ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ತಮ್ಮ ವಸತಿ ನಿಲಯದಲ್ಲಿ ಒಂದೂವರೆ ವರ್ಷದಿಂದ ಸಮಸ್ಯೆಗಳ ತಾಣವಾಗಿದೆ ಹಾಸ್ಟೆಲ್‌ನಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿನಿಯರು ಉಪಹಾರ ಸೇವಿಸದೆ ಪ್ರತಿಭಟನೆ ನಡೆಸಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ನಡೆದದೆ.
ಉಪಹಾರ ತ್ಯಜಿಸಿ ಹಾಸ್ಟೆಲ್‌ನಿಂದ ಶಾಸಕರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಆದರೆ, ಶಾಸಕರು ಕ್ಷೇತ್ರದಲ್ಲಿ ಇಲ್ಲವೆಂದು ಶಾಸಕರ ಆಪ್ತಸಹಾಯಕರು ವಿದ್ಯಾರ್ಥಿಗಳಿಗೆ ಸಮಾಧಾನ ಮಾಡಲು ಯತ್ನಿಸಿದ್ದಾರೆ. ಅವರ ಮಾತಿಗೆ ವಿದ್ಯಾರ್ಥಿನಿಯರು ಮಣೆ ಹಾಕದೆ ಪ್ರತಿಭಟನೆ ಮುಂದುವರೆಸಿದ್ದಾರೆ. ಬಳಿಕ, ತಹಶೀಲ್ದಾರ್ ಸುಧಾ ಅವರು ಸ್ಥಳಕ್ಕೆ ದೌಡಾಯಿಸಿ, ವಿದ್ಯಾರ್ಥಿನಿಯರೊಂದಿಗೆ ಚರ್ಚೆ ನಡೆಸಿದ್ದಾರೆ.
ವಿದ್ಯಾರ್ಥಿನಿಯರು ಈ ಕೂಡಲೇ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಇಲ್ಲವಾದರೆ ಇಲ್ಲೇ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಪಟ್ಟು ಹಿಡಿದು ಕುಳಿತಿದ್ದರು. ತಹಶೀಲ್ದಾರ್ ಮತ್ತು ಶಾಸಕರ ಆಪ್ತ ಸಹಾಯಕರು ಹಾಸ್ಟೆಲ್‌ಗೆ ತೆರಳಿ, ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಂಡರು.
ಬಳಿಕ ಪ್ರತಿಭಟನೆ ಕೈಬಿಟ್ಟ ವಿದ್ಯಾರ್ಥಿನಿಯರು, “ನಾವು ಬಡ ಕುಟುಂಬಗಳಿಗೆ ಸೇರಿದ್ದು, ಇಲ್ಲಿ ಉತ್ತಮ ಶಿಕ್ಷಣ ಪಡೆದು, ಉತ್ತಮ ಬದುಕನ್ನು ಕಟ್ಟಿಕೊಳ್ಳುವ ಕನಸನ್ನು ಹೊತ್ತು ಬಂದಿದ್ದೇವೆ. ಆದರೆ, ಇಲ್ಲಿ ನೀರಿನ ಸಮಸ್ಯೆ, ಸ್ನಾನಗೃಹದ ಸಮಸ್ಯೆ, ವಿದ್ಯುತ್, ಊಟ ಸೇರಿದಂತೆ ನಾನಾ ಸಮಸ್ಯೆಗಳು ಕಾಡುತ್ತಿವೆ” ಎಂದು ಹೇಳಿದರು.