ತಮಿಳುನಾಡಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತ ಔಷಧಿ ನೀಡಲಾಗುತ್ತದೆ. ಅಷ್ಟೇ ಅಲ್ಲ, ಉಚಿತ ಚಿಕಿತ್ಸೆ ಹಾಗೂ ಔಷಧಿ ವಿತರಣೆ ವ್ಯವಸ್ಥೆಯನ್ನು ಅಲ್ಲಿ ಜನರ ಮನೆ ಬಾಗಿಲಿಗೇ ತಲುಪಿಸಲಾಗುತ್ತಿದೆ. ತಮಿಳುನಾಡು ಸರ್ಕಾರದ ‘ಮಕ್ಕಳೈ ತೇಡಿ ಮರುತವಂ’ (ಎಂಟಿಎಂ) ಕಲ್ಯಾಣ ರಾಜ್ಯವೊಂದು ಅದರ ಜನರಿಗೆ ಹೇಗೆ ಅರೋಗ್ಯ ಸೇವೆ ಒದಗಿಸಬೇಕೆನ್ನುವುದಕ್ಕೆ ಒಂದು ಉತ್ತಮ ನಿದರ್ಶನದಂತಿದೆ.
ಈದಿನ.ಕಾಮ್‌ನ ವಿಶೇಷ ಆರೋಗ್ಯ ಸರಣಿಯ ಮೂರನೇ ಕಂತು ಇಲ್ಲಿದೆ.
ಪ್ರಸ್ತುತ ನಮ್ಮ ದೇಶದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತ ಔಷಧಿಗಳನ್ನು ಒದಗಿಸುವ ಯಾವುದೇ ರಾಷ್ಟ್ರೀಯ ಯೋಜನೆ ಇಲ್ಲದಿದ್ದರೂ, ರಾಷ್ಟ್ರೀಯ ಆರೋಗ್ಯ ಅಭಿಯಾನ (ನ್ಯಾಷನಲ್ ಹೆಲ್ತ್ ಮಿಷನ್-ಎನ್‌ಎಚ್‌ಎಂ) ಮೂಲಕ ಉಚಿತ ಔಷಧಿಗಳು ಮತ್ತು ರೋಗನಿರ್ಣಯಕ್ಕಾಗಿ ಯೋಜನೆಗಳನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಪ್ರೋತ್ಸಾಹವನ್ನು ನೀಡುತ್ತದೆ. ತಮಿಳುನಾಡು ಮತ್ತು ರಾಜಸ್ಥಾನ ರಾಜ್ಯಗಳ ಮಾದರಿಗಳನ್ನು ಅಳವಡಿಸಿಕೊಳ್ಳಲು ಮಾರ್ಗಸೂಚಿಗಳನ್ನು ಸಹ ಪ್ರಕಟಿಸಿದೆ. ಆದಾಗ್ಯೂ, ಹೆಚ್ಚಿನ ರಾಜ್ಯಗಳು ಇನ್ನೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿಗಳನ್ನು ಖಾತರಿಪಡಿಸುವ ಯೋಜನೆಗಳನ್ನು ಜಾರಿ ಮಾಡಿಲ್ಲ.
ಕೆಲವು ರಾಜ್ಯಗಳು ಉಚಿತ ಔಷಧಿಗಳನ್ನು ಒದಗಿಸುವುದಾಗಿ ಹೇಳಿಕೊಳ್ಳುತ್ತವೆ; ಆದರೆ, ಅದರ ಭಾಗವಾಗಿ ವ್ಯವಸ್ಥಿತ ಔಷಧ ಸಂಗ್ರಹಣೆ, ಪೂರೈಕೆ ಮತ್ತು ವಿತರಣೆಗೆ ಯಾವುದೇ ಯೋಜನೆ ಅಥವಾ ನೀತಿ ಇಲ್ಲ. ಇಂಥ ರಾಜ್ಯಗಳಲ್ಲಿ ಯೋಜನೆಯ ಫಲ ಫಲಾನುಭವಿಗೆ ಸಿಗುತ್ತಿಲ್ಲ. ಮತ್ತು ರೋಗಿಗಳನ್ನು ಔಷಧಿಗಳಿಗಾಗಿ ಖರ್ಚು ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಇದರ ಹಿಂದೆ ಆರೋಗ್ಯ ಸೇವೆ ಒದಗಿಸುವ ಆಸ್ಪತ್ರೆಗಳು, ಔಷಧಿ ಕಂಪನಿಗಳ ಲಾಬಿ ಹಾಗೂ ರಾಜಕಾರಣಿಗಳು, ಅಧಿಕಾರಿಗಳ ಹಿತಾಸಕ್ತಿಗಳಿವೆ.
