ತೆರೆ ಮೇಲಷ್ಟೇ ಅವರು ಹೀರೋಗಳು. ಅವರ ಪೈಕಿ ಬಹುತೇಕರಿಗೆ ಸಾಮಾಜಿಕ ನ್ಯಾಯ, ಸಾಮಾಜಿಕ ಜವಾಬ್ದಾರಿ ಎಂದರೆ ಏನೆಂದು ಗೊತ್ತಿರುವುದಿಲ್ಲ. ಇಡೀ ಜಗತ್ತೇ ತಮ್ಮ ಸುಖಕ್ಕಾಗಿ ಇರುವ ತಾಣ ಎಂದು ಅವರು ಅಂದುಕೊಂಡಿರುತ್ತಾರೆ. ತಾವು ಈ ದೇಶದ ಸಂವಿಧಾನ, ಈ ನೆಲದ ಕಾನೂನು ಎಲ್ಲದಕ್ಕೂ ಅತೀತರು ಎಂದು ಅವರು ಭಾವಿಸಿರುತ್ತಾರೆ.
ಸಿನಿಮಾ ಹೀರೋಗಳಾಗಿ ತೆರೆಯ ಮೇಲೆ ಮಿಂಚುವವರು ನಿಜಜೀವನದಲ್ಲಿ ಹೇಗಿರುತ್ತಾರೆ? ಅವರ ತಿಳಿವಳಿಕೆ ಹೇಗಿರುತ್ತದೆ, ಸಮಾಜದ ಬಗೆಗಿನ ಅವರ ಅರಿವು ಎಂಥದ್ದು? ಅವರ ರಾಜಕೀಯ ಪ್ರಜ್ಞೆ ಎಂಥದ್ದು?
ಈ ಎಲ್ಲ ಪ್ರಶ್ನೆಗಳಿಗೂ, ಸರಳವಾಗಿ ಒನ್ ಲೈನ್ ಉತ್ತರ ಹೇಳಬೇಕೆಂದರೆ, ಹೆಚ್ಚಿನವರು, ಉಪೇಂದ್ರ ಮತ್ತು ಗಣೇಶ್ ಥರ ಇರುತ್ತಾರೆ!
ತಾನು ಸ್ಥಾಪಿಸಿರುವ ‘ಪ್ರಜಾಕೀಯ’ ಪಕ್ಷದ ಬಗ್ಗೆ ಮಾತನಾಡುತ್ತಾ ಉಪೇಂದ್ರ ಹೇಳಿದ್ದ ಗಾದೆ ಆತನ ಅಸೂಕ್ಷ್ಮತೆಗೆ ನಿದರ್ಶನವಾಗಿತ್ತು. ಅದಕ್ಕೆ ತಕ್ಕಂತೆ ನಾಡಿನ ಜನರ ಪ್ರತಿಭಟನೆಗಳನ್ನು ಅವರು ಎದುರಿಸಬೇಕಾಯಿತು. ಅವರ ವಿರುದ್ಧ ಹಲವು ಠಾಣೆಗಳಲ್ಲಿ ಎಫ್‌ಐಆರ್‌ಗಳು ದಾಖಲಾಗಿದ್ದವು. ಕೋರ್ಟ್ ಎಫ್‌ಐಆರ್‌ಗಳಿಗೆ ತಡೆ ನೀಡಿದ್ದರಿಂದ ಉಪೇಂದ್ರ ಸದ್ಯ ಬಂಧನದಿಂದ ಪಾರಾಗಿದ್ದಾರೆ.
ಈ ಪ್ರಕರಣ ರಿಯಲ್ ಸ್ಟಾರ್ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ, ಪ್ರಜಾಕೀಯ ಎನ್ನುವ ಇದ್ದೂ ಇಲ್ಲದ ರಾಜಕೀಯ ಪಕ್ಷವೊಂದರ ಸ್ಥಾಪಕರಾದ ಉಪೇಂದ್ರ ಅವರಿಗೆ ಈ ಸಮಾಜದ ಬಗ್ಗೆ ಎಷ್ಟು ತಿಳಿವಳಿಕೆ ಇದೆ ಎನ್ನುವುದನ್ನು ತೋರಿಸುತ್ತದೆ.
