ಬೆಂಗಳೂರು ನಗರಾದ್ಯಂತ ರಾಷ್ಟ್ರಧ್ವಜದ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರ ಜಿಲ್ಲಾಧಿಕಾರಿ ಕಚೇರಿ ಸಹಾಯಕರ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ದಸಂಸ ಜಿಲ್ಲಾ ಸಂಚಾಲಕ ಗುಡಿಬಂಡೆ ಗಂಗಪ್ಪ ಮಾತನಾಡಿ, “ಕಳೆದ ಬಾರಿ ಕೇಂದ್ರ ಸರ್ಕಾರದ ಆದೇಶದಂತೆ 2022ರ ಆಗಸ್ಟ್ 1, 14 ಮತ್ತು 15ರಂದು ನಗರಾದ್ಯಂತ ರಾಷ್ಟ್ರಧ್ವಜಗಳನ್ನು ಹಾರಿಸಿರುವದು ಶ್ಲಾಘನೀಯ. ಆದರೆ, ಆಗಸ್ಟ್ 15ರ ನಂತರವೂ ಬಹುತೇಕ ಕಡೆ ರಾಷ್ಟ್ರಧ್ವಜಗಳನ್ನು ಹಾಗೆಯೇ ಬಿಟ್ಟು ಕಸದ ಗುಂಡಿಗಳಿಗೆ ಹಾಕಿ ಅವಮಾನ ಮಾಡಿದ್ದರು” ಎಂದು ಆರೋಪಿಸಿದರು.
“ಕೆಲವೆಡೆ ಈಗಲೂ ಅನಧಿಕೃತವಾಗಿ ರಾಷ್ಟ್ರಧ್ವಜಗಳನ್ನು ಹಾರಿಸಲಾಗುತ್ತಿದೆ. ಹಾಗೆಯೇ ಈ ವರ್ಷವೂ ಕೂಡ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅನೇಕ ಕಡೆ ಬೀದಿಬದಿ ಮತ್ತು ವಿಧಾನಸೌಧದ ಎದುರು ರಾಷ್ಟ್ರಧ್ವಜಗಳನ್ನು ಅನಧಿಕೃತವಾಗಿ ಕೈಯಲ್ಲಿ ಹಿಡಿದುಕೊಂಡು, ನೆಲಕ್ಕೆ ಭಾಗಿಸಿ, ಬೀದಿಬದಿ ವ್ಯಾಪಾರಿಗಳು ಹಾಗೂ ಅಂಗಡಿ ಮಾಲೀಕರು ಸಾರ್ವಜನಿಕವಾಗಿ ಮಾರಾಟ ಮಾಡುತ್ತಿದ್ದು, ರಾಷ್ಟ್ರಧ್ವಜದ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಾಜ್ಯದ ಎಲ್ಲ ಬಡವರಿಗೆ ಭೂಮಿ ದೊರೆಯದೆ ಹೋರಾಟ ನಿಲ್ಲದು: ಕುಮಾರ್ ಸಮತಳ
“ರಾಷ್ಟ್ರಧ್ವಜಗಳನ್ನು ಅನಧಿಕೃತ ರೀತಿಯಲ್ಲಿ ಮಾರಾಟ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ರಾಷ್ಟ್ರಧ್ವಜದ ಶಿಷ್ಟಾಚಾರವನ್ನು ಕಾಪಾಡುವ ಸಲುವಾಗಿ ತಾವು ಕ್ರಮ ವಹಿಸಬೇಕು” ಎಂದು ಜಿಲ್ಲಾಧಿಕಾರಿಗೆ ಒತ್ತಾಯಿಸಿದರು.