ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಸ್ವಪಕ್ಷದ ಕೆಲವು ಸ್ಥಳೀಯ ಮುಖಂಡರು ಪ್ರಯತ್ನಿಸಿದ್ದರು. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪಕ್ಷದ ಹಿರಿಯ ನಾಯಕರಿಗೆ ಪತ್ರ ಬರೆದಿದ್ದೇನೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಇಂತಹ ತಪ್ಪು ಮರುಕಳಿಸಬಾರದು. ಆ ಕಾರಣಕ್ಕೆ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದೇನೆ. ಪಕ್ಷ ಈ ಕುರಿತು ಏನು ನಿರ್ಣಯ ಕೈಗೊಳ್ಳಲಿದೆ ಎಂಬುದನ್ನು ಕಾಯುತ್ತಿದ್ದೇನೆ ಎಂದರು.
ನಮ್ಮ ಪಕ್ಷದ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರಿಂದ ಯಾವುದೇ ರೀತಿಯಲ್ಲೂ ನೋವು ಆಗಿಲ್ಲ. ಆದರೆ, ಸ್ಥಳೀಯ ಮುಖಂಡರು ನನ್ನ ಪರ ಕೆಲಸ ಮಾಡದಿರುವ ಬಗ್ಗೆ ನೋವಿದೆ. ಸದ್ಯಕ್ಕೆ ಪಕ್ಷ ತೊರೆಯುವಂತಹ ವಿಚಾರಕ್ಕೆ ನಾನು ಯೋಚಿಸಿಲ್ಲ. ಕಾಂಗ್ರೆಸ್ ಸೇರುವ ಬಗ್ಗೆ ಯಾವುದೇ ಚರ್ಚೆ ನನ್ನ ನಡುವೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.