ಒಂದು ಸಿನೆಮಾ ಹಾಡು ಮತ್ತು ಬೇಗಂ ಪರವೀನ್ ಸುಲ್ತಾನಾರ ಪ್ರಪಂಚ

Date:

ಉಸ್ತಾದ್ ದಿಲ್ಶಾದ್ ಖಾನ್ ಸಂಗೀತ ಮಾರ್ತಾಂಡ, ಪರವೀನ್ ಸುಲ್ತಾನಾ ಶಾಸ್ತ್ರೀಯ ಸಂಗೀತದ ಕ್ಲಿಯೊಪಾತ್ರಾ ಎಂದೂ ಖ್ಯಾತರು. ಆದರೆ ಪರವೀನ್ ಅದೇಕೆ ಹಣೆಗೆ ಬಿಂದಿ ಹಚ್ಚಿಕೊಳ್ಳುತ್ತಾರೆ ಎಂದು ಕೇಳುವವರಿಗೆ ಲೆಕ್ಕವಿಲ್ಲ. ಸಂಗೀತ ಲೋಕ ಪ್ರವೇಶಿಸುವ ಮುನ್ನ ಯಾವುದೇ ವರ್ಗ, ಜಾತಿ ಇಲ್ಲವೆ ಧರ್ಮದ ಪ್ರಮಾಣಪತ್ರ ಯಾರೂ ಕೇಳುವುದಿಲ್ಲ, ಹಾಗಾಗಿ ಅದನ್ನು ಒದಗಿಸುವ ದುಸ್ಸಾಹಸ ಮಾಡುವುದೂ ಇಲ್ಲ. 

ಹಿಂದಿ ಚಿತ್ರ ಜಗತ್ತಿನ ಪ್ರಸಿದ್ಧ ಸಂಗೀತ ನಿರ್ದೇಶಕ ಆರ್.ಡಿ ಬರ್ಮನ್ ‘ಕುದ್ರತ್’ ಚಿತ್ರದಲ್ಲಿ ಒಬ್ಬ ಪಾತ್ರಧಾರಿಗೆ ಹಿನ್ನೆಲೆ ಗಾಯಕಿಯ ಹುಡುಕಾಟದಲ್ಲಿದ್ದರು. ಅವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ದಿಗಂತದಲ್ಲಿ ಮಿಂಚತೊಡಗಿದ ಹೊಸ ತಾರೆ ಪರವೀನ್ ಸುಲ್ತಾನಾ ಅವರಿಗೆ ಹಾಡಲು ಕೇಳಿಕೊಳ್ಳಬೇಕೆಂದಿದ್ದರು. ಅದನ್ನು ಆಗಲೇ ಕಿಶೋರ್ ಕುಮಾರ್ ಹಾಡಿಯಾಗಿತ್ತು. ಅದರ ಇನ್ನೊಂದು ಆವೃತ್ತಿಯನ್ನು ಒಬ್ಬ ಗಾಯಕಿ ಹಾಡಬೇಕಿತ್ತು. ಆದರೆ ಬರ್ಮನ್‌ರು ಪರವೀನ್ ಎದುರು ಆ ವಿಷಯ ಪ್ರಸ್ತಾಪಿಸಲು ಹಿಂದೇಟು ಹಾಕಿದರು. ಅದಕ್ಕೆ ಕಿಶೋರ್ ‘ಅವರೇ ಏಕೆ? ಅವರ ಬದಲಾಗಿ ಆಶಾ ಭೋಸ್ಲೆ ಹಾಡಬಹುದಲ್ಲ’ ಎಂದರು.

ಬರ್ಮನ್‌ರು ಪರವೀನ್ ಸುಲ್ತಾನಾ ಅವರೇ ಹಾಡುವುದು ಸೂಕ್ತವೆಂದು ಭಾವಿಸಿದ್ದರು. ಕಾರಣ ಚಿತ್ರದಲ್ಲಿ ಗಾಯಕಿ ಒಬ್ಬ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತಳು. ವೇದಿಕೆ ಮೇಲೆ ಅವಳು ಹಾಡಬೇಕಿತ್ತು. ಆ ಹಾಡನ್ನು ಭೈರವಿ ರಾಗದಲ್ಲಿ ಸ್ವರ ಸಂಯೋಜನೆ ಮಾಡಿದ್ದರು. ಅದಕ್ಕಾಗಿ ಬೇರೆಯವರ ಮೂಲಕ ಪರವೀನ್‌ರ ಮನವೊಲಿಸಲೆತ್ನಿಸಿದ್ದರು. 

‘ಆಯಿತು, ಅವರಿಗೆ ಕರೆ ಮಾಡಿ’ ಕಿಶೋರ್ ಸೂಚಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

‘ಹೆದರಿಕೆಯಾಗುತ್ತಿದೆ. ಅವರಿಗೆ ಚಿತ್ರಗೀತೆಯೆಂದರೆ ಎಲ್ಲಿಲ್ಲದ ಕೋಪ. ಅಷ್ಟೇ ಏಕೆ ವಿಪರೀತ ದ್ವೇಷದ ಭಾವನೆ ಹೊಂದಿರುವರು.’

