ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಬರುವ ಬೃಹತ್ ನೀರುಗಾಲುವೆಗಳ ಬಳಿ ಅಗತ್ಯ ಕಾಮಗಾರಿ ಕೈಗೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ವಲಯ ಆಯುಕ್ತ ಜಯರಾಮ್ ರಾಯಪುರ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಬರುವ ಬೃಹತ್ ನೀರುಗಾಲುವೆ ಪರಿಶೀಲಿಸಿ ಬಳಿಕ ಮಾತನಾಡಿದ ಅವರು, “ನಾಗರಿಕರಿಗೆ ಮಳೆಗಾಲದ ವೇಳೆ ರಾಜಕಾಲುವೆಗಳಿಂದ ಯಾವುದೇ ರೀತಿಯ ಸಮಸ್ಯೆ ಆಗದಂತೆ ಸೂಕ್ತ ಕ್ರಮಗಳನ್ನು ಕೈಗೊಂಡು ರಾಜಕಾಲುವೆಗಳಲ್ಲಿ ಸಂಗ್ರಹವಾಗುವ ಹೂಳನ್ನು ಕಾಲಕಾಲಕ್ಕೆ ತೆರವುಗೊಳಿಸುತ್ತಿರಬೇಕು” ಎಂದರು.
“ಸಾರ್ವಜನಿಕರ ಹಿತದೃಷ್ಠಿಯಿಂದ ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಕಛೇರಿ ಹತ್ತಿರ ಹರಿಯುತ್ತಿರುವ ಬೃಹತ್ ಮಳೆ ನೀರುಗಾಲುವೆಯ ನಿರ್ವಹಣೆಗೆ ತೊಂದರೆಯಾಗದಂತೆ ಒಟ್ಟು ಮೂರು ಕಡೆ ರ್ಯಾಂಪ್ ನಿರ್ಮಿಸಿ, ಹೂಳನ್ನು ತೆಗೆಯಲು ಅನುಕೂಲವಾಗುವಂತೆ ಮಳೆ ನೀರುಗಾಲುವೆಯನ್ನು ಎತ್ತರಿಸಿ ಚಿಕ್ಕದಾದ ಹೈಡ್ರಾಲಿಕ್ ಎಸ್ಕವೇಟರ್ ಹೋಗುವಂತೆ ಆರ್.ಸಿ.ಸಿ ಛಾವಣಿಯಿಂದ ಬೃಹತ್ ಮಳೆ ನೀರುಗಾಲುವೆಯನ್ನು ಮುಚ್ಚಬೇಕು” ಎಂದು ಅಧಿಕಾರಿಗೆ ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕುಡಿಯುವ ನೀರಿನ ಬೆಲೆ ದುಪ್ಪಟ್ಟು; ಕಂಗಾಲಾದ ನಗರದ ನಾಗರಿಕರು
ಸಮೃದ್ಧಿ ಬಡಾವಣೆಯಲ್ಲಿ ನಿರ್ಮಿಸಿರುವ ಲೀಡ್ ಆಫ್ ಡ್ರೈನ್ ಪರಿಶೀಲನೆ
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಸಮೃದ್ದಿ ಬಡಾವಣೆಯಲ್ಲಿ ಈಗಾಗಲೇ ನಿರ್ಮಿಸಿರುವ ಲೀಡ್ ಆಫ್ ಡ್ರೈನ್ ಅನ್ನು ಪರಿಶೀಲಿಸಿ, ಹಳೆಯ ರಸ್ತೆ ಬದಿ ಚರಂಡಿಗೆ ಒಂದು ಮೀಟರ್ನಷ್ಟು ತಡೆಗೋಡೆ ನಿರ್ಮಿಸಿ ಕೆರೆ ತುಂಬಿ ಬರುವ ನೀರು ಹಾಗೂ ಡೈವರ್ಷನ್ ಚರಂಡಿಯ ನೀರನ್ನು ಹೊಸದಾಗಿ ನಿರ್ಮಿಸಿರುವ ಲೀಡ್ ಆಫ್ ಡ್ರೈನ್ಗೆ ಡೈವರ್ಷನ್ ಮಾಡಲು ಸೂಚಿಸಿದರು.