ಈ ಸಮಾಜದ ಎಲ್ಲ ಜಾತಿ ವರ್ಗಗಳ ಜನರೂ ಉಪೇಂದ್ರ ಅವರ ಸಿನಿಮಾ ನೋಡುತ್ತಾರೆ. ಅವರೆಲ್ಲರ ಹಣದಿಂದ ಉಪೇಂದ್ರ ಇಂದು ಐಷಾರಾಮಿ ಬದುಕು ನಡೆಸುತ್ತಿದ್ದಾರೆ. ಅಪಾರ ಆಸ್ತಿ ಸಂಪಾದಿಸಿದ್ದಾರೆ. ರೆಸಾರ್ಟ್, ಬಂಗಲೆ ಇತ್ಯಾದಿಗಳ ಮಾಲೀಕರಾಗಿದ್ದಾರೆ. ಆದರೆ, ಕನಿಷ್ಠ ಪಕ್ಷ ಈ ನಾಡಿನಲ್ಲಿ ಯಾವೆಲ್ಲ ಜನವರ್ಗಗಳಿವೆ, ಅವರ ಸಾಮಾಜಿಕ ವಾಸ್ತವ ಏನು? ಅವರ ಕಷ್ಟ ಸಂಕಟಗಳೇನು ಎನ್ನುವುದರ ತಿಳುವಳಿಕೆ ಅವರಿಗಿಲ್ಲ. ಅದಕ್ಕಿಂತ ಹೆಚ್ಚಾಗಿ ಈ ದೇಶದ ಸಂವಿಧಾನದ ಬಗ್ಗೆ ಅವರಿಗೆ ತಿಳಿವಳಿಕೆ ಮತ್ತು ಗೌರವ ಎರಡೂ ಇದ್ದಂತಿಲ್ಲ. ದೇಶದ ಪ್ರತಿಯೊಬ್ಬ ಪ್ರಜೆಗೂ ಇರಬೇಕಾದ ಸಮಾಜದ ಬಗೆಗಿನ ಕನಿಷ್ಠ ಜ್ಞಾನ, ಸಾಮಾಜಿಕ ನ್ಯಾಯದ ಅರಿವು ಇದ್ಯಾವುದೂ ಇಲ್ಲದೆಯೇ ರಿಯಲ್ ಸ್ಟಾರ್ ಎನ್ನಿಸಿಕೊಳ್ಳುತ್ತಿದ್ದಾರೆ ಉಪೇಂದ್ರ.
ತಮ್ಮ ಬಾಲ್ಯದ ಬಡತನದ ದಿನಗಳನ್ನು ನೆನಪಿಸಿಕೊಳ್ಳುವುದರ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದರು ಉಪೇಂದ್ರ. ಅವರು ತಮ್ಮ ಬಾಲ್ಯದ ಸ್ವಲ್ಪ ಕಾಲ, ಸ್ವಲ್ಪ ಮಟ್ಟಿಗಿನ ಬಡತನ ಅನುಭವಿಸಿರಬಹುದು. ಆದರೆ, ಈ ದೇಶದ ಬಹುಸಂಖ್ಯಾತ ಜನವರ್ಗಗಳು ತಮ್ಮ ಜೀವನದುದ್ದಕ್ಕೂ ಹಗಲು ಇರುಳು ದುಡಿದರೂ ಬಡತನದಲ್ಲೇ ಬದುಕಿ ಬಡತನದಲ್ಲೇ ಸಾಯುತ್ತಿವೆ ಎನ್ನುವುದನ್ನು ಉಪೇಂದ್ರ ಅರ್ಥ ಮಾಡಿಕೊಳ್ಳಬೇಕಾಗಿದೆ. ಆ ಬಡವರು ಎಂದೂ ಇನ್ನೊಂದು ಜಾತಿ, ಸಮುದಾಯದ ಬಗ್ಗೆ ನಾಲಗೆ ಸಡಿಲ ಬಿಟ್ಟು ಅದಕ್ಕೆ ಬಡತನದ ಸಬೂಬು ನೀಡಿಲ್ಲ ಎನ್ನುವುದೂ ಕೂಡ ಅವರು ಗಮನದಲ್ಲಿರಲಿ.