ಭಾರತದಲ್ಲಿ ರೋಗಿಗಳು ಭರಿಸುವ ಒಟ್ಟು ವೆಚ್ಚದ ಸುಮಾರು 64% ಹೊರರೋಗಿ ಸೇವೆಗಳಿಗೆ ಸಂಬಂಧಿಸಿದೆ. ದುರದೃಷ್ಟವಶಾತ್, ಕೇಂದ್ರ ಮತ್ತು ರಾಜ್ಯ ಆರೋಗ್ಯ ವಿಮಾ ಯೋಜನೆಗಳು ಆರೋಗ್ಯ ವಿಮೆಗೆ ಒತ್ತು ನೀಡುತ್ತಿದ್ದರೂ ಈ ವಾಸ್ತವವನ್ನು ಒಪ್ಪಿಕೊಂಡಿಲ್ಲ. ಆರೋಗ್ಯ ವಿಮೆಗಳು ಹೊರರೋಗಿ ಸೇವೆಗಳಿಗೆ ಅನ್ವಯವಾಗುತ್ತಿಲ್ಲ.
ನಮ್ಮ ದೇಶದಲ್ಲಿ ಸರ್ಕಾರಿ ಆಸ್ಪತ್ರೆಗಳು ಹಾಗೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು ಬಡವರಿಗೆ, ಗ್ರಾಮೀಣ ಪ್ರದೇಶದವರಿಗೆ ಮತ್ತು ಗುಡ್ಡಗಾಡು ಬುಡಕಟ್ಟು ಪ್ರದೇಶಗಳಿಗೆ ಅಗತ್ಯ ಚಿಕಿತ್ಸೆ ಹಾಗೂ ಔಷಧಿಗಳನ್ನು ನೀಡುವ ಏಕೈಕ ಮಾರ್ಗವಾಗಿ ಉಳಿದಿವೆ ಎಂಬುದು ಬಹು ಮುಖ್ಯವಾದ ವಿಚಾರ.
ರಾಷ್ಟ್ರೀಯ ಉಚಿತ ಔಷಧಿಗಳ ಯೋಜನೆಯು ರಾಜ್ಯವು ಉಚಿತ ಔಷಧಿಗಳ ಯೋಜನೆಯನ್ನು ಜಾರಿಗೆ ತರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ, ಸಾರ್ವಜನಿಕ ಆರೋಗ್ಯ ಸೌಲಭ್ಯಗಳ ಮೂಲಕ ಎಲ್ಲರಿಗೂ ಜೀವ ಉಳಿಸುವ ಔಷಧಿಗಳನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡುತ್ತದೆ. ಪ್ರತಿಯಾಗಿ, ರಾಜ್ಯಗಳು ರಾಷ್ಟ್ರೀಯ ಯೋಜನೆಯಲ್ಲಿರುವ ಔಷಧಿಗಳಿಗಿಂತ ಹೆಚ್ಚಿನ ಔಷಧಿಗಳನ್ನು ಯಾವುದೇ ವೆಚ್ಚವಿಲ್ಲದೆ ರೋಗಿಗಳಿಗೆ ಒದಗಿಸಲು ಕ್ರಮ ವಹಿಸಬೇಕಾಗಿದೆ.
ಕೇಂದ್ರ ಮತ್ತು ರಾಜ್ಯಗಳು ಈಗಾಗಲೇ ಔಷಧಿಗಳಿಗಾಗಿ ಖರ್ಚು ಮಾಡುತ್ತಿರುವುದಕ್ಕೆ ಇನ್ನೊಂದಿಷ್ಟು ಹಣವನ್ನು ಮಾತ್ರ ಈ ಯೋಜನೆಗಾಗಿ ಖರ್ಚು ಮಾಡಬೇಕಾಗುತ್ತದೆ. ಆದರೆ, ಇದರ ಪ್ರತಿಫಲ ಹೆಚ್ಚಾಗಿರುತ್ತದೆ. ಜನರ ಸ್ವಂತದ ಹಣ (Out of the pocket expenditure) ಕಡಿಮೆ ಮಾಡುವುದು, ವೈದ್ಯರು ಚೀಟಿ ಬರೆದುಕೊಡುವ ಅಭ್ಯಾಸವನ್ನು ನಿಯಂತ್ರಿಸುವುದು ಮತ್ತು ರೋಗಿಗಳನ್ನು ಅವರ ಅನಾರೋಗ್ಯದ ಪ್ರಾಥಮಿಕ ಹಂತಗಳಲ್ಲಿಯೇ ಸರ್ಕಾರಿ ಆಸ್ಪತ್ರೆಗಳತ್ತ ಕರೆತರಲು ಇದು ಸಹಾಯ ಮಾಡುತ್ತದೆ. ಅದರಿಂದ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವೂ ಕೂಡ ಕಡಿಮೆಯಾಗುತ್ತದೆ. ಈ ವಿಚಾರದಲ್ಲಿ ತಮಿಳುನಾಡು ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ, ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಉಚಿತ ಔಷಧಿ ನೀಡುತ್ತಿರುವುದಷ್ಟೇ ಅಲ್ಲ, ಆರೋಗ್ಯ ಸೇವೆಗಳನ್ನು ಜನರ ಮನೆ ಬಾಗಿಲಿಗೇ ಕೊಂಡೊಯ್ದಿದೆ.
