ಮುಸ್ಲಿಂ ಬಾಲಕನೊಬ್ಬ ಹಿಂದೂ ಬಾಲಕಿಯೊಂದಿಗೆ ಸುತ್ತಾಡಲು ಹೋಗಿದ್ದನೆಂದು ಆರೋಪಿಸಿದ ಗುಂಪೊಂದು ಆತನನ್ನು ಅಮಾನುಷವಾಗಿ ಥಳಿಸಿರುವ ಘಟನೆ ಮುಂಬೈ ಬಾಂದ್ರಾ ಟರ್ಮಿನಸ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಈ ದಾಳಿ ಜುಲೈನಲ್ಲಿ ನಡೆದಿದ್ದು ಎನ್ನಲಾಗಿದ್ದು, ಆದರೆ ಮಂಗಳವಾರ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆದ ವಿಡಿಯೋದಲ್ಲಿ ಯುವಕರ ಗುಂಪು ”ಜೈ ಶ್ರೀ ರಾಮ್” ಮತ್ತು ”ಲವ್ ಜಿಹಾದ್ ನಿಲ್ಲಿಸಿ” ಎಂದು ಕೂಗುತ್ತಾ ಮುಸ್ಲಿಂ ಬಾಲಕನನ್ನು ರೈಲ್ವೆ ನಿಲ್ದಾಣದ ಹೊರಗೆ ಎಳೆದೊಯ್ದು ಹಲ್ಲೆ ನಡೆಸುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ತನ್ನನ್ನು ಥಳಿಸಬೇಡಿ ಎಂದು ಬಾಲಕಿ ಗುಂಪಿನ ಬಳಿ ಬೇಡಿಕೊಳ್ಳುತ್ತಿರುವುದನ್ನು ನೋಡಬಹುದು.
ಈ ಘಟನೆ ಬಗ್ಗೆ ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್‌ದೇಸಾಯಿ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.
“ಮುಂಬೈ ಬಾಂದ್ರಾ ನಿಲ್ದಾಣದಲ್ಲಿ ಗುಂಪೊಂದು ಯುವಕನಿಗೆ ಥಳಿಸಿದ ಆಘಾತಕಾರಿ ವಿಡಿಯೋವೊಂದು ಬೆಳಕಿಗೆ ಬಂದಿದ್ದು, ಘಟನೆಯನ್ನು ಸ್ಥಳದಲ್ಲಿದ್ದ ಜನಸಮೂಹ ಖುಷಿಯಿಂದ ಚಿತ್ರೀಕರಿಸುತ್ತಿದೆ. ಮುಸ್ಲಿಂ ಬಾಲಕ ಹಿಂದೂ ಬಾಲಕಿಯೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುತ್ತಾ ಬಂದ ಗುಂಪು ನಿರ್ದಯವಾಗಿ ಹಲ್ಲೆ ನಡೆಸಿದೆ. ಹಲ್ಲೆಯ ಘಟನೆಯ ದೂರನ್ನು ಪೊಲೀಸರು ಇನ್ನೂ ದಾಖಲಿಸಿಲ್ಲ. ಯಾರನ್ನೂ ಬಂಧಿಸಿಲ್ಲ, ತನಿಖೆ ನಡೆಸಿಲ್ಲ. ಇದು ಯಾವುದೋ ದೂರದ ಸ್ಥಳವಲ್ಲ. ಇದು ಮುಂಬೈನ ಹೃದಯವಾದ ಬಾಂದ್ರಾ. ಇದು ಭಾರತ. ಹಲ್ಲೆಯನ್ನು ನಿರ್ಭೀತಿಯಿಂದ ಮಾಡಲು ಕಾರಣರಾದವರು ಯಾರು? ದ್ವೇಷ ರಾಜಕಾರಣವನ್ನು ‘ಸಾಮಾನ್ಯೀಕರಣಗೊಳಿಸಲಾಗುತ್ತಿದೆಯೇ? ದ್ವೇಷ ಬಿಡಿ, ದೇಶವನ್ನು ಒಗ್ಗೂಡಿಸಿ’ ಎಂದು ರಾಜ್‌ದೀಪ್ ಸರ್‌ದೇಸಾಯಿ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಸಹಾಯಕ ಆಯುಕ್ದೀತ ದೀಕ್ಷಿತ್ ಗೆಡಮ್ ಅವರು, ”ಜುಲೈ 21ರಂದು ಈ ಘಟನೆ ನಡೆದಿದೆ. ನಾವು ಈ ವಿಡಿಯೊವನ್ನು ಮಂಗಳವಾರವಷ್ಟೇ ನೋಡಿದ್ದೇವೆ. ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿರುವುದರಿಂದ ನಾವು ಅದನ್ನು ಪರಿಶೀಲಿಸಲು ಸರ್ಕಾರಿ ರೈಲ್ವೆ ಪೊಲೀಸರಿಗೆ ಸೂಚಿಸಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
ಘಟನೆಯು ರೈಲ್ವೆ ಪೊಲೀಸರ ಅಧಿಕಾರ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಈ ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಿಜೋರಾಂ ಮೇಲೆ ನನ್ನ ತಂದೆ ಬಾಂಬ್ ಹಾಕಿಲ್ಲ: ದಾಖಲೆಯೊಂದಿಗೆ ಬಿಜೆಪಿಗೆ ತಿರುಗೇಟು ನೀಡಿದ ಸಚಿನ್ ಪೈಲಟ್
ಸಮಾಜವಾದಿ ಪಕ್ಷದ ಶಾಸಕ ರೈಸ್ ಶೇಖ್ ಕೂಡ ವಿಡಿಯೋವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
”ಮುಂಬೈ ಬಾಂದ್ರಾ ಪ್ರದೇಶದ ನಡೆದ ಭಯಾನಕ ಘಟನೆಯಿಂದ ವಿಚಲಿತನಾಗಿದ್ದೇನೆ. ಹಿಂಸೆ ಮತ್ತು ದ್ವೇಷಕ್ಕೆ ನಮ್ಮ ಸಮಾಜದಲ್ಲಿ ಸ್ಥಾನವಿಲ್ಲ. ಧರ್ಮ ಅಥವಾ ಇನ್ನಾವುದೇ ನೆಪವನ್ನು ಆಧರಿಸಿದ ಇಂತಹ ಹಿಂಸಾಚಾರಗಳು ಒಪ್ಪುವಂತವಲ್ಲ” ಎಂದು ಶಾಸಕ ರೈಸ್ ಶೇಖ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.