‘ಪಾಕೀಜಾ’ ಚಿತ್ರದಲ್ಲಿ ಅವರು ಹಾಡಿದ್ದ ‘ಕೌನ್ ಗಲಿ ಗಯೋ ಶಾಮ್’ ಅನ್ನು ಹಿನ್ನೆಲೆಯಲ್ಲಿ ಬಳಸಿಕೊಳ್ಳಲಾಯಿತು. ಅದು ಅವರಿಗೆ ಎಳ್ಳಷ್ಟೂ ತೃಪ್ತಿಕರವೆನಿಸಿರಲಿಲ್ಲ. ‘ಅವರ ಪತಿಗೆ ಕರೆ ಮಾಡಿ ನೋಡಿ’ ಎಂದರು ಕಿಶೋರ್. ಬರ್ಮನ್‌ರು ಅವರಿಗೆ ಕರೆ ಮಾಡಿಯೇಬಿಟ್ಟರು. ಸುದೈವದಿಂದ ಕರೆಯನ್ನು ಅವರೇ ಸ್ವೀಕರಿಸಿದರು. ಬರ್ಮನ್ ಸನ್ನಿವೇಶ ಕುರಿತಂತೆ ವಿವರವಾಗಿ ಮಾತಾಡಿದರು. ‘ಆಯಿತು, ಪರವೀನ್ ಜೊತೆ ಮಾತಾಡುವೆ. ಅನಂತರ ನಿಮ್ಮೊಂದಿಗೆ ಮಾತಾಡಲು ಅವಳಿಗೆ ಹೇಳುತ್ತೇನೆ’ ಎಂದರು.

ಆ ರಾತ್ರಿ ಪರವೀನ್ ಜೊತೆ ಅವರು ಮಾತು ಮಾತಿನಲ್ಲಿ ವಿಷಯ ಪ್ರಸ್ತಾಪಿಸಿದರು. ಅವರ ಮಾತು ಕೇಳಿದೊಡನೆ ಪರವೀನ್ ಕೆಂಡಾಮಂಡಲವಾದರು. ‘ಚಿತ್ರ ಜಗತ್ತಿನ ಆ ಜನರನ್ನು ಕಂಡರೆ ನನಗಾಗದು. ಅವರು ಪ್ರತಿಭೆಗೆ ಮನ್ನಣೆ ನೀಡುವವರೇ ಅಲ್ಲ. ಅವರಿಗೆ ಶಾಸ್ತ್ರೀಯ ಸಂಗೀತದ ಗಂಧಗಾಳಿಯೂ ಇಲ್ಲ. ಚಿತ್ರಗೀತೆ ಹಾಡುವುದೆಂದರೆ ಪಂಜರದೊಳಗಿನ ಬುಲ್‌ಬುಲ್ ಹಾಡಿದಂತೆ’ ಹೆಣ್ಣು ಹುಲಿಯ ಗರ್ಜನೆ ಮಾರ್ದನಿಸಿತು. ಕೊನೆಗೆ ಅವರ ಪತಿ ಮಾರನೇ ದಿನ ‘ಬೇರೆ ದಾರಿ ಕಂಡುಕೊಳ್ಳಬೇಕಷ್ಟೇ’ ಎಂದು ಬರ್ಮನ್‌ರಿಗೆ ಸೂಚಿಸಿದರು.

ಇದನ್ನು ಓದಿದ್ದೀರಾ?: ನೂರರ ನೆನಪು | ವಿಷಾದ ಗೀತೆಗಳ ವಿಶಿಷ್ಟ ಗಾಯಕ ಮುಖೇಶ್ 

ಅವರ ಮಾತು ಕೇಳಿ ಕಿಶೋರ್ ತಾವೇ ಪರವೀನ್‌ರಿಗೆ ಕರೆ ಮಾಡಿದರು. ‘ನಾನೇ ಒಂದು ಪಂಕ್ತಿ ಹಾಡುವೆ ಕೇಳಿರಿ’ ಎಂದು ಸನ್ನಿವೇಶವನ್ನು ವಿಶದವಾಗಿ ನಿರೂಪಿಸಿದರು. ಗಂಟಲು ಸರಿ ಮಾಡಿಕೊಂಡವರೇ ‘ಹಮೇಂ ತುಮ್‌ಸೇ ಪ್ಯಾರ್ ಕಿತನಾ ಯೆಹ ಹಮ್ ನಹೀಂ ಜಾನತೆ…’ ಹಾಡಲಾರಂಬಿಸಿದರು. ಅವರು ಹಾಡು ಪೂರ್ಣ ಕೇಳಲಿಲ್ಲ. ‘ನನಗೆ ಈ ಸಿನೆಮಾ ಹಾಡು ಎಂದರೆ ಮೈ ಉರಿಯುತ್ತದೆ’ ಎಂದಮೇಲೆ, ‘ಕಿಶೋರಿ ಅಮೋಣಕರ್ ಅವರನ್ನು ಕೇಳಿ ನೋಡಿ’ ಎಂದು ಬರ್ಮನ್‌ಗೆ ಸಲಹೆ ನೀಡಿದರು. ‘ಓಹ್! ಕಿಶೋರಿ? ಅವರು ಜೀವಂತ ಜ್ವಾಲಾಮುಖಿ’ ಎಂದ ಬರ್ಮನ್ ಹಣೆ ಬಡಿದುಕೊಂಡರು. 

