- ‘ರಾಜ್ಯ ಸರ್ಕಾರಕ್ಕೆ ಕಸ್ತೂರಿ ರಂಗನ್ ಬಗ್ಗೆ ವಿರೋಧ ಇರಬಹುದು’
- ‘ಸರ್ಕಾರದ ನಡೆ ರಾಷ್ಟ್ರದ ಹಿತಕ್ಕೆ ಘಾತಕವಾಗುವ ಸಾಧ್ಯತೆಯಿದೆ’
ಯಾವ ಕಾರಣಕ್ಕಾಗಿ ಎನ್ಇಪಿ ತಿರಸ್ಕರಿಸುತ್ತಿದ್ದೀರಿ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಸಮಗ್ರ ಶಿಕ್ಷಣ ನೀತಿಯನ್ನು ಅವರು ವಿರೋಧಿಸುತ್ತಾರೆ ಎಂದರೆ ಸರ್ಕಾರಕ್ಕೆ ಕಸ್ತೂರಿ ರಂಗನ್ ಅವರ ಬಗ್ಗೆ ವಿರೋಧ ಇರಬಹುದು ಎಂದು ಮಾಜಿ ಸಚಿವ ಸಿ ಟಿ ರವಿ ಹೇಳಿದರು.
ಚಿಕ್ಕಮಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ಸರ್ಕಾರದ ಪ್ರಸ್ತುತ ನಡೆ ಗಮನಿಸುತ್ತಿದ್ದರೆ ಗುಲಾಮಿ ಮನಸ್ಥಿತಿಯಿಂದ ಹೊರಬರಲು ಸಿದ್ಧವಿಲ್ಲದಂತೆ ಕಾಣುತ್ತದೆ. ಮೆಕಾಲೆ ಹಾಗೂ ಕಾರ್ಲ್ ಮಾರ್ಕ್ಸ್ ಪ್ರಭಾವವನ್ನೇ ಮುನ್ನಡೆಸಿಕೊಂಡು ಹೋಗುವಂತೆ ತೋರುತ್ತಿದೆ. ಸರ್ಕಾರದ ನಡೆ ರಾಷ್ಟ್ರದ ಹಿತಕ್ಕೆ ಘಾತಕವಾಗುವ ಸಾಧ್ಯತೆಯಿದೆ” ಎಂದು ಟೀಕಿಸಿದರು.
ಬಿಜೆಪಿ ನಾಯಕ ಎಸ್ ಟಿ ಸೋಮಶೇಖರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, “ನನಗೆ ಗೊತ್ತಿದ್ದಂತೆ ಕಾಂಗ್ರೆಸ್ಗೆ ಯಾರೂ ವಾಪಸ್ ಹೋಗುತ್ತಿಲ್ಲ. ಆದರೆ ಒಮ್ಮೆ ಅನುಮಾನ ಬಂದರೆ ಎಲ್ಲರನ್ನೂ ಅಪನಂಬಿಕೆಯಿಂದ ನೋಡಬೇಕಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾತಿನ ಯುದ್ಧದಲ್ಲಿ ಮಾನ ಕಳೆದುಕೊಳ್ಳುತ್ತಿರುವ ನಾಯಕರು
“ಡಿ ಕೆ ಶಿವಕುಮಾರ್ ಅವರು ಸೋಮಶೇಖರ್ ಅವರ ಗುರುವಾಗಿರಬಹುದು, ಅದರಲ್ಲೇನೂ ತಪ್ಪಿಲ್ಲ. ಯಾವುದೇ ಸಂಪರ್ಕವಿಲ್ಲದೆ ಅವರು ಹೀಗೆ ಹೇಳಲು ಸಾಧ್ಯವಿಲ್ಲ. ಒಂದೋ ಇವರಿಗೆ ಮಾಹಿತಿ ಇರಬೇಕು ಅಥವಾ ಯಾರೋ ಸಂಪರ್ಕದಲ್ಲಿರಬಹುದು” ಎಂದು ಹೇಳಿದರು.
“ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಸರಿಯಾಗಿದ್ದರೆ ಇವರ ವರ್ತನೆಯ ಕುರಿತು ಯಾರೂ ಪತ್ರ ಬರೆದು, ಶಾಸಕಾಂಗ ಸಭೆ ಕರೆಯುತ್ತಿರಲಿಲ್ಲ. ಆದ್ದರಿಂದ ಯಾರ ಮಾತನ್ನೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ” ಎಂದರು.