ತಮಿಳುನಾಡು ಸರ್ಕಾರದ ‘ಮಕ್ಕಳೈ ತೇಡಿ ಮರುತವಂ’ (ಎಂಟಿಎಂ) ಕಲ್ಯಾಣ ರಾಜ್ಯವೊಂದು ಅದರ ಜನರಿಗೆ ಹೇಗೆ ಅರೋಗ್ಯ ಸೇವೆ ಒದಗಿಸಬೇಕೆನ್ನುವುದಕ್ಕೆ ಒಂದು ಉತ್ತಮ ನಿದರ್ಶನದಂತಿದೆ. ವಿಶೇಷವಾಗಿ, ವೇಗವಾಗಿ ಬೆಳೆಯುತ್ತಿರುವ ಸಾಂಕ್ರಾಮಿಕವಲ್ಲದ ರೋಗಗಳಿಂದ ಬಳಲುವವರಿಗೆ (ಎನ್‌ಸಿಡಿ) ಈ ಯೋಜನೆಯು ದೊಡ್ಡ ಮಟ್ಟದಲ್ಲಿ ನೆರವಾಗುತ್ತಿದೆ. ಆರೋಗ್ಯ ಸೇವೆಗಳ ಲಭ್ಯತೆಯನ್ನು ಸುಧಾರಿಸುವುದು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡವನ್ನು ಮುಂಚಿತವಾಗಿ ಪತ್ತೆ ಹಚ್ಚುವುದು ಮತ್ತು ಜನರ ಸ್ವಂತ ಹಣದ (Out of the expenditure) ವೆಚ್ಚವನ್ನು ಕಡಿಮೆ ಮಾಡುವುದು ಇದರ ಯಶಸ್ಸುಗಳಲ್ಲಿ ಸೇರಿವೆ.
ಮನೆ ಮನೆಗೆ ಹೋಗಿ ರೋಗ ತಪಾಸಣೆ ಮಾಡುವುದು ಮತ್ತು ಔಷಧಿ ವಿತರಣೆ ಮಾಡುವುದರ ಮೂಲಕ ಆರೋಗ್ಯ ಸೇವೆಗಳನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವುದು ಸಣ್ಣ ಕೆಲಸವೇನಲ್ಲ. 2023ರ ಆಗಸ್ಟ್‌ಗೆ ಎರಡು ವರ್ಷಗಳನ್ನು ಪೂರೈಸಲಿರುವ ಎಂಟಿಎಂ, ಕೋಟ್ಯಂತರ ಫಲಾನುಭವಿಗಳು ಮತ್ತು ಸುಮಾರು 20,000 ಉದ್ಯೋಗಿಗಳನ್ನು ಒಳಗೊಂಡ ಬೃಹತ್ ಕಾರ್ಯಕ್ರಮವಾಗಿದೆ. ಈ ಯೋಜನೆಯಲ್ಲಿ ಜುಲೈ 20 ರ ಹೊತ್ತಿಗೆ ಅಧಿಕೃತ ಅಂಕಿಅಂಶಗಳ ಪ್ರಕಾರ, ಸುಮಾರು 5.50 ಕೋಟಿ ವ್ಯಕ್ತಿಗಳನ್ನು ಪರೀಕ್ಷಿಸಲಾಗಿದೆ. ಅವರ ಪೈಕಿ 1,00,55,514 ಮೊದಲ ಬಾರಿಯ ಫಲಾನುಭವಿಗಳು ಮತ್ತು 3,20,53,880 ಪುನರಾವರ್ತಿತ ಫಲಾನುಭವಿಗಳು.
