ತಾನು ಇಂಗ್ಲೆಂಡ್ ಮೂಲದ ಹೃದಯ ತಜ್ಞನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ 22 ಮಹಿಳೆಯರಿಗೆ 4.5 ಕೋಟಿ ರೂ.ಗಳಿಗೂ ಹೆಚ್ಚು ಹಣ ವಂಚಿಸಿದ ಪ್ರಕರಣ ಗುಜರಾತ್ನಲ್ಲಿ ಬೆಳಕಿಗೆ ಬಂದಿದೆ.
ವಂಚಕನಿಂದ ಅಹಮದಾಬಾದ್ನ ಚರ್ಮರೋಗ ತಜ್ಞ ಮಹಿಳೆಯೊಬ್ಬರು 18 ಲಕ್ಷ ರೂ. ಕಳೆದುಕೊಂಡು ಮಹಿಳಾ ಸಹಾಯವಾಣಿಯನ್ನು ಸಂಪರ್ಕಿಸಿದ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ ಭೇಟಿಯಾದ ನಂತರ ತನ್ನ ಹೆಸರು ಡಾ. ದಿಲೀಪ್ ಕುಮಾರ್, ಬ್ರಿಟನ್ನಲ್ಲಿ ಹೃದಯ ತಜ್ಞನಾಗಿದ್ದೇನೆ ಎಂದು ಮಹಿಳೆಗೆ ವಂಚಕ ಹೇಳಿಕೊಂಡಿದ್ದ.
ಮಹಿಳೆಯ ದೂರಿನ ನಂತರ ಪೊಲೀಸರು ತನಿಖೆಯ ಜಾಡು ಹಿಡಿದಾಗ ಹಲವು ಮಹಿಳೆಯರನ್ನು ಇದೇ ರೀತಿ ನಂಬಿಸಿ ವಂಚಿಸಿದ್ದ. ಮೋಸಕ್ಕೊಳಗಾದ ಚರ್ಮರೋಗ ತಜ್ಞರು ಆರಂಭದಲ್ಲಿ ವಂಚನೆಯ ಬಲೆಗೆ ಬಿದ್ದಿರುವುದನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ಪೊಲೀಸರು ಹಲವು ಪ್ರಕರಣಗಳ ಬಗ್ಗೆ ಹೇಳಿದಾಗ ಸತ್ಯವನ್ನು ತಿಳಿದುಕೊಂಡರು.
ಆರೋಪಿಯು ಸಾಮಾಜಿಕ ಮಾಧ್ಯಮಗಳು ಮತ್ತು ಮ್ಯಾಟ್ರಿಮೋನಿಯಲ್ ವೆಬ್ಸೈಟ್ಗಳಲ್ಲಿ ತನ್ನ ಪ್ರೊಫೈಲ್ಗಳನ್ನು ರಚಿಸುವ ಮೂಲಕ ಸಾಮಾನ್ಯವಾಗಿ 30 ರಿಂದ 40 ವರ್ಷದೊಳಗಿನ ಮಹಿಳೆಯರಿಗೆ ವಿವಾಹವಾಗುವುದಕ್ಕೆ ವಧುವನ್ನು ಹುಡುಕ್ಕುತ್ತಿರುವುದಾಗಿ ಹೇಳಿಕೊಂಡು ನಂಬಿಸುತ್ತಿದ್ದ.
ಈ ಸುದ್ದಿ ಓದಿದ್ದೀರಾ? ಭಾರತದ ವಿಷಪೂರಿತ ಕೆಮ್ಮಿನ ಸಿರಪ್ ಮಾರುಕಟ್ಟೆಗೆ ಬರಲು ಲಂಚ ನೀಡಿಕೆ: ಉಜ್ಬೇಕಿಸ್ತಾನ್
ಮಹಿಳೆಯರ ನಂಬಿಕೆ ಗಳಿಸಿದ ನಂತರ ಅವರಿಂದ ಹಣವನ್ನು ಕೇಳುತ್ತಿದ್ದ. ವಂಚಕ ವೈದ್ಯನು ವೈದ್ಯಕೀಯವಾಗಿ ತಾನು ಸಂಕಷ್ಟದಲ್ಲಿದ್ದೇನೆ, ದುಬಾರಿ ಉಡುಗೊರೆ, ವೈದ್ಯಕೀಯ ಸಲಕರಣೆಗಳ ಖರೀದಿ ಮುಂತಾದ ಕಾರಣಗಳನ್ನು ನೀಡಿ ಮಹಿಳೆಯರಿಂದ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದ. ಮೋಸ ಹೋಗಿದ್ದ ಹಲವು ಮಹಿಳೆಯರು ಆರಂಭದಲ್ಲಿ ದೂರು ನೀಡಲು ಹಿಂದೇಟು ಹಾಕಿದ್ದರು. ಸಾಕಷ್ಟು ಮನವೊಲಿಕೆಯ ನಂತರ, ಅವರು ವಂಚನೆಗೊಳಗಾಗಿರುವ ಬಗ್ಗೆ ತಿಳಿಸಿದರು.
ನಕಲಿ ಹೃದಯತಜ್ಞನ ಬಲೆಗೆ ಇನ್ನು ಹಲವು ಮಹಿಳೆಯರು ಬಲಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಇವರೆಲ್ಲ ಪೊಲೀಸರನ್ನು ಸಂಪರ್ಕಿಸಲು ಭಯಪಡುತ್ತಿದ್ದಾರೆ. ಈ ಘಟನೆಯ ನಂತರ ಆನ್ಲೈನ್ನಲ್ಲಿ ವ್ಯಕ್ತಿಗಳೊಂದಿಗೆ ಸಂವಹನ ನಡೆಸುವಾಗ ಜಾಗರೂಕತೆ ಮತ್ತು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ತಿಳಿಸಿದ್ದಾರೆ. ವಂಚಕನ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.