ಉಪ್ಪಿಗಿಂತ ನಟ ಬೇರೆ ಇಲ್ಲ..!

Date:

ಪ್ರಜಾಪ್ರಭುತ್ವ ಪದದ ಮೊದಲ ಎರಡಕ್ಷರ, ರಾಜಕೀಯ ಪದದ ಕೊನೆಯ ಎರಡಕ್ಷರ ಸೇರಿಸಿ ಪಕ್ಷದ ಹೆಸರು ಮಾಡಿರುವ ಉಪ್ಪಿ, ಪ್ರಜಾಪ್ರಭುತ್ವ ಮತ್ತು ರಾಜಕೀಯ ಎರಡನ್ನೂ ನಗೆಪಾಟಲಿಗೀಡು ಮಾಡುತ್ತಿದ್ದಾರೆ.

ರಿಯಲ್ ಸ್ಟಾರ್ ಎಂದೇ ಕರೆಸಿಕೊಳ್ಳುವ ನಟ ಉಪೇಂದ್ರ ರಾಜಕೀಯದಲ್ಲಿ ಸದ್ದಿಲ್ಲದೇ ದೊಡ್ಡ ‘ಸಾಹಸ’ವೊಂದನ್ನು ಮಾಡಿದ್ದಾರೆ. 2018ರಲ್ಲಿ ಉತ್ತಮ ಪ್ರಜಾಕೀಯ ಪಕ್ಷ ಸ್ಥಾಪಿಸಿದ್ದರೂ ಇದುವರೆಗೆ ಒಂದು ಒಂದು ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಗೆಲ್ಲದ ಉಪೇಂದ್ರ ಈ ಬಾರಿಯ ವಿಧಾನಸಭಾ ಚುನಾವಣೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ 110 ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ.

ಚುನಾವಣೆಗೆ ನೂರಾರು ಅಭ್ಯರ್ಥಿಗಳನ್ನು ನಿಲ್ಲಿಸುವ ಮೂಲಕ ಉಪೇಂದ್ರ ರಾಜ್ಯದಲ್ಲಿ ಪರ್ಯಾಯ ರಾಜಕಾರಣದ ಗಂಭೀರ ಪ್ರಯತ್ನ ಮಾಡುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿಯ ರವಿಕೃಷ್ಣಾರೆಡ್ಡಿಯಂಥವರನ್ನೂ ಮೀರಿಸಿದ್ದಾರೆ. ಆದರೆ, ಉಪೇಂದ್ರ ತಾನು ಮಾತ್ರ ಚುನಾವಣಾ ಕಣದಿಂದ ದೂರವೇ ಉಳಿದಿದ್ದಾರೆ. ಅಷ್ಟೇ ಅಲ್ಲ, ಒಂದು ಪಕ್ಷ ಕಟ್ಟಿ ಅದರಿಂದ ನೂರಾರು ಮಂದಿಯನ್ನು ನಿಲ್ಲಿಸಿರುವ ಉಪೇಂದ್ರ ಚುನಾವಣಾ ಪ್ರಚಾರಕ್ಕೂ ಕೂಡ ಹೋಗುವುದಿಲ್ಲವಂತೆ.

ಉಪೇಂದ್ರ ತಮ್ಮ ಪಕ್ಷದ ಕ್ಯಾಂಡಿಡೇಟ್‌ಗಳೊಂದಿಗೆ ಪೋಸು ಕೊಟ್ಟಿರುವ ಫೋಟೋ ಒಂದು ವೈರಲ್ ಆಗಿದೆ. ಅದರಲ್ಲಿ ಅಭ್ಯರ್ಥಿಗಳೆಲ್ಲ ಖಾಕಿ ಬಟ್ಟೆ ತೊಟ್ಟು ಸಮವಸ್ತ್ರದಲ್ಲಿದ್ದರೆ ಉಪ್ಪಿ ಮಾತ್ರ ಟಿಪಿಕಲ್ ರಾಜಕಾರಣಿಗಳಂತೆ ಶುಭ್ರ ಬಿಳಿ ಬಟ್ಟೆಯಲ್ಲಿದ್ದಾರೆ.

ಅಂದರೆ, ಅವರೇ ನಿಲ್ಲಬೇಕು, ಅವರದ್ದೇ ಪ್ರಚಾರ, ಅವರದ್ದೇ ರಿಸ್ಕ್. ಗೆದ್ದರೆ ಹೆಸರು ಮಾತ್ರ ಉಪೇಂದ್ರ ಅವರಿಗೆ. ಇದು ರಿಯಲ್ ಸ್ಟಾರ್‌ನ ಸರಳ ಲೆಕ್ಕಾಚಾರ.

