ಮದ್ದೂರಿನಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಗಲಭೆ ವಿಚಾರಕ್ಕೆ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದು, “ನಿನ್ನೆ ಮೆರವಣಿಗೆ ನಡೆಯುವ ಸಂಧರ್ಭದಲ್ಲಿ ಮಸೀದಿ ಕಡೆಯಿಂದ ಕಲ್ಲುಗಳು ಎಸೆದ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ವಿಚಾರಣೆ ನಡೆಸಿ ನಂತರ ಇಪ್ಪತ್ತೊಂದು ಜನರನ್ನು ಈಗಾಗಲೇ ಬಂಧಿಸಲಾಗಿದೆ” ಎಂದು ಹೇಳಿದ್ದಾರೆ.
“ಯಾವ ಹಿಂದೂಗಳ ಮೇಲೂ ಕೇಸ್ ದಾಖಲಾಗಿಲ್ಲ, ಗಲಭೆ ನಡೆದ ಕೆಲವೇ ಗಂಟೆಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಘಟನೆ ನಡೆದ ತಕ್ಷಣ ಇಷ್ಟು ಬೇಗ ಕ್ರಮ ತೆಗೆದು ಕೊಂಡ ಪ್ರಕರಣ ಬೇರೆ ಯಾವುದೂ ಇಲ್ಲ. ಆದ್ರೆ ಬಿಜೆಪಿಯ ಹಾಗೂ ಕೆಲವು ಜೆಡಿಎಸ್ ನಾಯಕರು ಪ್ರಚೋದಿಸುವ ಕೆಲಸ ಮಾಡ್ತಾ ಇದ್ದಾರೆ” ಎಂದು ಆರೋಪಿಸಿದ್ದಾರೆ.
“ಇನ್ನಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳಲು ಹೇಳಬಹುದಿತ್ತು. ಅದು ಬಿಟ್ಟು ಕೋಮುಗಲಭೆಗೆ ಪ್ರಚೋದನೆ ಕೊಡಬಾರದಿತ್ತು. ಮದ್ದೂರಿನಲ್ಲಿ ಹಿಂದೆ ಎಂದೂ ಈ ರೀತಿಯ ಘಟನೆ ನಡೆದಿಲ್ಲ. ಹೊರಗಡೆಯಿಂದ ಬಂದು ಯಾರೋ ಗಲಭೆ ಮಾಡಿರಬಹುದು ಎಂಬ ಬಗ್ಗೆ ವಿಚಾರಣೆ ಮಾಡ್ತಾ ಇದ್ದೇವೆ” ಎಂದು ತಿಳಿಸಿದ್ದಾರೆ.
“ಯಾವುದೇ ಸಮಾಜ ಇದ್ದರೂ ಅವರ ಮೇಲೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ತೀವಿ. ಬಿಜೆಪಿ, ಜೆಡಿಎಸ್ ನವರು ರಾಜಕಾರಣವಾಗಿ ನಮ್ಮನ್ನು ಎದುರಿಸಾಗದೆ ಪ್ರಚೋದನೆ ಮಾಡ್ತಾ ಇದ್ದಾರೆ. ನಾವು ಯಾರ ಓಲೈಕೆ ಸಹಾ ಮಾಡುತ್ತಿಲ್ಲ. ಹಾಗಿದ್ದರೆ ಯಾಕೆ ಇಪ್ಪತ್ತೊಂದು ಜನರ ಬಂಧನ ಮಾಡ್ತಾ ಇದ್ದೆವು” ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.
“ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಸಹಿಸಲು ಆಗ್ತಿಲ್ಲ. ಸದನದಲ್ಲಿ ನಮ್ಮನ್ನು ಎದುರಿಸಲು ಅವರಿಗೆ ಆಗೋದಿಲ್ಲ. ಹೀಗಾಗಿ ಇವಾಗ ಇಂತಹಾ ಘಟನೆಗಳು ಆದಾಗ ಪ್ರಚೋದನೆ ಕೊಡುವ ಕೆಲಸ ಮಾಡ್ತಾ ಇದ್ದಾರೆ” ಎಂದು ದೂರಿದ್ದಾರೆ.