- ಬಡವರಿಗೆ ಭೂಮಿ ದೊರೆತಾಗಲೇ ನಿಜವಾದ ಸ್ವಾತಂತ್ರ್ಯ
- ಬಡವರು, ಭೂವಂಚಿತರನ್ನು ಸಂಪೂರ್ಣವಾಗಿ ಕಡೆಗಣಿಸಿದ ಸರ್ಕಾರಗಳು
ಎಲ್ಲಿಯವರೆಗೆ ಬಡವರಿಗೆ, ಭೂ ವಂಚಿತರಿಗೆ ಭೂಮಿ, ವಸತಿ ಸಿಗುವುದಿಲ್ಲವೋ ಅಲ್ಲಿಯವರೆಗೆ ಈ ದೇಶಕ್ಕೆ ಪೂರ್ಣ ಸ್ವಾತಂತ್ರ್ಯ ಸಿಗದು. ಸ್ವಾತಂತ್ರ್ಯದ ಅರ್ಥ ಪರಿಪೂರ್ಣಗೊಳ್ಳಬೇಕಿದ್ದರೆ, ಎಲ್ಲ ಬಡವರಿಗೂ ಭೂಮಿ ದೊರೆಯಬೇಕು ಎಂದು ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಹೇಳಿದರು.
ಸ್ವಾತಂತ್ರ್ಯ ದಿನಾಚರಣೆಗೆ ಒಂದು ದಿನದ ಮುಂಚೆ ಬೆಂಗಳೂರಿನಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ನಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಬಡವರ ‘ಬರಿಹೊಟ್ಟೆ ಸತ್ಯಾಗ್ರಹ’ದಲ್ಲಿ ಅವರು ಮಾತನಾಡಿದರು. “ಹಿಂದೆ ಇದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉನ್ನತ ಮಟ್ಟದ ಸಭೆ ನಡೆಸಿತ್ತು. 12 ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದೆವು. ಯಾವುದೇ ಬಡವರನ್ನು ಅವರು ಬದುಕುತ್ತಿರುವ ಮತ್ತು ಸಾಗುವಳಿ ಮಾಡುತ್ತಿರುವ ಸ್ಥಳದಿಂದ ಒಕ್ಕಲೆಬ್ಬಿಸಬಾರದು ಎಂದು ಒತ್ತಾಯಿಸಿದ್ದೆವು. ಅವರೆಲ್ಲರಿಗೂ ಭೂಮಿ ಹಕ್ಕು ನೀಡಬೇಕೆಂದು ಆಗ್ರಹಿಸಿದ್ದೆವು. ಅದಕ್ಕಾಗಿ ಸರ್ಕಾರ ಫಾರಂ ನಂ.57ಅನ್ನು ಜಾರಿಗೆ ತಂದಿತ್ತು. ಆದರೆ, ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಿಲ್ಲ” ಎಂದು ಆರೋಪಿಸಿದರು.
“ಸಮ್ಮಿಶ್ರ ಸರ್ಕಾರ ಮತ್ತು ಬಿಜೆಪಿಯ ಭ್ರಷ್ಟ ಸರ್ಕಾರ ಬಡವರು, ಭೂವಂಚಿತರನ್ನು ಸಂಪೂರ್ಣವಾಗಿ ಕಡೆಗಣಿಸಿದವು. ಉಳ್ಳವರು, ಕಾರ್ಪೊರೇಟ್‌ಗಳು ಭೂಮಿಯನ್ನು ಕೊಳ್ಳೆ ಹೊಡೆಯಲು ಅವಕಾಶ ಮಾಡಿಕೊಟ್ಟರು. ಬಡವರ ಹೋರಾಟದಿಂದಾಗಿ ಒಂದು ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಭೂಮಿ ಅರಣ್ಯ ಕಾಯ್ದೆಯ ವ್ಯಾಪ್ತಿಯಿಂದ ಹೊರಗುಳಿಯಿತು. ಆದರೆ, ಬಿಜೆಪಿ ಸರ್ಕಾರ ಆ ಭೂಮಿಯನ್ನು ಬಡವರಿಗೆ ಹಂಚುವ ಬದಲು ಪ್ಲಾಂಟರ್‌ಗಳ ಕೈಗಿಟ್ಟಿತು” ಎಂದು ಕಿಡಿಕಾರಿದರು.
