- ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು
- ಆಗಸ್ಟ್ 15ರ ಮಧ್ಯರಾತ್ರಿ ಬೈಕಿನಲ್ಲಿ ಬಂದಿದ್ದ ಮೂವರಿಂದ ಕೃತ್ಯ
ರಾಜ್ಯ ರಾಜಧಾನಿಯಲ್ಲಿ ಜನಾಂಗೀಯ ಹಲ್ಲೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಆಗಸ್ಟ್ 15ರ ಮಧ್ಯರಾತ್ರಿ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡತೋಗೂರಿನ ಪಿಸಿಆರ್ ಗಾರ್ಡನ್ ರಸ್ತೆಯಲ್ಲಿ ನಡೆದಿದೆ.
‘ಚೈನೀಸ್, ಚೈನೀಸ್’ ಎಂದು ಹೇಳಿ ಸಿಕ್ಕಿಂ ಯುವಕನ ಮೇಲೆ ಹಲ್ಲೆ ನಡೆಸಲಾಗಿದ್ದು, ಹಲ್ಲೆಗೊಳಗಾದ ಯುವಕನನ್ನು ಪಶ್ಚಿಮ ಸಿಕ್ಕಿಂ ಮೂಲದ ಕೆ ದಿನೇಶ್ ಸುಬ್ಬ ಎಂದು ತಿಳಿದು ಬಂದಿದೆ.
ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ದಿನೇಶ್ ತಲೆ ಮತ್ತು ಮುಖಕ್ಕೆ ಒಂಭತ್ತು ಹೊಲಿಗೆ ಹಾಕಲಾಗಿದ್ದು, ಸದ್ಯ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ದಿನೇಶ್, ನೀಲಾದ್ರಿ ನಗರದ ಹೋಟೆಲ್‌ನಲ್ಲಿ ‘ವೈಟರ್’ ಆಗಿ ಕೆಲಸ ಮಾಡುತ್ತಿದ್ದು, ಎಲೆಕ್ಟ್ರಾನಿಕ್ಸ್ ಸಿಟಿ 1ನೇ ಹಂತದಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದಾರೆ.


ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್
ಬೆಳಗಿನ ಜಾವ 3ರಿಂದ 4 ಗಂಟೆಯ ನಡುವೆ ಈ ಘಟನೆ ನಡೆದಿದ್ದು, ಸಮೀಪದಲ್ಲಿದ್ದ ಕಟ್ಟಡದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ಮಾಧ್ಯಮವೊಂದಕ್ಕೆ ಮಾತನಾಡಿರುವ ದಿನೇಶ್ ಸೋದರ ಮಾವ, ಬೆಂಗಳೂರಿನಲ್ಲೇ ನೆಲೆಸಿರುವ ದೀಪಕ್ ದೋರ್ಜಿ, ‘ಇದೊಂದು ಜನಾಂಗೀಯ ಹಲ್ಲೆ. ಆಗಸ್ಟ್ 14ರಂದು ದಿನೇಶ್‌ನ ವಿವಾಹ ವಾರ್ಷಿಕೋತ್ಸವವಾಗಿತ್ತು. ಈ ಹಿನ್ನೆಲೆಯಲ್ಲಿ ತನ್ನ ಕೆಲಸ ಮುಗಿದ ಬಳಿಕ ಆಗಸ್ಟ್ 15ರ ರಾತ್ರಿ ತನ್ನ ಸಹೋದರ ಮತ್ತು ಸ್ನೇಹಿತರಿಗೆ ಪಾರ್ಟಿ ಆಯೋಜಿಸಿದ್ದರು. ಪಾರ್ಟಿ ಮುಗಿಸಿ ಮನೆಗೆ ದೊಡ್ಡತೋಗೂರಿನ ಪಿಸಿಆರ್ ಗಾರ್ಡನ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈತನನ್ನು ನೋಡಿದ ಬೈಕಿನಲ್ಲಿ ಬಂದಿದ್ದ ಮೂವರು ಅಪರಿಚಿತ ದುಷ್ಕರ್ಮಿಗಳು, ‘ಚೈನೀಸ್, ಚೈನೀಸ್’ ಎಂದು ಕಿಚಾಯಿಸಿದ್ದಾರೆ. ಈ ವೇಳೆ ತಾನು ಭಾರತೀಯ, ಸಿಕ್ಕಿಂನವ ಎಂದು ಉತ್ತರಿಸಿದರೂ ಕೂಡ ಆತನ ಮೇಲೆ ಹರಿತವಾದ ಆಯುಧದಿಂದ ದಾಳಿ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ.

ದಾಳಿಗೊಳಗಾದ ಸಿಕ್ಕಿಂನ ಯುವಕ ಕೆ ದಿನೇಶ್ ಸುಬ್ಬ
ಸುಬ್ಬ ಅವರು ದಾಳಿಗೊಳಗಾದಾಗ ಅವರ ಮನೆಯಿಂದ ಕೇವಲ 100 ಮೀಟರ್ ದೂರದಲ್ಲಿದ್ದರು. ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ದುಷ್ಕರ್ಮಿಗಳು ಸುಬ್ಬನನ್ನು ಚೈನೀಸ್ ಎಂದು ಕರೆದು ಹೊಡೆದಿದ್ದಾರೆ ಎಂದು ಹೇಳಿದ್ದಾರೆ.
ಸುಬ್ಬ ಕಳೆದ ಡಿಸೆಂಬರ್‌ನಲ್ಲಿ ಬೆಂಗಳೂರಿಗೆ ಬಂದಿದ್ದು, ತನ್ನ ಹೆಂಡತಿ ಮತ್ತು ಪುಟ್ಟ ಮಗನೊಂದಿಗೆ ವಾಸಿಸುತ್ತಾನೆ. ತಾನು 2009ರಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ ಎಂದು ಅರುಣಾಚಲ ಪ್ರದೇಶದ ದೀಪಕ್ ದೋರ್ಜಿ ತಿಳಿಸಿದ್ದಾರೆ.
‘ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ಈ ದಿನ.ಕಾಮ್‌ಗೆ ತಿಳಿಸಿದ್ದಾರೆ.