ಪ್ರಜಾಪ್ರಭುತ್ವ ಪದದ ಮೊದಲ ಎರಡಕ್ಷರ, ರಾಜಕೀಯ ಪದದ ಕೊನೆಯ ಎರಡಕ್ಷರ ಸೇರಿಸಿ ಪಕ್ಷದ ಹೆಸರು ಮಾಡಿರುವ ಉಪೇಂದ್ರ, ಪ್ರಜಾಪ್ರಭುತ್ವ ಮತ್ತು ರಾಜಕೀಯ ಎರಡನ್ನೂ ನಗೆಪಾಟಲಿಗೀಡು ಮಾಡುತ್ತಿದ್ದಾರೆ.

ಪ್ರಜಾಕೀಯ ಪಕ್ಷಕ್ಕೆ ಕಚೇರಿ ಇಲ್ಲ, ಕಾರ್ಯಕರ್ತರು ಇಲ್ಲ, ಮೆರವಣಿಗೆ, ರ್‍ಯಾಲಿ, ಜನರನ್ನು ಒಟ್ಟುಗೂಡಿಸುವುದು, ಸುಳ್ಳು ಭರವಸೆ ನೀಡುವುದು.. ಯಾವುದೂ ಇಲ್ಲ ಎಂದು ಉಪೇಂದ್ರ ಘೋಷಿಸಿಕೊಂಡಿದ್ದಾರೆ. ಯಾವುದು ಇಲ್ಲದಿದ್ದರೂ ಹೋಗಲಿ, ಉಪೇಂದ್ರ ಅವರ ಪಕ್ಷಕ್ಕೆ ಕನಿಷ್ಠ ಒಂದು ಪ್ರಣಾಳಿಕೆಯಾದರೂ ಇರಬೇಡವೇ? ಅದೂ ಇಲ್ಲ!        

ರಾಜಕೀಯ ಪಕ್ಷಕ್ಕೊಂದು ಪ್ರಣಾಳಿಕೆ ಇರಬೇಕು ಎನ್ನುವ ವಿಚಾರವೇ ಉಪೇಂದ್ರ ಅವರಿಗೆ ಗೊತ್ತಿದ್ದಂತಿಲ್ಲ. ಪ್ರಣಾಳಿಕೆ ಇಲ್ಲದಿರುವುದರಿಂದ ಅವರ ತತ್ವಸಿದ್ಧಾಂತವೇನು, ಅವರ ರಾಜಕೀಯ ಒಲವು ನಿಲುವುಗಳೇನು ಎನ್ನುವ ವಿಚಾರಗಳು ಯಾರಿಗೂ ಗೊತ್ತಿಲ್ಲ. ಪ್ರಧಾನಿ ಮೋದಿ, ಬಿಜೆಪಿಯ ಹಿಂದುತ್ವದ ರಾಜಕಾರಣ, ಕಾಂಗ್ರೆಸ್‌ನ ತಾತ್ವಿಕತೆ ಇತ್ಯಾದಿ ಬಗ್ಗೆ ಅವರ ಅಭಿಪ್ರಾಯವೇನು ಎನ್ನುವ ವಿಚಾರ ನಿಗೂಢವಾಗಿಯೇ ಇದೆ.   

