- ನೂತನ ತಂತ್ರಜ್ಞಾನ ಬಳಸಿ ಸಾರ್ವಜನಿಕರ ಕಚೇರಿ ಕಟ್ಟುತ್ತಿರುವುದು ಇದೇ ಮೊದಲು
- ವಿಶೇಷ ಅಂಚೆ ಲಕೋಟೆ ಮತ್ತು ಅಂಚೆ ಕಚೇರಿಯ ಮಾದರಿ ಬಿಡುಗಡೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿಯನ್ನು ರೈಲ್ವೇ, ಸಂವಹನ, ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಶುಕ್ರವಾರ ಉದ್ಘಾಟನೆ ಮಾಡಿದರು.
ಈ ವೇಳೆ, ವಿಶೇಷ ಅಂಚೆ ಲಕೋಟೆ ಮತ್ತು ಅಂಚೆ ಕಚೇರಿಯ ಮಾದರಿ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, “ನನಗೆ ಬೆಂಗಳೂರಿಗೆ ಬರಲು ಸಂತಸವಾಗುತ್ತದೆ. ಭಾರತಕ್ಕೆ ಬೆಂಗಳೂರು ಯಾವಾಗಲೂ ಹೊಸ ಚಿತ್ರಣ ನೀಡುತ್ತದೆ. ಈಗ ನೋಡುತ್ತಿರುವ ಈ 3ಡಿ ಮುದ್ರಿತ ಅಂಚೆ ಕಚೇರಿ ನೂತನ ಕಟ್ಟಡ ಹೊಸ ಚಿತ್ರಣವಾಗಿದೆ. ನಮ್ಮದೇ ಸ್ವಂತ ತಂತ್ರಜ್ಞಾನಗಳಿಂದ ಭಾರತ ಇಂದು ಅಭಿವೃದ್ಧಿಯಾಗುತ್ತಿದೆ” ಎಂದರು.
ಏನಿದು 3ಡಿ ಅಂಚೆ ಕಚೇರಿ?
ಬೆಂಗಳೂರಿನ ಅಲಸೂರು ಸಮೀಪದ ಜೋಗುಪಾಳ್ಯದ ಬಳಿ ಈ ಹೊಸ 3ಡಿ ಅಂಚೆ ಕಚೇರಿಯನ್ನು ನಿರ್ಮಾಣ ಮಾಡಲಾಗಿದೆ. ಈ ಅಂಚೆ ಕಚೇರಿಗೆ “ಕೇಂಬ್ರಿಡ್ಜ್ ಲೇಔಟ್ ಪಿಒ” ಎಂದು ಹೆಸರಿಸಲಾಗಿದೆ.
ಎಲ್ ಅಂಡ್ ಟಿ ಸಂಸ್ಥೆ ಈ ಕಟ್ಟಡದ ನಿರ್ಮಾಣ ಮಾಡಿದೆ. ಈ ನೂತನ 3ಡಿ ತಂತ್ರಜ್ಞಾನ ಅಸ್ತಿತ್ವಕ್ಕೆ ಬಂದು ಸುಮಾರು ದಿನಗಳು ಕಳೆದಿವೆ. ಆದರೆ, ಈ ನೂತನ ತಂತ್ರಜ್ಞಾನ ಬಳಸಿಕೊಂಡು ಸಾರ್ವಜನಿಕರ ಕಚೇರಿಯೊಂದನ್ನು ಕಟ್ಟುತ್ತಿರುವುದು ಇದೇ ಮೊದಲು.
ಇದರ ನಿರ್ಮಾಣ ಕಾರ್ಯವೂ ಕಂಪ್ಯೂಟರ್ ನಿಯಂತ್ರಿತವಾಗಿರುತ್ತದೆ. ಯಾವುದೇ ವಿನ್ಯಾಸದಲ್ಲೂ ಕಟ್ಟಡ ನಿರ್ಮಿಸಲು ಇದರಿಂದ ಸಾಧ್ಯ. ಕ್ಯಾಡ್ ಮಾಡೆಲ್ ಅಥವಾ ಡಿಜಿಟಲ್ 3ಡಿ ಮಾಡಲ್ ರೂಪಿಸಿ ಕಂಪ್ಯೂಟರ್ ನಿರ್ದೇಶನದಲ್ಲಿ ಕಾಂಕ್ರೀಟ್ ಇತ್ಯಾದಿ ಸಾಮಗ್ರಿಗಳನ್ನು ಸೇರಿಸಲಾಗುತ್ತದೆ. ಈ 3ಡಿ ತಂತ್ರಜ್ಞಾನ ಬಳಸಿ ಕಟ್ಟಡ ನಿರ್ಮಾಣ ಮಾಡುವುದರಿಂದ ಸಮಯ ಮತ್ತು ಹಣ ಎರಡೂ ಉಳಿತಾಯವಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಈ ಅಂಚೆ ಕಚೇರಿಯನ್ನು 1,100 ಚದರಡಿ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಈ ಕಟ್ಟಡಕ್ಕೆ ತೆರಿಗೆ ಸೇರಿ ₹26 ಲಕ್ಷ ವೆಚ್ಚವಾಗಿದೆ. ನೀರು, ಒಳಚರಂಡಿ ಇತ್ಯಾದಿಗಳಿಗೆ ಹೆಚ್ಚುವರಿ ₹40 ಲಕ್ಷ ವೆಚ್ಚವಾಗಿದೆ. ಸಾಂಪ್ರದಾಯಿಕ ಅಂಚೆ ಕಚೇರಿ ನಿರ್ಮಾಣಕ್ಕೆ ಹೋಲಿಕೆ ಮಾಡಿದರೆ, ಈ ಅಂಚೆ ಕಚೇರಿಯ ನಿರ್ಮಾಣ ವೆಚ್ಚದಲ್ಲಿ ಶೇ. 30ರಿಂದ 40ರಷ್ಟು ಹಣ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಅತ್ಯಾಚಾರ ಪ್ರಕರಣ | ಸ್ಥಳ ಮಹಜರಿಗೆ ತೆರಳಿದ್ದಾಗ ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು
3ಡಿ ಪ್ರಿಂಟೆಡ್ ಪೋಸ್ಟ್ ಆಫೀಸ್ ಕಟ್ಟಡ ನಿರ್ಮಾಣಕ್ಕೆ 44 ದಿನ ಮಾತ್ರ ಆಗಿದ್ದು. ಮಾರ್ಚ್ 21ರಂದು ಕಾಮಗಾರಿ ಶುರುವಾಗಿ ಮೇ 3ಕ್ಕೆ ಮುಗಿದಿದೆ. ಆದರೆ, ಚರಂಡಿ ಮತ್ತು ನೀರಿನ ವ್ಯವಸ್ಥೆ ಮಾಡಲು ಎರಡು ತಿಂಗಳು ಸಮಯಾವಕಾಶ ತೆಗೆದುಕೊಂಡಿದೆ.
ಈ ಕಚೇರಿ ಆರಂಭವಾದ ನಂತರ ಹಲಸೂರು ಬಜಾರ್ನಲ್ಲಿರುವ ಪ್ರಸ್ತುತ ಅಂಚೆ ಕಚೇರಿಯನ್ನು ಮುಚ್ಚಿ, ಅಲ್ಲಿಯ ಸಿಬ್ಬಂದಿ ಮತ್ತು ಸಾಮಗ್ರಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
3ಡಿ ಮುದ್ರಿತ ಅಂಚೆ ಕಚೇರಿಯ ಚಿತ್ರಗಳು