ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರ ಮತ್ತು ಮುಂದಿನ ವರ್ಷ ಚುನಾವಣೆ ನಡೆಯಲಿರುವ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳಕ್ಕೆ ಬಿಜೆಪಿ ತನ್ನ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದೆ. ಚುನಾವಣಾ ವಸ್ತಿಲಿನಲ್ಲಿರುವ ಬಿಹಾರದ ಉಸ್ತುವಾರಿಯನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ನೀಡಿರುವುದಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಘೋಷಿಸಿದ್ದಾರೆ.
ಬಿಹಾರದಲ್ಲಿ ಚುನಾವಣಾ ಕೆಲಸಗಳನ್ನು ಮೇಲ್ವಿಚಾರಣೆ ಮಾಡಲು ಧರ್ಮೇಂದ್ರ ಪ್ರಧಾನ್ ಅವರಿಗೆ ಕೇಂದ್ರ ಸಚಿವ ಸಿ.ಆರ್ ಪಾಟೀಲ್ ಮತ್ತು ಉತ್ತರ ಪ್ರದೇಶದ ಮಾಜಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಸಹಾಯ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು, 2026ರಲ್ಲಿ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳಕ್ಕೆ ಬಿಜೆಪಿ ತನ್ನ ಉಸ್ತುವಾರಿಯಾಗಿ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರನ್ನು ನೇಮಿಸಲಾಗಿದೆ. ಅವರಿಗೆ ಮಾಜಿ ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ದೇಬ್ ನೆರವು ನೀಡಲಿದ್ದಾರೆ. ಅಂತೆಯೇ, ತಮಿಳುನಾಡಿಗೆ ಬಿಜೆಪಿ ಶಾಸಕ ಬಿಜಯಂತ್ ಪಾಂಡಾ ಅವರನ್ನು ಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಅವರಿಗೆ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಸಹಾಯ ಮಾಡಲಿದ್ದಾರೆ.
ಈ ಲೇಖನ ಓದಿದ್ದೀರಾ?: ಜಿಎಸ್‌ಟಿ 2.0 | ವಸ್ತುಗಳ ಬೆಲೆಯೇ 50% ಕಡಿತ; ತಪ್ಪು ಲೆಕ್ಕ ಹೇಳಿ ಪೇಚಿಗೆ ಸಿಲುಕಿದ ಬಿಜೆಪಿ ಸಂಸದ
ಪ್ರಧಾನ್ ಮತ್ತು ಯಾದವ್ ಅವರು ಚುನಾವಣಾ ಪ್ರಚಾರ ನಡೆಸುವಲ್ಲಿ ಮತ್ತು ತಂತ್ರಗಳನ್ನು ರೂಪಿಸುವಲ್ಲಿ ನಿಪುಣರು ಎಂದು ಹೇಳಲಾಗಿದೆ. ಭೂಪೇಂದ್ರ ಯಾದವ್ ಅವರು 2024ರಲ್ಲಿ ತಮ್ಮ ಚೊಚ್ಚಲ ಲೋಕಸಭಾ ಚುನಾವಣೆಯಲ್ಲಿ ಅಲ್ವಾರ್ ಕ್ಷೇತ್ರದಿಂದ ಗೆದ್ದಿದ್ದಾರೆ. ಅವರು ಈ ಹಿಂದೆ, ಬಿಹಾರ (2015), ಮಧ್ಯಪ್ರದೇಶ (2023) ಹಾಗೂ ಮಹಾರಾಷ್ಟ್ರ (2024), ಒಡಿಶಾ (2024) ಚುನಾವಣೆಗಳಲ್ಲಿ ಬಿಜೆಪಿಯ ಚುನಾವಣಾ ಉಸ್ತುವಾರಿ ಜವಾಬ್ಧಾರಿಯನ್ನು ನಿರ್ವಹಿಸಿದ್ದಾರೆ.
ಸಂಬಲ್ಪುರ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿರುವ ಧರ್ಮೇಂದ್ರ ಪ್ರಧಾನ್, ಉತ್ತರ ಪ್ರದೇಶ (2022) ಮತ್ತು ಕರ್ನಾಟಕ (2023), ಹರಿಯಾಣ (2024) ಚುನಾವಣೆಗಳಲ್ಲಿ ಬಿಜೆಪಿ ಉಸ್ತುವಾರಿಯಾಗಿದ್ದರು. ಉತ್ತರ ಪ್ರದೇಶ ಮತ್ತು ಹರಿಯಾಣವನ್ನು ಬಿಜೆಪಿ ಗೆದ್ದರೆ, ಕರ್ನಾಟಕವನ್ನು ಹೀನಾಯವಾಗಿ ಸೋತಿತು.
ಭೂಪೇಂದ್ರ ಯಾದವ್ ಅವರು ಕಡೆಯದಾಗಿ 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಚುನಾವಣಾ ಉಸ್ತುವಾರಿ ನಿರ್ವಹಿಸಿದ್ದರು. ಧರ್ಮೇಂದ್ರ ಪ್ರಧಾನ್ ಮತ್ತು ಬಿಪ್ಲಬ್ ದೇವ್ ಅವರು ಹರಿಯಾಣ ಚುನಾವಣೆಯಲ್ಲಿ ಬಿಜೆಪಿಯ ಚುನಾವಣಾ ಉಸ್ತುವಾರಿ ಮತ್ತು ಸಹ-ಉಸ್ತುವಾರಿಯಾಗಿ ಕೆಲಸ ಮಾಡಿದ್ದರು. ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ, ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದಾಗ್ಯೂ, ಈ ರಾಜ್ಯಗಳಲ್ಲಿ ‘ವೋಟ್ ಚೋರಿ’ (ಮತಗಳವು) ನಡೆದಿದೆ ಎಂದು ಇತ್ತೀಚೆಗೆ ವಿಪಕ್ಷಗಳು ಗಂಭೀರ ಆರೋಪ ಮಾಡಿವೆ.