ಇನ್ನು ಗೋಲ್ಡನ್ ಸ್ಟಾರ್ ಗಣೇಶ್. ‘ಮುಂಗಾರು ಮಳೆ’ಯಿಂದ ರಾತ್ರೋರಾತ್ರಿ ಸ್ಟಾರ್ ಆದವರು ಗಣೇಶ್. ಅದಾದ ನಂತರ ಇವರ ಯಾವ ಚಿತ್ರ ಹಿಟ್ ಆಯಿತು ಎಂದು ನೆನಪಿಸಿಕೊಳ್ಳಲು ತಿಣುಕಾಡಬೇಕು. ಆದರೂ ಈತ ಸ್ಟಾರ್. ಈ ಗಣೇಶ್ ಈಗ ವಿವಾದವೊಂದರಲ್ಲಿ ಸಿಲುಕಿದ್ದಾರೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಿಯಮ ಮೀರಿ ಬೃಹತ್ ಕಾಂಕ್ರೀಟ್ ಕಟ್ಟಡ ಕಟ್ಟಲು ಹೊರಟಿದ್ದ ಗಣೇಶ್, ಕಾನೂನು ಮೀರಿ ವಿವಾದಕ್ಕೆ ಗುರಿಯಾಗಿದ್ದಾರೆ.
ಗಣೇಶ್ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಹೋಬಳಿಯ ಜಕ್ಕೇನಹಳ್ಳಿಯ ಸರ್ವೇ ನಂಬರ್ 105ರಲ್ಲಿ ಒಂದು ಎಕರೆ, 24 ಗುಂಟೆ ಜಮೀನು ಹೊಂದಿದ್ದಾರೆ. ಅಲ್ಲಿ ಒಂದು ತಾತ್ಕಾಲಿಕ ಮನೆ ಕಟ್ಟಿಕೊಳ್ಳಲು ಅವರಿಗೆ ಅನುಮತಿ ಸಿಕ್ಕಿತ್ತು. ಆದರೆ, ಅಲ್ಲಿ ಗಣೇಶ್ ಬಂಗಲೆ ಕಟ್ಟಲು ಹೊರಟಿದ್ದರು. ದೊಡ್ಡ ದೊಡ್ಡ ಪಿಲ್ಲರ್‌ಗಳನ್ನು ಹಾಕಲು ಗುಣಿ ತೋಡಿ ಸಿಮೆಂಟ್ ಕಂಬಿ ಅಳವಡಿಸುತ್ತಿದ್ದರು. ತಕ್ಷಣವೇ ಎಚ್ಚೆತ್ತ ಪರಿಸರವಾದಿಗಳು ಅರಣ್ಯ ಇಲಾಖೆಗೆ ದೂರು ನೀಡಿದರು. ಗಣೇಶ್‌ಗೆ ಅರಣ್ಯ ಇಲಾಖೆ ನೋಟಿಸ್ ನೀಡಿ, ಕಾಡಿನ ನಿಯಮಗಳನ್ನು ನೆನಪಿಸಿದೆ.
