ರಾಜಕಾರಣಿಗಳು, ಅಧಿಕಾರಿಗಳು ದಾರಿ ತಪ್ಪಿದಾಗ ಮೌಲ್ಯಯುತವಾದ ಲೇಖನ ಬರೆಯುವ ಮೂಲಕ ಸರಿದಾರಿಗೆ ಸರಿದಾರಿಗೆ ತರುವಂತಹ ಕೆಲಸವನ್ನು ಪತ್ರಕರ್ತರು ಮಾಡಬೇಕು ಎಂದು ಶಾಸಕ ಎಚ್ ವಿ ವೆಂಕಟೇಶ ಅಭಿಪ್ರಾಯಪಟ್ಟರು.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಪಳವಳ್ಳಿ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
“ಪತ್ರಕರ್ತರು ಬಡತನದಲ್ಲಿ ಬದುಕುತ್ತಿದ್ದಾರೆ. ಪತ್ರಕರ್ತರ ಬೇಡಿಕೆಗಳನ್ನು ಹಂತ ಹಂತವಾಗಿ ಬಗ್ಗೆ ಹರಿಸಲಾಗುವುದು ತಾಲೂಕಿನಲ್ಲಿ ಪುನಃ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಸರ್ಕಾರದಿಂದ ಅನುಮೊದನೆ ಪಡೆಯಲಾಗಿದೆ. ಭದ್ರಾ ಮೇಲ್ದಂಡೆ, ತುಂಗಭದ್ರಾ ಹಿನ್ನೀರಿನಿಂದ ತಾಲೂಕಿಗೆ ಶೀಘ್ರವೇ ನೀರು ಹರಿಯಲಿದೆ” ಎಂದರು.
“ವಸತಿ ಶಾಲೆಗಳ ಪ್ರವೇಶಕ್ಕೆ ಹೆಚ್ಚು ಬೇಡಿಕೆಯಿದ್ದು ಹೆಚ್ಚು ಅಂಕ ಪಡೆದು ತೇರ್ಗಡೆಯಾಗಬೇಕು. ಇಪ್ಪತ್ತು, ಮೂವತ್ತು ಅಂಕ ಪಡೆದರೆ ವಸತಿ ಶಾಲೆಗಳಲ್ಲಿ ಪ್ರವೇಶ ನಿರಾಕರಿಸುತ್ತಾರೆ. ಶಾಸಕರ ಮೇಲೆ ವಿನಾಕಾರಣ ಒತ್ತಡ ಹಾಕುವುದು ಬಿಟ್ಟು ಹೆಚ್ಚೆಚ್ಚು ಓದಿ ಉತ್ತಮ ಫಲಿತಾಂಶ ಪಡೆಯುವತ್ತ ಗಮನ ಹರಿಸಬೇಕು” ಎಂದು ಸೂಚಿಸಿದರು.
ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ, “ಮಕ್ಕಳು ಈ ದೇಶದ ಮುಂದಿನ ಪ್ರಜೆಗಳು. ಪತ್ರಕರ್ತರು ಸತ್ಯಾಂಶವನ್ನು ಬರೆಯಬೇಕು. ಪತ್ರಕರ್ತರು ನಾಲ್ಕೈದು ಸಂಘಗಳನ್ನು ಮಾಡಿಕೊಂಡು ನಿಮ್ಮಲ್ಲೇ ಇರುವ ಭಿನ್ನಾಭಿಪ್ರಾಯ ಬದಿಗೊತ್ತಿ ಒಂದಾಗಬೇಕು” ಎಂದು ಸೂಚಿಸಿದರು.
“ನಿಮ್ಮಲ್ಲಿನ ಭಿನ್ನಾಭಿಪ್ರಾಯಗಳ ಬಗ್ಗೆ ಪ್ರಶ್ನೆ ಮಾಡುವವರು ಯಾರು. ಪತ್ರಕರ್ತರು ಮೌಲ್ಯಯುತ್ತವಾದ ಲೇಖನಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಬೇಕು. ಲೋಕಯುಕ್ತರ ದಾಳಿ ಬಗ್ಗೆ ಸುದ್ದಿ ನೋಡಿದೆ ಯಾರಾದರು ಐಎಎಸ್, ಐಪಿಎಸ್ ಅಧಿಕಾರಿಗಳ ಮೇಲೆ ಏಕೆ ರೈಡ್ ಮಾಡಲ್ಲ. ಸಣ್ಣ ಪುಟ್ಟ ಪ್ರಮಾಣದ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸ ಸಿಕ್ಕಿಸುವ ಪ್ರಯತ್ನ ಮತ್ರ ಏಕೆ ನೆಡೆಯುತ್ತಿದೆ?” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ತಂದೆ ತಾಯಿಗಳು ಮಕ್ಕಳಿಗೆ ಆಸ್ತಿ ಮಾಡುವ ಬದಲು ಶಿಕ್ಷಣ ಕೊಡಿಸಿ. ಮಕ್ಕಳು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಜನೆ ಕಡೆ ಹೆಚ್ಚು ಗಮನಹರಿಸಬೇಕು” ಎಂದು ಸಲಹೆ ನೀಡಿದರು.
ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ ನಿ ಪುರುಷೋತ್ತಮ ಪ್ರಸ್ತಾವಿಕ ನುಡಿಗಳನ್ನಾಡುತ್ತಾ, “ಮಾದ್ಯಮ ದಿನದಿಂದ ದಿನಕ್ಕೆ ವಿಸ್ತರವಾಗಿ ಹೊಸ ಆವಿಷ್ಕಾರಗಳೊಂದಿಗೆ ಮೂಡಿಬರುತ್ತಿದೆ. ಕರ್ನಾಟಕದಲ್ಲಿ ಕ್ರಿಶ್ಚಿಯನ್ ಮಿಷನರಿಗಳು, ಬ್ರಿಟೀಷರು ತಮ್ಮ ಸಂವಹನಕ್ಕಾಗಿ ಮಂಗಳೂರು ಸಮಾಚಾರ ಪತ್ರಿಕೆಯನ್ನು ಪ್ರಾರಂಭಿಸಿದರು. ಇದೀಗ ಪತ್ರಿಕೆ ಮತ್ತು ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗಿದೆ. ವಿದ್ಯಾರ್ಥಿಗಳು ಮೊಬೈಲ್‌ಗೆ ದಾಸರಾಗುವ ಬದಲು ಓದುಗರಾಗಬೇಕು” ಎಂದು ಕರೆ ನೀಡಿದರು.
“ಗ್ರಾಮೀಣ ಪತ್ರಕರ್ತರ ಸ್ಥಿತಿ ಶೋಚನಿಯವಾಗಿದೆ. ಈ ಶೋಷಣೆ ಕಡಿಮೆಯಾಗಬೇಕು. ಈಚೇಗೆ ಕೆಲವರು ಪತ್ರಿಕೆ ಹೆಸರಲ್ಲಿ ರೋಲ್ ಕಾಲ್ ಮಾಡುತ್ತಿದ್ದು, ಅಂತಹವರನ್ನು ಗುರುತಿಸಿ ಸಮಾಜದಿಂದ ದೂರ ಇಡಬೇಕು. ಪಾವಗಡದಲ್ಲಿ ಪತ್ರಿಕಾ ಭವನ ನಿರ್ಮಿಸಬೇಕು ಹಾಗೂ ಮಾಜಿ ಸಚಿವ ವೆಂಕಟರಮಣಪ್ಪನವರು ಪತ್ರಕರ್ತರಿಗೆ ನಿವೇಶನ ಒದಗಿಸಬೇಕು” ಎಂದು ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಚಿತ್ರದುರ್ಗ ಝೀ ಟಿ.ವಿ ವರದಿಗಾರ ಮಾಲತೇಶ್ ಅರಸ್ ಮಾತನಾಡಿ, “ಪತ್ರಕರ್ತರಿಗೆ ಕರ್ನಾಟಕದ 64 ಇಲಾಖೆಯವರ ಪರಿಚಯವಾಗಿರುತ್ತದೆ. ಸೈನಿಕನಿಗೆ ಈ ಹಿಂದೆ ಹೆಣ್ಣು ಕೊಡುತ್ತಿರಲಿಲ್ಲ. ಈಗ ಪತ್ರಕರ್ತರಿಗೂ ಸಹ ಹೆಣ್ಣು ಕೊಡಲ್ಲ. ಪತ್ರಕರ್ತರಿಗೆ ಸಾಮಾಜಿಕ ಜವಬ್ದಾರಿ ಮುಖ್ಯ. ಪತ್ರಕರ್ತರಾಗುವ ಮೊದಲು ನಾವೂ ಪ್ರಜೆಗಳು ಎಂಬುದನ್ನು ಮರೆಯಬಾರದು. ರಾಜಕಾರಣಿಗಳನ್ನು, ಅಧಿಕಾರಿಗಳನ್ನು ನೇರವಾಗಿ ಪ್ರಶ್ನಿಸುವ ಮನೋಭಾವ ರೂಡಿಸಿಕೊಳ್ಳಬೇಕು” ಎಂದರು.
“ಪತ್ರಕರ್ತರು ರಾಜಕಾರಣಿಗಳ ಜೊತೆ ಸಲುಗೆಯಿಂದ ಇದ್ದರೆ ನಿರ್ಭೀತಿಯಿಂದ ವರದಿ ಮಾಡಲು ಸಾಧ್ಯವಿಲ್ಲ. ರಾಜಕಾರಣಿಗಳ ಜೊತೆ ವಿಶ್ವಾಸದಿಂದ ಇರಬೇಕು. ಅವರಿಗೆ ಅಡಿಯಾಳಾಗಬಾರದು. ವಿದ್ಯಾರ್ಥಿಗಳು ಕೆಎಎಸ್, ಐಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಯಾಗಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ವಸತಿ ರಹಿತರಿಗೆ ನಿವೇಶನ ಮಂಜೂರಾತಿಗೆ ಗ್ರಾಕೂಸ ಒತ್ತಾಯ
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಜಂಗಮರಹಳ್ಳಿ ಲಕ್ಷ್ಮೀನಾರಾಯಣ, ನಾಟಿ ವೈದ್ಯ ಕಾವೆಲ್ಲಪ್ಪ ಹಾಗೂ ಹೆಚ್ಚು ಅಂಕಗಳನ್ನು ಪಡೆದ ತಾಲೂಕಿನ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಶೇಷನಂದ್, ಯುವ ಮುಖಂಡ ಬತ್ತಿನೇನಿ ನಾನಿ, ವೃತ್ತ ನಿರೀಕ್ಷಕ ಗಿರೀಶ್, ಬಿಇಒ ಅಶ್ವಥ್ ನಾರಾಯಣ, ಕೃಷಿ ಅಧಿಕಾರಿ ಶಂಷು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಫೀಕ್, ಪ್ರಧಾನ ಕಾರ್ಯದರ್ಶಿ ವೆಡ್ಡೆ ಶ್ರೀನಿವಾಸಲು, ಸಂಘದ ಜಿಲ್ಲಾ ಸಂಘದ ನಿರ್ದೇಶಕ ನಾಗೇಂದ್ರ, ರಾಮಾಂಜಿನೇಯ, ಸಂತೋಷ್ ಸೇರಿದಂತೆ ಬಹುತೇಕರು ಇದ್ದರು.