- ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು
- 22 ಕೆಜಿ ತೂಕದ 30 ಟ್ರೆ ಬಾಕ್ಸ್ ಟೊಮೆಟೊ ಖರೀದಿ
ಟೊಮೆಟೊ ಬೆಲೆ ಗಗನಕ್ಕೇರಿದ್ದ ಸಮಯದಲ್ಲಿ ಕಳ್ಳತನ ಪ್ರಕರಣಗಳು ವರದಿಯಾಗಿದ್ದವು. ಇದೀಗ ಬೆಲೆ ಇಳಿಕೆ ಕಂಡಿದೆ. ಆದರೂ, ಕಳ್ಳತನದ ಪ್ರಕರಣಗಳು ಮಾತ್ರ ಮುಂದುವರೆದಿದ್ದು, ಬೆಂಗಳೂರಿನ ಹಲಸೂರು ಮರ್ಫಿ ಟೌನ್‌ನಲ್ಲಿರುವ ತರಕಾರಿ ಅಂಗಡಿಯಿಂದ ಬರೋಬ್ಬರಿ ₹37,500 ಮೌಲ್ಯದ 550 ಕೆಜಿ ಟೊಮೆಟೊ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.
ಹಲಸೂರಿನ ಮರ್ಫಿ ಟೌನ್ ನಿವಾಸಿ ಪ್ರಶಾಂತ್ ಟಿ ಎಂಬುವವರ ಅಂಗಡಿಯಿಂದ ಟೊಮೆಟೊ ಕಳ್ಳತನವಾಗಿದೆ. ಪ್ರಶಾಂತ್ ಅವರು ಆಗಸ್ಟ್ 11ರಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಶಿವಾಜಿನಗರ ಮಾರುಕಟ್ಟೆಯಿಂದ 22 ಕೆಜಿ ತೂಕದ 30 ಟ್ರೆ ಬಾಕ್ಸ್ ಟೊಮೆಟೊ ಖರೀದಿ ಮಾಡಿದ್ದರು.
ಖರೀದಿ ಮಾಡಿ ತಂದ ಟೊಮೆಟೊಗಳನ್ನು ಅವರ ಅಂಗಡಿಯಲ್ಲಿ ಇರಿಸಿದ್ದರು. ಈ 30 ಟ್ರೆ ಟೊಮೆಟೊಗಳಲ್ಲಿ 5 ಟ್ರೆ ಬಾಕ್ಸ್ ಟೊಮೆಟೊ ಮಾರಾಟ ಮಾಡಿದ್ದರು. ರಾತ್ರಿ ವೇಳೆ ಸುಮಾರು 11 ಗಂಟೆಗೆ ಮನೆಗೆ ಹೋಗುವಾಗ ತಮ್ಮ ಅಂಗಡಿಯಲ್ಲಿದ್ದ 25 ಟೊಮೆಟೊ ಟ್ರೆ ಬಾಕ್ಸ್‌ಗಳ ಮೇಲೆ ಟಾರ್ಪಲಿನಿಂದ ಮುಚ್ಚಿ ಬಿಗಿಯಾಗಿ ಹಗ್ಗ ಕಟ್ಟಿ ಹೋಗಿದ್ದರು. ಬೆಳಗ್ಗೆ ಬಂದು ನೋಡಿದಾಗ ಅಂಗಡಿಯಲ್ಲಿ ಟೊಮೆಟೊ ಟ್ರೆ ಬಾಕ್ಸ್‌ಗಳು ಕಾಣೆಯಾಗಿದ್ದವು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ ಉದ್ಘಾಟನೆ
ಬಳಿಕ ಪಕ್ಕದ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಆಗಸ್ಟ್ 12 ರಂದು ಬೆಳಗ್ಗೆ 4.30 ರ ಸುಮಾರಿಗೆ ಇಬ್ಬರು ವ್ಯಕ್ತಿಗಳು ಆಟೋದಲ್ಲಿ ಬಂದು ಟೊಮೆಟೊ ಟ್ರೇ ಬಾಕ್ಸ್‌ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಪ್ರಶಾಂತ ಅವರು ಹಲೂಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.