ಚೀನಾ ಅಪರೂಪದ ಅಯಸ್ಕಾಂತ(earth magnets) ಅನ್ನು ಪೂರೈಸಬೇಕು, ಇಲ್ಲವಾದರೆ ಶೇಕಡ 200ರಷ್ಟು ಹೆಚ್ಚುವರಿ ಸುಂಕವನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಹಾಗೆಯೇ ಈ ವರ್ಷದ ಕೊನೆಯಲ್ಲಿ ಚೀನಾಕ್ಕೆ ಭೇಟಿ ನೀಡುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ.
ಟ್ರಂಪ್ ವಾಷಿಂಗ್ಟನ್ನಲ್ಲಿ ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರನ್ನು ಭೇಟಿಯಾದಾಗ, ಯುಎಸ್-ಚೀನಾ ಸಂಬಂಧಗಳ ಸ್ಥಿತಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಇತ್ತೀಚಿನ ಸಂಭಾಷಣೆಗಳ ಬಗ್ಗೆ ವರದಿಗಾರರನ್ನು ಉದ್ದೇಶಿಸಿ ಮಾತನಾಡಿ ಈ ಘೋಷಣೆ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಭಾರತದ ಮೇಲೆ ಶೇ 25ರಷ್ಟು ಸುಂಕ: ಡೊನಾಲ್ಡ್ ಟ್ರಂಪ್ ಸುಳಿವು
ಆಟೋಮೋಟಿವ್ನಿಂದ ರಕ್ಷಣೆಯವರೆಗಿನ ಕೈಗಾರಿಕೆಗಳಲ್ಲಿ ಬಳಸುವ ಅಪರೂಪದ ಆಯಸ್ಕಾಂತದ ಪ್ರಮುಖ ಉತ್ಪಾದಕರಾಗಿ ಚೀನಾದ ಪಾತ್ರವನ್ನು ಉಲ್ಲೇಖಿಸಿದ ಟ್ರಂಪ್, “ಚೀನಾ ನಮಗೆ ಆಯಸ್ಕಾಂತಗಳನ್ನು ನೀಡಬೇಕು” ಎಂದರು.
“ಅವರು ನಮಗೆ ಆಯಸ್ಕಾಂತಗಳನ್ನು ನೀಡದಿದ್ದರೆ, ನಾವು ಅವರಿಗೆ ಶೇಕಡ 200ರಷ್ಟು ಸುಂಕ ಅಥವಾ ಬೇರೆ ಹೊರೆಯನ್ನು ವಿಧಿಸಬೇಕಾಗುತ್ತದೆ. ಆದರೆ ಅದರಿಂದಾಗಿ ನಮಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ತಿಳಿಸಿದರು.
“ಒಂದು ಹಂತದಲ್ಲಿ, ಬಹುಶಃ ಈ ವರ್ಷದ ಅವಧಿಯಲ್ಲಿ ಅಥವಾ ಸ್ವಲ್ಪ ಸಮಯದ ನಂತರ, ನಾವು ಚೀನಾಕ್ಕೆ ಹೋಗುತ್ತೇವೆ. ನಾವು ಚೀನಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲಿದ್ದೇವೆ” ಎಂದೂ ಈ ಸಂದರ್ಭದಲ್ಲೇ ಹೇಳಿದ್ದಾರೆ.
ಈಗಾಗಲೇ ಟ್ರಂಪ್ ಚೀನಾ ಹಲವು ದೇಶಗಳ ವಸ್ತುಗಳ ಮೇಲೆ ಸುಂಕದ ಹೊರೆಯನ್ನು ಹೆಚ್ಚಿಸಿದ್ದಾರೆ. ಚೀನಾದ ಮೇಲೆ ಈ ಹಿಂದೆ ವಿಧಿಸುತ್ತಿದ್ದ ಶೇಕಡ 36 ಸುಂಕವನ್ನು ಈ ವರ್ಷದ ಏಪ್ರಿಲ್ನಲ್ಲಿ ಶೇಕಡ 145ಕ್ಕೆ ಏರಿಸಿದ್ದಾರೆ. ಇದೀಗ ತಮಗೆ ಬೇಕಾದ ಆಯಸ್ಕಾಂತ ನೀಡದಿದ್ದರೆ ಶೇಕಡ 200ರಷ್ಟು ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.
ಚೀನಾ ಮಾತ್ರವಲ್ಲದೆ ಭಾರತ ಸೇರಿದಂತೆ ಹಲವು ದೇಶಗಳ ಮೇಲಿನ ಸುಂಕವನ್ನು ಇತ್ತೀಚೆಗೆ ಡೊನಾಲ್ಡ್ ಟ್ರಂಪ್ ಏರಿಸಿದ್ದಾರೆ. ಹಾಗೆಯೇ ಸುಂಕ ಏರಿಸುವ, ವ್ಯಾಪಾರ ನಡೆಸದೆ ಇರುವ ಬೆದರಿಕೆ ನೀಡಿಯೇ ಭಾರತ-ಪಾಕಿಸ್ತಾನ ಸೇರಿದಂತೆ ಹಲವು ದೇಶಗಳ ನಡುವಿನ ಯುದ್ಧಗಳನ್ನು ನಿಲ್ಲಿಸಿರುವುದಾಗಿ ಪದೇ ಪದೇ ಹೇಳಿಕೊಳ್ಳುತ್ತಿದ್ದಾರೆ. ಸುಂಕವೇ ತನ್ನ ಅಸ್ತ್ರ ಎಂಬಂತೆ ಬಿಂಬಿಸುತ್ತಿದ್ದಾರೆ.