ಈ ಗಣೇಶ್ ಪತ್ನಿ ಶಿಲ್ಪಾ ಗಣೇಶ್; ನೂರಾರು ಕೋಟಿ ಆಸ್ತಿಯ ಒಡತಿಯಾಗಿರುವ ಶಿಲ್ಪಾಗೆ ರಾಜಕೀಯದಲ್ಲಿ ಮೆರೆಯಬೇಕು ಎನ್ನುವ ತುಡಿತ ಹೆಚ್ಚಾದಾಗ ಅವರು ಸೇರಿದ್ದು ಬಿಜೆಪಿ. ಅವರು ಮಹಾ ಮೋದಿ ಭಕ್ತೆ. ಬಿಜೆಪಿಯ ಐಟಿ ಸೆಲ್‌ನ ಸುಳ್ಳುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದರಲ್ಲಿ ಮುಂಚೂಣಿಯಲ್ಲಿರುವವರು ಶಿಲ್ಪಾ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಚುನಾವಣಾ ಕಣದಲ್ಲಿ ಸಕ್ರಿಯವಾಗಿದ್ದಾರೆ.
ಇಂಥ ಗಂಡ ಹೆಂಡತಿ ಜೋಡಿ ತಮ್ಮ ರಾಜಕೀಯ ಸಂಪರ್ಕಗಳ ಬಲದಿಂದ ಅನೇಕ ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿದೆ ಎನ್ನುವ ಸುದ್ದಿ ಇದೆ. ಇದೀಗ ನಿಯಮ ಮೀರಿ ಅರಣ್ಯದ ನಡುವೆ ಸೂಕ್ಷ್ಮ ಪರಿಸರದಲ್ಲಿ ಮನೆ ಕಟ್ಟಲು ಹೋಗಿ ಇವರು ಸುದ್ದಿಯಾಗಿದ್ದಾರೆ. ಕಾಡಿನಲ್ಲಿ ದೊಡ್ಡ ದೊಡ್ಡ ಕಾಂಕ್ರೀಟ್ ಕಟ್ಟಡ ಕಟ್ಟುವುದರಿಂದ ಸೂಕ್ಷ್ಮ ಜೀವಿ ಪರಿಸರಕ್ಕೆ ಹಾನಿಯಾಗುತ್ತದೆ ಎನ್ನುವ ಕಾಮನ್ ಸೆನ್ಸ್ ಗೋಲ್ಡನ್ ಸ್ಟಾರ್ ಎನ್ನಿಸಿಕೊಂಡಾತನಿಗೆ ಇಲ್ಲದಿರುವುದು ಆಶ್ಚರ್ಯಕರ. ಹೋಗಲಿ, ಸರ್ಕಾರದ ನಿಯಮಕ್ಕೆ ಬದ್ಧನಾಗಿರಬೇಕು ಎನ್ನುವ ಸಾಮಾಜಿಕ ಜವಾಬ್ದಾರಿಯೂ ಇವರಲ್ಲಿದ್ದಂತೆ ಕಾಣುತ್ತಿಲ್ಲ.
ಮುಂಗಾರು ಮಳೆಯಲ್ಲಿ ನೆನೆದು, ಪರಪರ ತಲೆ ಕೆರೆದುಕೊಳ್ಳುವ ಪ್ರೇಮಿಯಾಗಿ ಸ್ಟಾರ್ ಪಟ್ಟ ಪಡೆದಿದ್ದವರು ಗಣೇಶ್. ಅವರಿಗೆ ನೋಟಿಸ್ ನೀಡಿ ಮನೆ ನಿರ್ಮಾಣಕ್ಕೆ ತಡೆಯೊಡ್ಡುವ ಮೂಲಕ ಅರಣ್ಯ ಇಲಾಖೆಯು ಅವರು ಮತ್ತೊಮ್ಮೆ ತಮ್ಮ ತಲೆಯನ್ನು ಪರಪರ ಎಂದು ಕೆರೆದುಕೊಳ್ಳುವಂತೆ ಮಾಡಿದೆ.
