ಭಾರತ ಹಾಗೂ ಐರ್ಲೆಂಡ್ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ರನ್ಗಳ ಆಧಾರದಲ್ಲಿ ಮುನ್ನಡೆಯಲ್ಲಿದ್ದ ಟೀಂ ಇಂಡಿಯಾ ತಂಡವನ್ನು ಡಿಎಲ್ಎಸ್ ನಿಯಮದ ಪ್ರಕಾರ 2 ರನ್ಗಳ ಅಂತರದಲ್ಲಿ ವಿಜೇತ ತಂಡ ಎಂದು ಘೋಷಿಸಲಾಯಿತು. ಇದರೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಐರ್ಲೆಂಡ್ ನೀಡಿದ 140 ರನ್ಗಳನ್ನು ಬೆನ್ನಟ್ಟಿದ ಜಸ್ಪ್ರೀತ್ ಬೂಮ್ರ ಸಾರಥ್ಯದ ಭಾರತ ತಂಡ 6.5 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿದ್ದಾಗ ವರುಣನ ಆಗಮನವಾಯಿತು. ಎರೆಡು ಗಂಟೆ ಕಾದರೂ ಮಳೆ ನಿಲ್ಲದ ಕಾರಣ ಪಂದ್ಯದ ರೆಫ್ರಿ ರನ್ ರೇಟ್ ಆಧಾರದಲ್ಲಿ ಮುನ್ನಡೆಯಲ್ಲಿದ್ದ ಟೀಂ ಇಂಡಿಯಾವನ್ನು ಜಯ ಗಳಿಸಿದ ತಂಡ ಎಂದು ಘೋಷಿಸಿದರು.
ಭಾರತದ ಪರ ಯಶಸ್ವಿ 24, ತಿಲಕ್ ವರ್ಮಾ ಶೂನ್ಯಕ್ಕೆ ಔಟಾಗಿದ್ದರೆ, ಋತುರಾಜ್ ಗಾಯಕ್ವಾಡ್ 19, ಸಂಜು ಸ್ಯಾಮ್ಸನ್ 1 ರನ್ ಗಳಿಸಿ ಆಡುತ್ತಿದ್ದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್, 7 ವಿಕೆಟ್ ಕಳೆದುಕೊಂಡು 139 ರನ್ ಕಲೆ ಹಾಕಿತು.
ಐರ್ಲೆಂಡ್ ಆರಂಬದಲ್ಲೇ ಬ್ಯಾಟಿಂಗ್ನಲ್ಲಿ ಕುಸಿತ ಕಂಡಿತು. ಗಾಯಗೊಂಡು ಸುದೀರ್ಘ ಅಂತರದ ಬಳಿಕ ಮೈದಾನಕ್ಕಿಳಿದ ನಾಯಕ ಹಾಗೂ ವೇಗಿ ಜಸ್ಪ್ರೀತ್ ಬೂಮ್ರಾ, ಮೊದಲ ಓವರ್ನಲ್ಲೇ ಐರ್ಲೆಂಡ್ ತಂಡದ ಮೊದಲ ಎರಡು ವಿಕೆಟ್ ಕಬಳಿಸಿದರು.
ಆ ಮೂಲಕ ಟೀಮ್ ಇಂಡಿಯಾ ಆರಂಭಿಕ ಮುನ್ನಡೆ ಸಾಧಿಸಿತು. ಬಾಲ್ಬಿರ್ನಿ ಒಂದು ಬೌಂಡರಿ ಸಿಡಿಸಿ ಔಟಾದರೆ, ಮೂರನೇ ಕ್ರಮಾಂಕದಲ್ಲಿ ಬಂದ ಟಕ್ಕರ್ ಶೂನ್ಯಕ್ಕೆ ನಿರ್ಗಮಿಸಿದರು. ನಾಯಕ ಸ್ಟಿರ್ಲಿಂಗ್ ಆಟ 11 ರನ್ಗಳಿಗೆ ಅಂತ್ಯವಾಯ್ತು.
ಈ ಸುದ್ದಿ ಓದಿದ್ದೀರಾ? ಭಾರತ – ಐರ್ಲೆಂಡ್ ಟಿ20 ಸರಣಿ: ಮೊದಲ ಪಂದ್ಯಕ್ಕೆ ಮಳೆಯ ಭೀತಿ?
ಒಂದು ಹಂತದಲ್ಲಿ ತಂಡಕ್ಕೆ ತುಸು ಬಲ ತುಂಬಿದ ಕರ್ಟಿಸ್ ಕ್ಯಾಂಫರ್ ನಿಧಾನಗತಿಯಲ್ಲಿ ಬ್ಯಾಟ್ ಬೀಸಿ 39 ರನ್ ಕಲೆ ಹಾಕಿದರು. ಮತ್ತೊಂದೆಡೆ ಕೊನೆಯ ಓವರ್ಗಳಲ್ಲಿ ಅಬ್ಬರಿಸಿದ ಬ್ಯಾರಿ ಮೆಕಾರ್ಥಿ 51 ರನ್ ಗಳಿಸುವುದರೊಂದಿಗೆ ಕೊನೆಯ ಎಸೆತದಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಅವರ ಆಟದಲ್ಲಿ ಭರ್ಜರಿ ನಾಲ್ಕು ಸಿಕ್ಸರ್ ಸಿಡಿಸಿದ್ದರು.
ಟೀಮ್ ಇಂಡಿಯಾ ಪರ ನಾಯಕ ಬೂಮ್ರಾ 2 ವಿಕೆಟ್ ಕಬಳಿಸಿದರೆ, ಕನ್ನಡಿಗ ಪ್ರಸಿದ್ಧ ಕೃಷ್ಣ ಹಾಗೂ ರವಿ ಬಿಷ್ಣೋಯ್ ಕೂಡಾ ತಲಾ 2 ವಿಕೆಟ್ ಪಡೆದರು. ಅರ್ಷದೀಪ್ ಒಂದು ವಿಕೆಟ್ ಪಡೆದರು. ಎದುರಾಳಿ ತಂಡದ ರನ್ಗಳನ್ನು ಕಟ್ಟಿಹಾಕಿದ ಕಾರಣಕ್ಕೆ ಬೂಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಮೈದಾನಕ್ಕಿಳಿಯುವುದರೊಂದಿಗೆ ಬೂಮ್ರಾ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಟಿ20 ಸ್ವರೂಪದಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಮೊದಲ ಬೌಲರ್ ಎಂಬ ಇತಿಹಾಸವನ್ನು ನಿರ್ಮಿಸಿದ್ದಾರೆ.