ಆಗ ಆಶಾ ಭೋಸ್ಲೆಗೆ ಒಂದು ಉಪಾಯ ಹೊಳೆಯಿತು. ಎರಡು ದಿನಗಳ ನಂತರ ಷಣ್ಮುಖಾನಂದ ಹಾಲ್‌ನಲ್ಲಿ ಪರವೀನ್ ಅವರ ಕಾರ್ಯಕ್ರಮವಿತ್ತು. ಮುಂದಿನ ಸಾಲಿನ ಮಧ್ಯದಲ್ಲಿ ಆಶಾ ಭೋಸ್ಲೆ, ಕಿಶೋರ್ ಕುಮಾರ್ ಹಾಗೂ ಬರ್ಮನ್ ಆಸೀನರಾಗಿದ್ದರು. ಪರವೀನ್‌ರ ಗಾಯನವನ್ನು ಆಲಿಸುತ್ತ ಮೈಮರೆತಿದ್ದರು. ಕಾರ್ಯಕ್ರಮ ಮುಕ್ತಾಯಗೊಂಡ ಮೇಲೆ ಪರವೀನ್ ಸಭಿಕರಿಗೆ ಧನ್ಯವಾದ ಸಲ್ಲಿಸಿದರೆ ಇತ್ತ ಆಶಾ ಭೋಸ್ಲೆ ಎದ್ದು ನಿಂತರು. ‘ಪರವೀನಜಿ ನಿಮ್ಮದೇ ಶೈಲಿಯಲ್ಲಿ ಒಂದು ಹಾಡನ್ನು ಸ್ವಚ್ಛಂದವಾಗಿ ದಯವಿಟ್ಟು ಹಾಡುವಿರ?’ ಪರವೀನ್‌ಗೆ ಈಗ ದಿಕ್ಕು ತೋಚದಂತಾಯಿತು. ತಮ್ಮ ಆರಾಧ್ಯದೈವವಾಗಿದ್ದ ಆ ಮಹಾನ್ ಕಲಾವಿದೆ ಆಶಾ ಭೋಸ್ಲೆಗೆ ಆಗದು ಎನ್ನುವುದು ಸಾಧ್ಯವಿರಲಿಲ್ಲ.

ಅಷ್ಟೊತ್ತಿಗೆ ಆಶಾ ‘ಹಮೇಂ ತುಮ್‌ಸೆ ಪ್ಯಾರ್ ಕಿತನಾ…’ ಎಂದು ಮೆಲ್ಲಗೆ ಹಾಡಲಾರಂಭಿಸಿದ್ದರು. ತಮಗರಿವಿಲ್ಲದಂತೆ ಪರವೀನ್ ಸಹ ಠುಮ್ರಿ ಶೈಲಿಯಲ್ಲಿ ಹಾಡಲಾರಂಭಿಸಿದರು.

ಸ್ವಯಂಸ್ಫೂರ್ತಿಯಿಂದ ಆರಂಭವಾದ ಜುಗಲಬಂದಿ ಆಲಿಸಿದ ಸಭಿಕರು ಹಾಡು ಮುಗಿದೊಡನೆ ಕಿವಿಗಡಚಿಕ್ಕುವಂತೆ ಕರತಾಡನ ಮಾಡತೊಡಗಿದರು. ಸಭಿಕರ ಅಭೂತಪೂರ್ವ ಪ್ರತಿಕ್ರಿಯೆ ಕಂಡು ಪರವೀನ್ ಆನಂದಭಾಷ್ಪ ಸುರಿಸಿದರು. ಚಿತ್ರಗೀತೆಗಳ ಬಗೆಗಿನ ಅವರ ಪೂರ್ವಗ್ರಹ ಕರಗಿ ಹೋಯಿತು. ಹಾಡು ಹಕ್ಕಿಗೆ ಯಾವುದೇ ನಿರ್ಬಂಧವಿಲ್ಲವಾದರೆ ಇಂತಹ ಯಶಸ್ಸು ಶತಃಸಿದ್ಧವೆಂದು ಪರವೀನ್ ಹೇಳಿದರು.

