಿಹಾರವನ್ನು ನೀಡುವುದು ತುರ್ತಾಗಿ ಆಗಬೇಕಾದ ಕಾರ್ಯವಾಗಿದೆ ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಕಲಬುರಗಿ ಜಿಲ್ಲಾ ಸಮಿತಿಯು ಸರ್ಕಾರವನ್ನು ಆಗ್ರಹಿಸುತ್ತದೆ ಎಂದು ಹೇಳಿದರು.
‘ಇಲ್ಲಿಯವರೆಗೂ ತಿಳಿದುಬಂದಿರುವಂತೆ ಜಿಲ್ಲೆಯ ನಾನಾ ಕಡೆಗಳಲ್ಲಿ ನದಿಗಳು ತುಂಬಿ ಅಪಾಯದ ಸ್ಥಿತಿಯನ್ನು ತಲುಪಿವೆ. ರಸ್ತೆಗಳು ಹಾಳಾಗಿವೆ. ಕೆಲವು ಗ್ರಾಮಗಳು ಮತ್ತು ಹೊಲಗಳು ಜಲಾವೃತ್ತವಾಗಿವೆ. ಮನೆಗಳು ಕುಸಿದಿವೆ. ಆಫಝಲಪುರದಲ್ಲಿ ಒಬ್ಬ ಮಹಿಳೆ (55) ಸಾವನ್ನಪ್ಪಿರುವುದು ವರದಿಯಾಗಿದೆ. ಕಲಬುರಗಿ ತಾಲೂಕಿನ ಫರಹತಾಬಾದ ಹೋಬಳಿಯ ಕವಲಗಾ (ಬಿ) ಗ್ರಾಮದಲ್ಲಿ ಬಸವರಾಜ ಮೋಸಂಡಿ (35) ಎಂಬ ರೈತ ಬೆಳೆ ನಷ್ಟಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿತ್ತಾಪುರ, ಚಿಂಚೋಳಿ, ಕಮಲಾಪುರ, ಕಾಳಗಿ, ಸೇಡಂ, ಅಫಝಲಪುರ ತಾಲೂಕಿನಲ್ಲಿ ಅತಿ ಹೆಚ್ಚು ನಷ್ಟವಾಗಿದ್ದು ಪ್ರಮುಖ ಬೆಳೆಗಳಾದ ತೊಗರಿ, ಹಸಿರು ಹೆಸರು, ಕಪ್ಪು ಹೆಸರು, ಉದ್ದು, ಸೋಯಾ, ಹತ್ತಿ, ಸೂರ್ಯಪಾನ ಸಂಪೂರ್ಣ ನಾಶವಾಗಿವೆ’ ಎಂದು ತಿಳಿಸಿದರು.
‘ಇಷ್ಟಾದರೂ ಇಲ್ಲಿಯವರೆಗೆ ವಿಧಾನಸಭೆಯ ಅಧಿವೇಶನದಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಯ ಕುರಿತು ಸಮರ್ಪಕವಾದ ಚರ್ಚೆ ಆಗದೇ ಇರುವುದು, ಶಾಸಕರು ಸಹ ಈ ಹಾನಿಯ ಕುರಿತು ಗಂಭೀರವಾಗಿ ಪರಿಗಣಿಸದೇ ಇರುವುದು ಹಾಗೂ ಜಿಲ್ಲಾಡಳಿತವೂ ಕೂಡಲೇ ಯಾವುದೇ ರೀತಿಯ ಪರಿಹಾರವನ್ನು ಘೋಷಣೆ ಮಾಡದೇ ಇರುವುದು ಖೇದದ ಸಂಗತಿಯಾಗಿದೆ. ಆದ್ದರಿಂದ ಸರ್ಕಾರದ ಈ ನಡಾವಳಿಯ ಬಗ್ಗೆ ಎಐಕೆಕೆಎಂಎಸ್ ಕಲಬುರಗಿ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ’ ಎಂದರು.
‘ಕೃಷಿ ಇಲಾಖೆಯು ನೀಡಿದ ಮಾಹಿತಿ ಪ್ರಕಾರ ಕಳೆದ 5 ವರ್ಷಗಳಲ್ಲಿ ಕಲಬುರಗಿ, ಬೀದರ ಮತ್ತು ಯಾದಗಿರಿ ಜಿಲ್ಲೆಯ ಸುಮಾರು 383 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2023 ರ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ 151 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2024 ರಲ್ಲಿ ತೀವ್ರವಾದ ಬರಕ್ಕೆ 88 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಸುಮಾರು 70 ಜನ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರ ಈ ರೀತಿಯ ಆತ್ಮಹತ್ಯೆಗಳಂತಹ ಸ್ಥಿತಿಯು ಚಿಂತಾಜನಕವಾಗಿದೆ. ರೈತರ ಆತ್ಮಹತ್ಯೆಯನ್ನು ತಡೆಗಟ್ಟುವಲ್ಲಿ ಗಂಭೀರವಾದ ಮತ್ತು ಪರಿಣಾಮಕಾರಿಯಾದ ಕ್ರಮಗಳನ್ನು ಸರ್ಕಾರವು ಕೂಡಲೇ ಕೈಗೆತ್ತಿಕೊಳ್ಳಬೇಕಾಗಿದೆ’ ಎಂದು ಹೇಳಿದರು.