ತಮಿಳುನಾಡು ರಾಜ್ಯ ಯೋಜನಾ ಆಯೋಗವು ರಾಜ್ಯಾದ್ಯಂತ 6,856 ಜನರ ಸಮೀಕ್ಷೆ ನಡೆಸಿ ಎಂಟಿಎಂ ಬಡವರಿಗೆ ಆರೋಗ್ಯ ರಕ್ಷಣೆಯನ್ನು ಹೆಚ್ಚಿಸಿದೆ ಎಂದು ದಾಖಲಿಸಿದೆ. ಈ ಯೋಜನೆಯನ್ನು ಪ್ರಾರಂಭಿಸುವ ಮೊದಲು, ಸಾರ್ವಜನಿಕ ಆರೋಗ್ಯ ಸೇವೆಗಳ ಅಡಿ ಕಡಿಮೆ ಆದಾಯದ ಗುಂಪುಗಳ ಮೂರನೇ ಒಂದು ಭಾಗದಷ್ಟು ಜನರನ್ನು ಮಾತ್ರ ಮಧುಮೇಹ ಮತ್ತು ಅಧಿಕ ರಕ್ತದೊತ್ತಡಕ್ಕಾಗಿ ಪರೀಕ್ಷಿಸಲಾಗುತ್ತಿತ್ತು. ಅದರ ಅನುಷ್ಠಾನದ ನಂತರ ಈ ಸಂಖ್ಯೆ ಸುಮಾರು 50% ಕ್ಕೆ ಏರಿತು. ಈ ಯೋಜನೆಯು ವಿಶೇಷವಾಗಿ ಕಡಿಮೆ ಆದಾಯದ ಗುಂಪುಗಳಿಗೆ ವೈದ್ಯಕೀಯ ವೆಚ್ಚಗಳನ್ನು ಕಡಿತಗೊಳಿಸಲು ಸಹಾಯ ಮಾಡಿದೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಯೋಜನೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದ ನಂತರ ಈ ಗುಂಪುಗಳ ಆರೋಗ್ಯ ವೆಚ್ಚಗಳು ಅರ್ಧದಷ್ಟು ಕಡಿಮೆಯಾಗಿವೆ.
ನಗರ ಪಟ್ಟಣಗಳ ಬಡವರು, ಕುಗ್ರಾಮಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಜನರು ಮತ್ತು ವಯಸ್ಸಾದ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಯ ಅಲಭ್ಯತೆಯನ್ನು ಎಂಟಿಎಂ ಪರಿಹರಿಸಿದೆ ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಹೇಳುತ್ತಾರೆ. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ರಕ್ತನಾಳದ ಕಾಯಿಲೆಗಳಂತಹ ಎನ್‌ಸಿಡಿ ಕಾಯಿಲೆಗಳನ್ನು ಮುಂಚಿತವಾಗಿ ಪತ್ತೆ ಹಚ್ಚುವುದು, ಸಮಯೋಚಿತ ಮಧ್ಯಸ್ಥಿಕೆ, ಜೀವನಶೈಲಿ ಮಾರ್ಪಾಡುಗಳು ಮತ್ತು ಚಿಕಿತ್ಸೆಗಳಿಗೆ ಇದು ಅನುವು ಮಾಡಿಕೊಡುತ್ತದೆ. ಇದು ಈ ರೋಗಗಳ ತೀವ್ರತೆ ಮತ್ತು ಅಪಾಯಗಳನ್ನು ಕಡಿಮೆ ಮಾಡುತ್ತದೆ. ಈ ಮೂಲಕ ರಾಜ್ಯದಲ್ಲಿ ಎನ್‌ಸಿಡಿಗಳ ಒಟ್ಟಾರೆ ಹೊರೆಯನ್ನು ಕಡಿಮೆ ಮಾಡುತ್ತದೆ. ಹೃದ್ರೋಗಗಳು ಮತ್ತು ಪಾರ್ಶ್ವವಾಯುಗಳನ್ನು ಕಡಿಮೆ ಮಾಡುವ ಮೂಲಕ ಈ ಯೋಜನೆಯು ರಾಜ್ಯದ ಒಟ್ಟಾರೆ ಆರೋಗ್ಯ ವೆಚ್ಚವನ್ನು ಕಡಿಮೆ ಮಾಡಲು ನೆರವಾಗುತ್ತಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಡುತ್ತಾರೆ. ಎಂಟಿಎಂ ಪರಿಣಾಮವಾಗಿ ತಮಿಳುನಾಡಿನಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದ ಜನ ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ.
ಎಂಟಿಎಂ ಯೋಜನೆಯಲ್ಲಿ ಸಮಸ್ಯೆಗಳೇ ಇಲ್ಲ ಎಂದೇನಲ್ಲ. ಔಷಧಿಗಳಿಗೆ ನಿಧಿ ಹಂಚಿಕೆ, ಔಷಧ ವಿತರಣೆಯಲ್ಲಿ ಗಂಭೀರ ಅಂತರ, ಸುಳ್ಳು ಮಾಹಿತಿ, ತುರ್ತು ಅಗತ್ಯಕ್ಕೆ ಸ್ಪಂದಿಸದಿರುವುದು ಇಂಥ ಕೆಲವು ಸಮಸ್ಯೆಗಳಿವೆ. ತಮಿಳುನಾಡು ಸರ್ಕಾರ ಇವೆಲ್ಲವನ್ನೂ ಬಗೆಹರಿಕೊಂಡರೆ ಯೋಜನೆ ಇನ್ನಷ್ಟು ಪರಿಣಾಮಕಾರಿಯಾಗುತ್ತದೆ.