ತಮ್ಮ ಶರತ್ತಿನ ಮೇಲೆ ಪರವೀನ್ ಹಾಡಲು ಒಪ್ಪಿದರು. ಕೊನೆಗೆ ಬರ್ಮನ್ ಅವರು ಆಶಾ ಅವರಿಗೆ ಧನ್ಯವಾದ ಸಲ್ಲಿಸಿದರು. ಆ ಒಂದು ಹಾಡಿಗಾಗಿ ಜನ ‘ಕುದ್ರತ್’ ಚಿತ್ರವನ್ನು ಮತ್ತೆ ಮತ್ತೆ ನೋಡಿದರು. ಈಗಲೂ ಸಂಗೀತ ಪ್ರೇಮಿಗಳ ನಾಲಿಗೆ ಮೇಲೆ ಆ ಹಾಡು ನಲಿದಾಡುತ್ತಿದೆ. ಪರವೀನ್ ಅಂದಿನಿಂದ ತಮ್ಮ ಗಾಯನ ಕಾರ್ಯಕ್ರಮದ ಕೊನೆಯಲ್ಲಿ ಸಭಿಕರನ್ನುದ್ದೇಶಿಸಿ ‘ಈ ಹಾಡು ನಿಮಗಾಗಿ. ನಿಮ್ಮ ಪ್ರೀತಿ, ವಿಶ್ವಾಸಕ್ಕಾಗಿ ಹಾಡಲೇಬೇಕಿದೆ, ಧನ್ಯವಾದ’ ಎಂದು ತಮ್ಮ ಕಾರ್ಯಕ್ರಮವನ್ನು ಮುಗಿಸತೊಡಗಿದರು. 

ಯಾವುದೇ ಕಲಾವಿದರಿಗೆ ಕಲಾಭಿಮಾನಿಗಳ ಪ್ರೀತಿ, ಪ್ರೋತ್ಸಾಹ ಮತ್ತು ಪ್ರತಿಕ್ರಿಯೆ ಅನಿವಾರ್ಯವಾಗುತ್ತದೆ. ಈ ಪರವೀನ್ ಸುಲ್ತಾನಾ ಅವರೇ ಇದಕ್ಕೊಂದು ಒಳ್ಳೆಯ ನಿದರ್ಶನವಾಗಿದ್ದಾರೆ. ಭಾರತದ ಪೂರ್ವ ಭಾಗದಲ್ಲಿ, ಅದರಲ್ಲೂ ಅಸ್ಸಾಮಿನಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಅದೇಕೋ ಏನೋ ಜನಪ್ರಿಯವಾಗಿರಲಿಲ್ಲ. ಅಂಥದ್ದರಲ್ಲಿ ಪರವೀನ್‌ರ ತಂದೆ ಇಕ್ರಾಮುಲ್ ಮಜೀದ್‌ರು ಶಾಸ್ತ್ರೀಯ ಸಂಗೀತ ಕಲಿತರು. ಯಾವ ಗುರುವಿನಿಂದಲೂ ಅವರು ಸಂಗೀತ ಕಲಿತಿರಲಿಲ್ಲ. ಸಂಗೀತವೆಂದರೆ ಅವರಿಗೆ ಪಂಚಪ್ರಾಣವಾಗಿತ್ತು. ಅವರು ಪಟಿಯಾಲಾ ಘರಾಣೆಯ ಉಸ್ತಾದ್ ಗುಲ್ ಮುಹಮ್ಮದ್ ಖಾನ್‌ರ ಸಂಗೀತವನ್ನು ಯಾವತ್ತೂ ಆಲಿಸುತ್ತಿದ್ದರು. ಹೀಗೇ ಅವರು ಪಟಿಯಾಲಾ ಘರಾಣೆಯ ಸಂಗೀತವನ್ನು ಕಲಿತರು. ಉಸ್ತಾದ್ ಬಡೇ ಗುಲಾಮ್ ಅಲಿ ಖಾನ್‌ರಂತೂ ಅವರ ಆತ್ಮೀಯ ಸ್ನೇಹಿತರಾಗಿದ್ದರು.

ಅಸ್ಸಾಮಿನ ಗುವಾಹಾಟಿ ಆಕಾಶವಾಣಿ ನಿಲಯವು ಅವರ ಸಂಗೀತದೊಂದಿಗೆ ಆರಂಭಗೊಂಡಿತ್ತು. ಚಿಕ್ಕ ವಯಸ್ಸಿನಲ್ಲೇ ಪರವೀನ್ ಸಂಗೀತದಲ್ಲಿ ಆಸಕ್ತಿ ಹೊಂದಿದ್ದನ್ನು ಅವರು ಗಮನಿಸಿದರು. ಮಗುವಿಗೆ ಪಟಿಯಾಲಾ ಘಾರಾಣಾದ ಸಂಗೀತವನ್ನು ಹೇಳಿಕೊಟ್ಟರು. ಕೆಲವೇ ವರ್ಷಗಳಲ್ಲಿ ತನ್ನ ಸಂಗೀತಜ್ಞಾನವನ್ನೆಲ್ಲ ಅವಳಿಗೆ ಧಾರೆಯೆರೆದರು. ಮುಂದೆ ಒಬ್ಬ ಸಮರ್ಥ ಗುರುವಿನ ಹುಡುಕಾಟದಲ್ಲಿ ತೊಡಗಿದ ಅವರು ಒಮ್ಮೆ ಉತ್ತರ ಪ್ರದೇಶದ ಒಬ್ಬ ಉಸ್ತಾದ್‌ರ ಬಳಿ ಮಗಳನ್ನು ಕರೆದೊಯ್ದರು.