ಈ ಸುದ್ದಿ ಓದಿದ್ದೀರಾ: ಜೀವ ಸಂಪತ್ತಿಗೆ ಸಂಚಕಾರ ತಂದಿದೆ ಜೀವ ವೈವಿಧ್ಯ ತಿದ್ದುಪಡಿ ಮಸೂದೆ
ಈ ಸಿನಿಮಾ ಹೀರೋಗಳೆನ್ನುವವರು, ನಟ ನಟಿಯರು ವಿಚಿತ್ರ ಜನ. ಶಿವರಾಜ್‌ಕುಮಾರ್, ಧನಂಜಯ, ಕಿಶೋರ್, ಪ್ರಕಾಶ್ ರೈ ಅವರಂಥ ಕೆಲವರನ್ನು ಬಿಟ್ಟರೆ ಉಳಿದ ಬಹುತೇಕರದ್ದು ಒಂದೇ ಚಹರೆ; ತೆರೆ ಮೇಲಷ್ಟೇ ಅವರು ಹೀರೋಗಳು. ಇವರ ಪೈಕಿ ಬಹುತೇಕರಿಗೆ ಸಾಮಾಜಿಕ ನ್ಯಾಯ ಎಂದರೆ ಏನೆಂದು ಗೊತ್ತಿರುವುದಿಲ್ಲ. ಸಾಮಾಜಿಕ ಜವಾಬ್ದಾರಿ ಎಂದರೆ ಏನೆಂದು ಗೊತ್ತಿರುವುದಿಲ್ಲ. ಅವರು ಇಡೀ ಜಗತ್ತೇ ತಮ್ಮ ಸುಖಕ್ಕಾಗಿ ಇರುವ ತಾಣ ಎನ್ನುವ ಭಾವನೆ ಹೊಂದಿರುತ್ತಾರೆ. ಈ ದೇಶದಲ್ಲಿ ಒಂದು ಸಂವಿಧಾನ ಇದೆ, ಅದನ್ನು ಪ್ರಜೆಗಳೆಲ್ಲರೂ ಅನುಸರಿಸಬೇಕು ಎನ್ನುವುದು ಇವರಿಗೆ ಗೊತ್ತಿಲ್ಲ. ಇಲ್ಲಿ ಬದುಕಬೇಕೆಂದರೆ, ಈ ನೆಲದ ನೀತಿ ನಿಯಮ ಕಾನೂನು ಪಾಲಿಸಬೇಕು ಎನ್ನುವುದು ಅವರಿಗೆ ಬೇಕಿಲ್ಲ. ತಾವು ಎಲ್ಲದಕ್ಕೂ ಅತೀತರು ಎಂದು ಅವರು ತಿಳಿದಿರುತ್ತಾರೆ.
ರಾಜಕಾರಣಿಗಳಿಗೆ ಇಂತಿಷ್ಟು ವಿದ್ಯಾಭ್ಯಾಸ ಕಡ್ಡಾಯ ಮಾಡಬೇಕು ಎನ್ನುವ ಕೂಗು ಆಗಾಗ ಕೇಳಿಬರುತ್ತಿರುತ್ತದೆ. ಅದೆ ರೀತಿ ಸಿನಿಮಾ ನಟ ನಟಿಯರಿಗೆ, ವಿಶೇಷವಾಗಿ ಸ್ಟಾರ್‌ಗಳಿಗೆ, ನಡವಳಿಕೆಯ ಬಗ್ಗೆ, ಸಮಾಜದ ಬಗ್ಗೆ ಅರಿವು ಮೂಡಿಸುವ, ಸಾಮಾಜಿಕ ಜವಾಬ್ದಾರಿಯ ಓರಿಯೆಂಟೇಷನ್ ಕೊಡುವ ತರಬೇತಿ ಆಗಬೇಕು ಎನ್ನುವ ಕೂಗು ಕೇಳಿಬರುವ ದಿನಗಳು ದೂರವಿಲ್ಲ.
Very good analysis