ಕರ್ನಾಟಕದಲ್ಲಿ ಕಾಂಗ್ರೆಸ್ 135 ಸ್ಥಾನಗಳ ಬಹುಮತದೊಂದಿಗೆ ಗೆದ್ದರೂ ಕಾಂಗ್ರೆಸ್‌ನಲ್ಲಿ ಅಭದ್ರತೆ ಕಾಡುತ್ತಿದೆ. ಲೋಕಸಭಾ ಚುನಾವಣೆಗೂ ಮುನ್ನ ವಿರೋಧ ಪಕ್ಷದ ಶಾಸಕರನ್ನು ಸೆಳೆಯಲು ‘ಆಪರೇಷನ್ ಹಸ್ತ’ ಆರಂಭಿಸಲು ಮುಂದಾಗಿದೆ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಸಿ.ಟಿ ರವಿ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಬಿಜೆಪಿ ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡದ ಸಿದ್ದರಾಮಯ್ಯ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಬಳಿಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಜಿಲ್ಲಾವಾರು ಶಾಸಕರ ಸಭೆ, ಸಚಿವರ ಮಟ್ಟದ ಸಭೆ ನಡೆಸಿ ಕುಂದುಕೊರತೆ ಆಲಿಸಿದ್ದಾರೆ” ಎಂದರು.
ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸರ್ಕಾರ ಆರು ತಿಂಗಳ ನಂತರ ಪತನವಾಗಬಹುದು ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಆಪರೇಷನ್ ಹಸ್ತ ನಡೆಸಲು ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಈ ನಡುವೆ, ಮಾಜಿ ಸಚಿವ ಎಸ್.ಟಿ ಸೋಮಶೇಖರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಬಿಜೆಪಿಗರೇ ನನ್ನನ್ನು ಕಳುಹಿಸಬಹುದು ಎಂದು ಎಸ್.ಟಿ ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ, ಬಿಜೆಪಿ ಶಾಸಕ ಟಿ.ಎಸ್ ಶ್ರೀವತ್ಸ ಕೂಡ ಕಾಂಗ್ರೆಸ್ ಸೇರಬಹುದು ಎಂದು ಸುದ್ದಿಯಾಗಿತ್ತು. ಆದರೆ, ತಾವು ಪಕ್ಷ ತೊರೆಯುವುದಿಲ್ಲ ಎಂದು ಶ್ರೀವತ್ಸ ಹೇಳಿದ್ದಾರೆ.
ಅಲ್ಲದೆ, ಮುಡಾ ಮಾಜಿ ಅಧ್ಯಕ್ಷ, ಶಾಸಕ ಎಚ್.ವಿ ರಾಜೀವ್ ಕೂಡ ಪಕ್ಷ ಬಿಡುವುದಿಲ್ಲ ಎಂದು ಶ್ರೀವತ್ಸ ಹೇಳಿದ್ದಾರೆ.