‘ಇವಳು ಶಾಸ್ತ್ರೀಯ ಸಂಗೀತ ಕಲಿಯತೊಡಗಿದ್ದಾಳೆ ಖಾನ್‌ ಸಾಹೇಬ್‌ರೆ. ಇವಳನ್ನು ದಯವಿಟ್ಟು ಶಿಷ್ಯೆಯನ್ನಾಗಿ ಮಾಡಿಕೊಂಡು ಸರಿಯಾದ ದಾರಿಯಲ್ಲಿ ಮಗುವನ್ನು ಕೊಂಡೊಯ್ಯಬೇಕೆಂದು ಕೇಳಿಕೊಳ್ಳುವೆ’ ಎಂದರು ತಂದೆ. ಆ ಪುಟ್ಟ ಹುಡುಗಿಯನ್ನು ಕಂಡ ಉಸ್ತಾದ್ ‘ಚಹ ಮಾಡಲು ಬರುತ್ತದೆಯೆ?’ ಎಂದು ಕೇಳಿದರು. ಹುಡುಗಿ ಎಳ್ಳಷ್ಟೂ ಅಂಜದೇ ಅಳುಕದೇ ‘ಇಲ್ಲ, ಬರುವುದಿಲ್ಲ’ ಎಂದುಬಿಟ್ಟಳು.

‘ಹುಡುಗಿ ಎನ್ನುವುದನ್ನು ಮರೆತಿರುವೆಯಾ? ಅಡುಗೆ ಮಾಡುವುದನ್ನು ಕಲಿಯಬೇಕು, ತಿಳಿಯಿತೆ?’       

‘ಇಲ್ಲ, ನನಗೆ ಸಂಗೀತ ಬಲು ಇಷ್ಟ, ನಾನು ಸಂಗೀತ ಕಲಿಯಬೇಕೆಂದಿರುವೆ’

‘ಛೇ! ಮುಸ್ಲಿಂ ಹುಡುಗಿಯಾಗಿ ಹಾಡುವೆಯಾ?’ ಈ ಮಾತನ್ನು ಕೇಳಿದ ಮೇಲೆ ಇಂತಹ ಉಸ್ತಾದ್‌ರ ಬಗ್ಗೆ ಅಸಹ್ಯ ಎನಿಸಿತು ಆ ಹುಡುಗಿಗೆ.

ತಂದೆ ಅವಳನ್ನು ಕಣ್ಣು ಕಿಸಿದು ನೋಡಿದರು. ‘ಹಿರಿಯರೆದುರು ವಿಧೇಯತೆಯಿಂದ ನಡೆದುಕೊಳ್ಳಬೇಕೆನ್ನುವುದನ್ನು ಮರೆತೆಯಾ?’ ತಂದೆ ಗದರಿದರು. ತನ್ನನ್ನು ಹೀಗೆಂದೂ ಬೆದರಿಸಿದವರಲ್ಲ. ತನ್ನ ಮನೆಯ ಪರಿಸರ ಸಂಗೀತಮವಾಗಿತ್ತು. ಅವರು ಅಸ್ಸಾಮಿನಿಂದ ಹೊರಬಿದ್ದ ಮೇಲೇ ಮುಸ್ಲಿಮ್ ಹೆಣ್ಣುಮಕ್ಕಳು ಬುರ್ಖಾ ಧರಿಸುವುದನ್ನು ನೋಡಿದ್ದರು. ವಾಸ್ತವದಲ್ಲಿ ಹೆಣ್ಣಿನ ಮುಖ ನೋಡಬಾರದು. ಅಷ್ಟೇ ಅಲ್ಲ, ಅವಳ ದನಿ ಸಹ ಕೇಳಕೂಡದು ಎಂದು ಸಂಪ್ರದಾಯಸ್ಥ ಮುಸಲ್ಮಾನರು ಹೇಳುತ್ತಿರುವುದನ್ನು ಕೇಳಿರಲಿಲ್ಲ.

ಅಂಥ ಮುಸಲ್ಮಾನರಿಗೆ ಕರ್ಬಲಾ ಕಾಳಗದ ನಂತರ ಪ್ರವಾದಿಯ ಮೊಮ್ಮಗ ಹುಸೇನ್ ಮತ್ತವರ ಬಂಧು ಬಳಗ ಸೇರಿದಂತೆ ಅವರ ಹಲವಾರು ಸಮರ್ಥಕರ ಮಾರಣಹೋಮದ ದಾರುಣ ಕತೆಯನ್ನು ಜಗತ್ತಿಗೆ ತಿಳಿಸಿದವರು ಯಾರೆಂಬುದನ್ನು ಇಂಥ ಅಜ್ಞಾನಿಗಳಿಗೆ ತಿಳಿಹೇಳಬೇಕಿದೆ. ಕ್ರೂರಿ ಎಜೀದ್‌ನ ಆಜ್ಞೆ ಮೇರೆಗೆ ಮಹಿಳೆಯರು, ಮಕ್ಕಳು ಹಾಗೂ ವೃದ್ಧರನ್ನು ಸೆರೆಯಾಳಾಗಿ ಕರ್ಬಲಾ ಮೈದಾನದಿಂದ ಸಿರಿಯಾದ ರಾಜಧಾನಿ ದಮಾಸ್ಕಸ್‌ವರೆಗೆ ಕಾಲ್ನಡಿಗೆಯಲ್ಲಿ ಕರೆತರಲಾಯಿತು.