ನಾಯಂಡಹಳ್ಳಿ ಜಂಕ್ಷನ್ ಬಳಿಯ ರಾಜಕಾಲುವೆ ಪರಿಶೀಲನೆ
ವಿಜಯನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿ ಜಂಕ್ಷನ್ನಲ್ಲಿ ಹರಿಯುತ್ತಿರುವ ವೃಷಭಾವತಿ ಮಳೆ ನೀರುಗಾಲುವೆ ಪರಿಶೀಲಿಸಿ, ಹೊರವರ್ತುಲ ರಸ್ತೆಯ ಸೇತುವೆಯ ಕೆಳಭಾಗದ ವೆಂಟ್ ಚಿಕ್ಕದಾಗಿರುವ ಕಾರಣ ಹೆಚ್ಚು ಮಳೆ ಬಿದ್ದ ಸಂದರ್ಭದಲ್ಲಿ ಪ್ರವಾಹ ಆಗುವುದನ್ನು ತಡೆಯಲು ಆಗಾಗ ಹೂಳನ್ನು ತೆಗೆಯಬೇಕು. ಜತೆಗೆ ನಾಯಂಡಹಳ್ಳಿ ಜಂಕ್ಷನ್ ವೃತ್ತದಲ್ಲಿ ಎಂ.ಆರ್.ಕನ್ವೇನ್ಷನ್ ಹಾಲ್ ಮುಂಭಾಗ ಲಭ್ಯವಿರುವ ಸುಮಾರು ಅರ್ಧ ಎಕರೆ ಖಾಲಿ ಜಾಗವನ್ನು ಘನ ತ್ಯಾಜ್ಯ ನಿರ್ವಹಣೆ ಉದ್ದೇಶಗಳಿಗೆ ಅಥವಾ ಬೃಹತ್ ನೀರುಗಾಲುವೆ ಉದ್ದೇಶಕ್ಕಾಗಿ ಮಾತ್ರ ಮೀಸಲಿಡಬೇಕು ಎಂದು ಹೇಳಿದರು.
ಗಾಳಿ ಆಂಜನೇಯ ದೇವಸ್ಥಾನದ ಹಿಂಭಾಗದ ವೃಷಭಾವತಿ ಮಳೆ ನೀರುಗಾಲುವೆ ಪರಿಶೀಲನೆ
ವಿಜಯನಗರ ವಿಧಾನಸಭಾ ಕ್ಷೇತ್ರದ ಗಾಳಿ ಆಂಜನೇಯ ದೇವಸ್ಥಾನದ ಹಿಂಭಾಗದ ವೃಷಭಾವತಿ ಮಳೆ ನೀರುಗಾಲುವೆಯನ್ನು ಪರಿಶೀಲಿಸಿ ಕವಿಕಾ ಕಾರ್ಖಾನೆ ಹಿಂಭಾಗ ಮಳೆನೀರುಗಾಲುವೆಯಲ್ಲಿನ ಹೂಳನ್ನು ಹೊರತೆಗೆಯಲು ಅನುಕೂಲವಾಗುವಂತೆ ಈಗಾಗಲೇ ನಿರ್ಮಿಸಿರುವ ತಾತ್ಕಾಲಿಕ ರ್ಯಾಂಪ್ಗೆ ಬದಲಾಗಿ ಶಾಶ್ವತವಾಗಿ ನಾಯಂಡಹಳ್ಳಿ ಜಂಕ್ಷನ್ನಲ್ಲಿ ನಿರ್ಮಿಸಿರುವಂತೆ ರ್ಯಾಂಪ್ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಮುಖ್ಯ ಅಭಿಯಂತರರಾದ ರಾಜೇಶ್, ಕಾರ್ಯಪಾಲಕ ಅಭಿಯಂತರರಾದ ಚೇತನ್, ಬೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.