ಈ ಸುದ್ದಿ ಓದಿದ್ದೀರಾ: ನಾನು ರಾಹುಲ್‌ ಗಾಂಧಿ ಅಭಿಮಾನಿ ಎಂದ ಶಿವರಾಜ್‌ ಕುಮಾರ್‌

ತಮ್ಮ ಚಿತ್ರಗಳಲ್ಲಿ ಶ್ರೀಮಂತರ ಬಂಗಲೆಗಳಿಗೆ ಕಲ್ಲು ಹೊಡೆಯುವ ದೃಶ್ಯಗಳ ಮೂಲಕ ಪಡ್ಡೆಗಳ ಶಿಳ್ಳೆ ಗಿಟ್ಟಿಸಿದ್ದವರು ಉಪೇಂದ್ರ. ತಾನು ಮಾತ್ರ ನಿಜಜೀವನದಲ್ಲಿ ಮನೆ ಮೇಲೆ ಮನೆ, ರೆಸಾರ್ಟ್, ತೋಟ ಇತ್ಯಾದಿಗಳನ್ನು ಕೊಳ್ಳುತ್ತಿದ್ದಾರೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರು ಹಗಲು ರಾತ್ರಿ ಮನೆ ಮನೆ ಸುತ್ತಿ ಮತ ಯಾಚಿಸಿ ಗೆಲುವಿಗಾಗಿ ಸಕಲ ಕಸರತ್ತು ಮಾಡುತ್ತಿದ್ದರೆ, ಇತ್ತ ಉಪೇಂದ್ರ ಮಾತ್ರ ಸದಾಶಿವನಗರದಲ್ಲಿ 60 ಕೋಟಿ ರೂಪಾಯಿಗೆ ಹೊಸ ಮನೆ ಕೊಂಡು ಅದ್ದೂರಿ ಗೃಹಪ್ರವೇಶ ಮಾಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಮುಖ್ಯ ಪಾತ್ರ ವಹಿಸಬೇಕು ಎಂದರೆ, ಸದಾಶಿವನಗರದಲ್ಲಿ ಮನೆ ಇರಬೇಕು ಎಂದು ಉಪೇಂದ್ರ ನಂಬಿರುವಂತಿದೆ. ಅದಕ್ಕೇ ಏನೋ ಚುನಾವಣೆಯ ಸಮಯದಲ್ಲಿಯೇ ಮನೆ ಕೊಂಡು ಗೃಹಪ್ರವೇಶವನ್ನೂ ಮಾಡಿದ್ದಾರೆ. ಉಪೇಂದ್ರ ಅವರ ಸಿನಿಮಾಗಳಿಂದ ಪ್ರಭಾವಿತನಾದ ಅಭಿಮಾನಿ, ಯಾರದೋ ಶ್ರೀಮಂತರ ಬಂಗಲೆ ಎಂದು ಉಪ್ಪಿ ಮನೆ ಕಲ್ಲು ಗಿಲ್ಲು ಎಸೆದಾನು ಎಂದು ಅವರ ಹಿತ ಶತ್ರುಗಳು ಕುಹಕವಾಡುತ್ತಿದ್ದಾರೆ.

‘ಪಕ್ಷವೂ ನಿಮ್ಮದೇ ಅಧಿಕಾರವೂ ನಿಮ್ಮದೇ’ ಎಂದು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ನೀತಿ ಬೋಧನೆ ಮಾಡಿರುವ ಉಪೇಂದ್ರ, ಗೆದ್ದರೆ ದಾರಿ ತಪ್ಪುವುದಿಲ್ಲ ಎಂದು ಬಾಂಡ್ ಬರೆಸಿಕೊಂಡಿದ್ದಾರಂತೆ. ಉಪೇಂದ್ರರ ಈ ಮಾತುಗಳನ್ನು ಕೇಳಿ ಎಲೆಕ್ಷನ್‌ನಲ್ಲಿ ಬ್ಯುಸಿ ಆಗಿರುವ ವಿವಿಧ ಪಕ್ಷಗಳ ಮುಖಂಡರು ನಗಲೂ ಆಗದೆ ನಗದಿರಲೂ ಆಗದೇ ಕಕರುಮಕರಾಗಿದ್ದಾರೆ ಎನ್ನುವ ಸುದ್ದಿ ಇದೆ.     

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಂದಿನಿಂದ ಭಾರತದಲ್ಲಿನ ಅಫ್ಘಾನಿಸ್ತಾನ ರಾಯಭಾರ ಕಚೇರಿ ಕಾರ್ಯಾಚರಣೆ ಸ್ಥಗಿತ

ಭಾರತ ಸರ್ಕಾರವು ಸರಿಯಾದ ಬೆಂಬಲ ನೀಡುತ್ತಿಲ್ಲ ಎಂದು ಆರೋಪಿಸಿದ ರಾಯಭಾರ ಕಚೇರಿ 'ಸಾಕಷ್ಟು...

ಗಾಂಜಾ ಮಾರಾಟ ಆರೋಪ; ಮಾಜಿ ಸಚಿವ ಮುನಿರತ್ನ ವಿರುದ್ಧ ದೂರು

ಬೆಂಗಳೂರಿನ ಆರ್‌ಆರ್‌ ನಗರದಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಆರ್‌ಆರ್‌ ನಗರದ...

ಕಾವೇರಿ ವಿವಾದ | ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ನಟ ಪ್ರೇಮ್‌

ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಕರ್ನಾಟಕದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು...

ದಂಪತಿಗೆ ಕನ್ನಡ ನಟ ನಾಗಭೂಷಣ್​ ಕಾರು ಡಿಕ್ಕಿ: ಮಹಿಳೆ ಮೃತ್ಯು

ಬೆಂಗಳೂರಿನ ವಸಂತನಗರ ಮುಖ್ಯರಸ್ತೆಯ ಬಳಿ ಶನಿವಾರ ರಾತ್ರಿ ನಡೆದ ಘಟನೆ ರಾತ್ರಿ ವಾಕಿಂಗ್‌...