ಆಗ ಹುಸೇನ್‌ರ ಸೋದರಿ ಜೈನಬ್ ದಾರಿಯುದ್ದಕ್ಕೂ ಕರ್ಬಲಾದ ರಕ್ತಪಾತ ಹಾಗೂ ಮಹಿಳೆಯರ ಮೇಲಿನ ಘೋರ ಅತ್ಯಾಚಾರದ ಕತೆಯನ್ನು ಸಾರುತ್ತ ನೆಡೆದಳು. ಆ ದಿಟ್ಟ ಮಹಿಳೆಯ ವಾಗ್‌ವೈಖರಿಗೆ ತಲೆಬಾಗದವರಿರಲಿಲ್ಲ. ಮುಂದೆ ಆ ಕಥನವನ್ನಾಧರಿಸಿ ಉರ್ದು ಕವಿ ಮೀರ್ ಅನೀಸ್ ಮರ್ಸಿಯಾ (ಕಥನ ಕಾವ್ಯ) ರಚಿಸಿದ. ಆ ಮೂಲಕ ಮರ್ಸಿಯಾ ಕಾವ್ಯ ಪ್ರಕಾರ ಬಲು ಪರಿಣಾಮಕಾರಿಯೆನಿಸಿತು. ಇಂದಿಗೂ ಈ ಕಾವ್ಯ ಪ್ರಕಾರ ಅಧ್ಯಯನಕ್ಕೆ ಯೋಗ್ಯವೆನಿಸಿದೆ. ಮರ್ಸಿಯಾ ಎನ್ನುವ ಪದ ಕಿವಿ ಮೇಲೆ ಬಿದ್ದ ತಕ್ಷಣ ಜೈನಬ್, ಕರ್ಬಲಾ ಮೈದಾನದ ಭೀಕರ ರಕ್ತಪಾತ ಹಾಗೂ ಮೀರ್ ಅನೀಸ್ ನೆನಪಾಗುತ್ತಾರೆ. ಮುಲ್ಲಾ ಮೌಲವಿಗಳು ಈ ಪೈಕಿ ಯಾರನ್ನು ತಪ್ಪಿತಸ್ಥರೆಂದು ಫತವಾ ಹೊರಡಿಸುವರೋ?

ಪರವೀನ್ ಸುಲ್ತಾನಾರನ್ನು ಪಂಡಿತ್ ಚಿನ್ಮಯ ಲಾಹಿರಿಯವರು ತಮ್ಮ ಶಿಷ್ಯೆಯಾಗಿ ಅಲ್ಲ, ಸ್ವಂತ ಮಗಳಾಗಿ ಬರಮಾಡಿಕೊಂಡರು. ಅವರ ಬಳಿ ಸಂಗೀತ ಕಲಿಯುತ್ತ ಸಾಗಿದಂತೆ ಪಂಡಿತ್ ಚಿನ್ಮಯ ಅವರ ಆರೋಗ್ಯ ಹದಗೆಡಲಾರಂಭಿಸಿತು. ಈ ಅಮೂಲ್ಯ ರತ್ನವನ್ನು ಯಾರ ಕೈಗೆ ಒಪ್ಪಿಸಲಿ ಎನ್ನುವ ಚಿಂತೆ ಅವರನ್ನು ಕಾಡಲಾರಂಭಿಸಿತು. ಆಗ ಅವರಿಗೆ ಥಟ್ಟನೇ ಉಸ್ತಾದ್ ದಿಲಶಾದ್ ಖಾನ್ ನೆನಪಾದರು. ಕಿರಾಣಾ ಘರಾನಾದ ಖ್ಯಾತ ಉಸ್ತಾದರಿಗೆ ‘ಈ ಗಂಡುಬೀರಿಗೆ ಸಂಗೀತ ಹೇಳಿಕೊಡುವಿರಾ?’ ಎಂದು ಕೇಳಿದರು. ಅದುವೇ ತಮಗೆ ಸಂದ ದೊಡ್ಡ ಪುರಸ್ಕಾರವೆಂದು ಅವರು ಭಾವಿಸಿದರು.

ಆಕಾಶವಾಣಿಯಲ್ಲಿ ಅವರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಒಮ್ಮೆ ಖಾನ್ ಸಾಹೇಬರು ಮುಂಬೈಗೆ ಆಗಮಿಸಿದ್ದರು. ಕಾಕತಾಳೀಯವೆನ್ನುವಂತೆ ಅಲ್ಲಿ ತಮ್ಮ ಶಿಷ್ಯೆ ಅನಿಮಾ ರಾಯ್ ಅವರ ನಿವಾಸದಲ್ಲಿ ಮೊದಲು ಅವರ ಗಾಯನ ಕಾರ್ಯಕ್ರಮ ಏರ್ಪಾಟಾಗಿತ್ತು. ಅವರ ಗಾಯನವನ್ನಾಲಿಸಿದ ಪರವೀನ್ ‘ಈ ಗಾಯಕ ಯಾರು? ಅವರ ಗಾಯನದಲ್ಲಿ ದೋಷ ಹುಡುಕಲೆತ್ನಿಸಿದವರಿಗೆ ತಮ್ಮ ಜೀವಮಾನದಲ್ಲೇ ಒಂದು ದೋಷ ಕಾಣಸಿಗಲಾರದು’ ಎಂದು ಉದ್ಗರಿಸಿದರಂತೆ.