‘ಇಷ್ಟಾದರೂ ರೈತರು ಮತ್ತೆ ಹೊಲಗಳನ್ನು ಹಸನು ಮಾಡಿ ಕೃಷಿಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಮುಂದಿನ ಫಸಲಿಗಾಗಿ ರೈತರಿಗೆ ಹಣದ ತೀವ್ರ ಅವಶ್ಯಕತೆ ಇರುತ್ತದೆ. ಒಂದು ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 1.82 ಲಕ್ಷ ಹೆಕ್ಟೇರ್ ಭೂಮಿ ಹಾನಿಗೊಳಗಾಗಿದೆ. ಆದ್ದರಿಂದ, ಸರ್ಕಾರವು ಕೂಡಲೇ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಿ ಕೂಡಲೇ ಪರಿಹಾರ ಕಾರ್ಯಗಳಿಗಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಗಣಪತರಾವ್ ಕೆ. ಮಾನೆ, ಜಿಲ್ಲಾ ಕಾರ್ಯದರ್ಶಿ ಮಹೇಶ್ ಹಾಗೂ ಜಿಲ್ಲಾ ನಾಯಕರಾದ ಎಸ್. ಬಿ., ಭಾಗಣ್ಣ, ವಿಶ್ವನಾಥ್ ಸಿಂಗೆ, ನೀಲಕಂಠ ಎಂ ಹುಲಿ, ಮಲ್ಲಯ್ಯ ಗುತ್ತೇದಾರ್, ಹುಲಿರಾಜ್, ಚೌಡಪ್ಪ ಗಂಜಿ, ಶಿವರಾಜ್ ಗಂಗಾಣಿ, ಭೀಮಾಶಂಕರ ಆಂದೋಲಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಬೇಡಿಕೆಗಳು :
- ಜಿಲ್ಲೆಯಾದ್ಯಂತ ಆಗಿರುವ ಬೆಳೆ ನಷ್ಟದ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ, ಎಕರೆಗೆ 25,000/- ರುಪಾಯಿ ನಷ್ಟಪರಿಹಾರವನ್ನು ರೈತರಿಗೆ ನೀಡಿ.
- ಅತಿವೃಷ್ಟಿಯಲ್ಲಿ ಸಾವನ್ನಪ್ಪಿದ ರೈತರಿಗೆ ಕೂಡಲೇ ಪರಿಹಾರ ನೀಡಿ.
- ಹಾನಿಗೊಳಗಾದ ರಸ್ತೆ, ಕಾಲುವೆ, ಮನೆಗಳನ್ನು ಕೂಡಲೇ ದುರಸ್ಥಿಗೊಳಿಸಿ.
- ಪರಿಹಾರ ಕಾಮಗಾರಿಗಳನ್ನು ಕೂಡಲೇ ಯುದ್ದೋಪಾಧಿಯಲ್ಲಿ ಆರಂಭಿಸಿ.
- ರೈತರ ಸಾಲವನ್ನು ಮನ್ನಾ ಮಾಡಿ.
- ಬೆಳೆ ವಿಮೆ ಕಂಪನಿಗಳು ಕೂಡಲೇ ಬೆಳೆ ನಷ್ಟ ಪರಿಹಾರವನ್ನು ನೀಡುವಂತೆ ಕ್ರಮಕೈಗೊಳ್ಳಿ.
- NDRF ಮಾರ್ಗಸೂಚಿಯಂತೆ ರೈತರಿಗೆ ಹಾಗೂ ಅವರ ಕುಟುಂಬಕ್ಕೆ ಸಮರ್ಪಕ ಪರಿಹಾರ ಒದಗಿಸಿ.
- ರೈತರ ಕುಟುಂಬಕ್ಕೆ ಉತ್ತಮ ಆರೋಗ್ಯ ಚಿಕಿತ್ಸೆ. ಅವರ ಮಕ್ಕಳಿಗೆ ಶಾಲಾ ಫೀಸುಗಳನ್ನು ಮನ್ನಾ ಮಾಡಿ, ಬಸ್ ಪಾಸ್ ಮತ್ತು ಹಾಸ್ಟೆಲ್ ಸೌಲಭ್ಯವನ್ನು ಕಲ್ಪಿಸಿ. ಮತ್ತು ಶಿಕ್ಷಣ ವೇತನವನ್ನು ನೀಡಿರಿ.
- ಉದ್ಯೋಗ ಖಾತ್ರಿ ಯೋಜನೆಯನ್ನು ವರ್ಷಪೂರ್ತಿ ವಿಸ್ತರಿಸಿ, ರೈತರು ಗುಳೇ ಹೋಗುವುದನ್ನು ತಪ್ಪಿಸಿ.
- ಪೀಡಿತ ಗ್ರಾಮಗಳಲ್ಲಿ ಉಚಿತ ಶುದ್ದ ಕುಡಿಯುವ ನೀರು ಮತ್ತು ಜಾನುವರುಗಳಿಗೆ ನೀರು ಮತ್ತು ಮೇವಿನ ವ್ಯವಸ್ಥೆಯನ್ನು ಮಾಡಿ,
- ಜಿಲ್ಲೆಯಾದ್ಯಂತ ಕೆರೆ ಜೋಡಣೆ ಯೋಜನೆಯನ್ನು ಜಾರಿಗೊಳಿಸಿ. ನೀರಿನ ಸಮಸ್ಯೆಯಿಂದ ಶಾಶ್ವತ ಮುಕ್ತಿಗಾಗಿ ಕ್ರಮ ಜರುಗಿಸಿ.