- 17 ಜನರಲ್ಲಿ ಯಾರು ಕಾಂಗ್ರೆಸ್‌ಗೆ ಹೋಗುತ್ತಾರೆ ಗೊತ್ತಿಲ್ಲ
- ‘ನನ್ನನ್ನು ಜೈಲಿನಲ್ಲಿಟ್ಟು ನನ್ನ ಕ್ಷೇತ್ರ ಅಭಿವೃದ್ಧಿ ಮಾಡಲಿ’
17 ಜನರಲ್ಲಿ ಯಾರು ಕಾಂಗ್ರೆಸ್‌ಗೆ ಹೋಗುತ್ತಾರೆ ಗೊತ್ತಿಲ್ಲ. ನಾನಂತೂ ಬಿಜೆಪಿ ಬಿಟ್ಟು ಹೋಗುವುದಿಲ್ಲ. ಬೇಕಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಮುನಿರತ್ನ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್‌ಗೆ ಹೋಗುವ ಅವಶ್ಯಕತೆ ನನಗೆ ಇಲ್ಲ. ಅಧಿಕಾರಕ್ಕಾಗಿ ನಾನು ಪಕ್ಷ ಬಿಟ್ಟು ಹೋಗಲ್ಲ. ನನ್ನ ಮುಂದಿನ ಜೀವನದ ಆಧಾರ ಬಿಜೆಪಿ ಚಿಹ್ನೆ. ಬಿಜೆಪಿ ಬಗ್ಗೆ ನಂಬಿಕೆ, ಗೌರವ ಇದೆ” ಎಂದರು.
“ಬಿಜೆಪಿಯಲ್ಲಿ ನನ್ನನ್ನು ಬಹಳ ಗೌರವಯುತವಾಗಿ ನೋಡಿಕೊಳ್ಳುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಗೌರವದಿಂದ ಮಾತಾಡಿಸುತ್ತಾರೆ. ಹೀಗಿದ್ದ ಮೇಲೆ ನಾನು ಯಾಕೆ ಬೇರೆ ಪಕ್ಷದ ಕಡೆ ಮುಖ ಮಾಡಲಿ” ಎಂದು ಪ್ರಶ್ನಿಸಿದರು.
‘ನನ್ನ ಜೀವನದ ಗುರು ಬಿ ಕೆ ಹರಿಪ್ರಸಾದ್ ಮತ್ತು ಡಿ ಕೆ ಶಿವಕುಮಾರ್ ನನ್ನ ರಾಜಕೀಯ ಗುರು’ ಎಂಬ ಎಸ್ ಟಿ ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿ, “ಅದು ಅವರ ವೈಯಕ್ತಿಕ ಅಭಿಪ್ರಾಯ. ನಾನು ಡಿ ಕೆ ಸುರೇಶ್ 40 ವರ್ಷದಿಂದ ಸ್ನೇಹಿತರು. ವೈಯಕ್ತಿಕವಾಗಿ ಡಿ ಕೆ ಸುರೇಶ್, ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಜತೆ ದ್ವೇಷವಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಕುಮಾರಸ್ವಾಮಿಗೆ ಕೆಲಸ ಇಲ್ಲ, ಪ್ರಚಾರಕ್ಕಾಗಿ ಆರೋಪ ಮಾಡುತ್ತಾರೆ: ಡಿ ಕೆ ಸುರೇಶ್ ಲೇವಡಿ
ರಾಜಕೀಯ ಸಂಬಂಧ ಉಳಿಸಿಕೊಂಡಿಲ್ಲ
“ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನ ಸಚಿವರು. ಅವರು ಯಾವುದೇ ರಾಜಕೀಯ ಸಂಬಂಧ ಉಳಿಸಿಕೊಂಡಿಲ್ಲ. ಡಿ ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಉತ್ತರ ಕೊಡುತ್ತಾರಾ ಅಥವಾ ಬೆಂಗಳೂರಿನ ಸಚಿವರಾಗಿ ಉತ್ತರ ಕೊಡುತ್ತಾರಾ ನನಗೆ ಗೊಂದಲ ಆಗುತ್ತಿದೆ. ಮೊದಲು ಅವರು ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಎಲ್ಲರನ್ನೂ ಕರೆದು ಸಭೆ ಮಾಡಲಿ” ಎಂದು ಸಲಹೆ ನೀಡಿದರು.
ನಾನು ಜೈಲಿಗೆ ಹೋಗಲು ಸಿದ್ಧ
“ಆರ್. ಆರ್. ನಗರದಲ್ಲಿ ತನಿಖೆ ಅಂತಾದರೆ ಅದು 28 ಕ್ಷೇತ್ರಗಳಿಗೂ ಅನ್ವಯಿಸಬೇಕು. ಅಧಿಕಾರಿಗಳು ತಿರುಚಿ ಬರೆದರೆ ಆ ದಾಖಲೆಗಳು ಮೇಲೆ ದೊಡ್ಡ ತನಿಖಾ ಸಂಸ್ಥೆಗಳಿಗೆ ಹೋಗುತ್ತವೆ. ಅಧಿಕಾರಿಗಳು ಎಚ್ಚರಿಕೆಯಿಂದ ತನಿಖೆ ಮಾಡಬೇಕು. ಅವರು ಸ್ಥಳಕ್ಕೆ ಹೋಗಿ ಸಮಗ್ರ ತನಿಖೆ ಮಾಡಿದರೆ ಅವರಿಗೆ ಒಳ್ಳೆಯದು. ಇಲ್ಲದಿದ್ದರೆ ಅದೇ ಅವರಿಗೆ ಮುಳುವಾಗುತ್ತದೆ. ನನ್ನ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ ಅಂದರೆ ನಾನು ಜೈಲಿಗೆ ಹೋಗಲು ಸಿದ್ಧ. ನನಗೆ ಆರ್.ಆರ್.ನಗರ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಡಿ.ಕೆ.ಶಿವಕುಮಾರ್ ನನ್ನನ್ನು ಬೇಕಾದರೆ ಜೈಲಿಗೆ ಕಳಿಸಲಿ. ನನ್ನನ್ನು ಜೈಲಿನಲ್ಲಿ ಇಟ್ಟು ನನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿ” ಎಂದು ಅವರು ಹೇಳಿದರು.