ತಕ್ಷಣ ಖಾನ್ ಸಾಹೇಬರನ್ನು ಅಭಿನಂದಿಸಿ ‘ಚಹ ಕುಡಿಯುವಿರಾ?’ ಎಂದು ಕೇಳಿದ್ದರು. ‘ಹಾಂ ಒಂದು ಕಪ್ ಸಕ್ಕರೆ ಅವಶ್ಯ ಬೇಕು’ ಎಂದರಂತೆ ಖಾನ್‌ಸಾಹೇಬರು, ಹೀಗೆ ಕಿರಾನಾ ಮತ್ತು ಪಟಿಯಾಲಾ ಘರಾನಾದ ಇಬ್ಬರು ದಿಗ್ಗಜರು ಗುರು ಶಿಷ್ಯೆಯರಾಗಿ ಸಂಗೀತಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದರು. ಜಗತ್ತಿನಾದ್ಯಂತ ಅವರ ನೂರಕ್ಕೂ ಹೆಚ್ಚು ಕಾರ್ಯಕ್ರಮಗಳು ಅವರನ್ನು ಜನಪ್ರಿಯತೆ ಶಿಖರಕ್ಕೇರಿಸಿದವು. ಇಲ್ಲಿಯತನಕ ಸೋದರ ಸೋದರಿಯರ, ತಂದೆ ಮಗಳ ಜುಗಲ್‌ಬಂದಿ ಕಾರ್ಯಕ್ರಮಗಳು ನಡೆದಿವೆ. ಆದರೆ ಈ ಪತಿ ಪತ್ನಿಯರು ಜುಗಲ್‌ಬಂದಿ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಒಂದು ದಾಖಲೆ ನಿರ್ಮಿಸಿದರು ಎನ್ನಬಹುದು. ನಿಜಕ್ಕೂ ಅವರ ದಾಂಪತ್ಯ ಜೀವನ ಜೇನುಗೂಡಾಯಿತು. ಆ ಗೂಡಿನಿಂದ ಹೊರಹೊಮ್ಮಿದ ಅನೇಕ ಪ್ರತಿಭಾವಂತರು ಎರಡೂ ಘರಾನಾಗಳ ಪ್ರತಿನಿಧಿಗಳಾಗಿ ಬೆಳಗುತ್ತಿದ್ದಾರೆ.

ಹಾಂ, ಈ ಸಂಗೀತ ಲೋಕ ಪ್ರವೇಶಿಸುವ ಮುನ್ನ ಯಾವುದೇ ವರ್ಗ, ಜಾತಿ ಇಲ್ಲವೆ ಧರ್ಮದ ಪ್ರಮಾಣಪತ್ರ ಯಾರೂ ಕೇಳುವುದಿಲ್ಲ, ಹಾಗಾಗಿ ಅದನ್ನು ಒದಗಿಸುವ ದುಸ್ಸಾಹಸ ಮಾಡುವುದೂ ಇಲ್ಲ. ಇಸ್ಲಾಂ ಸಂಗೀತದ ಕಡುವಿರೋಧಿಯೆನ್ನುವವರು ಒಂದು ಮಾತನ್ನು ಮರೆತಿದ್ದಾರೆ ಅಷ್ಟೇ. ಒಟ್ಟಾರೆ ಆಗಿ ಹೋಗಿರುವ ಒಂದು ಲಕ್ಷ ಇಪ್ಪತ್ನಾಲ್ಕು ಸಾವಿರ ಪ್ರವಾದಿ, ಅವತಾರ ಹಾಗೂ ದೇವದೂತರನ್ನು ತಮ್ಮವರೇ ಎಂದು ಇಸ್ಲಾಂ ಸ್ವಾಗತಿಸಿದೆ. ಆ ಪೈಕಿ ದಾವೂದ್ ಒಬ್ಬರಾಗಿದ್ದಾರೆ. ಅವರು ಗಾಯನ ಹಾಗೂ ವಾದನದ ಮೇಲೆ ಪ್ರಭುತ್ವ ಸಾಧಿಸಿದ್ದಾರೆ. ಪ್ರವಾದಿ ಮುಹಮ್ಮದ್‌ರ ನೆಚ್ಚಿನ ಸಂಗಾತಿ ಅಬೂ ಮೂಸಾ ಅಶರಿಯವರ ಕುರ್‌ಆನ್ ಪಠನ(ಕಿರ್‌ಆತ್) ಕೇಳಿದವರು ಮಂತ್ರಮುಗ್ಧರಾಗುತ್ತಿದ್ದರು. ಪ್ರವಾದಿ ಮುಹಮ್ಮದ್ ತಮ್ಮ ಆ ಸಂಗಾತಿಗೆ ‘ನಿಮ್ಮ ಕಂಠದಲ್ಲಿ ದಾವೂದ್‌ರ ವಾದ್ಯ ನುಡಿಯುತ್ತದೆಯೆ?’ ಎಂದು ಕೇಳುತ್ತಿದ್ದರು.

