ಕಳೆದ ಮೂರು ವರ್ಷಗಳಿಂದ ಇಸ್ರೇಲ್‌ನ ಕ್ರೌರ್ಯಕ್ಕೆ ತುತ್ತಾಗಿರುವ ಗಾಝಾಗೆ ಮಾನವೀಯ ನೆರವು ಹೊತ್ತು ಹೊರಟಿದ್ದ ‘ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ’ ತಂಡವನ್ನು ಇಸ್ರೇಲ್ ತಡೆದಿದೆ. ತಂಡದಲ್ಲಿದ್ದ ಗ್ರೇಟಾ ಥನ್‌ಬರ್ಗ್ ಸೇರಿದಂತೆ ಹಲವು ಹೋರಾಟಗಾರರನ್ನು ಬಂಧಿಸಿದೆ ಎಂದು ‘ಅಲ್-ಜಝೀರಾ’ ವರದಿ ಮಾಡಿದೆ.
ಆರಂಭದಲ್ಲಿ ಗಾಝಾ ಕರಾವಳಿಯಿಂದ ಸುಮಾರು 75 ನಾಟಿಕಲ್ ಮೈಲಿ ದೂರದಲ್ಲಿ ಸುಮುದ್ ಫ್ಲೋಟಿಲ್ಲಾ ತಂಡದ ಎರಡು ಹಡಗುಗಳನ್ನು ಇಸ್ರೇಲ್ ವಶಕ್ಕೆ ಪಡೆದಿತ್ತು. ಬಳಿಕ ಆಶ್ಡೋದ್ ಬಂದರಿನಲ್ಲಿ ಗ್ರೇಟಾ ಅವರನ್ನು ಬಂಧಿಸಿದೆ. ಈ ವೇಳೆ ಅವರು ಫ್ಲೋಟಿಲ್ಲಾದ ಅಲ್ಮಾ ಹಡಗಿನಲ್ಲಿದ್ದರು. ಇತ್ತೀಚಿನ ಮಾಹಿತಿ ಪ್ರಕಾರ, ಸಿರಸ್, ಅಲ್ಮಾ, ಸ್ಪೆಕ್ಟ್ರಾ, ಹೋಗಾ, ಅದಾರ ಮತ್ತು ಡೀರ್ ಯಾಸಿನ್ ಸೇರಿದಂತೆ ಫ್ಲೋಟಿಲ್ಲಾದ 6 ಹಡಗುಗಳನ್ನು ಇಸ್ರೇಲ್ ವಶಕ್ಕೆ ಪಡೆದಿದೆ.
ಗ್ರೇಟಾ ಥನ್‌ಬರ್ಗ್ ಬಂಧನದ ವಿಡಿಯೋವನ್ನು ಇಸ್ರೇಲ್ ವಿದೇಶಾಂಗ ಸಚಿವಾಲಯ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದೆ. “ಈಗಾಗಲೇ ಹಮಾಸ್-ಸುಮುದ್ ಫ್ಲೋಟಿಲ್ಲಾದ ಹಲವಾರು ಹಡಗುಗಳನ್ನು ಸುರಕ್ಷಿತವಾಗಿ ತಡೆಯಲಾಗಿದೆ ಮತ್ತು ಅವುಗಳಲ್ಲಿದ್ದ ಪ್ರಯಾಣಿಕರನ್ನು ಇಸ್ರೇಲಿ ಬಂದರಿಗೆ ಸ್ಥಳಾಂತರಿಸಲಾಗುತ್ತಿದೆ. ಗ್ರೇಟಾ ಮತ್ತು ಆಕೆಯ ಸ್ನೇಹಿತರು ಸುರಕ್ಷಿತ ಮತ್ತು ಆರೋಗ್ಯವಾಗಿದ್ದಾರೆ” ಎಂದು ತಿಳಿಸಿದೆ.
Already several vessels of the Hamas-Sumud flotilla have been safely stopped and their passengers are being transferred to an Israeli port.
— Israel Foreign Ministry (@IsraelMFA) October 1, 2025
Greta and her friends are safe and healthy. pic.twitter.com/PA1ezier9s
ವಿಶ್ವಸಂಸ್ಥೆಯ ವಿಶೇಷ ವರದಿಗಾರ ಫ್ರಾನ್ಸೆಸ್ಕಾ ಅಲ್ಬನೀಸ್ ಮತ್ತು ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಅವರು ಫ್ಲೋಟಿಲ್ಲಾಗೆ ಹಾನಿ ಮಾಡದೆ, ಅವುಗಳು ಗಾಝಾಗೆ ನೆರವು ತಲುಪಿಸಲು ಅನುವು ಮಾಡಿಕೊಡಬೇಕು ಎಂದು ಬುಧವಾರ ಆಗ್ರಹಿಸಿದ್ದರು.
ಇಸ್ರೇಲ್ ದಾಳಿ ಮಾಡುವ ಮುನ್ಸೂಚನೆ ಸಿಕ್ಕಿದ ಹಿನ್ನೆಲೆ, ಗಾಝಾ ಸಮೀಪಿಸುತ್ತಿದ್ದಂತೆ ಸುಮುದ್ ಫ್ಲೋಟಿಲ್ಲಾ ತಂಡ ತಮ್ಮ ಪ್ರಯಾಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರದಿಂದ ನೇರ ಪ್ರಸಾರ ಮಾಡಿತ್ತು.
ಫ್ಲೋಟಿಲ್ಲಾ ತಂಡವನ್ನು ತಡೆಯುವುದಾಗಿ ಇಸ್ರೇಲ್ ಈಗಾಗಲೇ ಹೇಳಿತ್ತು. ಆದರೆ, ಫ್ಲೋಟಿಲ್ಲಾ ತಂಡ ಇಸ್ರೇಲ್ ದಿಗ್ಬಂಧನ ಮುರಿದು ಗಾಝಾಗೆ ನೆರವು ತಲುಪಿಸುವ ಶಪಥ ಮಾಡಿತ್ತು.
‘ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ ಎನ್ನುವುದು ಇಸ್ರೇಲ್ ಗಾಝಾ ಮೇಲೆ ವಿಧಿಸಿರುವ ದಿಗ್ಭಂಧನವನ್ನು ಭೇದಿಸುವ ಗುರಿಯನ್ನು ಹೊಂದಿರುವ ಒಂದು ಪ್ರಮುಖ ಅಂತಾರಾಷ್ಟ್ರೀಯ ಮಿಷನ್ ಆಗಿದೆ. ಈ ಫ್ಲೋಟಿಲ್ಲಾದಲ್ಲಿ 45 ರಿಂದ 50 ಹಡಗುಗಳು ಇದ್ದು, ಇವು ಮಾನವೀಯ ನೆರವುಗಳಾದ ಆಹಾರ, ಔಷಧ ಮತ್ತು ಇತರ ಅಗತ್ಯ ವಸ್ತುಗಳನ್ನು ಒಯ್ಯುತ್ತಿವೆ. ಜೊತೆಗೆ, ವಿಶ್ವದ ವಿವಿಧ ಭಾಗಗಳ ನೂರಾರು ಪ್ರತಿನಿಧಿಗಳು ಈ ಮಿಷನ್‌ನ ಭಾಗವಾಗಿದ್ದಾರೆ.