ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಂದು ದಲಿತ ಸಮುದಾಯರೆಂಬ ಕಾರಣಕ್ಕೆ ಗ್ರಾಮದ ಸರಪಂಚರೊಬ್ಬರಿಗೆ ಮೇಲ್ಜಾತಿಗೆ ಸೇರಿದ ಶಾಲಾ ಪ್ರಾಂಶುಪಾಲರೊಬ್ಬರು ರಾಷ್ಟ್ರೀಯ ಧ್ವಜವನ್ನು ಹಾರಿಸುವುದಕ್ಕೆ ತಡೆಯೊಡ್ಡುವುದರ ಜೊತೆಗೆ ಜಾತಿ ನಿಂದನೆ ಮಾಡಿರುವ ಘಟನೆ ಮಧ್ಯಪ್ರದೇಶದ ವಿಧಿಶಾ ಜಿಲ್ಲೆಯ ಭಗವಂತಪುರ ಗ್ರಾಮದ ಶಾಲೆಯಲ್ಲಿ ನಡೆದಿದೆ.
ದಲಿತ ಸಮುದಾಯರೆಂಬ ಕಾರಣಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮೇಲ್ಜಾತಿಯ ಪ್ರಾಂಶುಪಾಲರಾದ ಶೋಭಾ ಶ್ರೀವಾಸ್ತವ್ ರಾಷ್ಟ್ರೀಯ ಧ್ವಜವನ್ನು ಹಾರಿಸಲು ಸರಪಂಚ ಬರೆಲಾಲ್ ಅಹಿರ್ವರ್ ಅವರಿಗೆ ಅವಕಾಶ ನೀಡಲು ನಿರಾಕರಿಸಿದ್ದಾರೆ ಎಂದು ಗ್ರಾಮದ ಮುಖ್ಯಸ್ಥರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಪಂಚಾಯತ್ ಕಾರ್ಯದರ್ಶಿ ಅಮೀರ್ ಹಮ್ಜಾ, “ಸಾಮಾನ್ಯವಾಗಿ, ಸರಪಂಚರು ಮೊದಲು ಪಂಚಾಯತ್ ಕಟ್ಟಡದಲ್ಲಿ ಧ್ವಜಾರೋಹಣ ಮಾಡುತ್ತಾರೆ. ನಂತರ ಸರಿಯಾದ ಸೂಚನೆ ಪಡೆದ ನಂತರ ಧ್ವಜಾರೋಹಣ ಮಾಡಲು ಶಾಲೆಗೆ ಹೋಗುತ್ತಾರೆ. ಆದರೆ ಸರಪಂಚರಿಗೆ ಧ್ವಜಾರೋಹಣ ಮಾಡಲು ನಿರಾಕರಿಸಲಾಗಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೋದಿ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಹಗರಣ ತಾಂಡವ | ಚಿಕಿತ್ಸೆಗೆ ಫಲಾನುಭವಿಗಳಿಂದ ಹಣ ಪಾವತಿ; ಸಿಎಜಿ ವರದಿಯಲ್ಲಿ ಉಲ್ಲೇಖ
“ಶಾಲಾ ಪ್ರಾಂಶುಪಾಲರು ನೀವು ದಲಿತರು, ನಿಮಗೆ ಏನು ಗೊತ್ತು ಎಂದು ಕೇಳುತ್ತಾರೆ. ಇಂದು(ಆಗಸ್ಟ್ 15), ಸ್ವಾತಂತ್ರ್ಯ ದಿನದಂದು, ನನ್ನನ್ನು ಶಾಲೆಗೆ ಆಹ್ವಾನಿಸಲಾಗಿಲ್ಲ ಹಾಗೂ ಪಂಚಾಯತಿ ರಾಜ್ ಕಾಯ್ದೆಯ ನಿಬಂಧನೆಗಳ ಹೊರತಾಗಿಯೂ, ಧ್ವಜವನ್ನು ಹಾರಿಸಲು ಬೇರೊಬ್ಬರಿಗೆ ಅವಕಾಶ ನೀಡಲಾಯಿತು. ನಾನು ಇದನ್ನು ವಿರೋಧಿಸಿದಾಗ, ಪ್ರಾಂಶುಪಾಲರು ನನ್ನನ್ನು ಜಾತಿ ಆಧಾರಿತದಲ್ಲಿ ನಿಂದಿಸಿದರು. ಒಂದೆಡೆ ದೇಶ ಸ್ವಾತಂತ್ರ್ಯ ಸಂಭ್ರಮದಲ್ಲಿದ್ದರೆ, ಮತ್ತೊಂದೆಡೆ ದಲಿತರ ವಿರುದ್ಧ ಜಾತಿ ಆಧಾರಿತ ತಾರತಮ್ಯ ನಡೆಯುತ್ತಿದೆ” ಎಂದು ಸರಪಂಚ ಅಹಿರ್ವರ್ ಬೇಸರ ವ್ಯಕ್ತಪಡಿಸಿದರು.
ಸ್ಥಳೀಯ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಹರ್ಷಲ್ ಚೌಧರಿ, ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಪಂಚಾಯಿತಿ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಜಾತಿ ಆಧಾರಿತ ನಿಂದನೆ ಆರೋಪಗಳು ನಿಜವೆಂದು ಕಂಡುಬಂದರೆ, ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಚೌಧರಿ ತಿಳಿಸಿದ್ದಾರೆ.