ಹೌದು, ಉಸ್ತಾದ್ ದಿಲ್ಶಾದ್ ಖಾನ್ ಅವರ ಮನೆತನ ಘನ ವಿದ್ವಾಂಸರು ಹಾಗೂ ದಿಗ್ಗಜ ಸಂಗೀತಗಾರರಿಂದ ಹೆಸರುವಾಸಿಯಾಗಿದೆ. ಉಸ್ತಾದ್‌ರ ಅಣ್ಣ ಬುದ್ಧದೇವ ದಾಸಗುಪ್ತಾ ಪ್ರಖ್ಯಾತ ಸರೋದ ವಾದಕರು. ಉಸ್ತಾದ್ ದಿಲ್ಶಾದ್ ಖಾನ್ ಈ ಮನೆಯಲ್ಲಿ ಜನಿಸಿದಾಗ ಅವರಿಗೆ ಅರವಿಂದ್ ಎಂದು ನಾಮಕರಣವಾಗಿತ್ತು. ಇಂದು ಅವರು ಸಂಗೀತ ಮಾರ್ತಾಂಡ ಎಂದು ಹಾಗೂ ಪರವೀನ್ ಸುಲ್ತಾನಾ ಶಾಸ್ತ್ರೀಯ ಸಂಗೀತದ ಕ್ಲಿಯೊಪಾತ್ರಾ ಎಂದೂ ಖ್ಯಾತರು. ಆದರೆ ಪರವೀನ್ ಅದೇಕೆ ಹಣೆಗೆ ಬಿಂದಿ ಹಚ್ಚಿಕೊಳ್ಳುತ್ತಾರೆ ಎಂದು ಕೇಳುವವರಿಗೆ ಲೆಕ್ಕವಿಲ್ಲ. ಅದು ಅವರಿಗೆ ಇಷ್ಟವಾಗುತ್ತದೆ ಅಷ್ಟೇ. ಇನ್ನು ಉಸ್ತಾದ್ ದಿಲ್ಶಾದ್ ಅವರ ಧರ್ಮವನ್ನು ತಿಳಿದುಕೊಳ್ಳುವುದು ಯಾರಿಗಾದರೂ ಮುಖ್ಯವೆನಿಸಿದೆಯೆ?

ಹಸನ್ ನಯೀಂ ಸುರಕೋಡ
+ posts

ಲೇಖಕ, ಅನುವಾದಕ

ಪೋಸ್ಟ್ ಹಂಚಿಕೊಳ್ಳಿ:

ಹಸನ್ ನಯೀಂ ಸುರಕೋಡ
ಹಸನ್ ನಯೀಂ ಸುರಕೋಡ
ಲೇಖಕ, ಅನುವಾದಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗರ್ಭಾವಸ್ಥೆ ಪುಸ್ತಕದ ಶೀರ್ಷಿಕೆಯಲ್ಲಿ ‘ಬೈಬಲ್’ ಬಳಕೆ; ನಟಿ ಕರೀನಾ ಕಪೂರ್‌ಗೆ ನೋಟಿಸ್

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್‌ಗೆ ಮಧ್ಯಪ್ರದೇಶ ಹೈಕೋರ್ಟ್‌ ನೋಟಿಸ್‌ ನೀಡಿದೆ....

ನೆನಪು | ಮೇ ಡೇ ಎಂದಾಕ್ಷಣ ಬಹುಭಾಷಾ ಗಾಯಕ ಮನ್ನಾ ಡೇ ನೆನಪಾಗುವುದೇಕೆ?

ಮೇ ಡೇ- ಮನ್ನಾ ಡೇ ಜನ್ಮದಿನ. ಬಂಗಾಲಿ ಗಾಯಕ ಮುಂಬೈಗೆ ಹೋಗಿ...

ಅಕ್ರಮವಾಗಿ ಐಪಿಎಲ್ ಪ್ರಸಾರ: ನಟಿ ತಮನ್ನಾಗೆ ಸೈಬರ್ ಪೊಲೀಸರಿಂದ ಸಮನ್ಸ್

ಫೇರ್‌ಪ್ಲೇ ಆಪ್‌ನಲ್ಲಿ 2023ರ ಆವೃತ್ತಿಯ ಐಪಿಎಲ್ ಅನ್ನು ಅಕ್ರಮವಾಗಿ ಪ್ರಸಾರ ಮಾಡಿದ್ದ...

ಬಿಟ್‌ಕಾಯಿನ್ ಹಗರಣ| ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್‌ಕುಂದ್ರಾಗೆ ಸೇರಿದ ಬರೋಬ್ಬರಿ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇಡಿ) ನಟಿ ಶಿಲ್ಪಾ ಶೆಟ್ಟಿ...