ಕಳೆದ ಮೂರು ವರ್ಷಗಳಿಂದ ಚೀನಾದೊಂದಿಗೆ ನಡೆದ 19 ಸುತ್ತಿನ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ಸರ್ಕಾರಕ್ಕೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.
“ಚೀನಿಯರು ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು ಯಾವಾಗ ವಶಪಡಿಸಿಕೊಳ್ಳಲಾಗುತ್ತದೆ ಮತ್ತು ಚೀನಾದ ಸೇನೆಯನ್ನು ಯಾವಾಗ ಹಿಮ್ಮೆಟ್ಟಿಸಲಾಗುತ್ತದೆ. ಚೀನಿಯರು ಆಕ್ರಮಿಸಿಕೊಂಡಿರುವ ಭಾರತದ ‘ವೈ’ ಜಂಕ್ಷನ್ ವಲಯದ ಸುಮಾರು 1,000 ಚದರ ಕಿಲೋಮೀಟರ್‌ಗಳಷ್ಟು ಭೂಪ್ರದೇಶವನ್ನು ಬಿಟ್ಟುಕೊಡಲು ಮೋದಿ ಸರ್ಕಾರವು ರಾಜಿ ಮಾಡಿಕೊಂಡಿದೆಯೇ? ಎಂದು ಪ್ರಶ್ನಿಸಿದ್ದಾರೆ.
“ಚೀನಾಕ್ಕೆ ತಮ್ಮ “ಕೆಂಪು ಕಣ್ಣುಗಳು” ತೋರಿಸುವ ಮೂಲಕ ಏಪ್ರಿಲ್ 2020ರಂತೆ ನಮ್ಮ ಪ್ರದೇಶವನ್ನು ಮರುಸ್ಥಾಪಿಸಿ ಯಥಾಸ್ಥಿತಿಯನ್ನು ಯಾವಾಗ ಕಾಯ್ದುಕೊಳ್ಳಲಾಗುತ್ತದೆ?” ಎಂದು ರಣದೀಪ್ ಸುರ್ಜೆವಾಲಾ ಕೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಾಲಕಿಯೊಂದಿಗೆ ಮಾತನಾಡಿದ್ದಕ್ಕೆ ಮುಸ್ಲಿಂ ಬಾಲಕನಿಗೆ ಅಮಾನುಷ ಹಲ್ಲೆ: ‘ಜೈ ಶ್ರೀರಾಂ’ ಘೋಷಣೆಗೆ ಒತ್ತಾಯ
“ಜೂನ್ 20, 2020 ರಂದು ಸರ್ವಪಕ್ಷಗಳ ಸಭೆಯಲ್ಲಿ ‘ಯಾರೂ ಭಾರತೀಯ ಪ್ರದೇಶವನ್ನು ಪ್ರವೇಶಿಸಿಲ್ಲ’ ಎಂದು ಪ್ರಧಾನಿ ಮೋದಿ ಇನ್ನೂ ಸಮರ್ಥಿಸಿಕೊಂಡಿದ್ದಾರೆಯೇ ಅಥವಾ ಅವರು ರಾಷ್ಟ್ರವನ್ನು ದಾರಿತಪ್ಪಿಸಿದ್ದಾರೆಯೇ? ಯಾರೊಬ್ಬರು ಭಾರತೀಯ ಭೂಪ್ರದೇಶವನ್ನು ಪ್ರವೇಶಿಸದಿದ್ದರೆ, ಚೀನಿಯರೊಂದಿಗೆ ಏಕೆ ನಿರಂತರವಾಗಿ ಮಾತುಕತೆ ನಡೆಸಲಾಗುತ್ತಿದೆ?” ಎಂದು ಸುರ್ಜೆವಾಲಾ ಗುಡುಗಿದರು.
ಚೀನೀಯರು ಅಕ್ರಮವಾಗಿ ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಸೇನಾ ಮುಖ್ಯಸ್ಥರು ಹೇಳುವುದು ತಪ್ಪೇ? ಭಾರತ ಮಾತೆಯನ್ನು ರಕ್ಷಿಸಲು ಮೋದಿ ಸರ್ಕಾರವು ವಾಕ್ಚಾತುರ್ಯವನ್ನು ಮೀರಿ ಯಾವಾಗ ಮುಂದಕ್ಕೆ ಹೆಜ್ಜೆಯಿಡುತ್ತದೆ?” ಎಂದು ಸರ್ಕಾರವನ್ನು ಸುರ್ಜೆವಾಲಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಪಶ್ಚಿಮ ಲಡಾಕ್‌ನ ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ಬಳಿ ತಲೆದೋರಿರುವ ಗಡಿ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವ ಸಂಬಂಧ ಇತ್ತೀಚೆಗೆ ನಡೆದ ಭಾರತ ಮತ್ತು ಚೀನಾ ಮಿಲಿಟರಿ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ. ಗಡಿ ರೇಖೆಯಲ್ಲಿ ಎರಡು ಕಡೆಯಿಂದಲೂ ತ್ವರಿತಗತಿಯಲ್ಲಿ ಶಾಂತಿಯ ವಾತಾವರಣವನ್ನು ಕಾಯ್ದುಕೊಳ್ಳುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಜಂಟಿ ಹೇಳಿಕೆ ನೀಡಿವೆ.