“ಈಗಿರುವ ಸರ್ಕಾರವೇನೂ ಸಂಪೂರ್ಣ ಬಡವರ ಪರವಾಗಿಲ್ಲ. ಈ ಸರ್ಕಾರದ ಜುಟ್ಟು ಕೂಡ ಉದ್ಯಮಿಗಳ ಕೈಯಲ್ಲೇ ಇದೆ. ಆದರೆ, ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ರಾಜ್ಯದ ಬಡವರ ಪಾತ್ರ ದೊಡ್ಡದಿದೆ. ಸರ್ಕಾರ ಬಡವರ, ಭೂ ವಂಚಿತರ ಸಮಸ್ಯೆಗಳನ್ನು ಪರಿಹರಿಬೇಕು. ಅದಕ್ಕಾಗಿ, ದೊಡ್ಡ ಪ್ರಮಾಣ ಒತ್ತಡ ಹೇರಬೇಕು. ಬೃಹತ್ ಹೋರಾಟ ನಡೆಯಬೇಕು. ಹಕ್ಕೊತ್ತಾಯಗಳನ್ನು ಸರ್ಕಾರ ಕಿವಿಗೊಟ್ಟು ಕೇಳಿಸಿಕೊಳ್ಳಬೇಕು. ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಅದಕ್ಕಾಗಿ, ಉನ್ನತ ಮಟ್ಟದ ಸಭೆ ಕರೆಯಲೇಬೇಕು. ಅಲ್ಲಿಯವರೆಗೂ ನಮ್ಮ ಹೋರಾಟವನ್ನು ಮುಂದುವರೆಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಾಜ್ಯದ ಎಲ್ಲ ಬಡವರಿಗೆ ಭೂಮಿ ದೊರೆಯದೆ ಹೋರಾಟ ನಿಲ್ಲದು: ಕುಮಾರ್ ಸಮತಳ
“ಅರಣ್ಯ ಹಕ್ಕು ಕಾಯ್ದೆಗಳು ಇರುವುದು ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಬಡವರು, ಆದಿವಾಸಿಗಳ ಹಕ್ಕುಗಳನ್ನು ಭದ್ರಪಡಿಸಲು. ಆದರೆ, ಸರ್ಕಾರಗಳು ಆ ಹಕ್ಕುಗಳನ್ನೇ ಕಸಿದುಕೊಳ್ಳುತ್ತಿವೆ. ಅರಣ್ಯ ಪ್ರದೇಶದಲ್ಲಿ ಅಲ್ಲಿನ ಜನರು ಹಲವು ದಶಕಗಳಿಂದ ಗುಡಿಸಲು ಹಾಕಿಕೊಂಡು, ಸಾಗುವಳಿ ಮಾಡಿಕೊಂಡು ಬದುಕುತ್ತಿದ್ದಾರೆ. ಅವರೆಲ್ಲರಿಗೂ ಹಕ್ಕು ಪತ್ರಗಳನ್ನು ನೀಡಬೇಕು” ಎಂದು ಆಗ್ರಹಿಸಿದರು.
“ಸಾವಿರಾರು ಎಕರೆ ಭೂಮಿಯನ್ನು ಲೂಟಿ ಮಾಡಿರುವವರು ನಿರಾತಂಕವಾಗಿ ಬದುಕುತ್ತಿದ್ದಾರೆ. ಆದರೆ, ಅಂಗೈ ಅಗಲ ಭೂಮಿ ಇಟ್ಟುಕೊಂಡಿರುವವರು ಆ ಭೂಮಿಯ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾರೆ. ಇದಾವ ಸ್ವಾತಂತ್ರ್ಯ. ಬಡವರಿಗೆ ಭೂಮಿ ದೊರೆಯಬೇಕು. ಆಗಲೇ ನಿಜವಾದ ಸ್ವಾತಂತ್ರ್ಯ ದೊರೆಯಲು ಸಾಧ್ಯ” ಎಂದರು.