ಕಳೆದ ಒಂದು ವಾರದಿಂದ ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಉಂಟಾದ ಭೂಕುಸಿತಗಳು ಮತ್ತು ಪ್ರವಾಹದಿಂದಾಗಿ ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ.
ರಾಜಧಾನಿ ಶಿಮ್ಲಾದ ಸಮ್ಮರ್ ಹಿಲ್, ಕೃಷ್ಣ ನಗರ ಮತ್ತು ಫಾಗ್ಲಿಯಲ್ಲಿ ಭಾನುವಾರದಿಂದ 12ಕ್ಕೂ ಹೆಚ್ಚು ಭೂಕುಸಿತಗಳು ಸಂಭವಿಸಿದ್ದು, ಸಮ್ಮರ್ ಹಿಲ್‌ನಲ್ಲಿ ಇಂದು ಬೆಳಿಗ್ಗೆ ಒಬ್ಬರು ಸಾವನ್ನಪ್ಪಿದ್ದಾರೆ.
ಸಮ್ಮರ್ ಹಿಲ್‌ನಲ್ಲಿನ ಅವಶೇಷಗಳಿಂದ 13, ಫಾಗ್ಲಿಯಿಂದ ಐದು ಮತ್ತು ಕೃಷ್ಣನಗರದಲ್ಲಿ ಎರಡು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಮವಾರ ಕುಸಿದ ದೇವಾಲಯದ ಅವಶೇಷಗಳಲ್ಲಿ ಇನ್ನೂ ಹಲವರು ಸಮಾಧಿಯಾಗಿರುವ ಶಂಕೆ ಇದೆ.
ಈ ಸುದ್ದಿ ಓದಿದ್ದೀರಾ? ನೆಹರು ವಸ್ತು ಸಂಗ್ರಹಾಲಯ ಹೆಸರು ಬದಲಾವಣೆ: ಪ್ರಧಾನಿಯ ಸೇಡಿನ ರಾಜಕಾರಣ ಎಂದ ಕಾಂಗ್ರೆಸ್
ನಿನ್ನೆ ಸಂಜೆ ಶಿಮ್ಲಾದ ಹೃದಯ ಭಾಗದಲ್ಲಿರುವ ಕೃಷ್ಣ ನಗರದಲ್ಲಿ ಎಂಟು ಮನೆಗಳ ಸುತ್ತ ಭೂಕುಸಿತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಸೋಲನ್ ಜಿಲ್ಲೆಯಲ್ಲಿ ಸೋಮವಾರ ಸಂಭವಿಸಿದ ಮೇಘಸ್ಫೋಟ ಘಟನೆಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ.
ತಗ್ಗು ಪ್ರದೇಶಗಳಿಂದ 800ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಮತ್ತು ಸ್ಥಳಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಅವರು ಇಂದು (ಆಗಸ್ಟ್ 16) ಹೆಲಿಕಾಪ್ಟರ್‌ನಿಂದ ರಕ್ಷಿಸಲ್ಪಟ್ಟ ನಾಗರಿಕರ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
“ಕಳೆದ ಮೂರು ದಿನಗಳಲ್ಲಿ ಸಾವಿನ ಸಂಖ್ಯೆ 60ಕ್ಕೆ ಏರಿದೆ. ರಚನಾತ್ಮಕ ಮಾನದಂಡಗಳು ಮತ್ತು ಒಳಚರಂಡಿ ಸಮಸ್ಯೆಗಳನ್ನು ಪರಿಹರಿಸುವ ಸಭೆಯನ್ನು ಕರೆಯಲಾಗಿದೆ. ಮಳೆಯಿಂದ ಸಾಕಷ್ಟು ಹಾನಿಯಾಗಿದೆ, ಮರುಸ್ಥಾಪನೆಗೆ ಸಾಕಷ್ಟು ಸಮಯ ಹಿಡಿಯುತ್ತದೆ” ಎಂದು ತಿಳಿಸಿದ್ದಾರೆ.
ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಆಗಸ್ಟ್ 19 ರವರೆಗೆ ರಾಜ್ಯದಾದ್ಯಂತ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯ ಕೂಡ ಅಲ್ಲಿಯವರೆಗೆ ಬೋಧನಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ.
ಭೂಕುಸಿತದಿಂದಾಗಿ ರಾಜ್ಯದಲ್ಲಿ ಕನಿಷ್ಠ 800 ರಸ್ತೆಗಳು ಮುಚ್ಚಿಹೋಗಿವೆ. ಈ ಮುಂಗಾರು ಋತುವಿನಲ್ಲಿ ರಾಜ್ಯವು ಸಾವಿರಾರು ಕೋಟಿ ರೂ. ಮೌಲ್ಯದ ನಷ್ಟವನ್ನು ಅನುಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶ ಮತ್ತು ನೆರೆಯ ಉತ್ತರಾಖಂಡ ರಾಜ್ಯಗಳಲ್ಲಿ ಹೆಚ್ಚು ಮಳೆ ಬೀಳುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ನೆರವು ಕೋರಿದ್ದು, ಹಿಮಾಚಲ ಪ್ರದೇಶವನ್ನು ವಿಪತ್ತು ಪೀಡಿತ ರಾಜ್ಯ ಎಂದು ಘೋಷಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.